ಬೇಸಿಗೆಯ ಕಾಲದಲ್ಲಿ ಎಲ್ಲರೂ ನೀರಿನ ಕೊರತೆ ಅನುಭವಿಸುತ್ತಾರೆ. ಆದರೆ ಇಲ್ಲೊಬ್ಬರು ರೈತರು ಮಳೆಗಾಲದಲ್ಲಿ ಮಳೆ ನೀರನ್ನು ಒಂದೆಡೆ ಕೂಡಿಹಾಕಿದ್ದಾರೆ. ಅದನ್ನು ಮಣ್ಣು ಸ್ಪಂಜಿನಂತೆ ಹೀರಿಕೊಂಡು ಬೇಸಿಗೆಯ ಸಮಯದುದ್ದಕ್ಕೂ ತಗ್ಗು ಪ್ರದೇಶಕ್ಕೆ ಬಿಡುಗಡೆ ಮಾಡುತ್ತದೆ. ಹಾಗಾಗಿ ಇವರಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ.
ಬೇಸಿಗೆಯಲ್ಲಿ ಎಲ್ಲಾ ಕೃಷಿಕರಿಗೂ ನೀರಿನದ್ದೇ ಸಮಸ್ಯೆ. ಬೆಳೆಗಳು ನೀರನ್ನು ಹೆಚ್ಚು ಅಪೇಕ್ಷಿಸುತ್ತವೆ. ಮಣ್ಣು ಹೆಚ್ಚು ನೀರು ಕುಡಿಯುತ್ತದೆ. ಆದರೆ ಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುತ್ತದೆ. ಕೊಳವೆ ಬಾವಿಗಳೂ ಸಹ ಕೈಕೊಡುವುದು ಇದೇ ಸಮಯದಲ್ಲಿ. ಇದಕ್ಕೆ ಪರಿಹಾರ ಒಂದೇ ಮಣ್ಣಿಗೆ ನೀರು ಕುಡಿಸುವುದು.
- ಕೆಲವರು ಕಟ್ಟಗಳ ಬಗ್ಗೆ ಮಾತಾಡುತ್ತಾರೆ.
- ಕಟ್ಟ್ಗಗಳನ್ನು ಭೂ ಪ್ರಕೃತಿ ಹೊಂದಾಣಿಕೆ ಇದ್ದವರು ಮಾತ್ರ ಹಾಕಬಹುದು.
- ಅದಕ್ಕೆ ಕೆಲವು ಇತಿಮಿತಿಗಳಿವೆ.
- ಆದರೆ ಇದು ಎಲ್ಲಾ ಕೃಷಿಕರೂ ಮಾಡಬಹುದಾದದ್ದು.
- ಅನುಕೂಲ ಇದ್ದವರು ಮಾಡಿಕೊಂಡರೆ ಇದು ಒಂದು ಶಾಶ್ವತ ವ್ಯವಸ್ಥೆ.
- ಬರೇ ನೀರಿನ ಕೊರತೆಗೆ ಮಾತ್ರವಲ್ಲ. ಮಣ್ಣು ಕೊಚ್ಚಣೆ ತಡೆಯುವುದಕ್ಕೂ ಇದು ಸಹಾಯಕ.
ನೀರು ಸಂಗ್ರಹಣಾ ವ್ಯವಸ್ಥೆ:
- ಬ್ರಹ್ಮಾವರ ತಾಲೂಕು ಮಂದಾರ್ತಿ ಸಮೀಪದ-ಹೆಗ್ಗುಂಜೆ ಗ್ರಾಮದ ಶ್ರೀಯುತ ಶಂಭು ಶಂಕರ ರಾವ್ ಇವರು ತಮ್ಮ ಹೊಲದ ಉತ್ತರ ಭಾಗದಲ್ಲಿ ಭೂ ಪ್ರಕೃತಿಯಲ್ಲಿ ಎತ್ತರದ ಭಾಗದಲ್ಲಿ ದೊಡ್ಡ ಒಂದು ನೀರು ಸಂಗ್ರಹ ಪಾತ್ರೆಯನ್ನು ಮಾಡಿಕೊಂಡಿದ್ದಾರೆ.
- ವರ್ಷ ವರ್ಷವೂ ಸ್ವಲ್ಪ ಸ್ವಲ್ಪವೇ ಮಣ್ಣು ತೆಗೆಯುತ್ತಾ ಸುಮಾರು 5 ವರ್ಷಗಳಲ್ಲಿ ಸುಮಾರು 40 ಸೆಂಟ್ಸ್ ನಷ್ಟು ಜಾಗಕ್ಕೆ ವಿಸ್ತ್ರಾರವಾಗಿರುವಂತೆ ಒಂದು ನೀರು ಸಂಗ್ರಹ ಪಾತ್ರೆಯನ್ನು ಮಾಡಿಕೊಂಡಿದ್ದಾರೆ.
- ಇದರ ಆಳ ಸುಮಾರು 35 ಅಡಿಯಷ್ಟು ಇದ್ದು, ವರ್ಷ ಪೂರ್ತಿ ಇದರಲ್ಲಿ ನೀರಿನ ಸೆಳೆ ಇರುತ್ತದೆ.
- ಇವರ ಕೃಷಿ ಭೂಮಿ ದಕ್ಷೀಣಕ್ಕೆ ತಗ್ಗಾಗಿದ್ದು, ಅಡಿಕೆ ತೋಟ, ತೆಂಗಿನ ತೋಟ ತಗ್ಗಿನಲ್ಲಿ ಭತ್ತದ ಹೊಲ ಇರುತ್ತದೆ.
- ಈ ಭಾಗಕ್ಕೆಲ್ಲಾ ಇಲ್ಲಿ ಸಂಗ್ರಹವಾದ ನೀರು ಮಣ್ಣಿನ ಮೂಲಕ ಪಸರಿಸಿ (Percolation) ನೀರಿನ ತೇವಾಂಶವನ್ನು ಇಡೀ ವರ್ಷ ಇರುವಂತೆ ಮಾಡಿದೆ.
- ಮೊದಲು ಈ ನೀರು ಸಂಗ್ರಹ ಪಾತ್ರೆ ಮಾಡಿದ ಭಾಗ ಒಂದು ಎರಡು ಕಣಿವೆಗಳ ಭಾಗವಾಗಿತ್ತಂತೆ.
- ಎರಡು ಕಣಿವೆಗೆಳ ಮಧ್ಯದ ಭಾಗವನ್ನು ಒಡ್ಡು ಹಾಕಿ ಮುಚ್ಚಿದಾಗಕ್ಷಣ ಅಲ್ಲಿ ನೀರು ನಿಲ್ಲಲು ಅನುಕೂಲವಾಯಿತು.
- ಹೆಚ್ಚು ಹೆಚ್ಚು ನೀರು ನಿಂತಷ್ಟೂ ಅನುಕೂಲ ಎಂದು ಅದನ್ನು ಯಂತ್ರದ ಮೂಲಕ ಅಗೆದು ದೊಡ್ಡದು ಮಾಡುತ್ತಾ ಬಂದರು.
- ಮಳೆಗಾಲದಲ್ಲಿ ನೊಡಿದರೆ ಒಂದು ವಿಶಾಲ ಕೆರೆಯಂತೆ ಕಾಣುತ್ತದೆ.
- ಮಳೆ ಮುಗಿದಂತೇ ಸ್ವಲ್ಪ ಸ್ವಲ್ಪ ನೀರು ತಗ್ಗುತ್ತಾ ಬರುತ್ತದೆ.
- ಆಳ ಇದ್ದ ಕಾರಣ ಅಡಿ ಭಾಗದ ಒರತೆಯೂ ಸೇರಿ ಮಳೆಯ ನೀರು ಮಣ್ಣಿನ ಕಣಗಳ ಎಡೆಗೆ ತಳ್ಳಲ್ಪಟ್ಟು ನೀರು ಆರುವುದಿಲ್ಲ.
- ಬೇಸಿಗೆಯಲ್ಲಿ ಇದಕ್ಕೆ ಪಂಪ್ ಇಟ್ಟು ನೀರನ್ನು ತೆಗೆಯುತ್ತಾರಂತೆ. ಆದರೂ ನೀರು ಆರುವುದಿಲ್ಲವಂತೆ.
ಏನು ಪ್ರಯೋಜನ ಕಂಡು ಕೊಂಡಿದ್ದಾರೆ:
- ಇವರ ಭೂಮಿಯಲ್ಲಿ ಮಳೆಗಾಲದಲ್ಲಿ ಎಲ್ಲಾ ಕಡೆ ಒರತೆಯಾಗುತ್ತಿರುತ್ತದೆ.
- ಆದರೆ ಬೇಸಿಗೆಯಲ್ಲಿ ನೀರಿನ ಬರ.
- ಇದನ್ನು ಮಾಡಿದ ಮೇಲೆ ಕೆಳಭಾಗದ ಗದ್ದೆಯಲ್ಲೂ ಬೇಸಿಗೆಯಲ್ಲೂ ತೇವಾಂಶ ಇರುತ್ತದೆಯಂತೆ.
- ತೋಟದ ತಳ ಭಾಗದ ಮಣ್ಣು ತೇವಾಂಶ ಒಳಗೊಂಡಿರುವ ಕಾರಣ ತೋಟಕ್ಕೆ ಮೇಲ್ಪ್ಭಾಗ ಮಾತ್ರ ಒದ್ದೆಯಾಗುವಂತೆ ನೀರಾವರಿ ಮಾಡಿದರೆ ಸಾಕಾಗುತ್ತದೆಯಂತೆ.
- ಇವರಲ್ಲಿ ಎರಡು ಕೊಳವೆ ಬಾವಿಗಳಿದ್ದು, ಅದರಲ್ಲೂ ನೀರಿನ ಇಳುವರಿ ಹೆಚ್ಚಳವಾಗಿದೆ ಎನ್ನುತ್ತಾರೆ.
- ಸಮೀಪದಲ್ಲೇ ಗೇರು ತೋಟ ಇದ್ದು, ಅದಕ್ಕೂ ಇದರಲ್ಲಿ ನೀರು ನಿಂತು ಅದು ಮಣ್ಣಿಗೆ ಇಂಗಿದ ಪರಿಣಾಮದಿಂದ ಗೇರಿನ ಇಳುವರಿಗೂ ಅನುಕೂಲವಾಗಿದೆಯಂತೆ.
- ಪರೋಕ್ಷವಾಗಿ ಇಲ್ಲಿ ನೀರು ನಿಲ್ಲುವುದರಿಂದ ಸುತ್ತಮುತ್ತ ಗಿಡ ಮರಗಳು ಹುಲುಸಾಗಿ ಬೆಳೆದಿವೆ.
- ಕಾಡಿನ ತರಹ ಆಗಿದೆ. ಹಕ್ಕಿ ಪಕ್ಕಿಗಳಿಗೆ ನೀರು ದೊರೆಯುತ್ತದೆ.
- ಇದರಲ್ಲಿ ಮೀನು ಸಾಕಾಣಿಕೆಯನ್ನೂ ಮಾಡಬಹುದು ಎಂದು ಅದಕ್ಕೂ ಪ್ರಯತ್ನಿಸಿದ್ದು, ಅಲ್ಲಿ ಪಕ್ಷಿಗಳು ಮೀನನ್ನು ಹಿಡಿಯುವ ಕಾರಣ ಅದು ಯಸಶ್ವಿಯಾಗಲಿಲ್ಲವಂತೆ.
ಅಧಿಕ ಮಳೆಯಾಗುವಈ ಭಾಗಗಳಲ್ಲಿ ಮಳೆಗೆ ನೀರು ಬೇಕಾಬಿಟ್ಟಿ ಹರಿದು ಹೋಗಿ ಹೊಳೆ ಸಮುದ್ರ ಸೇರುತ್ತದೆ. ಅದನ್ನೆಲ್ಲಾ ಸಂಗ್ರಹಿಸುವುದು ಅಸಾಧ್ಯವಾದರೂ ಸಾಧ್ಯವಾದಷ್ಟು ಸಂಗ್ರಹಿಸಿ. ದಾಸ್ತಾನು ಇಟ್ಟರೆ ಅದು ಮಣ್ಣಿಗೆ ಇಂಗಲ್ಪಟ್ಟು ಮಣ್ಣಿನ ತೇವಾಂಶ ಹೆಚ್ಚುತ್ತದೆ. ಇದು ಸಸ್ಯ ಸಂಕುಲದ ಉತ್ತಮ ಬೆಳವಣಿಗೆಗೆ ಸಹಾಯಕವಾಗುತ್ತದೆ. ಮಣ್ಣು ನೀರು ಕುಡಿದಷ್ಟೂ ಕೆರೆ ಬಾವಿಗಳಲ್ಲಿ ನೀರಿನ ಮೂಲ ಹೆಚ್ಚಾಗುತ್ತದೆ.
- ಶ್ರೀಯುತರು ಉಡುಪಿ ಜಿಲ್ಲೆಯಲ್ಲಿ ಒಬ್ಬ ಪ್ರಗತಿಪರ ಕೃಷಿಕ.
- ಸಮಗ್ರ ಕೃಷಿ ಎಂಬ ಪರಿಕಲ್ಪನೆಯಲ್ಲಿ ತಮ್ಮ ಹೊಲದಲ್ಲಿ ಎಲ್ಲಾ ನಮೂನೆಯ ಬೆಳೆಗಳನ್ನೂ ಬೆಳೆದು ಆದಾಯದ ಸ್ಥಿರತೆಯನ್ನು ಕಂಡವರು.
ಇವರ ಕೃಷಿ ಸಾಧನೆಯನ್ನು ಮೆಚ್ಚಿ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿ ಬಂದಿವೆ. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ , ನಡೆಸಿದ ವೈಬ್ರೇಂಟ್ ಗುಜರಾತ್ ಮತ್ತು ಕೃಷಿ ಸಮ್ಮಿಲನ್ ಕಾರ್ಯಕ್ರಮದಲ್ಲಿ ದೇಶದ ಪ್ರತೀ ಜಿಲ್ಲೆಯ ಒಬ್ಬ ಪ್ರಗತಿಪರ ಕೃಷಿಕನಿಗೆ ಸನ್ಮಾನ ಮತ್ತು ನಗದು ಪುರಸ್ಕಾರ ಪಡೆದವರಲ್ಲಿ ಇವರೂ ಒಬ್ಬರು.