ಕೃಷಿ ತಜ್ಞರು ಹಲವು ಬಗೆಯ ಕೀಟ ನಿಯಂತ್ರಣಕ್ಕೆ ಈಗಲೂ ಕಾರ್ಬರಿಲ್ ಕೀಟನಾಶಕ ಶಿಫಾರಸು ಮಾಡುತ್ತಾರೆ. ಸುಮಾರು 8 ವರ್ಷಗಳಿಂದ ಇದು ಮಾರುಕಟ್ಟೆಯಿಂದ ನಾಪತ್ತೆಯಾಗಿದ್ದರೂ, ಇವರಿಗೆ ಈ ವಿಚಾರ ಗಮನಕ್ಕೇ ಬಂದಿಲ್ಲವೇನೋ. ಈಗಲೂ ಎಲ್ಲಾ ಪುಸ್ತಕಗಳಲ್ಲೂ ಇದನ್ನು ಶಿಫಾರಸು ಮಾಡುತ್ತಲೇ ಇದ್ದಾರೆ.
- ಭಾರತ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯ ಎಲ್ಲಾ ಫಲಾನುಭಗಳಿಗೆ ವಾರ ವಾರವಾದರೂ ಕೃಷಿ ನಿರ್ಧೇಶಕರ ಮುಖಾಂತರ ಕೃಷಿ ಸಲಹೆಯ ಸಂದೇಶ ಬರುತ್ತದೆ.
- ಇದರಲ್ಲಿ ಕೀಟ ನಿಯಂತ್ರಣಕ್ಕೆ ಕಾರ್ಬರಿಲ್ ಸಿಂಪಡಿಸಿ ಎನ್ನುತ್ತಾರೆ.
- ಆದರೆ ಅದು ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ. ಇದು ಇನ್ನೂ ಇವರಿಗೆ ಗೊತ್ತೇ ಆಗಿಲ್ಲವೇನೋ?
ಕೀಟ ನಿಯಂತ್ರಣದಲ್ಲಿ ಭಾರೀ ಹೆಸರು ಮಾಡಿದ ಕಾರ್ಬರಿಲ್ ಈಗ ನೆನಪು ಮಾತ್ತ್ರ. ಅದನ್ನು ನೀವು ಎಲ್ಲಿ ಹುಡುಕಿದರೂ ಸಿಗದು. ಆದರೆ ಎಲ್ಲೆಡೆಯೂ ಕೀಟ ನಿಯಂತ್ರಣಕ್ಕೆ ಕಾರ್ಬರಿಲ್ ಅನ್ನು ಶಿಫಾರಸು ಮಾಡಲಾಗುತ್ತದೆ. ನಿಜಕ್ಕೂ ಈ ಕೀಟ ನಾಶಕ ಬಹಳ ಕೆಲಸ ಮಾಡುತ್ತಿತ್ತು. ಇದರ ನಾಪತ್ತೆಯಿಂದಾಗಿ ಇಂದು ಹಣ್ಣು ನೊಣವೂ ಸೇರಿದಂತೆ ಹಲವು ಮೈನರ್ ಕೀಟಗಳು ಮೇಜರ್ ಆಗಿವೆ. ಯಾಕಾಗಿ ಈ ಕೀಟ ನಾಶಕ ಮಾರುಕಟ್ಟೆಯಿಂದ ಮಾಯವಾಯಿತು ಎಂಬುದು ಬಹಳ ಕುತೂಹಲಕಾರೀ ವಿಷಯ.
ಸುಮಾರು 10 ವರ್ಷದ ಹಿಂದೆ:
- ಆಗ ಎಲ್ಲಾ ಮಾಧ್ಯಮಗಳಲ್ಲೂ ಕೀಟನಾಶಕವೊಂದು ಮಾಡಿದ ಆವಾಂತರದ್ದೇ ಸುದ್ದಿ.
- ಗೇರು ಮರಗಳಿಗೆ ಇದನ್ನು ಹೆಲಿಕಾಪ್ಟರ್ ಮೂಲಕ ಸಿಂಪಡಿಸಿ ಇಡೀ ಮನುಕುಲಕ್ಕೆ ಗಂಡಾಂತರ ಉಂಟಾದ ಸಂಗತಿಯನ್ನು ಪುಂಖಾನು ಪುಂಖವಾಗಿ ಬಿತ್ತರಿಸುವುದೇ ಮೊದಲ ಫಂಕ್ತಿಯ ಸುದ್ದಿಯಾಗಿತ್ತು.
- ದಿನಾಲೂ ಅದರದ್ದೇ ಸುದ್ದಿ, ಒಬ್ಬೊಬ್ಬ ಮಾದ್ಯಮದ ಪ್ರತಿನಿಧಿಗಳೂ ತಮ್ಮದೇ ಆದ ಪತ್ತೇದಾರಿ ವಿಧಾನದಲ್ಲಿ ಸುದ್ದಿ ಕಲೆ ಹಾಕಿ, ಅದನ್ನು ಹೆಚ್ಚು ರಂಜನೀಯ ಮಾಡುತ್ತಿದ್ದರು.
- ಕರ್ನಾಟಕದ ಪ್ರತಿಷ್ಟಿತ ದಿನಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು.
- ಕರ್ನಾಟಕ. ಕೇರಳ ಗೇರು ಅಭಿವೃದ್ದ್ದಿ ಮಂಡಳಿಯವರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಮರಗಳಿಗೆ ಯಾವ ವರ್ಷ ಯಾವ ಯಾವ ಕೀಟ ನಾಶಕಗಳನ್ನು ಸಿಂಪಡಿಸಲಾಗಿದೆ ಎಂಬದರ ಮಾಹಿತಿ ಹಕ್ಕು ಆದಾರಿತ ಉತ್ತರ.
- ಗೇರು ಮರಗಳಿಗೆ 1981-82-83 ನೇ ಸಾಲಿನಲ್ಲಿ ಕರ್ನಾಟಕ ಗೇರುಅಭಿವೃದ್ದಿ ಮಂಡಲಿಯವರು ಸಿಂಪಡಿಸಿದ ಕೀಟ ನಾಶಕದ ವಿವರ ಅದಾಗಿತ್ತು.
ಏನು ಸುದ್ದಿಗಳು:
- ಕರ್ನಾಟಕ , ಕೇರಳದ ಗೇರು ತೋಟಗಳಿಗೆ ಟಿ ಸೊಳ್ಳೆ ನಿಯಂತ್ರಣಕ್ಕಾಗಿ ಸಿಂಪಡಿಸಿದ್ದು ಬರೇ ಎಂಡೋ ಸಲ್ಫಾನ್ ಕೀಟನಾಶಕ ಮಾತ್ರವಲ್ಲ. ಅದರ ಜೊತೆಗೆ ಕಾರ್ಬರಿಲ್ ಕೂಡಾ ಸಿಂಪರಣೆ ಮಾಡಲಾಗಿತ್ತು.
- ಕಾರ್ಬರಿಲ್ ಅನ್ನು ಎಂಡೋ ಸಲ್ಫಾನ್ ಗಿಂತ ಹೆಚ್ಚು ಬಾರಿ ಸಿಂಪರಣೆ ಮಾಡಲಾಗಿತ್ತು ಎಂಬ ಮಾಹಿತಿ ಹಕ್ಕಿನ ಸುದ್ದಿ ಪ್ರಕಟವಾದ ಕೆಲವೇ ಸಮಯದಲ್ಲಿ ಕಾರ್ಬರಿಲ್ ಎಂಬ ಕೀಟನಾಶಕ ಮಾರುಕಟ್ಟೆಯಿಂದ ನಾಪತ್ತೆಯಾಯಿತು.
- ಕೆಲವು ಕೀಟನಾಶಕ ಮಾರಾಟದ ಅಂಗಡಿಯಲ್ಲಿ ಉಳಿದಿದ್ದ ಸಮಾಗ್ರಿಗಳನ್ನೂ ಸಹ ಕಂಪೆನಿಯು ವಾಪಸು ಕೊಂಡೋಗಿದೆ ಎಂಬ ಬಗ್ಗೆ ಮಾರಾಟಗಾರರು ಹೇಳುತ್ತಾರೆ.
ಯಾಕೆ ಹೀಗಾಗಿರಬಹುದು:
- ಕಾರ್ಬರಿಲ್ ತಯಾರಿಕೆ ಮಾಡಿ ಮಾರುಕಟ್ಟೆ ಮಾಡುತ್ತಿದ್ದುದು, ಜರ್ಮನ್ ದೇಶದ ಬಹುರಾಷ್ಟ್ರೀಯ ಕಂಪೆನಿ.
- ಬಹುಷಃ ಇದರಲ್ಲಿ ಯಾವುದೋ ಹಾನಿಕಾರಕ ಅಂಶಗಳಿರುವ ಬಗ್ಗೆ ಇವರಿಗೆ ಮನವರಿಕೆ ಆಗಿ, ಅದನ್ನು ಸದ್ದಿಲ್ಲದೆ ಹಿಂದಕ್ಕೆ ಪಡೆದಿರಬಹುದಾದ ಸಾಧ್ಯತೆ ಇದೆ.
- ಇದಕ್ಕೆ ಪುಷ್ಟಿ ಕೊಡುವಂತೆ ಕಳೆ ನಿಯಂತ್ರಣ ಮಾಡಬಲ್ಲ ಡಯುರಾನ್ ಎಂಬ ಕಳೆ ನಾಶಕವನ್ನೂ ಸಹ ಇವರೇ ಪರಿಚಯಿಸಿ ಸದ್ದಿಲ್ಲದೆ ಮಾರುಕಟ್ಟೆಯಿಂದ ನಾಪತ್ತೆ ಮಾಡಲಾಗಿದೆ.
ಕೀಟ ನಿಯಂತ್ರಣದ ವಿಚಾರದಲ್ಲಿ ಕಾರ್ಬರಿಲ್ ಉತ್ತಮ ಫಲಿತಾಮ್ಶ ಕೊಡುತ್ತಿತ್ತು ಎಂಬುದೇನೋ ನಿಜ. ಅದರ ಬದಲಿಗೆ ಬೇರೆ ಕೀಟನಾಶಕಗಳೂ ಸಹ ಇಲ್ಲ. ಆದರೆ ಅದುವೇ ಲಭ್ಯವಿಲ್ಲ. ಇದು ಇನ್ನೂ ನಮ್ಮ ಕೃಷಿ ವಿಜ್ಞಾನಿಗಳಿಗೆ ಗೊತ್ತಾಗದೇ ಇರುವುದು ನಮ್ಮ ದುರದೃಷ್ಟವೇ ಸರಿ.