ಸಾವಯವ ಗೊಬ್ಬರಗಳನ್ನು ನೀವೇ ತಯಾರಿಸಿಕೊಳ್ಳಿ- ಅದೇ ಉತ್ತಮ

organic manure

ಆತ್ಮ ನಿರ್ಭರ ವನ್ನು ನೀವು ಇಚ್ಚೆ ಪಡುವುದೇ ಆಗಿದ್ದರೆ, ನಿಮ್ಮ ಗೊಬ್ಬರದ ಅಗತ್ಯಗಳನ್ನು ನೀವೇ  ಮಾಡಿಕೊಳ್ಳಿ. ಆತ್ಮ ನಿರ್ಭರ ರೈತರಾಗಿ. ನೀವು ಗೊಬ್ಬರ ಮಾರಾಟಗಾರರನ್ನು ಪೋಷಿಸಬೇಕಾಗಿಲ್ಲ. ನಿಮ್ಮ ಶ್ರಮ, ನಿಮ್ಮ ಸಂಪಾದನೆ ಯಾವುದೋ ಕಂಪೆನಿಯನ್ನು, ಯಾವುದೋ ಗೊಬ್ಬರ ಮಾರಾಟ ಮಾಡಿ ಜೀವನ ನಡೆಸುವವನ ಏಳಿಗೆಗಾಗಿ ಇರುವುದಲ್ಲ. ಅದು ನಿಮ್ಮ ವೃತ್ತಿ ಕ್ಷೇತ್ರವನ್ನು ಸಧೃಢಪಡಿಸಲಿಕ್ಕೆ , ನಿಮ್ಮ ಏಳಿಗೆಗೆ ಇರುವಂತದ್ದು.

organic manure in bags- ಚೀಲದಲ್ಲಿ ಸಾವಯವ ಗೊಬ್ಭರ

  •  ಸಾವಯವ ಗೊಬ್ಬರ ಎಂದರೆ ಅದರಲ್ಲಿ ಯಾವ ಹೊಸ ತಾಂತ್ರಿಕತೆಯೂ ಇಲ್ಲ.
  • ಇದನ್ನು ತಯಾರಿಸಿ ಕೊಡಲು ಯಾರ ನೆರವೂ ಬೇಕಾಗಿಲ್ಲ.
  • ಕಚ್ಚಾ ವಸ್ತುಗಳಿದ್ದರೆ ಅದನ್ನು ನೀವೇ ತಯಾರಿಸಿ 50% ಹೆಚ್ಚು ಉಳಿತಾಯ ಮಾಡಬಹುದು.
  • ಇದು ಕೃಷಿಕರಾದವರಿಗೆ ಎಲ್ಲರಿಗೂ  ತಿಳಿದಿರಬೇಕಾದ ಕನಿಷ್ಟ ಜ್ಞಾನ.

ನಮ್ಮ ವೃತ್ತಿಯಲ್ಲಿ ನಾವು ಪಳಗಿರಬೇಕು:

  • ಹೆಚ್ಚಿನ ರೈತರು ಹೇಗೆಂದರೆ ನಮಗೆ ನೆರೆಹೊರೆಯವ ಮಾಡುವುದು ಉತ್ತಮ ಎಂದು ಅನಿಸುತ್ತದೆ.
  • ನಮ್ಮದೇ ಆದ ಸ್ವಂತಿಕೆ ಎಂಬುದು ಇರುವುದಿಲ್ಲ.ಹೊಸತನ್ನು ಕಂಡಾಗ ಅದು ಒಳ್ಳೆಯದೆನಿಸುತ್ತದೆ.
  • ಅದರಲ್ಲಿ ಕೆಟ್ಟ ಅನುಭವವಾದಾಗ ಇನ್ನೊಂದರ ಮೇಲೆ ದೃಷ್ಟಿ ಬೀಳುತ್ತದೆ.
  • ಚೆನ್ನಾಗಿ ಮಾತಾಡುವವನು ಒಳ್ಳೆಯವನೆನಿಸಿಕೊಳ್ಳುತ್ತಾನೆ.
  • ಇದು ನಾವು ನಮ್ಮ ವೃತ್ತಿ ಕ್ಷೇತ್ರದಲ್ಲಿ ಪರಿಣತರಲ್ಲ ಎಂಬುದನ್ನು ತೋರಿಸುತ್ತದೆ.
  • ಉಳಿದ ಕ್ಷೇತ್ರದಂತೆ ಕೃಷಿ ಅಲ್ಲ. ಇಲ್ಲಿ ನಾವೆಲ್ಲಾ ಪ್ರಾಯೋಗಿಕವಾಗಿ ತೊಡಗಿಸಿಕೊಂಡಿರುತ್ತೇವೆ.
  • ಎಲ್ಲವೂ ನಮಗೆ ಕಾಣುವಂತದ್ದೇ ಇರುತ್ತದೆ. ನಾವು ಹೊಸತಾಗಿ ಕೃಷಿಗೆ ಇಳಿದಿದ್ದರೆ, ಅದರಲ್ಲಿ ಅನುಭವ ಇಲ್ಲವಾದರೆ ನಮಗೆ ಬೇರೆಯವರ ಸಲಹೆ ಬೇಕು.
  • ಹಲವಾರು ವರ್ಷಗಳಿಂದ ಆ ಕ್ಷೇತ್ರದಲ್ಲಿ ಇದ್ದವರಿಗೆ ಇದರ ತುದಿಬುಡಗಳೆಲ್ಲದರ ಅರಿವು ಇರಲೇ ಬೇಕು ಅಥವಾ ಅರಿಯಲೇ ಬೇಕು.
  • ಒಂದು ವೇಳೆ ಇಲ್ಲವಾದರೆ ಅದಕ್ಕೆ ಲಭ್ಯವಿರುವ ಜ್ಞಾನದ ಮೂಲವನ್ನು ಓದಿಯಾದರೂ ತಿಳಿಯಬಹುದು.
  • ನಮ್ಮ ಅಜ್ಞಾನವನ್ನು ಸಾವಯವ ಗೊಬ್ಬರ ತಯಾರಕರು ಉಪಯೋಗಮಾಡಿಕೊಳ್ಳುತ್ತಾರೆ ಅಷ್ಟೇ.

ಸಾವಯವ ಗೊಬ್ಬರದ ನೀವೇ ತಯಾರಿಸಿ:

ಸಾವಯವ ಗೊಬ್ಬರ ತಯಾರಿಕೆ-Organic manure preparation
ಸಾವಯವ ಗೊಬ್ಬರ ತಯಾರಿಸುವುದು ಎಂದರೆ ಉಟಕ್ಕೆ ಬೇಕಾದ ಅಕ್ಕಿ, ಬೇಯಿಸಲು ಬೇಕಾಗುವ ಇಂಧನ, ಹಾಗೆಯೇ ಪದಾರ್ಥಕ್ಕೆ ಬೇಕಾಗುವ ಸಾಮಾನುಗಳನ್ನು ಒಟ್ಟು ಸೇರಿಸಿ ಅದನ್ನು ಅಡುಗೆ ಮಾಡಿ ಉಂಡಂತೆ ಎಂದು ವ್ಯಾಖ್ಯಾನಿಸಬಹುದು. ಒಂದು ವೇಳೆ ನೀವು ಅದನ್ನು ಕೊಂಡು ತಂದರೆ ಅದು ಊಟ ಬೇಯಿಸಲು ಒಲೆ ಇಲ್ಲದೆ, ಅಥವಾ ಊಟ ತಯಾರು ಮಾಡಲು ಗೊತ್ತಿಲ್ಲದವರು ಹೋಟೇಲಿಗೆ ಹೋಗಿ ಉಂಡು ಬಂದಂತೆ.

  • ಇಂತವರನ್ನು ಆಬ್ಸೆಂಟ್ ಫಾರ್ಮರ್ ಎಂದು ಕರೆಯಬಹುದು.
  • ಸಾವಯವ ಗೊಬ್ಬರ ತಯಾರಿಸಲು ಹಸು ಸಾಕಿಯೇ ಆಗಬೇಕೆಂದೇನೂ ಇಲ್ಲ.
  • ಕಚ್ಚಾ ಸಾಮಾಗ್ರಿಗಳನ್ನು ಒಟ್ಟು ಹಾಕುವುದು ಮಾತ್ರ ಗೊತ್ತಿರಬೇಕು.
  • ಇದು ಕೃಷಿಕರಲ್ಲಿ ಇರಬೇಕಾದ ಮೂಲ ಜ್ಞಾನ.
  • ಸಕ್ಕರೆ ಕಾರ್ಖಾನೆಯಲ್ಲಿ ಕಾಕಂಬಿ ( ಪ್ರೆಸ್ ಮಡ್) ಸಿಗುತ್ತದೆ. ಇದಕ್ಕೆ ಕಿಲೋಗೆ 1-2 ರೂ ಬೆಲೆ ಇರುತ್ತದೆ.
  • ಅದೇ ರೀತಿಯಲ್ಲಿ ಕೋಳಿ ಸಾಕುವಲ್ಲಿ ಕೊಳಿ ಹಿಕ್ಕೆ ಇರುತ್ತದೆ.
  • ಇದಕ್ಕೂ ಕಿಲೋಗೆ ತಗಲುವ ಬೆಲೆ 1-2 ರೂ. ಗಳು.
  • ಕುರಿ ಸಾಕುವ ಪ್ರದೇಶಗಳಲ್ಲಿ ಕುರಿ ಹಿಕ್ಕೆ ಸಿಗುತ್ತದೆ.
  • ಇದಕ್ಕೂ ತಗಲುವ ಖರ್ಚು ಕಿಲೋಗೆ  2-3 ರೂ. ಗಳು.
  • ತೆಂಗಿನ ನಾರಿನ ಹುಡಿಯಂತಹ ಇನ್ನೂ ಅನೇಕ  ಸಾವಯವ ತ್ಯಾಜ್ಯಗಳು ಟನ್ ಗೆ 1500-2000 ರೂ. ಗಳಿಗೆ ಸಿಗುತ್ತದೆ.
  • ಒಣ ಸಗಣಿಗೆ ಕಿಲೋಗೆ ತಗಲುವ ವೆಚ್ಚ 10 ರೂ. ತನಕ  ಒಂದು ಬುಟ್ಟಿ ಹಸಿ ಸಗಣಿಗೆ 30-40 ರೂ. ಬೆಲೆ. ಇದರಲ್ಲಿ 90% ನೀರು.

ಯಾವುದೇ  ಟ್ರೇಡ್ ಸೀಕ್ರೆಟ್ ಎಂದು ಹೇಳಲ್ಪಡುವ ಸಸ್ಯ , ಮೂಲಿಕೆ ಇದೆಲ್ಲಾ ನಂಬುವಂತದ್ದು ಅಲ್ಲ.ಯಾವುದೋ ಇಂಡಸ್ಟ್ರಿಯಲ್ ಏರಿಯಾದಲ್ಲಿ ಶೆಡ್ ಒಳಗೆ ಇದ್ದು, ಇದನ್ನೆಲ್ಲಾ ಸೇರಿಸುವುದು ಸುಳ್ಳಿನ ಕಂತೆ.  ಸಾವಯವ ಗೊಬ್ಬರವನ್ನು ಜೈವಿಕವಾಗಿ ಶ್ರೀಮಂತ ಮಾಡಲು ಅಂತಹ ದೊಡ್ದ ಕೆಲಸ ಇಲ್ಲ.

  • ಸಾಮಾನ್ಯವಾಗಿ ಸಾವಯವ ಮೂಲವಸ್ತುಗಳು ಕಳಿಯುವಾಗ ಜೀವಾಣುಗಳು ಅದರಲ್ಲಿ  ತನ್ನಿಂದ ತಾನೇ ಉತ್ಪಾದನೆ ಆಗುತ್ತವೆ.
  • ಹೊರಗಡೆಯಿಂದ ಸೇರಿಸಬೇಕಾದರೆ  ಜೀವಾಣುಗಳನ್ನೂ ಸರಕಾರೀ ಮೂಲದ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಶ್ವ ವಿಧ್ಯಾನಿಲಯಗಳು, ರೈತರಿಗೆ ಬಹಳ ಮಿತ ದರದಲ್ಲಿ ಕೊಡುತ್ತವೆ.
  • ಸಾವಯವ ಗೊಬ್ಬರ ಉತ್ಪಾದಕರೂ ಸಹ ಇದೇ ಮೂಲದಿಂದ ಅದನ್ನು ತಂದು ಬಳಸುವುದು. ಖಾಸಗಿ ಮೂಲದಲ್ಲಿ ಇದು ಲಭ್ಯ ಇರುವುದಿಲ್ಲ.

ಕೊಂಡು ತರುವ ಸಾವಯವ ಗೊಬ್ಬರದಲ್ಲಿ ನಮೂದಿಸಿದ ತೇವಾಂಶ ಪ್ರಮಾಣವನ್ನು ಒಮ್ಮೆನೋಡಿ. ಅದು ಕನಿಷ್ಟ 40% ದಷ್ಟು ಇರುತ್ತದೆ. ತೇವಾಂಶ ಎಂದರೆ ನೀರು.ಕಿಲೋ 8 ರೂ. ಬೆಲೆ ಇರುವ ಸಾವಯವ ಗೊಬ್ಬರದಲ್ಲಿ 400  ಗ್ರಾಂ ನೀರು ಇರುತ್ತದೆ. ಈ ನೀರ್ಗೆ ನೀವು ಕೊಡುವ ದುಡ್ಡು, 3 ರೂಪಾಯಿ ಮತ್ತು 20 ಪೈಸೆ. ಇದು ಎಶ್ಟು ಜನ ಕೃಷಿಕರಿಗೆ ಗೊತ್ತಿದೆ?

ಹೊಲದಲ್ಲೇ ಗೊಬ್ಬರ ತಯಾರಾಗುತ್ತದೆ:

  • ಸಾವಯವ ವಸ್ತುಗಳು ಕರಗುವ ಜಾಗ ಮಣ್ಣು. ಅದನ್ನು  ವಿಭಜನೆ ಮಾಡಿಕೊಡುವ ಎಲ್ಲಾ ಜೀವಾಣುಗಳೂ ಇರುವುದು ಮಣ್ಣಿನಲ್ಲೇ .
  • ಹೀಗಿರುವಾಗ ಕಾರ್ಖಾನೆ ಯಾಕೆ ಬೇಕು ಒಮ್ಮೆ ಯೋಚಿಸಿ. ಒಂದು ಬುಟ್ಟಿ ಸಾವಯವ ಗೊಬ್ಬರ ಅದು ಯಾವುದೇ ಆಗಿರಲಿ, ಅದನ್ನು ಒಂದೆಡೆ ಮಣ್ಣಿನ ಮೇಲೆ ಗುಪ್ಪೆಯಾಗಿ ಹಾಕಿ.
  • ಅದಕ್ಕೆ ಏನಾದರೂ ಮುಚ್ಚಿ. ಒಂದು ತಿಂಗಳು ಕಳೆದು ಅದನ್ನು ತೆಗೆದು ನೋಡಿ.
  • ಅದರಲ್ಲಿ ಎರೆಹುಳುಗಳು ಇರುತ್ತವೆ. ಅದು ಹುಡಿಯಾಗಿರುತ್ತವೆ. ಇ
  • ನ್ನೂ ಅದರ ಸಾರವನ್ನು ಪರೀಕ್ಷಿಸಬೇಕೆಂದಿದ್ದರೆ ಅದನ್ನು ಸಮೀಪದ ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಒಯ್ದು ಪರೀಕ್ಷಿಸಿರಿ.
  • ಜೊತೆಗೆ ನೀವು ಕೊಂಡು ತಂದ ಗೊಬ್ಬರವನ್ನೂ ಮತ್ತೊಂದು ಕಡೆಯ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿರಿ.
  • ಆಗ ತಿಳಿಯುತ್ತದೆ, ನಿಮ್ಮ ತಯಾರಿಕೆಯೇ ಉತ್ಕೃಷ್ಟವಾಗಿರುತ್ತದೆ ಎಂದ ಸತ್ಯ.

ಎಲ್ಲಾ ಸಾವಯವ ವಸ್ತುಗಳೂ ಕರಗಿ ಹುಡಿಯಾಗಿ ಗೊಬ್ಬರ ರೂಪ ತಳೆಯುವುದು ಮಣ್ಣಿನ ಸಹಾಯದಿಂದ. ಆದ ಕಾರಣ ಸಾವಯವ ಗೊಬ್ಬರ ತಯಾರಿಸಲು ಅಧಿಕ ಖರ್ಚು ಮಾಡಬೇಕಾಗಿಲ್ಲ. ಹೊಲದಲ್ಲೇ ತೇವಾಂಶ ಮತ್ತು ಮಿತವ್ಯಯದ ರಚನೆ ನಿರ್ಮಾಣ ಮಾಡಿ ಬೇಕಾದ ಕಚ್ಚಾ ವಸ್ತುಗಳನ್ನು ಸೇರಿಸಿ ಮಾರಾಟಕ್ಕೆ ಸಿಗುವ ಗೊಬ್ಬರಕ್ಕಿಂತ ದುಪ್ಪಟ್ಟು ಉತ್ತಮ ಗೊಬ್ಬರವನ್ನು ತಯಾರಿಸಬಹುದು.

ಸಂಪದ್ಭರಿತ ಸಾವಯವ ಗೊಬ್ಬರ:

  •  ಯಾವ ಯಾವ ಮೂಲವಸ್ತುವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಹಾಕಲಾಗಿದೆಯೋ ಅಷ್ಟು ಅದು ಸಂಪಧ್ಭರಿತವಾಗಿರುತ್ತದೆ.
  • ಹೆಚ್ಚಾಗಿ ಸಾವಯವ ಗೊಬ್ಬರ ತಯಾರಕರು ಔದ್ಯಮಿಕ ಮೂಲದ  ವೇಸ್ಟ್ ಎಣ್ಣೆ ಹಿಂಡಿಗಳನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬಳಸುತ್ತಾರೆ.
  • ಅದರಲ್ಲಿ  ಒಂದು ಹರಳು ಹಿಂಡಿ. ಬೇವಿನ ಹಿಂಡಿ ಬಹಳ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡುವುದು.
  • ಅಲ್ಪ ಸ್ವಲ್ಪ ಬೇವಿನ ಎಣ್ಣೆಯ ಲೇಪನ ಅದಕ್ಕೆ ಬೇವಿನ ಹಿಂಡಿಯ ಅಸ್ತಿತ್ವವನ್ನು ಕೊಡುತ್ತದೆ.
  • ಬಹುತೇಕ ತಯಾರಕರು ಮುನ್ಸಿಪಲ್ ವೇಸ್ಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ.
  • ಇದರಲ್ಲಿ ಘನ ಲೋಹಗಳು ಇರುತ್ತವೆ. ಇದನ್ನೆಲ್ಲಾ ದುಬಾರಿ ಬೆಲೆ ಕೊಟ್ಟು ಖರೀದಿಸಿ ತಂದು ಬಳಸುವುದಕ್ಕಿಂತ ರೈತರೇ ಇದನ್ನು  ತಯಾರಿಸಬಹುದು.

ಸಾವಯವ ಗೊಬ್ಬರ ಎಂಬ ಬಗ್ಗೆ ಕೂಲಂಕುಶವಾಗಿ  ತಿಳಿಯಿರಿ. ಇದು ಮಣ್ಣು ಉತ್ತಮ ವಾಗಲು ಬೇಕಾಗುವ ಸ್ಥೂಲ( ಗರಿಷ್ಟ) ಪ್ರಮಾಣದ ಗೊಬ್ಬರ. ಇದು ಸಾಧ್ಯವಾದಶ್ಟು ಕಡಿಮೆ ವೆಚ್ಚದಲ್ಲಿ ಆಗಬೇಕು. ಒಂದು ಎಲೆ ಮಣ್ಣಾಗುವಾಗ ಅಗುವುದು ಬರೇ  ಅರದ ತೂಕದ 10 ಪಾಲು ಕಡಿಮೆ. ಆದ ಕಾರಣ ಗರಿಷ್ಟ ಪ್ರಮಾಣದಲ್ಲಿ ಸಾವಯವ ವಸ್ತುಗಳನ್ನು ಬಳಸುವುದೇ ಸೂಕ್ತ ಪೋಷಕಾಂಶ ನಿರ್ವಹಣಾ ಕ್ರಮ.
end of the article:——————————————————————-
search words: Organic manure# Organic composting# enriched manure# how o make good organic manure# Enriched  organic manure# Organic manure available in market# bio manure #

5 thoughts on “ಸಾವಯವ ಗೊಬ್ಬರಗಳನ್ನು ನೀವೇ ತಯಾರಿಸಿಕೊಳ್ಳಿ- ಅದೇ ಉತ್ತಮ

  1. ಓಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ ಧನ್ಯವಾಧಗಳು

Leave a Reply

Your email address will not be published. Required fields are marked *

error: Content is protected !!