ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಪಿ ವಿ ಸಿ ಪೈಪುಗಳು ಲಭ್ಯವಿದೆ. ಖರೀದಿ ಮಾಡುವ ಜನರಿಗೆ ಯಾವುದು ಉತ್ತಮ ಯಾವುದು ಕಳಫೆ ಎಂಬುದನ್ನು ತಿಳಿಯುವ ವಿಧಾನ ಗೊತ್ತಿದ್ಡರೆ ಉತ್ತಮ ಸಾಮಾಗ್ರಿಯನ್ಣೇ ಅಯ್ಕೆ ಮಾಡಭಹುದು. PVC ಪೈಪಿನಲ್ಲಿ ಉತ್ತಮ ಗುಣಮಟ್ಟದ್ದು ಯಾವುದು ಎಂದು ತಿಳಿಯುವ ವಿಧಾನ ಹೀಗೆ.
ನೀರಾವರಿಗೆ ಪ್ರತೀಯೊಬ್ಬ ಕೃಷಿಕರೂ ಬಳಸುವ ಪೈಪು ಪಿ ವಿ ಸಿ (ಪಾಲಿ ವಿನೈಲ್ ಕ್ಲೋರೈಡ್ ) ಇದು ಒಂದು ಪೆಟ್ರೋಲಿಯಂ ಉತ್ಪನ್ನವಾಗಿರುತ್ತದೆ, ಈ ಪೈಪುಗಳು ಕೃಷಿ ನೀರಾವರಿಗೆ ಪ್ರವೇಶವಾದ ತರುವಾಯ ಕೃಷಿ ನೀರಾವರಿಯಲ್ಲಿ ಅತೀ ದೊಡ್ಡ ಕ್ರಾಂತಿಯೇ ಆಯಿತು. ಕೃಷಿ ಕ್ಷೇತ್ರ ವಿಸ್ತರಣೆಯಾಯಿತು. ಅದರೊಂದಿಗೆ ಪಿವಿಸಿ ಪೈಪುಗಳ ತಯಾರಿಕೆಯು ಗಲ್ಲಿ ಗಲ್ಲಿಯಲ್ಲಿ ಪ್ರಾರಂಭವಾಯಿತು. ಬಳಸುವ ರೈತರಿಗೆ ಎಲ್ಲಾ ಪಿವಿಸಿ ಪೈಪುಗಳೂ ನೋಡಲು ಏಕ ಪ್ರಕಾರವಾಗಿ ಕಂಡರೂ ಯಾವುದು ಉತ್ತಮ , ಯಾವುದು ಕಳಪೆ ಎಂಬುದರ ಬಗ್ಗೆ ಏನೂ ಅರಿಯಲು ಸ್ವಲ್ಪ ತಿಳುವಳಿಕೆ ಅಗತ್ಯ.
- ಪಿ ವಿಸಿ ಪೈಪುಗಳನ್ನು ಪಿವಿಸಿ ರೆಸಿನ್, ಕಾರ್ಬನ್ ಹಾಗೂ ಕ್ಯಾಲ್ಸಿಯಂ ಮುಂತಾದ ಕಚ್ಚಾ ವಸ್ತುಗಳ ಸಮತೋಲಿತ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ.
- ಈ ಪೈಪುಗಳ ಬಣ್ಣ ಮರಸುಟ್ಟ ಬೂದಿಯಂತೆ ಇರುತ್ತದೆ.
- ಇದಕ್ಕೆ ಒಂದೊಂದು ಅಳತೆಗೆ ತಕ್ಕಂತೆ ಒಂದೊಂದು ನಿರ್ಧಿಷ್ಟ ದಪ್ಪ ಮಿತಿ ಇರುತ್ತದೆ.
- ಆಯಾ ಪೈಪುಗಳ ದಪ್ಪ (wall thickness)ಮತ್ತು ಅದಕ್ಕೆ ಬಳಸಿದ ಕಚ್ಚಾ ವಸ್ತುಗಳ ಪ್ರಮಾಣದ ಮೇಲೆ ಅದಕ್ಕೆ ಒತ್ತಡ (2 ಇಂಚು,63 mm ದಪ್ಪದ ಪೈಪಿಗೆ 4 kg,1 ಇಂಚು 10 kg ) ತಡೆದುಕೊಳ್ಳುವ ಶಕ್ತಿ ಎನ್ನುತ್ತಾರೆ.
- ಪೈಪಿನಲ್ಲಿ ಬರೆದಂತೆ ಈ ಎಲ್ಲಾ ಗುಣಮಟ್ಟಗಳು ಇರಬೇಕಾಗಿಲ್ಲ.
- ಕೆಲವು ಸರಿಯಾಗಿ ಇರಬಹುದು ಮತ್ತೆ ಕೆಲವು ಕಳಪೆಯೂ ಇರಬಹುದು.
- ಖರೀದಿಸುವ ರೈತರಿಗೆ ಹೊರ ನೋಟಕ್ಕೆಯಾದರೂ ಇದರ ಗುಣಮಟ್ಟ ತಿಳಿಯುವ ಮಾಹಿತಿ ಇದ್ದರೆ ಉತ್ತಮವಾದುದನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ.
ಪೈಪುಗಳ ಗುಣಮಟ್ಟ ಪರೀಕ್ಷೆ ಹೇಗೆ:
- ಪಿವಿಸಿ ಪೈಪನ್ನು ರಿಜಿಡ್ ಪಿವಿಸಿ ಪೈಪು ಎಂದು ಕರೆಯಲಾಗುತ್ತದೆ.
- ಇದು ಗಟ್ಟಿಯಾಗಿ ಇರುವುದೇ ಈ ಹೆಸರು ಕೊಡಲು ಕಾರಣ.
- ಗಟ್ಟಿ ಒಂದೇ ಇದ್ದರೆ ಸಾಲದು ಅದು ನೀರಿನ ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರಬೇಕು.
- ಬಿಸಿಲನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರಬೇಕು.
- ಸಣ್ಣ ಪುಟ್ಟ ಘಾಸಿಗೂ ಅದು ಜಗ್ಗಬಾರದು.
ಉತ್ತಮ ಗುಣಮಟ್ಟದ ಪೈಪು ಹೇಗಿರುತ್ತದೆ?
- ಪಿವಿಸಿ ಪೈಪನ್ನು ತೆಗೆದುಕೊಂಡು ಅದಕ್ಕೆ ಕಾಲಿನಿಂದ ಒತ್ತಿ ಅಥವಾ ಅದರ ಮೇಲೆ ನಿಮ್ಮ ಇಡೀ ಶರೀರದ ಭಾರ ಹಾಕಿ ನಿಲ್ಲಿ.
- ಆಗ ಪೈಪು ಒಡೆಯಬಾರದು.
- ತುಂಡಾಗಬಾರದು. ಬದಲಿಗೆ ಅಲ್ಲಿಗೇ ಅದು ಜಜ್ಜಿದಂತೆ ಆಗಬೇಕು.
- ಇಂತಹ ಪೈಪುಗಳು ಒತ್ತಡ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿವೆ ಎಂದು ತಿಳಿಯಬಹುದು.
- ಒಂದು ಪಿವಿಸಿ ಪೈಪನ್ನು ಎರಡು ಮಗ್ಗುಲಲ್ಲಿ ಹಿಡಿದು ಬಗ್ಗಿಸಿ.
- ಆಗ ಆ ಪೈಪು ತುಂಡಾಗಬಾರದು. ಅಲ್ಲಿಗೇ ಮುರಿದಂತಾಗಬೇಕು.
- ಅದು ಉತ್ತಮ ಗುಣಮಟ್ಟದ ಪಿವಿಸಿ ಪೈಪು ಆಗಿರುತ್ತದೆ.
- ಪೈಪನ್ನು ಕತ್ತರಿಸುವ ಗರಗಸ ( ಬ್ಲೇಡ್) ನಲ್ಲಿ ಪೈಪನ್ನು ಕತ್ತರಿಸಿ.
- ಕೊನೇ ಹಂತ ತಲುಪುವಾಗ ಆ ಪೈಪು ತನ್ನಷ್ಟಕ್ಕೇ ಮುರಿಯಬಾರದು.
- ಪೂರ್ತಿ ಕತ್ತರಿಸಿದ ನಂತರವೇ ತುಂಡಾಗಬೇಕು.
- ಮುರಿಯುವ ಪೈಪು ಕಳಪೆ ಸಾಮಾಗ್ರಿಗಳ ಮೂಲಕ ಅಥವಾ ಅಸಮತೋಲನ ಪ್ರಮಾಣದಲ್ಲಿ ಕಚ್ಚಾವಸ್ತುಗಳನ್ನು ಸೇರಿಸಿ ತಯಾರಾದುದು ಆಗಿರುತ್ತದೆ.
- ದರ ಸಮರ ಮತ್ತು ಲಾಭಕ್ಕಾಗಿ ಕ್ಯಾಲ್ಸಿಯಂ ಹಾಗೂ ಕಾರ್ಬನ್ ಹೆಚ್ಚು ಮಿಶ್ರಣ ಮಾಡಿ ಪೈಪನ್ನು ದಪ್ಪ ಮಾಡಿ ಆಕರ್ಷಕವಾಗಿ ತಯಾರಿಸುವುದು ಇದೆ.
- ಪೈಪು ದಪ್ಪ ಇದ್ದರೆ ನೋಡಲು ಚೆನ್ನಾಗಿದ್ದರೆ ಅದು ಉತ್ತಮ ಎಂದು ತಿಳಿಯದಿರಿ.
- ಹನಿ ನೀರಾವರಿ ಮಾಡುವಾಗ ಪಿವಿಸಿ ಪೈಪಿನಲ್ಲಿ ತೂತು ಕೊರೆಯಲಾಗುತ್ತದೆ.
- ಆ ಸಮಯದಲ್ಲಿ ಕೊರೆಯುವಾಗ ತೀರಾ ಸಣ್ಣ ಸಣ್ಣ ಹುಡಿಯಾಗಿ ಕತ್ತರಿಸಿದ ಭಾಗ ಬರಬಾರದು.
- ಅದು ಉದ್ದದ ತುಂಡುಗಳಂತೆ ಬರಬೇಕು.ಕಲ್ಲು ತಾಗಿದ ಭಾಗದಲ್ಲಿ ತೂತು ಆಗಬಾರದು ಅಲ್ಲಿ ಜಜ್ಜಿದಂತೆ ಆಗಬೇಕು.
- ಬಿಸಿಲು ತಾಗಿದ ಜಾಗದಲ್ಲಿ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಪೈಪಿನ ಮೇಲೆ (ಸ್ಪ್ರಿಂಕ್ಲರ್ ಪಾಯಿಂಟ್) ತೆಂಗಿನ ಗರಿ ಇತ್ಯಾದಿ ಏನಾದರೂ ಬಿದ್ದರೆ ಆ ಪೈಪು ತುಂಡಾಗಬಾರದು. ಬಾಗಬೇಕು.
- ಬಾಗಿದ ಸ್ಥಳದಲ್ಲಿ ಜಜ್ಜಿದಂತೆ ಇರಬೇಕು.
- ಅಲ್ಲಿ ಒಡೆದು ಹೋಗಬಾರದು.
- ಪಿವಿಸಿ ಪೈಪುಗಳನ್ನು ಗಮ್ ಹಾಕಿ ಜೋಡಣೆ ಮಾಡಿದ ಮೇಲೆ ಅದು ಗಂ ಬಿಡಬಾರದು.
- ಒತ್ತಡ ಹೆಚ್ಚಾದಾಗ ಇಡೀ ಪೈಪು ಒಡೆಯಬಾರದು.ಎಲ್ಲಾದರೂ ಒಂದು ಕಡೆ ಒಡೆಯಬೇಕು.
ರೈತರು ತಾವು ಪ್ರತೀ ವರ್ಷ ಸಾಕಷ್ಟು ಪ್ರಮಾಣದಲ್ಲಿ ಪಿವಿಸಿ ಪೈಪುಗಳನ್ನು ಖರೀದಿ ಮಾಡುವವರು. ವರ್ಷ ಹೋದಂತೆ ಪೈಪುಗಳ ದರ ಹೆಚ್ಚಳವಾಗುತ್ತಲೇ ಇರುತ್ತದೆ. ಪದೇ ಪದೇ ಪೈಪು ಬದಲಿಸುವ ಬದಲಿಗೆ ಗುಣಮಟ್ಟದ ಪೈಪನ್ನು ಹಾಕಿದರೆ ಸದಾಕಾಲ ನಿಶ್ಚಿಂತೆಯಲ್ಲಿ ಇರಬಹುದು. ಅದಕ್ಕಾಗಿ ಯಾವ ಬ್ರಾಂಡ್ ನ ಉತ್ಪನ್ನವನ್ನು ಕೊಂಡರೂ ಅದನ್ನು ಈ ರೀತಿ ಕೆಲವು ಪರೀಕ್ಷೆಗೆ ಒಳಪಡಿಸಿ ಪಾಸ್ ಅದದ್ದನ್ನು ಮಾತ್ರ ಖರೀದಿಗೆ ಆಯ್ಕೆ ಮಾಡಿ.