ಬೇಸಿಗೆ ಬಂದರೆ ಸಾಕು .ನೀರು- ನೀರಾವರಿ, ನೀರಿನ ಕೊರತೆ. ದಿನಾ ಇದೇ ಕೆಲಸ. ಬೇಸಿಗೆ ಬಂದರೆ ಸಾಕು ಎಲ್ಲೂ ಹೋಗುವಂತಿಲ್ಲ. ನೀರಾವರಿಯದ್ದೇ ತಲೆಬಿಸಿ. ಇಷ್ಟೆಲ್ಲಾ ನೀರುಣಿಸಿದರೆ ಅಂತರ್ಜಲ ಯಾಕೆ ಭೂ ಗರ್ಭದ ಪಾತಾಳ ಜಲಕ್ಕೂ ಹೋಗಬೇಕಾಗ ಬಹುದು. ಇದಕ್ಕೆ ಪರಿಹಾರ ಎಷ್ಟು ಬೇಕೋ ಅಷ್ಟು ನೀರು ಕೊಟ್ಟು, ಆವೀಕರಣವನ್ನು ಶೂನ್ಯ ಮಾಡುವುದು. ಆವೀಕರಣ ತಡೆದರೆ ಸಸ್ಯಕ್ಕೆ ಬೇಕಾಗುವ ನೀರು ತುಂಬಾ ಕಡಿಮೆ.
ಮಳೆ ಹಿಂದಿನಂತಿಲ್ಲ:
- ಪ್ರಕೃತಿಯ ನಡೆ ಹೇಗಿರುತ್ತದೆ ಎಂದು ಬಲ್ಲವರಾರೂ ಇಲ್ಲ.
- ಮಳೆ ಬಂದರೆ ಬಂತು. ಹೋದರೆ ಹೋಯಿತು. ಕೆಲವು ಕಡೆಗೆ ಮಾತ್ರ ಮಳೆ.
- ವರ್ಷ ಕಳೆದಂತೆ ಮಳೆಯ ಸ್ಥಿತಿ ಗತಿ ಬದಲಾಗುತ್ತಾ ಬರುತ್ತಿದೆ.
- ಅಧಿಕ ಮಳೆಯಾಗುವ ಪ್ರದೇಶಗಳೆಂದು ಗುರುತಿಸಲ್ಪಟ್ಟ ಕಡೆಗಳಲ್ಲೂ ಮಳೆ ಹಿಂದಿನಂತೆ ಇಲ್ಲ.
- ಧಾರಕಾರವಾಗಿ ಮಳೆ ಬಂದರೆ ಪ್ರಯೋಜನ ಇಲ್ಲ.
- ಮಳೆ ಹಂಚಿಕೆ ಸರಿಯಾಗಿದ್ದರೆನೇ ಸುಭಿಕ್ಷೆ.
- ವಾತಾವರಣದ ಏರು ಪೇರಿನಿಂದ ಈಗ ಮಳೆ ಹಂಚಿಕೆ ವೆತ್ಯಾಸವಾಗಲಾರಂಬಿಸಿದೆ.
- ಇದರಿಂದಾಗಿ ಕೃಷಿಯ ಮೇಲೆ ಭಾರೀ ಹೊಡೆತ ಬೀಳಲಿದೆ. ಪ್ರತೀ ವರ್ಷ ಕರಾವಳಿ ಮಲೆನಾಡಿನಲ್ಲಿ ಮಳೆ ಉತ್ತಮವಾಗಿ ಬಂದರೂ ನೀರಿನ ಕೊರತೆ ಆಗುತ್ತದೆ.
ಅಧಿಕ ಮಳೆಯಿಂದ ಆಗುವುದೇನು:
- ಹಿರಿಯರು ವಿಪರೀತವಾಗಿ ಮಳೆ ಬಂದ ವರ್ಷ ಬೇಸಿಗೆಯಲ್ಲಿ ನೀರಿನ ಕ್ಷಾಮ ಉಂಟಾಗುತ್ತದೆ ಎಂದು ಹೇಳಿದ್ದರಲ್ಲೂ ತಪ್ಪುಇಲ್ಲ.
- ಅತಿಯಾಗಿ ಮಳೆ ಬಂದ ವರ್ಷ ಮಣ್ಣು ಕೊಚ್ಚಣೆ ಅಧಿಕವಾಗುತ್ತದೆ.
- ಭೂಮಿಯಲ್ಲಿ ಒರತೆ ಹೆಚ್ಚಳವಾಗಿ ನೀರಿನ ಮಟ್ಟ ಏರಿಕೆಯಾಗುತ್ತದೆ.
- ನೀರು ಮಣ್ಣಿನ ಹಗುರ ಕಣಗಳನ್ನು ವಿಭಜಿಸಿ ಅದನ್ನು ತೊಳೆದು ಹೋಗುವಂತೆ ಮಾಡುತ್ತದೆ.
- ಈ ಕಾರಣದಿಂದ ನೆಲದ ಮೇಲೆ ಮತ್ತು ಅಡಿಯಲ್ಲೂ ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಕಣಗಳು ಕಡಿಮೆಯಾಗಿ ಮರಳು ಜಾಸ್ತಿಯಾಗಿ ನೀರು ಮತ್ತೂ ತಳಕ್ಕೆ ಇಳಿಯುತ್ತದೆ.
- ಬೆಳೆ ಇರುವ ಮೇಲು ಮಣ್ಣಿನಲ್ಲೂ ಹೀಗೇ ಆಗುವ ಕಾರಣ ಮಣ್ಣು ಬೇಗ ಒಣಗುತ್ತದೆ.
- ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.
ನೀರು ಉಳಿತಾಯ ಹೇಗೆ:
- ಮಳೆ ಬರುವುದು, ಹೆಚ್ಚು – ಕಡಿಮೆ ಆಗುವುದು ನಮ್ಮ ಕೈಯಲ್ಲಿ ಇಲ್ಲದ್ದು. ಆದರೆ ನೀರಿನ ಕೊರತೆಯಲ್ಲೂ ಬೆಳೆಯನ್ನು ಉಳಿಸಿಕೊಳ್ಳುವುದು ಮಾತ್ರ ನಮ್ಮಿಂದ ಸಾಧ್ಯವಾಗುವ ವಿಚಾರ.
ಮೆಕ್ಕಲು ಮಣ್ಣು ಹಾಕಿ:
- ಮೆಕ್ಕಲು ಮಣ್ಣು ನಮ್ಮ ಹೊಲದಿಂದ ಮಳೆನೀರಿನ ಮೂಲಕ ಹರಿದು ಹೋಗಿ ಸಮತಟ್ಟು ಜಾಗದಲ್ಲಿ ತಂಗಿದ ಫಲವತ್ತಾದ ಮಣ್ಣು.
- ನೆಲದಲ್ಲಿ ನೀರಿನ ಅಂಶ ಬೇಗ ಅವೀಕರಣ ಆಗದಂತೆ ತಡೆಯುವಲ್ಲಿ ಇದು ಸಹಕಾರಿ.
- ಇದನ್ನು ಹೊಲದ ಮೇಲೆ ಹೊದಿಕೆಯಾಗಿ ಹರಡಬಹುದು.
- ಸಾವಯವ ತ್ಯಾಜ್ಯಗಳನ್ನೂ ಒಟ್ಟು ಸೇರಿಸಿ ಹಾಕಬಹುದು.
- ಮೆಕ್ಕಲು ಮಣ್ಣು ಇಲ್ಲದಿದ್ದ ಪಕ್ಷದಲ್ಲಿ ಉತ್ತಮ ಮಣ್ಣನ್ನೂ ಹೊದಿಕೆ ಹಾಕಬಹುದು.
ಮಳೆಗಾಲ ಕಳೆದ ತಕ್ಷಣ ಹೊಲದ ಬೆಳೆಗಳ ಬುಡಕ್ಕೆ ಮಣ್ಣು ಏರಿಕೆ ಮಾಡುವುದರಿಂದ ನೆಲದ ತೇವಾಂಶ ಅವೀಕರಣ ಆಗುವುದು ಕಡಿಮೆಯಾಗುತ್ತದೆ. ಇದರಿಂದ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿಯೂ ಉತ್ತಮವಾಗಿರುತ್ತದೆ. ಸಾಧ್ಯವಾದಷ್ಟು ಮರಳು ಕಡಿಮೆ ಇರುವ ಮಣ್ಣನ್ನು ಬಳಕೆ ಮಾಡಿದರೆ ಒಳ್ಳೆಯದು.
ತೇವಾಂಶ ಸಂರಕ್ಷಣೆ ಕ್ರಮ :
- ಮಣ್ಣು ಹಾಕುವುದರಿಂದ ತೇವಾಂಶ ಸಂರಕ್ಷಣೆ ಆಗುತ್ತದೆ.
- ಕಡಿಮೆ ನೀರಿನ ಉಪಯೋಗ ಮಾಡಿಕೊಂಡು ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
- ಅದೇ ರೀತಿಯಲ್ಲಿ ಸೊಪ್ಪಿನ ಬೆಟ್ಟಗಳಲ್ಲಿ, ಕಾಡಿನ ಬದಿಯಲಿ ದೊರೆಯುವ ಒಣ ತರಗೆಲೆ, ಹಾಗೆಯೇ ಕೆಲವು ಉದ್ದಿಮೆಗಳಲ್ಲಿ ದೊರೆಯುವ ಸಾವಯವ ತ್ಯಾಜ್ಯಗಳನ್ನೂ ಸಹ ಕೃಷಿಗೆ ಬಳಕೆ ಮಾಡಿಕೊಳ್ಳಬಹುದು.
- ಅಕ್ಕಿ ಗಿರಣಿಗಳಲ್ಲಿ ದೊರೆಯುವ ಸುಟ್ಟ ಬೂದಿ ಸಹ ತೇವಾಂಶ ಸಂರಕ್ಷಣೆಗೆ ಒಳ್ಳೆಯದು.
- ಈ ರೀತಿ ಮಣ್ಣಿಗೆ ಹೊದಿಕೆ ಮಾಡುವುದರಿಂದ ನೀರಿನ ಬಳಕೆಯನ್ನು 50% ದಷ್ಟು ಕಡಿಮೆ ಮಾಡಬಹುದು.
ಕೊಳವೆ ಬಾವಿ ನೀರನ್ನು ಹನಿ ನೀರಾವರಿ ಮಾಡುವುದಿದ್ದರೆ ಮಾತ್ರ ಉಪಯೋಗಿಸಿ. ರೈತರೆಲ್ಲಾ ಹನಿನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡದ್ದೇ ಆದರೆ ಅದೆಷ್ಟೂ ನೀರಿನ ಶೋಷಣೆಯನ್ನು ಕಡಿಮೆ ಮಾಡಬಹುದು!. ಇದನ್ನು ಎಲ್ಲಾ ರೈತರೂ ಯೋಚನೆ ಮಾಡಬೇಕಾಗಿದೆ. ಬಹುಷಃ 100% ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಲ್ಲಿ ನೀರಿಗೆ ಕೊರತೆ ಉಂಟಾಗಲಾರದು.
ಆಧುನಿಕ ತೇವಾಂಶ ಸಂರಕ್ಷಕಗಳು:
- ಈಗ ತೇವಾಂಶದ ಆವೀಕರಣ ತಡೆಯುವ ಸಲುವಾಗಿ ಮಲ್ಚಿಂಗ್ ಶೀಟುಗಳು ಬಂದಿವೆ.
- ಅದರಲ್ಲಿ ಬೇರೆ ಬೇರೆ ತರಾವಳಿಯವುಗಳೂ ಇವೆ.
- ಧೀರ್ಘಾವಧಿ ಬೆಳೆಗಳಿಗೆ ಎಚ್ ಡಿ ಪಿ ಇ ಶೀಟುಗಳನ್ನು ಹಾಕುವುದರಿಂದ ನೀರಿನ ಬಳಕೆಯಲ್ಲಿ 75% ದಷ್ಟು ಉಳಿತಾಯ ಮಾಡಬಹುದು.
ಇವೆಲ್ಲಾ ಸಲಹೆಗಳು ಬರೇ ನೀರಿನ ಉಳಿತಾಯ ಮಾತ್ರವಲ್ಲದೆ ಬೆಳೆಯಲ್ಲಿ ಇಳುವರಿ ಹೆಚ್ಚಳಕ್ಕೂ , ಮಣ್ಣು ಸಂರಕ್ಷಣೆಗೂ ನೆರವಾಗುವಂತದ್ದು. ಒಂದು ವೇಳೆ ಕೊಳವೆ ಬಾವಿ ಕೈಕೊಟ್ಟರೆ, ಕೆರೆ, ಬಾವಿಯ ನೀರು ಬತ್ತಿದರೂ ವಾರಗಟ್ಟಲೆ ನೀರುಣಿಸದೇ ತೋಟ ಉಳಿಸುವ ತಂತ್ರ ಅಳವಡಿಸಿಕೊಳ್ಳಿ.