ಶ್ರೀಲಂಕಾಕ್ಕೆ ಭಾರತದಿಂದ ಪೊಟ್ಯಾಶ್ ! ನಮ್ಮಲ್ಲಿ ಪೊಟ್ಯಾಶ್ ಭಾರೀ ಕೊರತೆ.

ಪೊಟ್ಯಾಶಿಯಂ ಕ್ಲೋರೈಡ್

ಶ್ರೀಲಂಕಾ ದೇಶ ಸಾವಯವ ಕೃಷಿಯಲ್ಲಿ  ಪ್ರಾಪಂಚಿಕ ಮನ್ನಣೆ ಪಡೆದು, ಸಾವಯವ ಕೃಷಿ ಉತ್ಪನ್ನಗಳನ್ನೇ ಉತ್ಪಾದಿಸುವ ರಾಷ್ಟ್ರವಾಗಬೇಕು ಎಂದು ರಸಗೊಬ್ಬರ ಬ್ಯಾನ್ ಮಾಡಿ ಸಾವಯವ ಕೃಷಿಗೆ ಇಳಿಯಿತು. ಆದರೆ ಲೆಕ್ಕಾಚಾರ ತಲೆಕೆಳಗಾಯಿತು. ಈಗ ತಕ್ಷಣದ ಪರಿಹಾರಕ್ಕಾಗಿ ಭಾರತದಿಂದ ಪೊಟ್ಯಾಶ್ ಖರೀದಿಗೆ ಮುಂದಾಗಿದೆ ಎಂಬುದಾಗಿ ವರದಿಗಳಿವೆ.

ಶ್ರೀಲಂಕಾ ಸರಕಾರದ ಸಾವಯವ ಕೃಷಿ ನೀತಿಗೆ ಜನ ಸಮುದಾಯದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲಯಲ್ಲಿ ಈ ಹೇರಿಕೆಯನ್ನು ಸ್ವಲ್ಪ ಸಡಿಲಗೊಳಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಸಾವಯವ ಕೃಷಿ ಒಮ್ಮಿಂದೊಮ್ಮೆಗೆ ಬದಲಾಗುವ ವಿಚಾರವಲ್ಲ. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಬದಲಾವಣೆ ಮಾಡಿಕೊಂಡು, ಬದಲಿ ಪೋಷಕಾಂಶಗಳ ಸಿದ್ದತೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಇಳಿದರೆ ಎಲ್ಲೂ ಎಡವಿ ಬೀಳುವ ಪ್ರಮೇಯ ಇರುವುದಿಲ್ಲ.

ಚೀನಾ ಗೊಬ್ಬರದಿಂದ ಆದ ಅನಾಹುತ:

 • ಶ್ರೀಲಂಕಾದ ಸಾವಯವ ಕೃಷಿಗೆ ಮಾರಕವಾಗಿ ಪರಿಣಮಿಸಿರುವುದು ಚೀನಾದಿಂದ ಆಮದು ಮಾಡಿಕೊಂಡ ಸಾವಯವ ಗೊಬ್ಬರವಂತೆ.
 • ಈ ಗೊಬ್ಬರದಲ್ಲಿ ಕೆಲವು ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪರೀಕ್ಷೆಗಳಿಂದ ತಿಳಿದು ಬಂದಿದೆಯಂತೆ.
 • ಹಾಗಾಗಿ ನ್ಯಾಯಾಲಯವೂ ಸಹ ಈ ಸಾವಯವ ಗೊಬ್ಬರ ಬಳಸಬಾರದು, ಅದಕ್ಕೆ ಕೊಡಬೇಕಾದ ಹಣ ಪಾವತಿಸದಂತೆ ನಿಶೇಧ ಮಾಡಿದೆಯಂತೆ.
 • ಒಟ್ಟು 96000 ಟನ್ ಸಾವಯವ ಗೊಬ್ಬರ ಬಳಸುವಂತಿಲ್ಲ.
 • ಹಾಗಾದ ಕಾರಣ ಶ್ರೀಲಂಕಾದಲ್ಲಿ ಕೃಷಿ ಉತ್ಪಾದನೆಗೆ ಪೋಷಕಾಂಶದ ಕೊರತೆ ಉಂಟಾಗಿದೆ.
 • ಸರಕಾರ ಈ ಬಗ್ಗೆ ಏನು ಮಾಡುವುದು ಎಂದು ಯೋಚಿಸಿ ಭಾರತದಿಂದ 30000 ಟನ್ ಪೊಟ್ಯಾಶಿಯಂ ಕ್ಲೋರೈಡ್ (MOP) ಅಷ್ಟೇ ಪ್ರಮಾಣದ ಸಾರಜನಕ ಮೂಲದ ಗೊಬ್ಬರವನ್ನು ಆಮದು ಮಾಡಿಕೊಂಡಿದೆಯಂತೆ.
 • ಇದನ್ನು ದಿನಾಂಕ 24-10-2021 ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ,
 • ಹಾಗಾಗಿ ಶ್ರೀಲಂಕಾ ಮತ್ತೆ ಸಾವಯವ ಕೃಷಿಯನ್ನು ಬಿಟ್ಟು ರಸಗೊಬ್ಬರ ಬಳಕೆ ಮಾಡುವ ಅನಿವಾರ್ಯತೆಗೆ ಬಂದಂತಿದೆ.
ಕೆಂಪು ಪೊಟ್ಯಾಶ್

ಭಾರತದಲ್ಲೂ ಪೊಟ್ಯಾಶ್ ಕೊರತೆ ಇದೆ:

 • ಭಾರತದಾದ್ಯಂತ ಕಳೆದ ಒಂದು ತಿಂಗಳಿಂದ ಪೊಟ್ಯಾಶಿಯಂ ಕ್ಲೋರೈಡ್ ಅಥವಾ MOP ಗೊಬ್ಬರದ ಕೊರತೆ ಉಂಟಾಗಿದೆ.
 • ಅದರಲ್ಲೂ ಕರ್ನಾಟಕದಲ್ಲಿ ತೀವ್ರ ಕೊರತೆ ಉಂಟಾಗಿದೆ.
 • ಎಲ್ಲೆಲ್ಲೂ MOP ಗೊಬ್ಬರವೇ ಇಲ್ಲದ ಸ್ಥಿತಿ ಉಂಟಾಗಿದೆ.
 • ಸದ್ಯವೇ ಬರಲಿದೆ ಎಂಬುದಾಗಿ ಹೇಳಲಾಗುತ್ತಿದೆಯಾದರೂ ಇನ್ನೂ ಬಂದಿಲ್ಲ.
 • ಕೆಲವು ಮೂಲಗಳ ಪ್ರಕಾರ ಇನ್ನೂ ಎರಡು ತಿಂಗಳ ತನಕವೂ ಪೊಟ್ಯಾಶ್ ಬರುವ ಸಾಧ್ಯತೆ ಇಲ್ಲ ಎಂಬುದಾಗಿ ಹೇಳುತ್ತಾರೆ.
 • ಈ ಮಧ್ಯೆಯೂ ಭಾರತ ಸರಕಾರ ಶ್ರೀಲಂಕಾದ ಸ್ಥಿತಿ ಕಂಡು ರಪ್ತಿಗೆ ಅನುಮತಿ ನೀಡಿದೆ.
ಟೈಮ್ಸ್ ಅಫ್ ಇಂಡಿಯಾ, 24/10/2021 ಪ್ರಕಟಣೆ.
ಟೈಮ್ಸ್ ಅಫ್ ಇಂಡಿಯಾ, 24/10/2021 ಪ್ರಕಟಣೆ.
 • ಮ್ಯುರೇಟ್ ಆಫ್ ಪೊಟ್ಯಾಶ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಗೊಬ್ಬರ ಅಲ್ಲ.
 • ಪ್ರಪಂಚದ ಕೆಲವೇ ಕೆಲವು ರಾಷ್ಟ್ರಗಳಲ್ಲಿ MOP ಅಥವಾ ಪೊಟ್ಯಾಶಿಯಂ ಕ್ಲೋರೈಡ್  ಉತ್ಪಾದನೆಯಾಗುತ್ತದೆ.
 • ಕೆನಡಾ, ರಶಿಯಾ, ಬೆಲಾರಸ್, ಚೈನಾ, ಜರ್ಮನಿ , ಇಸ್ರೇಲ್, ಜೋರ್ಡಾನ್ , ಚಿಲಿ, ಸ್ಪೈನ್, ಲಾವೋಸ್ ಈ ದೇಶಗಳಲ್ಲಿ ಇರುವ ಖನಿಜದ ಹುಡಿಯೇ MOP.
 • ಅಲ್ಲಿಂದ ಆಮದು ಮಾಡಿಕೊಂಡು ಇಲ್ಲಿ ಪ್ಯಾಕಿಂಗ್ ಮಾಡಿ ಅದನ್ನು ರೈತರಿಗೆ ಒದಗಿಸಬೇಕು. 
 • ಆಲ್ಲಿಯೂ ಕೆಲವು ದೇಶಗಳಲ್ಲಿ ಖನಿಜ ಕಡಿಮೆಯಾಗುತ್ತಿದ್ದು, ಉತ್ಪಾದನೆ ಕುಂಠಿತವಾಗಿದೆ.
 • ಹಾಗಾಗಿ ಲಭ್ಯತೆ ಸ್ವಲ್ಪ ಕಷ್ಟವಾಗಿ ಕೊರತೆ ಉಂಟಾಗಿರಬಹುದು.

ಇಷ್ಟಕ್ಕೂ ನಮ್ಮ ರೈತರು  ಇನ್ನು ಮುಂದೆ ಸಾಧ್ಯವಾದಷ್ಟು ಆಮದು ಮೂಲದ ಪೊಟ್ಯಾಶಿಯಂ ಗೊಬ್ಬರಕ್ಕೆ ಅವಲಂಭನೆಯನ್ನು ಕಡಿಮೆ ಮಾಡುವುದು ಸೂಕ್ತ. ವಿದೇಶಗಳಲ್ಲಿ ಖನಿಜ ಮೂಲ ಕಡಿಮೆಯಾದಂತೆ ಬೆಲೆ ಹೆಚ್ಚಳವಾಗುತ್ತದೆ. ಅಲ್ಲಿ ಬೆಲೆ ಹೆಚ್ಚಳವಾದಾಗ ಇಲ್ಲಿಯೂ  ಬೆಲೆ ಹೆಚ್ಚಾಗಬೇಕಾಗುತ್ತದೆ. ಆದ ಕಾರಣ ಪೊಟ್ಯಾಶಿಯಂ ಗೊಬ್ಬರವನ್ನು ಸಾಧ್ಯವಾದಷ್ಟು ಎಷ್ಟು ಬೇಕೋ ಅಷ್ಟೇ ಬಳಕೆ ಮಾಡುವುದು, ಬದಲಿ ಪೊಟ್ಯಾಶ್ ಮೂಲಗಳತ್ತ ಗಮನ ಹರಿಸುವುದು ಅಗತ್ಯ.

Leave a Reply

Your email address will not be published. Required fields are marked *

error: Content is protected !!