ಕೀಟಗಳ ನಿಯಂತ್ರಣಕ್ಕೆ ಇದು ಸುರಕ್ಷಿತ ವಿಧಾನ.

border crops to pest attraction

ಕೀಟನಾಶಕ ಬಳಕೆಯಿಂದ ತಿನ್ನುವವರಿಗಿಂತ ಬಳಸುವವರಿಗೆ ತೊಂದರೆ ಜಾಸ್ತಿ. ಅದ ಕಾರಣ ಸಾಧ್ಯವಾದಷ್ಟು ಅದರ ಬಳಕೆ ಕಡಿಮೆ ಮಾಡಿ.

 ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಆಕರ್ಷಿಸುವುದು. ಮತ್ತು ಮುಖ್ಯ ಬೆಳೆಯನ್ನು ರಕ್ಷಿಸುವುದು.ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ.  ಸುಲಭದಲ್ಲಿ  ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ಅಲ್ಲಿಗೆ ಕೊಕ್ಕೆ ಬೇಡ. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ.

 • ಹುಳ ಬಿದ್ದಿದೆ ಯಾವ ಕೀಟ ನಾಶಕ ಸಿಂಪಡಿಸಬೇಕು ಎಂದು ಕೇಳುತ್ತೇವೆಯೇ ವಿನಹ ಏನು ಮಾಡಬೇಕು ಎಂದು ಕೇಳುತ್ತಿಲ್ಲ.
 • ತಜ್ಞರ ಬಳಿಗೆ ರೈತರು ಹೋಗುವುದಿಲ್ಲ.
 • ಕೀಟ ನಾಶಕ ಮಾರಾಟ ಮಾಡುವ ಅಂಗಡಿಯವರ ಬಳಿಗೇ ನೇರವಾಗಿ ಹೋಗುತ್ತಾರೆ.
 • ಇಲಿಯನ್ನು ಕೊಲ್ಲಲು ಹುಲಿಯ ಅಟ್ಟಣೆ ಗೊತ್ತಲ್ಲಾ ಅದನ್ನೇ ನಾವು ಮಾಡುತ್ತಿರುವುದು.

Jower plant in border

ಯಾವ ಪರಿಸ್ಥಿತಿ ಆಗಿದೆ ಗೊತ್ತೇ?

 • ಕೀಟ ನಾಶಕ ರೋಗ ನಾಶಕ ಬಳಕೆ ಮಾಡಿ ಮಾಡಿ ಈಗ ನಮ್ಮಲ್ಲಿ ಈ ಕೀಟ ರೋಗ ನಾಶಕಗಳು ಕೆಲಸ ಮಾಡದ ಸ್ಥಿತಿ ಬಂದಿದೆ.
 • ಫ್ಯುರಡಾನ್ ಕೀಟ ನಾಶಕಕ್ಕೆ ಕೀಟಗಳು ಸಾಯುವುದಿಲ್ಲ. ಅದಕ್ಖೂ ಅವು ನಿರೋಧಕ ಶಕ್ತಿ  ಪಡೆದಾಗಿದೆ.
 • ರೈತರು ಫಲಿತಾಂಶ ಸಿಗಲಿಲ್ಲ ಎಂದು  ಹೆಚ್ಚು ಹೆಚ್ಚು ಬಳಕೆ ಮಾಡುತ್ತಾರೆ.
 • ಅನವಶ್ಯಕ ಬಳಕೆಯ ಪರಿಣಾಮದಿಂದ ಕೀಟಗಳಿಗೆ ಕೀಟ ನಾಶಕಗಳು ಅಭ್ಯಾಸವಾಗಲಾರಂಬಿಸಿವೆ.

 ಕೀಟನಾಶಕ ರೋಗ ನಾಶಕಗಳ ತಯಾರಕರು ವಿದೇಶೀ ಬಹುರಾಷ್ಟ್ರೀಯ ಕಂಪೆನಿಗಳು. ಇವರನ್ನು ಸಾಕಲು ನಾವು ಬೆಳೆ ಬೆಳೆಯುವಂತಾಗಿದೆ. ಇದೆಲ್ಲಾ ಬೇಕೇ  ನಮ್ಮ ಹಿರಿಯರು ಬೆಳೆ ಬೆಳೆಯಲಿಲ್ಲವೇ? ಆಗ ಈ ಕೀಟ ನಾಶಕ ರೋಗ ನಾಶಕ ಇತ್ತೇ? ಇರಲಿಲ್ಲ. ಅವರು ಕೆಲವು ಉಪಾಯಗಳಲ್ಲಿ ಕೃಷಿ ಮಾಡಿ ಬೆಳೆ ಉಳಿಸಿಕೊಳ್ಳುತ್ತಿದರು. ಅದರಲ್ಲಿ ಒಂದು ಬಲೆ ಬೆಳೆಗಳು.

ಬಲೆ ಬೆಳೆ ಏನು?

marigold aa nematode control

 • ಯಾವುದೇ ಬೆಳೆಗೆ ಬರುವ ಕೀಟಕ್ಕೆ ಮತ್ತೊಂದು ಆಕರ್ಷಣೆಯ ಸಸ್ಯ ಇರುತ್ತದೆ.
 • ಇದು ಕಳೆಯೇ ಆಗಿರಬಹುದು, ಅಥವಾ ಬೆಳೆಯೇ ಆಗಿರಬಹುದು.
 • ಕೀಟಗಳು ಹೆಚ್ಚಾಗಿ  ಬಹು ಸಸ್ಯಗಳಿಗೆ  ತೊಂದರೆ ಕೊಡುವವುಗಳಾಗಿರುತ್ತವೆ.

ಉದಾಹರಣೆಗೆ ಹೇಳಬೇಕೆಂದರೆ ತುಳಸೀ ಸಸ್ಯ ಹೂ ಬಿಡುವಾಗ ದರ ಪರಿಮಳ ಮಿಥೇಲ್ ಯುಜಿನಾಲ್ ರಾಸಾಯನಿಕದ ಸುವಾಸನೆಯನ್ನು ಹೊರಸೂಸುತ್ತದೆ.

 • ಈ ಸಸ್ಯವನ್ನು ಮಾವಿನ ಮರದ ಅಥವಾ ಇನ್ಯಾವುದೇ ಹಣ್ಣಿನ ಮರದ ಬಳಿ ನೆಟ್ಟರೆ ಅಲ್ಲಿಗೆ ಮೊದಲು ಹಣ್ಣು ನೊಣ ಬರುತ್ತದೆ.
 • ಅದನ್ನು ಅಲ್ಲೇ ಸಾಯಿಸಬಹುದು. ಆಗ ಕೀಟಗಳ ಸಂತತಿ ಕಡಿಮೆಯಾಗುತ್ತದೆ.
 • ಕರ್ಪೂರ ತುಳಸಿ ಇಂತಹ ಗಿಡಗಳು ತಮ್ಮ ಹೂವಿನ ಸುವಾಸನೆಗೆ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ.
 •  ಇದೇ ಸಿದ್ದಾಂತ ಬಲೆ ಬೆಳೆಯದ್ದು. ಮುಖ್ಯ  ಬೆಳೆಗೆ ಬರುವ ಕೀಟ ಬಲೆ ಬೆಳೆಯಲ್ಲಿ  ಆಹಾರ ತಿಂದು ಮುಖ್ಯ ಬೆಳೆ ಉಳಿಸುತ್ತವೆ.

ಯಾವುದು ಬಲೆ ಬೆಳೆ:

 • ಮುಖ್ಯ ಬೆಳೆಯ ಸುತ್ತ ಕೀಟ ಆಕರ್ಷಣೆಗಾಗಿ ನೆಡುವ  ಬೇರೆ ಕೀಟ ಆಕರ್ಷಕ ಸಸ್ಯವೇ ಬಲೆ ಬೆಳೆ.
 • ಇಲ್ಲಿ ಬೆಂಡೆ, ಚೆಂಡು ಹೂವು, ಪುಂಡಿ, ಮುಸುಕಿನ ಜೋಳ , ಹತ್ತಿ , ಅಗಸೆ. ಅಲಸಂಡೆ,  ಹೀಗೆ ಹಲವು ಬೆಳೆಗಳಿವೆ.

Cotton and okra plant

ಆಯ್ಕೆ ಹೇಗೆ:

 • ಹೇನಿನ ಕಾಟ ಜಾಸ್ತಿಯಾದರೆ ಅದಕ್ಕೆ ಆ ಬೆಳೆಯ ಸುತ್ತ ಅಲಸಂಡೆ  ಬಿತ್ತನೆ ಮಾಡಿ.
 • ಅದು ನಿಮಗೆ ಬೇಡದ ಬೆಳೆಯಾಗಿರಲಿ.
 • ಅಲಸಂಡೆಗೆ ಹೇನುಗಳು ಅತ್ಯಧಿಕ ಪ್ರಮಾಣದಲ್ಲಿ ಬರುತ್ತವೆ.
 • ತಮಗೆ ಬೇಕಾದ ಆಹಾರವನ್ನು ಅಲ್ಲೇ ಪಡೆಯುತ್ತವೆ.
 • ಅದನ್ನು ತಿನ್ನಲು ಬೇರೆ ಪರಭಕ್ಷಕಗಳೂ ಬರುತ್ತವೆ.
 • ಆಗ ಅದರ ಸಂತತಿಯೂ ಅಲ್ಲೇ ಕಡಿಮೆಯಾಗುತ್ತದೆ.

ಹತ್ತಿ ಬೆಳೆಯುತ್ತೀರಾ ಹಾಗಾದರೆ ಬದಿಯಲ್ಲಿ ಬೆಂಡೆ ಹಾಕಿ. ಬೆಂಡೆಗೆ ಕಾಯಿ ಕೊರಕ, ಹೇನು ಬೇಗ ಬರುತ್ತದೆ. ಅಲ್ಲೇ ಅವುಗಳನ್ನು ಕೊಂದು  ಬಿಡಿ. ಸಂಖ್ಯೆ ಕಡಿಮೆಯಾಗಿ  ಹತ್ತಿಗೆ ಕೀಟ ಸಮಸ್ಯೆ ಕಡಿಮೆಯಾಗುತ್ತದೆ.

Symbiotic pest attraction

 • ಜೋಳವೂ ಸಹ ಇದೇ ಕೆಲಸವನ್ನು ಮಾಡುತ್ತದೆ.
 • ಜೋಳದ ಹೂಲದಲ್ಲಿ ಅಲ್ಲಲ್ಲಿ ಬೆಂಡೆ ಬೆಳೆದರೆ  ಜೋಳಕ್ಕೆ ಕೀಟ ಸಮಸ್ಯೆ ಕಡಿಮೆ ಯಾಗುತ್ತದೆ.

ಬಹುತೇಕ ಬೆಳೆಗಳ  ಕೀಟ ನಿಯಂತ್ರಣಕ್ಕೆ ಚೆಂಡು ಹೂವಿನ ಪರಿಮಳ ಪರಿಣಾಮಕಾರಿ. ಇದರ ಬೇರು ಹೋದಲ್ಲಿ ನಮಟೋಡು ಇಲ್ಲದಾಗುತ್ತದೆ.  ಬದನೆ ಇತ್ಯಾದಿ ನಮಟೋಡು ಬಾಧೆ ಹೆಚ್ಚು ಇರುವಲ್ಲಿ ಚೆಂಡು ಹೂ ಬೆಳೆಸಿ.
ನಮ್ಮ ಸುತ್ತಮುತ್ತ ಹಲವಾರು ಕೀಟ ಆಕರ್ಷಕ ಸಸ್ಯಗಳು ಇರುತ್ತವೆ. ಇವುಗಳನ್ನು ನಾವು  ಗಮನಿಸಬೇಕು. ಹೇನು- ಹಿಟ್ಟು ತಿಗಣೆ ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ  ದಾಸವಾಳ ಗಿಡ, ನಂದಿ ಬಟ್ಟಲು  ಗಿಡ ಆಕರ್ಷಿಸುತ್ತದೆ. ಹೀಗೆ ಬೇರೆ ಬೇರೆ ಗಿಡಗಳನ್ನು ಗುರುತಿಸಿ ಕೀಟ ನಾಶಕದ ಬಳಕೆಯನ್ನು ಕಡಿಮೆ ಮಾಡಬಹುದು. ಕಾಸರಕನ ಮರದ ತೊಗಟೆಯ ಕಷಾಯ ಬಹುತೇಕ ಕೀಟಗಳಿಗೆ ಔಷದಿ. ಇದನ್ನು ಜಾಗರೂಕತೆಯಲ್ಲಿ ಬಳಸಬಹುದು.

error: Content is protected !!