ಇನ್ನೇನು ಮಳೆಗಾಲ ಬರುವುದಕ್ಕೆ ಹೆಚ್ಚು ಸಮಯ ಇಲ್ಲ. ಅಡಿಕೆ ತೋಟದಲ್ಲಿ ಈಗ ನೀವು ಮಾಡಬೇಕಾದ ಕೆಲವು ಕೆಲಸಗಳು ತೋಟದ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಮಳೆಗಾಲದಲ್ಲಿ ಯಾವ ಕೆಲಸವನ್ನೂ ಓರಣವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಕೆಲಸಗಾರರ ಲಭ್ಯತೆಯೂ ಕಡಿಮೆ ಇರುತ್ತದೆ. ಇದಕ್ಕಿಂತೆಲ್ಲಾ ಮುಖ್ಯವಾಗಿ ಮಳೆಗಾಲದಲ್ಲಿ ಮಾಡಲೇ ಬಾರದ ಕೆಲವು ಕೆಲಸಗಳಿವೆ ಅದನ್ನು ಈಗಲೇ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ ಕಳೆ ತೆಗೆಯುವುದು, ಬಸಿ ಗಾಲುವೆ ಸ್ವಚ್ಚ ಮಾಡುವುದು ಮಾಡಿದರೆ ಉದುರಿ ಹೆಕ್ಕಲು ಸಿಕ್ಕದ ಅಡಿಕೆ ಸಿಗುತ್ತದೆ. ಅದರಿಂದ ಕೆಲಸದ ಅರ್ಧ ಖರ್ಚನ್ನು ಭರಿಸಬಹುದು. ಇದನ್ನು ಒಮ್ಮೆ ಯೋಚಿಸಿ ನೋಡಿ. ಹೌದೋ ಅಲ್ಲವೋ ಎಂದು ತೀರ್ಮಾನಿಸಿ.
- ಮಳೆಗಾಲದಲ್ಲಿ ತೋಟದಲ್ಲಿ ನೀರು ನಿಂತಿರಬಾರದು, ಹಾಗೆಂದು ನೀರು ಹರಿದು ಹೋಗುತ್ತಿದ್ದರೆ ಯಾವ ತೊಂದರೆಯೂ ಇಲ್ಲ.
- ನೀರು ನಿಂತಲ್ಲೇ ನಿಂತರೆ ಮಣ್ಣಿನಲ್ಲಿ ಕೆಲವು ವಿಷ (Toxic eliments) ರಾಸಾಯನಿಕಗಳನ್ನು ಬಿಡುಗಡೆ ಮಾಡಿ ರೋಗಕ್ಕೆ ಕಾರಣವಾಗುತ್ತದೆ.
- ಅದು ಮಾತ್ರವಲ್ಲ ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ರಭಸದ ಹನಿಗಳಿಂದ ಮೇಲು ಮಣ್ಣಿನ ಸವಕಳಿಗೆ ಪ್ರಾಮುಖ್ಯ ಕಾರಣವಾಗುತ್ತದೆ.
- ಇದನ್ನು ಮಳೆ ಬರುವ ಮುಂಚೆಯೇ ನಿರ್ಭಂಧಿಸಬೇಕು.
ಬಸಿಗಾಲುವೆ ಈಗಲೇ ಸ್ವಚ್ಚಗೊಳಿಸಿ:
- ಕೆಲವರು ಬಸಿಗಾಲುವೆಯನ್ನು ಮಳೆ ಬಂದ ತರುವಾಯ ನೀರು ಹರಿದು ಹೋಗಲು ಪ್ರಾರಂಭವಾದ ನಂತರ ಸ್ವಚ್ಚಮಾಡಲು ಪ್ರಾರಂಭಿಸುತ್ತಾರೆ.
- ಇದು ಸೂಕ್ತ ವಿಧಾನ ಅಲ್ಲ. ಮಳೆಗಾಲ ಪ್ರಾರಂಭವಾಗುವ ಮುಂಚೆ ಈ ಕೆಲಸವನ್ನು ಮಾಡಿ ಮುಗಿಸಬೇಕು.
- ಬಸಿ ಗಾಲುವೆಗಳಲ್ಲಿ ಸಂಗ್ರವಾಗಿರುವ ಮೆಕ್ಕಲು ಮಣ್ಣು (Top soil) ಹಾಗೂ ಕೃಷಿ ತ್ಯಾಜ್ಯಗಳನ್ನು ಅದು ಕರಗಿ ಹೋಗುವ ಮುಂಚೆ, ತೆಗೆದು ತೋಟದ ಮೇಲೆ ಹರಡಿ ಅದು ಕೊಚ್ಚಣೆಯಾಗಿ ಹೋಗದಂತೆ ರಕ್ಷಿಸಬೇಕು.
- ಇದರಲ್ಲಿ ಸಾಕಷ್ಟು ಫಲವತ್ತಾದ ಮಣ್ಣು ಇರುತ್ತದೆ.
- ಫಲವತ್ತಾದ ಮೆಕ್ಕಲು ಮಣ್ಣನ್ನು ಅಡಿಕೆ ಮರದ ಬುಡಕ್ಕೆ ಹಾಕಿದರೆ ಗೊಬ್ಬರ ಸಿಕ್ಕಂತೆ ಆಗುತ್ತದೆ.
- ಇದನ್ನು ಮಳೆ ಬಂದು ಒರತೆ ಆದ ತರುವಾಯ ತೆಗೆದರೆ ಫಲವತ್ತಾದ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗುತ್ತದೆ.
- ಬರೇ ಮರಳು ಮಾತ್ರ ತೆಗೆಯಲು ಸಿಗುತ್ತದೆ.
ಮುಖ್ಯವಾಗಿ ಮಳೆಗಾಲ ಪೂರ್ವದಲ್ಲಿ ಬರುವ ಮಳೆಗೆ ಹಾಗೂ ತೋಟದಲ್ಲಿ ಹುಲ್ಲು ಕಳೆ ಹೆಚ್ಚಾಗಿರುವಾಗ ಬರುವ ಒಂದು ತಿಗಣೆ ಪೆಂಟಟೋಮಿಡ್ ಬಗ್ ನಿಂದ ಉದುರುವ ಮಿಡಿ ಕಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲೇ ಬೇಕು.
ಬಸಿಗಾಲುವೆಯಿಂದ ತೆಗೆದ ಮಣ್ಣನ್ನು ಬದಿಯಲ್ಲೇ ಹಾಕದೆ ಅದನ್ನು ಕರಗಿ ಹೋಗದ ಜಾಗದಲ್ಲಿ ಹಾಕಬೇಕು. ತೋಟದ ಒಳ ಭಾಗದಿಂದ ಮಳೆ ಪ್ರಾರಂಭವಾಗುವ ಸಮಯದಿಂದ ಮುಗಿಯುವ ವರೆಗೂ ಸ್ವಲ್ಪವೂ ಕೆಸರು ನೀರು ಹೂರ ಹೋಗದಂತೆ ನೋಡಿಕೊಳ್ಳಿ. ಆ ತರಹ ನೀರು ಬಸಿಯುವ ವ್ಯವಸ್ಥೆ ಇರಲಿ. ಬಸಿ ಗಾಲುವೆಯ ಬದುಗಳಲ್ಲಿ ಅಡಿಕೆ ಸೋಗೆ, ಹಾಳೆ ಹಾಕಿ. ಇಲ್ಲವೇ ಪಾಲಿಥೀನ್ ಮುಚ್ಚಿಗೆಯನ್ನು (Organic mulching) ಹಾಕಿ ಮಣ್ಣಿನ ಸವಕಳಿಯನ್ನು ತಡೆಯಿರಿ.
- ಇದರಿಂದ ಸಾಕಷ್ಟು ಪೋಶಕಾಂಶ ಉಳಿದುಕೊಳ್ಳುತ್ತದೆ.
- ತೋಟದಲ್ಲಿ ಇಳುವರಿ ಹೆಚ್ಚಳವಾಗುತ್ತದೆ.
ಮಣ್ಣು ಸವಕಳಿ ಆಗದಂತೆ ತ್ಯಾಜ್ಯ ಮುಚ್ಚಿ:
- ಅನುಕೂಲ ಇದ್ದವರು ಈ ಸಮಯದಲ್ಲಿ ಕೃಷಿ ತ್ಯಾಜ್ಯಗಳನ್ನು ನೆಲಕ್ಕೆ ಪೂರ್ತಿ ಆವರಿಸುವಂತೆ ಮುಚ್ಚಿಗೆ ಮಾಡುವುದು ಬಹಳ ಉತ್ತಮ.
- ಸ್ವಲ್ಪ ಖರ್ಚು ಹೆಚ್ಚಾದರೂ ತರಗೆಲೆ ಅಥವಾ ಇನ್ಯಾವುದೋ ಕೃಷಿ ತ್ಯಾಜ್ಯಗಳನ್ನು ಖರೀದಿ ಮಾಡಿಯಾದರೂ ಹೊಲಕ್ಕೆ ಮುಚ್ಚಿಗೆ ಹಾಕಬಹುದು.
- ಕರಡ ಹುಲ್ಲು, ಭತ್ತದ ಹುಲ್ಲು ಸಹ ಮುಚ್ಚಿಗೆ ಮಾಡಬಹುದು.
- ಇದೆಲ್ಲವೂ ಸಾಧ್ಯವಾಗದವರು ನೆಲಕ್ಕೆ ಪಾಲಿಥೀನ್ ಮಲ್ಚಿಂಗ್ ಮಾಡಬಹುದು.
- ಮರದ ಮೇಲೆ ಬಿದ್ದು, ದೊಡ್ಡ ಹನಿಗಳ ರೂಪದಲ್ಲಿ ನೆಲಕ್ಕೆ ಬೀಳುವ ನೀರು ಸಾಕಷ್ಟು ಪೋಷಕಗಳನ್ನು ಕೊಚ್ಚಣೆಯಾಗುವಂತೆ ಮಾಡುತ್ತದೆ.
- ಆ ನೀರು ಬೀಳುವಲ್ಲಿ ನೆಲಕ್ಕೆ ಹೊದಿಕೆ ಮಾಡಲೇ ಬೇಕು.
- ಮರಮಟ್ಟುಗಳ ಗೆಲ್ಲು ಸವರಿದ ಸೊಪ್ಪನ್ನು ಈ ಸಮಯದಲ್ಲಿ ಹಾಕಿದರೆ ಅದು ಮುಂದೆ ಅಡಿಕೆ ಕೊಯಿಲಿನ ಸಮಯಕ್ಕೆ ಕಳಿತು ಹೋಗಿ ಮಣ್ಣಾಗಿರುತ್ತದೆ.
- ಆಗ ಕೃಷಿ ಕೆಲಸಕ್ಕೆ ತೊಂದರೆ ಆಗಲಾರದು. ಈಗಾಗಲೇ ಬಹಳ ಕಡೆ ಮಳೆ ಬಂದಿದ್ದು, ಹುಲ್ಲು ಇತ್ಯಾದಿ ಕಳೆ ಬಂದಿದ್ದರೆ ಅದನ್ನು ಸವರಿ ನೆಲಕ್ಕೆ ಮುಚ್ಚಿಗೆ ಹಾಕಿದರೆ ಉತ್ತಮ.
ಪಾಲಿಥೀನ್ ಶೀಟು (Mulching sheet) ಅಥವಾ ಕಳೆ ನಿಯಂತ್ರಕ (Anti weed mat) ತೋಟಕ್ಕೆ ಹಾಸುವುದರಿಂದ ಬೇರು ಹುಳ ನಿಯಂತ್ರಣ ಆಗುತ್ತದೆ. ಬೇರು ಹುಳದ ದುಂಬಿಗಳಿಗೆ ಸಂತಾನಾಭಿವೃದ್ದಿಗೆ ಅವಕಾಶ ಸಿಗದೆ ನಾಶವಾಗುತ್ತದೆ ಎನ್ನುತ್ತಾರೆ ಸಿದ್ದಾಪುರದ ಕೃಷಿಕ ಅರುಣ್ ಹೆಗಡೆಯವರು.
ರೋಗ ಸಾಧ್ಯತೆ ಕಡಿಮೆ ಮಾಡಲು ರಂಜಕ ಮತ್ತು ಪೊಟ್ಯಾಶ್ ಕೊಡಿ:
- ಮಳೆಗಾಲ ಬರುವ ಮುಂಚೆ ನೆಲದಲ್ಲಿ ಸಾರಜನಕ ಅಂಶ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.
- ಮಳೆ ಸಿಂಚನ ಆದ ತಕ್ಷಣ ಸಿಡಿಲು ಮಿಂಚುಗಳ ಮೂಲಕ ದ್ವಿದಳ ಕಳೆಗಳ ಮೂಲಕ ಸಾರಜನಕ ಲಭ್ಯವಾಗುತ್ತದೆ.
- ರಂಜಕ ಮತ್ತು ಪೊಟ್ಯಾಶಿಯಂ ಅಂಶ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದ್ದರೆ ರೋಗ ಸಾಧ್ಯತೆ ಕಡಿಮೆಯಾಗುತ್ತದೆ.
- ಅದಕ್ಕಾಗಿ ಹನಿ ನೀರಾವರಿಯ ಮೂಲಕ ಪೋಷಕ ಕೊಡುವವರು 0:52:34 (Mono potassium phosphate ) ಗೊಬ್ಬರ ವನ್ನು ಕೊಡಿ.
- ಮಣ್ಣಿನಲ್ಲಿ ಕರಗುವ ಗೊಬ್ಬರವಾದರೆ 10:26:26 ಗೊಬ್ಬರವನ್ನು ಕೊಡಬಹುದು.
- ಮಳೆಗಾಲಕ್ಕೆ ಮುಂಚೆ ಸಾಧ್ಯವಾದರೆ ಪೊಟ್ಯಾಶಿಯಂ ಫೋಸ್ಫೋನೇಟ್ ಹುಡಿಯನ್ನು 1 ಕಿಲೋ 200 ಲೀ. ನೀರಿನಲ್ಲಿ ಕರಗಿಸಿ ಬುಡಕ್ಕೆ 1 ಲೀ . ಪ್ರಮಾಣದಲ್ಲಿ ಡ್ರೆಂಚಿಂಗ್ ಮಾಡಿ.
- ಇದು ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ.
ಮಳೆಗಾಲಕ್ಕೆ ಮುಂಚೆ ಹುಲ್ಲು ಇತ್ಯಾದಿ ಹೆಚ್ಚು ಕಳೆ ಇದ್ದರೆ ಈಗಲೇ ಕಳೆಕೊಚ್ಚುವ ಯಂತ್ರಗಳಿಂದ ಸವರಿದರೆ ಹಗಲಿನ ಬಿಸಿಲಿನ ತಾಪಕ್ಕೆ ಒಣಗಿ ಹುಟ್ಟುವುದಿಲ್ಲ. ಮಳೆಗಾಲದ ಮಳೆ ಸಿಂಚನ ಆದಾಗ ಮತ್ತೆ ಬೆಳೆದು ಭೂ ಹೊದಿಕೆ ಉಂಟಾಗುತ್ತದೆ.ಯಾವುದೇ ಕಾರಣಕ್ಕೆ ಮುಂಗಾರು ಪೂರ್ವದಲ್ಲಿ ಕಳೆನಾಶಕ ಸಿಂಪರಣೆ ಮಾಡಬೇಡಿ. ಇದು ಮಣ್ಣಿನ ಸವಕಳಿಗೆ ಕಾರಣವಾಗುತ್ತದೆ. ಮಣ್ಣಿನ ಸವಕಳಿ ತಡೆದು, ನೀರಿನ ಓಟವನ್ನು ನಿಧಾನವಾಗಿಸಿದರೆ ಮಣ್ಣಿನಲ್ಲಿರುವ ಫಲವತ್ತತೆ ಉಳಿದು ಹೆಚ್ಚು ಗೊಬ್ಬರ ಹಾಕೆದೆಯೂ ಉತ್ತಮ ಫಸಲು ಪಡೆಯಬಹುದು.
ಕಳೆನಾಶಕ ಸಿಂಪಡಿಸುವವರಿಗೆ:
- ಕಳೆ ನಾಶಕವನ್ನು ಅನಿವಾರ್ಯವಾದರೆ ಮಾತ್ರ ಸಿಂಪಡಿಸಿ.
- ಈಗ ಕಳೆ ನಾಶಕ ಸಿಂಪಡಿಸಿದರೆ ಮಳೆ ಬರುವಾಗ ಮತ್ತೆ ಕಳೆಗಳು ಹುಟ್ಟಿಕೊಂಡು, ಮಣ್ಣು ಸವಕಳಿ ಕಡಿಮೆಯಾಗುತ್ತದೆ.
- ಎಪ್ರೀಲ್ ತಿಂಗಳಲ್ಲಿ ಕಳೆ ನಾಶಕ ಸಿಂಪರಣೆ ಮಾಡಬೇಕು. ನಂತರ ಬೇಡ.
ಗಾಳಿ ಬೆಳೆಕು ಬೀಳುವಂತೆ ಮಾಡಿ:
- ತೋಟದ ಬದುಗಳಲ್ಲಿ ಮದ್ಯದಲ್ಲಿ ಇರುವ ಮರಮಟ್ಟುಗಳ ಗೆಲ್ಲುಗಳನ್ನು ಈಗ ಸವರಿ ಅದನ್ನು ಮರದ ಬುಡಕ್ಕೆ ಹಸುರು ಸೊಪ್ಪಾಗಿ ಹಾಕಿ.
- ಮಳೆಗಾಲದಲ್ಲಿ ಗಾಳಿ ಬೆಳೆಕು ಚೆನ್ನಾಗಿ ಬಿದ್ದರೆ ರೋಗ ಸಾಧ್ಯತೆ ಕಡಿಮೆ.
- ಈಗ ಹಸುರು ಸೊಪ್ಪು ಹಾಕಿದರೆ ಅದು ಮಳೆಗಾಲದಲ್ಲಿ ನಿಧಾನವಾಗಿ ಕೊಳೆತು ಮುಂದೆ ಕೊಯಿಲಿನ ಸಮಯಕ್ಕೆ ಮಣ್ಣಾಗುತ್ತದೆ.
- ಆಗ ಯಾವ ತೊಂದರೆಯೂ ಇರುವುದಿಲ್ಲ. ಮಣ್ಣು ಕೊಚ್ಚಣೆಯನ್ನೂ ತಡೆಯುತ್ತದೆ.
- ಹೆಚ್ಚು ಸೊಪ್ಪು ಸದೆಗಳಿದ್ದರೆ ಅದನ್ನು ಬುಡಕ್ಕೆ ಹಾಕುವ ಬದಲಿಗೆ ನೆಲಕ್ಕೆ ಹಾಸಿದರೆ ಕಳೆ ನಿಯಂತ್ರಣ ಸುಲಭ. ಕಳೆ ನಾಶಕದ ಅಗತ್ಯ ಇಲ್ಲ.
ಮಳೆಗಾಲಕ್ಕೆ ಮುಂಚೆ ಈ ಕೆಲಸಗಳನ್ನು ಮಾಡಿದರೆ ಮಣ್ಣಿನ ಫಲವತ್ತತೆ ಉಳಿದುಕೊಳ್ಳುತ್ತದೆ. ಫಲವತ್ತತೆ ಕಡಿಮೆಯಾಗುವುದು ಎಲ್ಲಾ ರೋಗಗಳಿಗೂ ಮೂಲ ಕಾರಣ. ಮಣ್ಣನ್ನು ಹೆಚ್ಚು ಹೆಚ್ಚು ಫಲವತ್ತಾಗಿ ಉಳಿಸಿಕೊಳ್ಳುವುದು ಕೃಷಿಯಲ್ಲಿ ಪ್ರಾಮುಖ್ಯ ಬೇಸಾಯ ಕ್ರಮವಾದ ಕಾರಣ ಅದನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು.
Good information.
Thankyou
Thank you very much
Thank you very much. Any information required please reply
Very scientific explanation
Thanks a lot. Please suggest your friends to visit this site and comment.
Sir What about Breathing of Roots if we mulch plastics as shown in the photo?
And What Next about that Plastic? Recyclable?
Now many farmers adopted this method. Most of them are using long lasting plastics. About recycling they will sell it it Gujuri collectors.
Remaining we don’t know.