ಮನುಷ್ಯರಿಗೆ ಮೆದುಳು ಶಕ್ತಿ ಚುರುಕು ಆಗಲು, ದೇಹದಲ್ಲಿ ಅಂಥಃಶಕ್ತಿ ಹೆಚ್ಚಲು ಬೇಕಾಗುವುದು ಪೌಷ್ಟಿಕ ಆಹಾರ. ವಿಟಮಿನ್ ಗಳು, ಪ್ರೋಟೀನುಗಳು ಹೇರಳವಾಗಿರುವ ಬೇಳೆ ಕಾಳುಗಳ ಬಳಕೆಯಿಂದ ಮಾತ್ರ ಇದು ಸಾಧ್ಯ. ಇವುಗಳ ಬೆಳೆ ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಇದು ಮಾನವ ಸಂಪನ್ಮೂಲದ ಮೇಲೆ ಪರಿಣಾಮ ಬೀರಲಿದೆ. ಇದಕ್ಕೆಲ್ಲಾ ಕಾರಣ ದೇಶದಲ್ಲಿ ಈ ಬೆಳೆಗಳನ್ನು ಬೆಳೆಸುವವರ ಕಡೆಗಣನೆ.
ಬೇಳೆ ಕಾಳುಗಳು ಮಾನವನಿಗೆ ಶಾರೀರಿಕ ಸಧೃಢತೆಯನ್ನು ಕೊಡುತ್ತವೆ. ಇದು ಪೌಷ್ಟಿಕ ಆಹಾರವಾಗಿದ್ದು, ಇದರ ಬಳಕೆ ಕಡಿಮೆ ಮಾಡಿದರೆ ನಮ್ಮ ಶಾರೀರಿಕ ಅಂಥಃ ಶಕ್ತಿ ಕಡಿಮೆಯಾಗಿ ಅಪೌಷ್ಟಿಕತೆ ತಲೆದೋರುತ್ತದೆ. ಇಂದು ನಮ್ಮಲ್ಲಿ ಈ ಬೆಳಗಳನ್ನು ಬೆಳೆಸುವುವವರು ಕಡಿಮೆಯಾಗಿ ಅಮದು ಅನಿವಾರ್ಯವಾಗಿದೆ.
ನಮ್ಮ ದೇಶದಲ್ಲಿ ಹಿಂದೆ ಎಲ್ಲಾ ಧವಸ ಧಾನ್ಯಗಳನ್ನೂ ಹೇರಳವಾಗಿ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆಲವು ತೋಟಗಾರಿಕಾ ಬೆಳೆಗಳ ಆದಾಯ ಹೆಚ್ಚಾಗಿರುವ ಕಾರಣ ಬಹಳಷ್ಟು ಜನ ಸಾಂಪ್ರದಾಯಿಕ ಬೇಳೆ ಕಾಳುಗಳು ಸೇರಿದಂತೆ ಧವಸ ಧಾನ್ಯಗಳ ಬೆಳೆಗಳಿಂದ ತೋಟಗಾರಿಕಾ ಬೆಳೆಗಳಿಗೆ ಪರಿವರ್ತನೆಯಾಗಿದ್ದಾರೆ. ಇದರಿಂದಾಗಿ ನಮ್ಮ ಬಳಕೆಗೆ ಇವುಗಳನ್ನು ಆಮದು ಮಾಡುವ ಸ್ಥಿತಿ ಬಂದಿದೆ.
- ಒಂದು ಎಕ್ರೆ ಹೊಲದಲ್ಲಿ ಉದ್ದು ಬೆಳೆದ ರೈತ ಪಡೆಯುವ ವರಮಾನ ವಾರ್ಷಿಕ ಗರಿಷ್ಟ 50,000.
- ಆತ ಕೂಲಿ ಕೆಲಸಕ್ಕೆ ಹೋದರೆ ದಿನಗೂಲಿ 300 ಸಿಕ್ಕರೂ ಅವನ ವಾರ್ಷಿಕ ಆದಾಯ 1 ಲಕ್ಷ ದಾಟುತ್ತದೆ.
- ನಮ್ಮ ದೇಶದಲ್ಲಿ ದುಡಿಯುವವರಿಗೆ ಸಾಕಷ್ಟು ಉದ್ಯೋಗಾವಕಾಶಗಳೂ ಇವೆ.
- ಅದರಲ್ಲಿ ಬರುವ ಆದಾಯ ಖರ್ಚು ಇಲ್ಲದ್ದು.
- ಅದೇ ಹೊಲದಲ್ಲಿ ಧವಸ ಧಾನ್ಯ, ಬೇಳೆ ಕಾಳು ಬೆಳೆದರೆ ಅದಕ್ಕೆ ಗೊಬ್ಬರ, ಕೀಟನಾಶಕ, ನೀರಾವರಿ, ಬೆಳೆ ರಕ್ಷಣೆ, ಕೊಯಿಲು, ಮಾರಾಟ ಇತ್ಯಾದಿ ಖರ್ಚು ಸೇರಿದಾಗ ಅವನಿಗೆ ಉಳಿಕೆ ಶೂನ್ಯ.
- ಇಂಥಃ ಸ್ಥಿತಿಯಲ್ಲಿ ಯಾರಾದರೂ ಬೆಳೆ ಬೆಳೆಯುವ ಕೆಲಸಕ್ಕೆ ಹೋಗುತ್ತಾನೆ.
- ಇದೇ ಸ್ಥಿತಿ ಈಗ ನಮ್ಮ ದೇಶದಲ್ಲಿ ಆಗಿದೆ.
- ಬೇಳೆ ಕಾಳುಗಳು ಬೆಳೆಯುತ್ತಿದ್ದ ಹೊಲದಲ್ಲಿ ಈಗ ತೋಟಗಾರಿಕಾ ಬೆಳೆಗಳು ಬೆಳೆದು ನಿಂತಿವೆ. ಎಲ್ಲವೂ ಬದುಕಿಗಾಗಿ ಹೋರಾಟ ಅಷ್ಟೇ.
ಭಾರತದಂತಹ ರಾಷ್ಟ್ರ ಜಗತ್ತಿಗೆ ಸಾತ್ವಿಕ ಆಹಾರ ಪದ್ದತಿಯನ್ನು ಕಲಿಸಿದ ರಾಷ್ಟ್ರವಾಗಿತ್ತು. ಇಲ್ಲಿ ಬಡತನ ಇದ್ದರೂ ಜನ ಅನಾದಿ ಕಾಲದಿಂದಲೂ ಅವರವರ ಬಳಕೆಗೆ ಬೇಕಾಗುವ ಆಹಾರ ಧಾನ್ಯ ಬೇಳೆ ಕಾಳುಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸುತ್ತಾ ಬಂದವರು. ಈಗ ನಾವು ಆಧುನೀಕತೆಗೆ ಬದಲಾಗುತ್ತಾ ನಮ್ಮ ಸಾಂಪ್ರದಾಯಿಕ ಆಹಾರಾಭ್ಯಾಸಗಳನ್ನು ಬಿಡುತ್ತಾ ಬರುತ್ತಿದ್ದೇವೆ. ಬೆಳೆಸುವುದನ್ನೂ ಕಡಿಮೆ ಮಾಡುತ್ತಿದ್ದೇವೆ. ಪರಿಣಾಮವಾಗಿ ದೇಶದ ಜನತೆ ಅಪೌಷ್ಟಿಕತೆಯತ್ತ ತೆರಳಲಿದ್ದಾರೆ.
ಬೇಳೆ ಕಾಳು ಬೆಳೆಗಾರರ ರಕ್ಷಣೆ ಸಾಲದು:
- ಬೇಳೆ ಕಾಳುಗಳಾದ ಉದ್ದು, ಹೆಸರು, ಕಡಲೆ, ಬಟಾಣಿ, ಸೋಯಾ, ಗೋಡಂಬಿ, ಕೊತ್ತಂಬರಿ, ಜೀರಿಗೆ, ಹೀಗೆ ಹಲವರು ಈಗ ಸಿಗುವ ಮಾರುಕಟ್ಟೆ ಬೆಲೆ ಆ ಬೆಳೆ ಬೆಳೆಯುವ ರೈತರನ್ನು ಖಂಡಿತವಾಗಿಯೂ ಬದುಕಿಸಲಾರದು.
- ಒಂದು ಕ್ವಿಂಟಾಲು ಉದ್ದು ಬೆಳೆದರೆ ರೈತನಿಗೆ ಸಿಗುವ ಬೆಲೆ 6300 ರೂ. ಅದೇ ರೀತಿ ಹೆಸರು ಬೆಳೆದರೆ 7200, ನೆಲಕಡ್ಲೆ 5500 , ಸಾಸಿವೆ 7000, ರಾಗಿಗೆ 3000, ಅಕ್ಕಿಗೆ 1950, ತೊಗರಿ 6300, ಜೋಳ 2730.
- ಇದು ಭಾರತ ಸರಕಾರ ಘೋಷಿಸಿದ ಕನಿಷ್ಟ ಬೆಂಬಲ ಬೆಲೆ.
- ಈ ಬೆಲೆಗಿಂತ ಕಡಿಮೆ ಬೆಲೆಗೇ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕೊಳ್ಳುವ ಅಥವಾ ರೈತರು ಕೊಡಬೇಕಾದ ಪರಿಸ್ಥಿತಿ ಇದೆ.
- ಈ ಬೆಲೆಯಲ್ಲಿ ರೈತ ಅದನ್ನು ಬೆಳೆದರೆ ಅವರ ಆರ್ಥಿಕ ಸ್ಥಿತಿ ಸುಧಾರಣೆ ಆಗುವುದು ನಿಜವೇ?
- ಈ ಬೆಳೆ ಬೆಳೆಸುವ ರೈತರು ಇದಕ್ಕಿಂತ ಕೂಲಿ ಮಾಡುವುದು ಲಾಭದಾಯಕ ಎಂದು ಅದನ್ನು ಬಿಡುತ್ತಿದ್ದಾರೆ.
ಸರಕಾರ ಇವರನ್ನು ಪ್ರೋತ್ಸಾಹಿಸುತ್ತಿಲ್ಲ:
- ದೇಶೀಯವಾಗಿ ಈ ಬೆಳೆಗಾರರನ್ನು ಪ್ರೋತ್ಸಾಹಿಸುವ ಬದಲಿಗೆ ನಮ್ಮ ದೇಶ ಹೊರ ದೇಶಗಳಾದ ಮಯನ್ಮಾರ್, ತಾಂಜೇನಿಯಾ, ಆಪ್ರಿಕಾ ಮುಂತಾದ ದೇಶಗಳಿಂದ ಆಮದು ಮಾಡುವುದಕ್ಕೆ ಮುಕ್ತ ಅವಕಾಶ ನೀಡಿದೆ.
- ಉದಾ:ನಮ್ಮ ದೇಶದಲ್ಲಿ ಗೋಡಂಬಿ ಬೆಳೆಗೆ ಸಾಕಷ್ಟು ಅವಕಾಶಗಳಿವೆ.
- ಹಾಗೆಯೇ ಸಾಕಷ್ಟು ಗೋಡಂಬಿ ಬೆಳೆ ಪ್ರೋತ್ಸಾಹ ಯೋಜನೆಗಳನ್ನು ಸರಕಾರ ಮಾಡಿದ್ದರೂ ಸಹ ನಾವು ತರಿಸುವ ಬಹುತೇಕ ಕಚ್ಚಾ ಗೋಡಂಬಿ ವಿದೇಶಗಳಿಂದಲೇ ಆಗಿರುತ್ತದೆ.
- ಒಂದು ವೇಳೆ ನಾವು ಆಲ್ಲಿಂದ ಆಮದು ಮಾಡದೆ ಇದ್ದರೆ ಕಚ್ಚಾ ಗೋಡಂಬಿ ಬೆಲೆ ಕಿಲೋ 150 ಮೀರುತ್ತಿತ್ತು.
- ಆದರೆ ನಾವು ಆಮದು ಮಾಡಿ ದೇಶೀಯ ಗೋಡಂಬಿ ಬೆಳೆಗಾರರಿಗೆ 100 ರೂ. ಸಹ ಸಿಗದಂತೆ ನಿರ್ವಹಣೆ ಮಾಡುತ್ತಿದ್ದೇವೆ.
- ಇದೇ ರೀತಿಯಲ್ಲಿ ಉಳಿದೆಲ್ಲಾ ದ್ವಿದಳ ಹಾಗೂ ಧವಸ ಧಾನ್ಯಗಳ ಕಥೆಯೂ ಆಗಿರುತ್ತದೆ.
- ನಾವು ಅಂಗಡಿಯಿಂದ ಖರೀದಿಸುವ ಉದ್ದು, ಹೆಸರು, ತೊಗರಿ, ಕಡಲೆ ಹೀಗೆ ಬಹಳಷ್ಟು ಉತ್ಪನ್ನಗಳು ಆಮದು ಮಾಡಲ್ಪಟ್ಟವುಗಳೇ ಆಗಿವೆ.
ಭಾರತದಲ್ಲಿ ಬಟಾಣಿಗೆ ಭಾರೀ ಬೇಡಿಕೆ ಇದೆ. ಆದರೆ ಬೆಳೆಯುವವರು ತುಂಬಾ ಕಡಿಮೆ. ನಾವು ಪಾಕಿಸ್ಥಾನ, ಚೀನಾ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಸಾಲದ್ದಕ್ಕೆ ಆಮದಿನ ಮೇಲೆ ಕರವನ್ನೂ ವಿನಾಯಿತಿ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಕಡಲೆ ಸಹ ನಾವು ಆಮದು ಮಾಡುವುದೇ ಜಾಸ್ತಿ. ಈಗ ಚೀನಾ, ಪಾಕಿಸ್ತಾನ ಮುಂತಾದ ಕೆಲವು ಪ್ರಕ್ಷುಬ್ಧ ವಾತಾವರಣದಿಂದಾಗಿ ಆಮದಿಗೆ ಕಷ್ಟವಾಗುತ್ತಿದ್ದು, ಬಟಾಣಿಯ ಬೆಲೆ ಭಾರೀ ಏರಲಾರಂಭಿಸಿದೆ.
ಪೌಷ್ಟಿಕತೆಯೇ ದೇಶದ ಅಸ್ತಿ:
- ಜನ ಪೌಷ್ಟಿಕ ಆಹಾರ ಸೇವಿಸುವುದರಿಂದ ಅವರು ದೇಶಕ್ಕೆ ಆಸ್ತಿಯಾಗಬಲ್ಲರು.
- ಅಪೌಷ್ಟಿಕತೆಯೇ ದೇಶಕ್ಕೆ ಹೊರೆ. ಸಾಂಕ್ರಾಮಿಕ ರೋಗ, ಮುಂತಾದವುಗಳು ಬಂದಾಗ ಇದರ ಮಹತ್ವ ತಿಳಿಯುತ್ತದೆ.
- ಭಾರತದಂತಹ ದೇಶಕ್ಕೆ ಕೊರೋನಾ ಅಂತಹ ತೊಂದರೆ ಮಾಡಲಿಕ್ಕಿಲ್ಲ, ಇಲ್ಲಿಯ ಜನತೆಯ ಇಮ್ಯೂನ್ ಸಿಸ್ಟಂ ಗಟ್ಟಿ ಇದೆ ಎಂಬ ಹೇಳಿಕೆ ಇತ್ತು.
- ಇದಕ್ಕೆ ಕಾರಣ ಇದೇ ಆಗಿತ್ತು. ಆದರೂ ಸ್ವಲ್ಪ ಮಟ್ಟಿಗೆ ಮಾತ್ರ ತೊಂದರೆ ಮಾಡಿ ಅಲ್ಲಿಗೇ ತೊಲಗಿತು.
- ಇದರ ಹಿಂದೆ ನಮ್ಮ ಆಹಾರಾಭ್ಯಾಸ ಒಂದು ಪ್ರಮುಖ ಕಾರಣ.
- ದೇಶದ ನಾಗರೀಕರು ಆಸ್ತಿಯಾಗಿ ಇರಬೇಕು.
- ಅದಕ್ಕಾಗಿ ದೇಶೀಯವಾಗಿಯೇ ಬೇಳೆ ಕಾಳು,ಧವಸಧಾನ್ಯಗಳನ್ನು ಬೆಳೆಯುವಂತಾಗಬೇಕು.
- ದೇಶದ ರೈತರಿಗೆ ವಿಶೇಷವಾಗಿ ಇಂತಹ ಬೆಳೆ ಬೆಳೆಸುವರಿಗೆ ಪ್ರೋತ್ಸಾಹ ಕೊಡಬೇಕು.
- ಬೆಂಬಲ ಬೆಲೆಯನ್ನು ಬೆಳೆಗಾರರ ಆರ್ಥಿಕ ಮಟ್ಟ ಮೇಲೆ ಏರುವ ಪ್ರಮಾಣದಲ್ಲಿ ಹೆಚ್ಚಿಸಬೇಕು.
- ಬೆಲೆ ಸ್ಥಿರತೆಯನ್ನು ಕೊಡಬೇಕು.
- ಕಾಳ ಸಂತೆ ದಾಸ್ತಾನು ಇತ್ಯಾದಿಗಳನ್ನು ಕಡ್ದಾಯವಾಗಿ ನಿಶೇಧಿಸಬೇಕು.
- ಆಗ ಮಾತ್ರ ದೇಶದ ಜನ ಇವುಗಳನ್ನು ಬೆಳೆಯಲು ಆಸಕ್ತರಾಗುತ್ತಾರೆ.
ಇಂದು ಆಮದು ಮಾಡಿಕೊಳ್ಳಲು ಸಾಕಶ್ಟು ಸಿಗಬಹುದು.ಆದರೆ ಅದು ಶಾಶ್ವತ ಅಲ್ಲವೇ ಅಲ್ಲ. ಅಲ್ಲಿಯೂ ಇದೇ ರೀತಿ ಬದಲಾವಣೆ ಆಗುವ ಸಮಯ ದೂರವಿಲ್ಲ. ಇದಕ್ಕಿಂತ ಆದಾಯದ ಬೆಳೆ ಲಭ್ಯವಾದಾಗ ಅವರು ತಮ್ಮ ಖರ್ಚಿಗೆ ಬೇಕಾದಷ್ಟೇ ಬೆಳೆದರೆ ನಾವು ಏನು ಮಾಡುವುದು? ಸಮಸ್ಯೆ ಎದುರಾಗುವ ದಿನಗಳೂ ದೂರ ಇಲ್ಲ.