ಪುತ್ತೂರು ತಾಲೂಕು ಇಚಿಲಂಪಾಡಿಯಲ್ಲಿ ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಆಧುನಿಕ ಚಿಂತನೆಯ ಕೃಷಿ ಮೂಲಕ ಹೆಸರು ಮಾಡಿದ್ದ ಹಿರಿಯ ಕೃಷಿಕ, ಹರಿಶ್ಚಂದ್ರ ಶೆಟ್ಟಿ ಇವರು ನಮ್ಮನ್ನು ಅಗಲಿದ್ದಾರೆ.
ಕೃಷಿ ವೃತ್ತಿಯನ್ನು ಲಾಭದಾಯಕವಾಗಿ ಹೇಗೆ ಮುನ್ನಡೆಸಬಹುದು ಎಂಬುದಕ್ಕೆ ಮಾದರಿಯಾಗಿದ್ದ ಶ್ರೀಯುತರು ತಮ್ಮ ಕೃಷಿ ಭೂಮಿಯಲ್ಲಿ ವೈವಿದ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯ ಆದಾಯವನ್ನು ಹೆಚ್ಚಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದವರು. ಇವರು ಕೈಯಾಡಿಸದ ಕೃಷಿಯೇ ಇಲ್ಲ. ಜನೋಪಾಕಾರಿಯಾಗಿದ್ದವರು, ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಇವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ (23-03-2021 ಮಂಗಳವಾರ) ದೇವರಪಾದ ಸೇರಿದ್ದಾರೆ. ಇವರ ಅಗಲಿಕೆ ಕೃಷಿ ಕ್ಷೇತ್ರಕ್ಕೆ ಒಂದು ನಷ್ಟ.
- ಅಡಿಕೆ, ಗೇರು, ಮಾವು, ಹಲಸು, ತೆಂಗು, ರಬ್ಬರ್, ಹೀಗೆ ಭೂ ಪ್ರದೇಶಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆದವರು.
- ಅಡಿಕೆಯಲ್ಲಿ ಬರೇ ಬೆಳೆ ಬೆಳೆಯುವುದು ಮಾತ್ರವಲ್ಲದೆ , ತಮ್ಮ ತೋಟದ ಉತ್ತಮ ಅಡಿಕೆ ಬೀಜಗಳನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ನರ್ಸರಿ ಮಾಡುತ್ತಿದ್ದರು.
- ತಮ್ಮ ಹೊಲದಲ್ಲಿ ಹಲವಾರು ಬಗೆಯ ಮಾವಿನ ತಳಿಗಳನ್ನು ಬೆಳೆಸಿದ್ದು, ಅದನ್ನು ಬಿಡುವಿದ್ದಾಗ ಸಸಿ ಮಾಡಿ ಕೊಡುತ್ತಿದ್ದರು.
- ಗೇರು ಬೆಳೆಯಲ್ಲಿ ಇವರು ಗುರುತಿಸಲ್ಪಟ್ಟ ಕೃಷಿಕರು. ಗೇರಿನ ಬೇರೆ ಬೇರೆ ತಳಿಗಳನ್ನು ಬೆಳೆಸಿದವರು.
- ಅದನ್ನೂ ಸಹ ನರ್ಸರಿ ಮಾಡಿ ಮಾರಾಟ ಮಾಡುತ್ತಿದ್ದರು. ಪಕ್ಕಾ ವ್ಯವಹಾರಸ್ಥರಲ್ಲ.
- ಆದರೂ ಕೃಷಿಯಲ್ಲಿ ಅವಕಾಶಗಳಿರುವಾಗ ಪ್ರಾಮಾಣಿಕವಾಗಿ ಮಾಡಬಹುದಾದ ಕೃಷಿ ಪೂರಕ ವೃತ್ತಿಗಳನ್ನು ಮಾಡುತ್ತಿದ್ದರು.
- ನಂಬಿಕಾರ್ಹ ಸಸ್ಯೋತ್ಪಾದಕರು ಎಂಬ ಹೆಸರನ್ನು ಗಳಿಸಿದ್ದರು.
ಇತ್ತೀಚೆಗೆ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು, ಕೊರೋನಾ ಕಾರಣದಿಂದ ಕೆಲವು ಚಿಕಿತ್ಸೆಗಳಿಗೆ ಅನನುಕೂಲವಾಗಿ ತೊಂದರೆ ಅನುಭವಿಸಿದ್ದರು. ಮೂಲತಹ ವೇಣೂರಿನವರಾಗಿದ್ದ ಇವರು ಇಚಿಲಂಪಾಡಿಯಲ್ಲಿ ಕೃಷಿ ಭೂಮಿ ಖರೀದಿಸಿ, ಸ್ವತಹ ಕೃಷಿ ಪ್ರಾರಂಭಿಸಿದವರು.ಶ್ರೀಯುತರಿಗೆ ಮೂರು ಜನ ಮಕ್ಕಳು.
ಕೃಷಿಯಲ್ಲಿ ಬಹಳ ಹಿಂದೆಯೇ ಆಧುನಿಕತೆಯನ್ನು ಅಳವಡಿಸಿಕೊಂಡು ಬಂದವರು. ಸ್ವತಹ ದುಡಿಮೆಗಾರ. ಮಾಡಿದ ಪ್ರತೀಯೊಂದು ಕೃಷಿಯೂ ಅನುಕರಣೀಯವಾಗಿತ್ತು. ಸಜ್ಜನ, ಸಮಾಜ ಉಪಕಾರಿ ಆಗಿದ್ದ ಇವರ ಅಗಲಿಕೆ ಕೃಷಿಕ ಸಮುದಾಯಕ್ಕೆ ಒಂದು ನಷ್ಟ ಎಂದೇ ಹೇಳಬಹುದು.