ಮಾರುಕಟ್ಟೆಯಲ್ಲಿ ಪೊಟ್ಯಾಶ್ ಇಲ್ಲ ಎಂದು ಕಾಳಸಂತೆಯಲ್ಲಿ ಸಿಗುವ ಪೊಟ್ಯಾಶ್ ಖರೀದಿಗೆ ಹೋಗಬೇಡಿ. ಪೊಟ್ಯಾಶ್ ಗೊಬ್ಬರ ಶಾಶ್ವತವಾಗಿ ಲಭ್ಯವಿಲ್ಲ ಎಂದು ಯಾರೂ ಹೇಳಿಲ್ಲ. ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಬರಲಿದೆ. ಆ ತನಕ ರೈತರು ಪೊಟ್ಯಾಶ್ ಗಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ.
ಸಸ್ಯಗಳಿಗೆ ಬೆಳವಣಿಗೆಯ ವಿವಿಧ ಹಂತಕ್ಕನುಗುಣವಾಗಿ ಪೊಟ್ಯಾಶಿಯಂ ಸತ್ವ ಬೇಕಾಗುತ್ತದೆ. ಪೊಟ್ಯಾಶ್ ಬರೇ ಮ್ಯುರೇಟ್ ಆಫ್ ಪೊಟ್ಯಾಶ್ ನಲ್ಲಿ ಮಾತ್ರ ಇರುವುದಲ್ಲ. ಬೇರೆ ಗೊಬ್ಬರಗಳಲ್ಲೂ ಇದೆ. ಹೆಚ್ಚಾಗಿ ನಾವು ಬೆಳೆಗಳಿಗೆ ಬಳಸುವ ಪೊಟ್ಯಾಶ್ ಗೊಬ್ಬರ ಮೂರು ಹೊತ್ತಿನ ಊಟವನ್ನು ಒಂದೇ ಸಲ ಮಾಡಿದಂತೆ ಅಗುತ್ತಿದ್ದು, ಇದನ್ನು ಹೊತ್ತಿಗೆ ಸರಿಯಾಗಿ ಕೊಟ್ಟರೆ ಇದರ ಪ್ರತಿಫಲ ಚೆನ್ನಾಗಿರುತ್ತದೆ. ಉಳಿತಾಯವೂ ಆಗುತ್ತದೆ.
- ಯಾವಾಗಲೂ ರಸ ಗೊಬ್ಬರಗಳನ್ನು ಕೊಳ್ಳುವಾಗ ನಂಬಿಗಸ್ತರಿಂದಲೇ ಖರೀದಿಸಿರಿ. ಅದಕ್ಕೆ ಬಿಲ್ ಪಡೆಯಿರಿ.
- ಮ್ಯುರೇಟ್ ಆಫ್ ಪೊಟ್ಯಾಶ್ ಮಾರುಕಟ್ಟೆ ಮಾಡುವ ಕಂಪೆನಿ ಯಾವುದು ಎಂಬುದು ಎಲ್ಲಾ ಕೃಷಿಕರಿಗೂ ತಿಳಿದಿರಲಿ.
- ಇಂಡಿಯನ್ ಪೊಟ್ಯಾಶ್ ಲಿ. ಇವರು ಮತ್ತು ಮಹಾಧನ್ ಇವರು ಮ್ಯುರೇಟ್ ಆಫ್ ಪೊಟ್ಯಾಶ್ ಆಮದು ಮಾಡಿ ನಮ್ಮಲ್ಲಿ ಮಾರುಕಟ್ಟೆ ಮಾಡುತ್ತಾರೆ.
- ಅಂತಹ ಕಂಪೆನಿಯ ಬ್ಯಾಗುಗಳನ್ನು ಮಾತ್ರ ಖರೀದಿಸಿ.
- ಅವರು ಯಾರೂ ತಮ್ಮ ಕಂಪೆನಿ ಮೂಲಕ ಪೋಟ್ಯಾಶ್ ತರಿಸುವುದಿಲ್ಲ ಎಂಬ ಹೇಳಿಕೆ ಕೊಟ್ಟಿಲ್ಲ.
- ಆದ ಕಾರಣ ಯಾರೂ ಗಾಬರಿ ಪಡಬೇಡಿ. ಸ್ವಲ್ಪ ಕಾಯಿರಿ.
- ಪೊಟ್ಯಾಶ್ ಎಂದು ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿದ ಪೊಟ್ಯಾಶ್ ಕೊಳ್ಳಲು ಹೋಗಬೇಡಿ.
ಬೆಳೆಗಳಿಗೆ ಯಾವಾಗ ಪೊಟ್ಯಾಶ್ ಹೆಚ್ಚು ಬೇಕು:
- ಫಸಲು ಬಂದಿರುವ ಬೆಳೆಗಳಿಗೆ ಈಗ ಪೊಟ್ಯಾಶ್ ಅಗತ್ಯವಾಗಿ ಬೇಕಾಗುತ್ತದೆ.
- ಫಸಲಿಗೆ ಬಾರದ ಅಥವಾ ಹೂ ಬಿಡುವ ಹಂತದಲ್ಲಿರುವ ಬೆಳೆಗೆ ತಕ್ಷಣ ಪೊಟ್ಯಾಶ್ ಬೇಕಾಗುವುದಿಲ್ಲ.
- 10-15 ದಿನ ಬಿಟ್ಟು ಕೊಟ್ಟರೂ ಯಾವ ಸಮಸ್ಯೆಯೂ ಆಗುವುದಿಲ್ಲ.
- ಬಿತ್ತನೆ ಮಾಡುವಾಗಲೇ ಪೊಟ್ಯಾಶ್ ಗೊಬ್ಬರ ಕೊಡದಿದ್ದರೂ ಏನೂ ಆಗುವುದಿಲ್ಲ.
- ಹಿಂದೆ ಒಮ್ಮೆ ಪೊಟ್ಯಾಶ್ ಕೊಟ್ಟಿದ್ದರೆ ಈಗ ಸ್ವಲ್ಪ ಸಮಯ ಬಿಟ್ಟು ಕೊಟ್ಟರೂ ಏನೂ ಆಗುವುದಿಲ್ಲ.
ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು ಹಾಗೂ ಇನ್ನಿತರ ಬೆಳೆಗಳಿಗೆ ಸಾಮಾನ್ಯವಾಗಿ ಹಿಂದೆ ಒಂದು ಕಂತು ಗೊಬ್ಬರ ಕೊಟ್ಟಿರುತ್ತೀರಿ. ಈಗ ಕೊಡಬೇಕು ನಿಜ. ಆದರೆ ಲಭ್ಯತೆ ಇಲ್ಲದಿದ್ದರೆ ಇತರ ಪೋಷಕಗಳಾದ ಸಾರಜನಕ ಮತ್ತು ರಂಜಕ ಮಾತ್ರ ಕೊಡಿ. ಯಾವಾಗ ಪೊಟ್ಯಾಶ್ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆಯೋ ಆಗ ಪೋಟ್ಯಾಶ್ ಗೊಬ್ಬರ ಕೊಡಿ. ಇದರಿಂದ ಏನೂ ಸಮಸ್ಯೆ ಉಂಟಾಗುವುದಿಲ್ಲ. ಪೊಟ್ಯಾಶ್ ಒಂದು ವಾರ ಎರಡು ವಾರ ಸಸ್ಯಗಳಿಗೆ ಲಭ್ಯವಾಗದಿದ್ದರೂ ಏನೂ ತೊಂದರೆ ಆಗುವುದಿಲ್ಲ.
ತುರ್ತು ಅಗತ್ಯ ಇದ್ದರೆ ಏನು ಮಾಡಬಹುದು?
ಮಾರುಕಟ್ಟೆಯಲ್ಲಿ ಪೊಟ್ಯಾಶ್ ಇಲ್ಲದಿದ್ದರೆ ಚಿಂತಿಸಬೇಡಿ. ಕಾಂಪ್ಲೆಕ್ಸ್ ಗೊಬ್ಬರಗಳಲ್ಲಿ ಪೊಟ್ಯಾಶ್ ಸತ್ವ ಹೆಚ್ಚು ಇರುವ ಗೊಬ್ಬರವನ್ನು ಬಳಕೆ ಮಾಡಬಹುದು.
- ಪೊಟ್ಯಾಶ್ ಸ್ವತ್ವ ಗಳಿರುವ ಇತರ ಗೊಬ್ಬರಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತದೆ.
- ಅವುಗಳೆಂದರೆ ಸಲ್ಫೇಟ್ ಆಫ್ ಪೊಟ್ಯಾಶ್ ಗೊಬ್ಬರ (SOP) ಇದರಲ್ಲಿ 50% ಪೊಟ್ಯಾಶ್ ಅಂಶ ಇದೆ.
- ಸ್ವಲ್ಪ ದುಬಾರಿ ಆದರೂ ತತ್ಕಾಲಕ್ಕೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು.
- ಕೆಲವು ಬೆಳೆಗಳಿಗೆ ಇದನ್ನು 100 ಲೀ ನೀರಿಗೆ 1 ಕಿಲೋ ಹಾಕಿ ಸಿಂಪಡಿಸಿದರೆ ಇದು ನ್ಯಾನೋ ಯುರಿಯಾ ತರಹ ಕೆಲಸ ಮಾಡುತ್ತದೆ.
- ಕೆಲವು ಜನ ಇದು ತೀರಾ ಆಮ್ಲೀಯ ಎನ್ನುತ್ತಾರೆ. ಆದರೆ ವೈಜ್ಞಾನಿಕ ಅಧ್ಯಯನಗಳು ಇಂತಹ ತೊಂದರೆಯನ್ನು ಅಲ್ಲಗಳೆಯುತ್ತವೆ. The form in which K is added to soil – either muriate of potash (KCl) or sulfate of potash (K₂SO₄) – has no effect on soil acidification.
- ಪೊಟ್ಯಾಶಿಯಂ ನೈಟ್ರೇಟ್ ಎಂಬ ಪೊಟ್ಯಾಶ್ ಗೊಬ್ಬರ ಇದೆ. ಇದು ಇದರಲ್ಲಿ 13% ಸಾರಜನಕ ಮತ್ತು 45% ಪೊಟ್ಯಾಶ್ ಇರುತ್ತದೆ. ಇದನ್ನೂ ಬಳಸಬಹುದು. ಸಿಂಪರಣೆಯ ಮೂಲಕವೂ ಕೊಡಬಹುದು.
- ಪೊಟ್ಯಾಶಿಯಂ ಹ್ಯೂಮೇಟ್ ಎಂಬ ಒಂದು ಖನಿಜ ಆಧಾರಿತ ಪೊಟ್ಯಾಶಿಯಂ ಪೋಷಕವಾಗಿದ್ದು, ಇದನ್ನು ಬಳಸಿದರೆ ಪೊಟ್ಯಾಶ್ ಕೊರತೆಯನ್ನು ನೀಗಿಸಬಹುದು.
- ಇದು ಸಂಪೂರ್ಣ 98% ನೀರಿನಲ್ಲಿ ಕರಗುವ ವಸ್ತುವಾಗಿದೆ.
- ಇದರಲ್ಲಿ ಪೊಟ್ಯಾಶ್ ಅಲ್ಲದೆ ಬೇರೆ ಪೊಷಕಗಳೂ ಇವೆ.
- ಇದು ಸ್ಥಳೀಯವಾಗಿ ಎಲ್ಲಾ ಕಡೆ ಲಭ್ಯವಿರುವುದಿಲ್ಲ ಎಂಬುದು ಸಮಸ್ಯೆ. ಕೆಲವು ಕಡೆ ಇದೆ.
- ಹ್ಯುಮಿಕ್ ಅಸಿಡ್ ಎಂಬ ಉತ್ಪನ್ನದಲ್ಲೂ ಪೊಟ್ಯಾಶಿಯಂ ಸತ್ವ ಇದೆ. ಇವೆಲ್ಲಾ ಪೋಷಕಗಳನ್ನು ನಾವು ಮ್ಯುರೇಟ್ ಅಫ್ ಪೊಟ್ಯಾಶ್ ಗೊಬ್ಬರವನ್ನು ಬಳಕೆ ಮಾಡಿದಷ್ಟು ಬಳಸಬೇಕಾಗಿಲ್ಲ.
- ವಿಭಜಿತ ಕಂತುಗಳಲ್ಲಿ MOP ಯ ಅರ್ಧ ಪ್ರಮಾಣವನ್ನು ಬಳಸಿದರೂ ಸಾಕಾಗುತ್ತದೆ. ಅದ ಕಾರಣ ಭಾರೀ ದುಬಾರಿ ಆಗುವುದಿಲ್ಲ.
- ಸಮುದ್ರ ಪಾಚಿ ಗೊಬ್ಬರದಲ್ಲೂ ಪೊಟ್ಯಾಶಿಯಂ ಸತ್ವ ಇರುತ್ತದೆ.
ಪೊಟ್ಯಾಶಿಯಂ ಕೊರತೆಯಿಂದ ತಕ್ಷಣಕ್ಕೆ ಏನೂ ಆಗುವುದಿಲ್ಲ:
- ಬಹಳ ಜನ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರವನ್ನಷ್ಟೇ ಕೊಟ್ಟು ಕೃಷಿ ಮಾಡುವವರಿದ್ದಾರೆ.
- ಇವರು ಪೊಟ್ಯಾಶ್ ಅನ್ನು ಮಣ್ಣಿಗೆ ಸ್ಪರ್ಶಿಸಿಯೂ ಇರಲಿಕ್ಕಿಲ್ಲ.
- ಅಂತವರಲ್ಲಿ ಇಳುವರಿ ಕಡಿಮೆ ಅಗಿರುವುದೂ ಕಂಡು ಬರುವುದಿಲ್ಲ.
- ಧೀರ್ಘಾವಧಿ ಬೆಳೆಗಳಲ್ಲಿ ಮರಕ್ಕೆ ಶಕ್ತಿ ಸ್ವಲ್ಪ ಕಡಿಮೆಯಾಗಬಹುದೇ ಹೊರತು ಮತ್ತೇನೂ ಅಗುವುದಿಲ್ಲ.
- ಕೆಲವು ಪ್ರಕಾರದ ಮಣ್ಣಿನಲ್ಲಿ ನೈಸರ್ಗಿಕವಾಗಿಯೇ ಅಲ್ಪ ಸ್ವಲ್ಪ ಪೊಟ್ಯಾಶಿಯಂ ಸತ್ವ ಇರುತ್ತದೆ.
- ಸಮುದ್ರದ ನೀರಿನಲ್ಲೂ ಪೊಟ್ಯಾಶ್ ಅಂಶ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ.
- ಇಟ್ಟಿಗೆಗೆ ಬಳಕೆಯಾಗುವ ಆವೆ ಮಣ್ಣಿನಲ್ಲಿ ಪೊಟ್ಯಾಶ್ ಸತ್ವ ಇರುತ್ತದೆ.
- ಶಿಲೆ ಕಲ್ಲುಗಳು ಇರುವ ಮಣ್ಣಿನಲ್ಲಿ ( ಶಿಥಿಲತ್ವದಿಂದ) ಮಣ್ಣಿನಲ್ಲಿ ಪೊಟ್ಯಾಶ್ ಅಂಶ ಇರುತ್ತದೆ.
- ಇದೇ ಮೂಲದಿಂದಲೇ ಜೈವಿಕ ಪೊಟ್ಯಾಶ್ ಒಟ್ಟುಗೂಡಿಸುವ (Potash mobilizing organisms) ಅನ್ನು ಸಹ ಪಡೆಯಲಾಗಿದೆ.
- ಬೆಳೆ ಉಳಿಕೆಗಳನ್ನು ಮಣ್ಣಿಗೆ ಸೇರಿಸುವುದರಿಂದ ಶೇ. 5-10 ಪೊಟ್ಯಾಶ್ ಸತ್ವವನ್ನು ಮರಳಿ ಪಡೆಯಬಹುದು.
- ಇವೆಲ್ಲಾ ಮಣ್ಣಿನಲ್ಲಿ ಇದ್ದೇ ಇರುವ ಕಾರಣ ಸ್ವಲ್ಪ ಸಮಯ ಕೃತಕ ಮೂಲದ ಪೊಟ್ಯಾಶ್ ಸತ್ವ ಇಲ್ಲದಿದ್ದರೂ ಬೆಳೆಗೆ ಏನೂ ಆಗುವುದಿಲ್ಲ.
- ಕೆಲವು ಪೊಟ್ಯಾಶ್ ಸೆನ್ಸಿಟಿವ್ ಬೆಳೆಗಳಿಗೆ SOP ಅಥವಾ ಪೊಟ್ಯಾಶಿಯಂ ನೈಟ್ರೇಟ್ ಅನ್ನು ಸಿಂಪರಣೆ ರೂಪದಲ್ಲಿ ಬಳಸಿ ಅದರ ಅವಶ್ಯಕತೆಯನ್ನು ನೀಗಿಸಬಹುದು.
ಅಡಿಕೆಯ ಎಲೆ ಚುಕ್ಕೆ ರೋಗಕ್ಕೆ MOP ಸಿಂಪರಣೆ:
- ಇತ್ತೀಚೆಗೆ ಅಡಿಕೆಯ ಎಲೆಗಳಿಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಇದಕ್ಕೆ ಪೊಟ್ಯಾಶ್ ಸಿಂಪರಣೆ ಮಾಡಿದರೆ ಸರಿಯಾಗುತ್ತದೆ ಎಂದು ಕೆಲವು ರೈತರಿಗೆ ಯಾರೋ ತಿಳಿಸಿದ್ದಾರೆ.
- ವಾಸ್ತವವಾಗಿ ಪೊಟ್ಯಾಶಿಯಂ ಕ್ಲೋರೈಡ್ ಅನ್ನು ಎಲೆಗಳಿಗೆ ಸಿಂಪರಣೆಗೆ ಬಳಕೆ ಶಿಫಾರಿತವಲ್ಲ.
- ಇದರಲ್ಲಿ ಕ್ಲೋರೈಡ್ ಇರುವ ಕಾರಣ ಮತ್ತೂ ಹೆಚ್ಚು ಸುಡುವ ಸಾಧ್ಯತೆ ಇದೆ.
- ಹಾಗಾಗಿ ಈ ಉದ್ದೇಶಕ್ಕೆ MOP ಗಾಗಿ ರೈತರು ಮುಗಿ ಬೀಳಬೇಕಾಗಿಲ್ಲ.
- ಸಿಂಪರಣೆ ಮಾಡುವುದೇ ಆಗಿದ್ದರೆ SOP ಅಥವಾ ಪೊಟ್ಯಾಶಿಯಂ ನೈಟ್ರೇಟ್ ಸಿಂಪರಣೆ ಮಾಡಬಹುದು.
- ರೈತರು ಸಧ್ಯದ ಮಟ್ಟಿಗೆ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರ ಅಥವಾ ಸಂಶೋಧನಾ ಸಂಸ್ಥೆ ಅಥವಾ ಉತ್ತಮ ಖಾಸಗಿ ಕಂಪೆನಿಯವರ ಬಯೋ ಪೊಟ್ಯಾಶ್ ಸಿಂಪರಣೆ ಅಥವಾ ಮಣ್ಣಿಗೆ ಸೇರಿಸಿ 3-4 ತಿಂಗಳ ತನಕ ಪೊಟ್ಯಾಶ್ ಇಲ್ಲದೆಯೂ ಮುಂದೂಡಬಹುದು.
ಪೊಟ್ಯಾಶ್ ನ ಕೊರತೆ ಯಾಕೆ ಆಗಿದೆ ಗೊತ್ತೇ?
ಖಂಡಿತವಾಗಿಯೂ ರೈತರಾದ ನಮಗೆ ಅದು ಗೊತ್ತಿರಲೇ ಬೇಕು. ನಮ್ಮ ದೇಶದಲ್ಲಿ ಒಂದು ಚಿಟಿಕೆಯಷ್ಟೂ ಮ್ಯುರೇಟ್ ಆಫ್ ಪೋಟ್ಯಾಶ್ ಉತ್ಪಾದನೆಯಾಗುವುದಿಲ್ಲ. ಎಲ್ಲವನ್ನೂ ನಾವು ವಿದೇಶಗಳಿಂದ ಅದರಲ್ಲೂ Canada, Russia, China, Belarus, Israel, Germany, Chile ಈ ಎಲ್ಲಾ ದೇಶಗಳಿಂದ ನಾವು ಆಮದು ಮಾಡಿಕೊಳ್ಳಬೇಕು. ಆಮದು ಮಾಡುವಾಗ ನಾವು ಡಾಲರ್ ನಲ್ಲಿ ಪಾವತಿಸಿ ಖರೀದಿಸಬೇಕು. ಅಲ್ಲಿಂದ ಇಲ್ಲಿಗೆ ಸಾಗಾಟ ಮಾಡಿ ದಾಸ್ತಾನು ಮಾಡಿ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಬೇಕು. ಈಗ ಆಮದು ಅಗಿದೆ. ಬಂದು ತಲುಪುವ ಹಂತದಲ್ಲಿದೆ. ಇಲ್ಲಿ ಲಭ್ಯತೆ ಇಲ್ಲ. ಕೆಲವೇ ದಿನಗಳಲ್ಲಿ ಇದು ಸಿಗಲಿದೆ. ಅಷ್ಟು ಸಮಯ ನಾವು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡರೆ ಕಳಪೆ MOP ಮುಂತಾದ ಸಮಸ್ಯೆಗಳೇ ಇಲ್ಲ.
ನಾವು ಬುದ್ದಿವಂತರಾಗಿದ್ದರೆ ನಮ್ಮನ್ನು ಯಾರೂ ಮೋಸ ಮಾಡಲು ಕಷ್ಟ. ನಾವು ಒಂದು ಗೊಬ್ಬರ ಕೊರತೆಯಾಗಿದೆ ಎಂದಾಕ್ಷಣ ಗಲಾಟೆ ಮಾಡುವುದು, ಸಿಕ್ಕ ಸಿಕ್ಕವರಲ್ಲಿ ಖರೀದಿಸಲು ಮುಂದಾಗುವುದು ಮಾಡಬಾರದು. ಅಧಿಕೃತ ವಿತರಕರ ಮೂಲಕವೇ ಬೆಳೆ ಪೋಷಕ, ಬೆಳೆ ಸಂರಕ್ಷಕಗಳನ್ನು ಖರೀದಿ ಮಾಡುವುದು ನಮ್ಮ ಬುದ್ದಿವಂತಿಕೆ.