ತೆಂಗಿನ ಮರಕ್ಕೆ ಬೊಡ್ಡೆ ಬರುವುದು ಹೇಗೆ ಮತ್ತು ಇದರ ಪ್ರಯೋಜನ.

Wide bole

ತೆಂಗಿನ ಮರದ ಬುಡದಲ್ಲಿ ಬೆಳೆಯುವ ಒಂದು ರೀತಿಯ ಬೊಡ್ಡೆಯೇ (Bole) ಆ ಮರದ ಶಕ್ತಿ ಕೇಂದ್ರ. ಯಾವ ತೆಂಗಿನ ಮರಕ್ಕೆ  ಬೊಡ್ಡೆ ಇದೆಯೋ ಆ ಮರ ಸ್ವಲ್ಪ ಮಟ್ಟಿಗೆ ಬರ ನಿರೋಧಕ ಶಕ್ತಿಯನ್ನು ಪಡೆದಿರುತ್ತದೆ.

   coconut palm with solid bole

  • ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ  ಅದನ್ನು ಬಳಸಿಕೊಂಡು ಬದುಕುತ್ತದೆ.
  • ಅದೇ ರೀತಿ ಕೆಲವು ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಆಪತ್ಕಾಲಕ್ಕೆ  ಬಳಕೆಗಾಗುವಂತೆ ತಮ್ಮಲ್ಲಿ ಆಹಾರ ದಾಸ್ತಾನು ಇಟ್ಟುಕೊಂಡಿರುತ್ತವೆ.
  • ಯಾವುದೇ ನೀರು ಆಹಾರ ಇಲ್ಲದ ಪ್ರದೇಶಗಳಲ್ಲಿ ಬೆಳೆಯುವ ಪಾಪಸುಕಳ್ಳಿ ಗಿಡ ತನ್ನ ಕಾಂಡದಲ್ಲಿ ಆಹಾರವನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಬಳಕೆ ಮಾಡುತ್ತದೆ.
  • ಈ ಸಸ್ಯಗಳಿಗೆ ಎಲೆ ಇಲ್ಲ. ಇದರ ಮುಳ್ಳೇ ಎಲೆ. ಎಲೆ ಇದ್ದರೆ ಆಹಾರ ಬಳಕೆ ಜಾಸ್ತಿ.

ಇದು ಶಕ್ತಿ ಕೇಂದ್ರ:

bale having plants good yield

  • ತೆಂಗಿನ ಮರದ ವಿಚಾರಕ್ಕೆ ಬಂದಾಗ, ಈ ಮರವೂ ಬರ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಬದುಕಲು ತನ್ನ ಶರೀರದಲ್ಲಿ ಒಂದು ವ್ಯವಸ್ಥೆಯನ್ನು ಇಟ್ಟುಕೊಂದಿದೆ ಎಂದರೆ ತಪ್ಪಾಗಲಾರದು.
  • ಆ ವ್ಯವಸ್ಥೆಯೇ ಮರದ ಬುಡದ ಬೊಡ್ಡೆ.
  • ಬಯಲು ಸೀಮೆಯಲ್ಲಿ ವರ್ಷದಲ್ಲಿ ಹೆಚ್ಚೆಂದರೆ ಮೂರು ನಾಲ್ಕು ಒಳ್ಳೆಯ ಮಳೆ ಬರುತ್ತದೆ.
  • ಉಳಿದಂತೆ  ವರ್ಷವಿಡೀ ಬೇಸಿಗೆಯೇ. ಅಧಿಕ ತಾಪಮಾನ ಮತ್ತು ಆ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಬಳಕೆಯೂ ಇರುತ್ತದೆ.
  • ಈ ಪ್ರದೇಶಗಳಲ್ಲಿ ತೆಂಗಿಗೆ ನೀರಾವರಿ ಮಾಡಿ ಬೆಳೆಸುತ್ತಾರೆ. ವರ್ಷವಿಡೀ ನೀರಾವರಿ ಇರುತ್ತದೆ.
  • ಕೆಲವೊಂದು ಸಮಯದಲ್ಲಿ ನೀರಾವರಿಯ ವೆತ್ಯಾಸಗಳಾದರೂ, ಮರ ಸೊರಗದೇ ಉಳಿಯುತ್ತದೆ.
  • ಇದಕ್ಕೆ ಕಾರಣ ಆ ಮರಗಳಲ್ಲಿ ಇರುವ ಬೊಡ್ಡೆ.
  • ತೆಂಗಿನ ಮರಕ್ಕೆ ಬೊಡ್ಡೆ ಅಗತ್ಯವಾಗಿ ಬರಲೇ ಬೇಕು.
  • ಎಲ್ಲಾ ಪ್ರದೇಶಗಳಲ್ಲೂ ಅದು ಏಕಪ್ರಕಾರವಾಗಿ ಬಾರದೇ ಇರಬಹುದು, ಸಾಧಾರಣ  ಪ್ರಮಾಣದಲ್ಲಾದರೂ ಇರಬೇಕು.

ಬೊಡ್ಡೆ ಬರುವುದು ಹೇಗೆ:

bole structure

  • ತೆಂಗಿನ ಮರಕ್ಕೆ ಬೊಡ್ಡೆ ಬರುವುದು ಅದರ ಎಳೆ ಪ್ರಾಯದ ಆರೈಕೆ ಮತ್ತು ನಾಟಿ ಕ್ರಮದಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.
  • ತೆಂಗಿನ ಸಸಿ ನೆಟ್ಟು ಸಮರ್ಪಕವಾಗಿ ಆರೈಕೆ ಮಾಡಿದರೆ 12-18 ಎಲೆಗಳು ಬಂದ ತರುವಾಯ ಅದಕ್ಕೆ ಕಾಂಡ ಮೂಡಲು ಪ್ರಾರಂಭವಾಗುತ್ತದೆ.
  • ಈ ಪ್ರಾಯದಲ್ಲಿ ಮಾಡುವ ಉತ್ತಮ ಆರೈಕೆಯಲ್ಲಿ ಗರಿಗಳ ಉದ್ದ ಮತ್ತು ಅದರ ಎಲೆಗಳ ಅಗಲ ನಿರ್ಧರಿತವಾಗುತ್ತವೆ.
  • ನೀರಾವರಿ- ಗೊಬ್ಬರ ಎಲೆಗಳು ಉತ್ತಮವಾಗಿ ಮೂಡಲು ಸಹಕಾರಿಯಾದ ಅಂಶಗಳು.
  • ಒಂದು ಆರೋಗ್ಯವಂತ ತೆಂಗಿನ ಮರ ವರ್ಷಕ್ಕೆ 12 ಗರಿಗಳನ್ನು  ಬಿಡುತ್ತದೆ ಎಂದು ಅಂದಾಜಿಸಲಾಗಿದೆ.
  • ಸುಮಾರು 18 ಎಲೆ  ಮೂಡಿದ ತರುವಾಯ ಬುಡ ಭಾಗದಲ್ಲಿ  ಗಡ್ಡೆಯಂತಹ ಆಕಾರದ ಬೊಡ್ಡೆ ಬೆಳವಣಿಗೆ  ಪ್ರಾರಂಭವಾಗುತ್ತದೆ.
  • ಇದು ಸುಮಾರು 3-4 ವರ್ಷದ ತನಕವೂ ಮುಂದುವರಿಯುತ್ತಾ  ಕ್ರಮೇಣ ಅದು ನೈಜ ಕಾಂಡದ ಆಕಾರಕ್ಕೆ ಬರುತ್ತದೆ.
  • ಬೊಡ್ಡೆ ಸುಮಾರಾಗಿ 2-4 ಅಡಿ ಎತ್ತರದ ತನಕವೂ ಸುಮಾರು4- 6 ಅಡಿ ಸುತ್ತಳತೆ ತನಕವೂ ಇರುತ್ತದೆ.
  • ಈ ಬೊಡ್ಡೆಯ ಕೆಳಸ್ಥರದಲ್ಲಿ ಬೇರುಗಳು ಮೂಡುತ್ತಿರುತ್ತವೆ.

 ಕೆಲವು ಕಡೆ ಯಾಕೆ ಇಲ್ಲ:

  • ತೆಂಗಿನ ಸಸಿಯನ್ನು ನಾಟಿ ಮಾಡುವಾಗ  ಮಣ್ಣಿನ ಗುಣವನ್ನು ಅವಲಂಭಿಸಿ ಎಷ್ಟು ಆಳದ ಹೊಂಡವನ್ನೂ ಮಾಡಬಹುದು.
  • ತೀರಾ ಸಡಿಲ ಮಣ್ಣು ಆಗಿದ್ದಲ್ಲಿ ತುಂಬಾ ಆಳದ ಅಗಲದ ಹೊಂಡದ ಅಗತ್ಯ ಇರುವುದಿಲ್ಲ.
  • ಗಟ್ಟಿ ಮಣ್ಣಾದರೆ  ಮಣ್ಣಿನ ಸಡಿಲತೆಯ ಸಲುವಾಗಿ ಅಗಲ ಮತ್ತು ಆಳದ ಹೊಂಡವನ್ನು  ಮಾಡಬೇಕು.
  • ಈ ಹೊಂಡವನ್ನು ಮುಕ್ಕಾಲು ಪಾಲಿಗೂ ಹೆಚ್ಚು ಮತ್ತೆ  ಮಣ್ಣು ತುಂಬಿಸಿ ಮೇಲು ಸ್ಥರದಲ್ಲಿ  ಸಸ್ಯವನ್ನು  ನಾಟಿ ಮಾಡಬೇಕು.
  • ಹೀಗೆ ಮಾಡಿದಾಗ ಆ ಸಸಿಯ ಬೇರುಗಳಿಗೆ ತಕ್ಷಣ ಬೆಳವಣಿಗೆಗೆ ಅನುಕೂಲವಾಗುವ ಮಣ್ಣು ದೊರೆಯುತ್ತದೆ.
  • ಸಮರ್ಪಕವಾಗಿ ಎಲೆಗಳು ಬೆಳವಣಿಗೆ ಹೊಂದಲು ಅನುಕೂಲವಾಗುತ್ತದೆ.
  • ಸಾಮಾನ್ಯವಾಗಿ ಹೆಚ್ಚಿನವರು  ತೆಂಗಿನ ಸಸಿ ನೆಡುವಾಗ ಆಳದ ಹೊಂಡ ಮಾಡಿ ತಳಭಾಗದಲ್ಲಿ ನಾಟಿ ಮಾಡುವುದುಂಟು.
  • ಈ ವಿಧಾನದಲ್ಲಿ ನಾಟಿ ಮಾಡಿದಾಗ ಸಸಿಗಳಿಗೆ ಬೇರು ಬಿಡಲು ಸಮರ್ಪಕವಾಗ ಅನುಕೂಲ ಸ್ಥಿತಿ ದೊರೆಯದೆ ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ.
  • ಸಸಿಯ ಬೆಳವಣಿಗೆ ಕ್ಷೀಣವಾಗುತ್ತದೆ. ಇದರಿಂದ ಬೊಡ್ಡೆ  ಬರುವುದಿಲ್ಲ.

ತೆಂಗು ಬೆಳೆಯುವವರು ಸಸಿನೆಡುವಾಗ ಆಳದ ಹೊಂಡ ಮಾಡಿ ತಳ ಭಾಗದಲ್ಲಿ ನಾಟಿ ಮಾಡಿದರೆ ಬುಡ ಭಾಗದಕ್ಕೆ ಶಕ್ತಿ ದೊರೆಯುತ್ತದೆ, ತೇವಾಂಶ ಸಂರಕ್ಷಣೆಗೆ ಅನುಕೂಲವಾಗುತ್ತದೆ, ಮಗುಚಿ ಬೀಳುವುದಿಲ್ಲ  ಎಂದು ತಿಳಿದಿದ್ದರೆ ಅದು ತಪ್ಪು. ತೆಂಗಿನ ಸಸಿಯ ಬೇರುಗಳು ತಳಕ್ಕೆ ಇಳಿಯುವುದಿಲ್ಲ. ಮಗುಚಿ ಬೀಳುವುದೂ ಇಲ್ಲ.

ತೆಂಗಿನ ಬೇಸಾಯ ಮಾಡುವವರು ಸಸಿ ನೆಟ್ಟು  ಮೂರು -ನಾಲ್ಕು ವರ್ಷ  ಉತ್ತಮ ಆರೈಕೆ  ಮಾಡಲೇ ಬೇಕು. ಈ ಸಮಯದಲ್ಲಿ  ಮಾಡುವ ಆರೈಕೆ  ಅದರ ಜೀವಮಾನದ  ಇಳುವರಿ ಕ್ಷಮತೆಯನ್ನು  ನಿರ್ಧರಿಸುತ್ತದೆ. ಈ ಸಮಯದಲ್ಲಿ  ಮಾಡುವ ಉತ್ತಮ ಪೋಷಣೆಯಲ್ಲೇ ಮರಕ್ಕೆ ಬೊಡ್ಡೆಯೂ ಬರುತ್ತದೆ. 

Leave a Reply

Your email address will not be published. Required fields are marked *

error: Content is protected !!