ಅಡಿಕೆ ತೋಟಕ್ಕೆ ಮಣ್ಣು ಹಾಕುವುದು ನಾವೆಲ್ಲಾ ಮಾಡುವ ಒಂದು ಪ್ರಮುಖ ಬೇಸಾಯ ಕ್ರಮ. ಮಣ್ಣು ಹಾಕುವ ಪದ್ದತಿ ಒಳ್ಳೆಯದು. ಅದರೆ ಹಾಕುವಾಗ ಹೇಗೆ ಹಾಕಬೇಕು, ಎಂತಹ ಮಣ್ಣು ಹಾಕಬೇಕು, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದು ಪ್ರಾಮುಖ್ಯ ಸಂಗತಿ. ತೀರಾ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಹಾಕಬಾರದು. ಫಲವತ್ತಾಗಿರದ ಮಣ್ಣು ಬೇಡ. ಸಾವಯವ ವಸ್ತುಗಳು ಸೇರಿ ಬಣ್ಣ ಬದಲಾದ ಮಣ್ಣನ್ನು ಹಾಕಿದರೆ ಅದರ ಪ್ರಯೋಜನ ಹೆಚ್ಚು.
ತೋಟ- ಹೊಲಕ್ಕೆ ಹೊಸ ಮಣ್ಣು ಹಾಕುವ ಉದ್ದೇಶ ಮಣ್ಣು ಹೆಚ್ಚು ಸಡಿಲವಾಗಿ ಮೇಲು ಸ್ಥರದಲ್ಲಿ ಹರಡಿ ಬೆಳೆಯುವ ಬೇರುಗಳಿಗೆ ಅನುಕೂಲವಾಗಲಿ ಎಂದು. ತೋಟಗಾರಿಕಾ ಬೆಳೆಗಳಲ್ಲಿ ಅಡಿಕೆ, ತೆಂಗಿನ ತೋಟಕ್ಕೆ ಮಣ್ಣು ಹಾಕುವುದರಿಂದ ಪ್ರಯೋಜನ ಇದೆ. ಆದರೆ ಹಾಕುವ ಮಣ್ಣು ಮಾತ್ರ ಸಾರದಿಂದ ಕೂಡಿರಬೇಕು. ಹೆಚ್ಚಿನವರು ಕೆಂಪು ಮಣ್ಣು ಹಾಕಬೇಕು ಎನ್ನುತ್ತಾರೆ. ಆದರೆ ಹಾಕಬೇಕಾದ ಮಣ್ಣು ಸಾರಯುಕ್ತ ಮಣ್ಣಾಗಿರಬೇಕು.
- ತೋಟಕ್ಕೆ ಹಾಕಬೇಕಾದ ಮಣ್ಣು ಯಾವಾಗಲೂ ಸಾವಯವ ವಸ್ತುಗಳನ್ನು ಹೊಂದಿದ ಮಣ್ಣಾಗಿರಬೇಕು.
- ಸಾವಯವ ವಸ್ತುಗಳನ್ನು ಹೊಂದಿದ ಮಣ್ಣು ಕೆಂಪು ಮಣ್ಣಾಗಿರುವುದಿಲ್ಲ.
- ಅದರ ಬಣ್ಣ ಮಸುಕಾಗಿರುತ್ತದೆ. ಸಾವಯವ ಸಮೃದ್ಧ ಮಣ್ಣು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.
- ಅಂತಹ ಮಣ್ಣಿನಲ್ಲಿ ಸಾವಯವ ಅಂಶ ಚೆನ್ನಾಗಿರುತ್ತದೆ.
- ಅದಕ್ಕೆ ಪೋಷಕಾಂಶಗಳನ್ನು ಚೆನ್ನಾಗಿ ಅರಗಿಸಿಕೊಳ್ಳುವ ಶಕ್ತಿ ಇರುತ್ತದೆ.
- ಇಂತಹ ಮಣ್ಣಿಗೆ ಹಾಕಿದ ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ, ಜೈವಿಕ ಗೊಬ್ಬರ ಎಲ್ಲವೂ ಸಸ್ಯಗಳಿಗೆ ಸಮರ್ಪಕವಾಗಿ ಲಭ್ಯವಾಗುತ್ತದೆ.
ಕೆಂಪು ಮಣ್ಣು ಏನು:
- ನಾವೆಲ್ಲಾ ತಿಳಿದುರುವಂತೆ ಕೆಂಪು ಮಣ್ಣು ನೋಡಲು ಚಂದ. ಇದು ಸಡಿಲ ಮಣ್ಣೂ ಆಗಿರುತ್ತದೆ.
- ಆದರೆ ಅದರಲ್ಲಿ ಪೋಷಕಾಂಶಗಳು ಸೇರಿರುವುದು ತುಂಬಾ ಕಡಿಮೆ ಎನ್ನಬಹುದು.
- ಕೆಂಪು ಮಣ್ಣು ಆದದ್ದು ಹೇಗೆ ಎಂಬುದನ್ನು ಪ್ರತೀಯೊಬ್ಬ ರೈತರೂ ತಿಳಿದುಕೊಳ್ಳಬೇಕು.
- ಅಗ್ನಿ ಶಿಲೆಗಳು ಹಾಗೂ ರೂಪಾಂತರ ಶಿಲೆಗಳು ಕರಗಿ ಕೆಂಪು ಮಣ್ಣು ನಿರ್ಮಾಣವಾಗಿವೆ.
- ಅದಕ್ಕೆ ಕೆಂಪು ಬಣ್ಣ ಬಂದುದು ಕಬ್ಬಿಣದ ಆಕ್ಸೈಡ್ ಗಳಿಂದ.
- ಎತ್ತರದ ಪ್ರದೇಶಗಳಲ್ಲಿ ಅಂದರೆ (ಗುಡ್ಡಗಳಲ್ಲಿ) ಸ್ವಲ್ಪ ಆಳಕ್ಕೆ ಇರುತ್ತವೆ.
- ಅದರ ಅಡಿಯಲ್ಲಿ ಕೆಂಪು ಮೆದು ಶಿಲೆಗಳು ಇರುತ್ತವೆ.
- ತಗ್ಗು ಪ್ರದೇಶದಲ್ಲಿ ಕೆಂಪು ಮಣ್ಣಿಗೆ ಸಾವಯವ ವಸ್ತುಗಳು ಸ್ವಲ್ಪ ಸ್ವಲ್ಪ ಸೇರಿ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.
- ತಗ್ಗು ಪ್ರದೇಶದ ಮಣ್ಣು ಹಾಕುವಾಗ ಅದನ್ನು ಸ್ವಲ್ಪ ಬಿಸಿ ಮಾಡಿ ಸುಡುಮಣ್ಣು ಮಾಡಿದರೆ ಒಳ್ಳೆಯದು.
ಎತ್ತರದ ಪ್ರದೇಶದ ಮಣ್ಣು ಹೆಚ್ಚು ಮರಳಿನಿಂದ ಕೂಡಿರುತ್ತದೆ. ಅದರಲ್ಲಿ ಸ್ವಲ್ಪವೂ ಸಾವಯವ ವಸ್ತುಗಳು ಇರುವುದಿಲ್ಲ ಇದರಲ್ಲಿ ಸಸ್ಯಗಳ ಬೇರುಗಳು ಚೆನ್ನಾಗಿ ಪಸರಿಸಿ ಬೆಳೆಯಲು ಅಗತ್ಯವಾದ ಸಾರಜನಕ, ರಂಜಕ ಮತ್ತು ಹ್ಯೂಮಸ್ ಗಳು ಇರುವುದಿಲ್ಲ. ಇದನ್ನು ಹಾಕಿದಾಗ ನೆಲ ಚೆನ್ನಾಗಿ ಕಾಣುತ್ತದೆಯೇ ಹೊರತು ಸಸ್ಯ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ.
- ಸುಣ್ಣ ಹಾಗೂ ಪೊಟ್ಯಾಶ್ ಅಂಶಗಳೂ ಇದರಲ್ಲಿ ಕಡಿಮೆ ಇರುತ್ತದೆ.
- ಸಾಮಾನ್ಯವಾಗಿ ಹೆಚ್ಚಿನ ಕಡೆ ಕಡು ಕೆಂಪು ಬಣ್ಣದ ಮಣ್ಣು ಇರುವುದಿಲ್ಲ.
- ಸ್ವಲ್ಪ ಹಳದಿ ಬಣ್ಣವೂ ಸೇರಿರುತ್ತದೆ.
- ಹಳದಿ ಬಣ್ಣ ಬರುವುದಕ್ಕೂ ಇನ್ನೊಂದು ಖನಿಜ ಮಿಶ್ರಣವಾಗಿರುವುದೇ ಕಾರಣ.
ಕೊಡಗು ಜಿಲ್ಲೆಯ ಕೆಲವು ಕಾಡಂಚಿನ ಭಾಗಗಳಲ್ಲಿ ಅರಣ್ಯ ಭೂಮಿಯಲ್ಲಿ ಕಂಡು ಬರುವ ಕೆಂಪು ಮಣ್ಣು, ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ ಕಂಡೂ ಬರುವ ಕೆಂಪು ಮಣ್ಣು ಇವು ಫಲವತ್ತತೆಯನ್ನು ಹೊಂದಿರುತ್ತವೆ. ಇದು ಅಲ್ಲಿಯ ಬೌಗೋಳಿಕತೆ.
ಯಾವ ಮಣ್ಣು ಉತ್ತಮ:
- ತೋಟಕ್ಕೆ ಮಣ್ಣು ಹಾಕುವುದಕ್ಕೆ ಸೂಕ್ತವಾದ ಮಣ್ಣು ,ಗಿಡ ಮರಗಳು ಚೆನ್ನಾಗಿ ಬೆಳೆದ ತಗ್ಗು ಪ್ರದೇಶದ ಮಣ್ಣು ಆಗಿರಬೇಕು.
- ಯಾವುದೇ ಗಿಡಗಂಟಿಗಳಿಲ್ಲದ ಬೋರಲು ಭೂಮಿಯ ಮಣ್ಣು ನೋಡಲು ಕೆಂಪು ಇದ್ದರೂ ಸಹ ಅದರಲ್ಲಿ ಸಾರಜನಕ,
- ಹ್ಯುಮಸ್ ಅಂಶ ಸ್ವಲ್ಪವೂ ಇರದ ಕಾರಣ ಇದನ್ನು ಹಾಕಿದರೆ ಫಲ ಕಡಿಮೆ.
- ಇದನ್ನು ಮತ್ತೆ ಸಾವಯವ ಸಮೃದ್ಧಗೊಳಿಸಲು ಸಾಕಷ್ಟು ಸಾವಯವ ಪದಾರ್ಥಗಳನ್ನು ಹಾಕಬೇಕು.
- ಕಣಿವೆಗಳಲ್ಲಿ ಸಂಗ್ರಹವಾದ ಮೇಲು ಮಣ್ಣನ್ನು ತೋಟಗಳಿಗೆ ಹಾಕಲು ಬಳಕೆ ಮಾಡಿದರೆ ಮೂಲ ಮಣ್ಣಿಗೆ ಸಾವಯವ, ಜೈವಿಕ ಸಾಮರ್ಥ್ಯ ಚೆನ್ನಾಗಿರುವ ಮಣ್ಣು ಸೇರಿಸಿದಂತಾಗುತ್ತದೆ.
- ನಾವು ಬೇಸಾಯ ಮಾಡುವ ಭೂಮಿಯ ಮಣ್ಣು ನೀರಾವರಿ, ಬೆಳೆ ಕ್ರಮ, ಮಳೆ, ಗೊಬ್ಬರಗಳಿಂದ ರೂಪಂತರ ಹೊಂದುತ್ತದೆ.
- ಅದರ ಸಾವಯವ ಅಂಶಗಳಲ್ಲಿಯೂ ಕೆಲವು ಬಂಧಗಳು ಏರ್ಪಟ್ಟಿರುತ್ತದೆ.
- ಇದನ್ನು ಸರಿಪಡಿಸಲು ಹೊಸ ಮಣ್ಣು ಅದರಲ್ಲೂ ಸಾವಯವ ಜೈವಿಕ ಸ್ಥಿತಿ ಚೆನ್ನಾಗಿರುವ ಯಾವುದೇ ಹಸ್ತಕ್ಷೇಪ ಇಲ್ಲದ ಮಣ್ಣು ಹಾಕಿದರೆ ಅದು ಹೆಪ್ಪು ಹಾಕಿದಂತೆ ಕೆಲಸ ಮಾಡುತ್ತದೆ.
ತೋಟಕ್ಕೆ ಹೇಗೆ ಮಣ್ಣು ಹಾಕಬೇಕು:
- ಅಡಿಕೆ, ತೆಂಗಿನ ತೋಟಕ್ಕೆ ಕನಿಷ್ಟ ಎರಡು ವರ್ಷಗಳಿಗೊಮ್ಮೆಯಾದರೂ ಮಣ್ಣು ಹಾಕುವುದು ಒಳ್ಳೆಯದು.
- ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಣ್ಣು ಹಾಕುವ ಕ್ರಮವನ್ನು ಅನುಸರಿಸಿದರೆ ಅದು ಕರಗಿ ಹೋದ ಮಣ್ಣನ್ನು ಟಾಪ್ ಅಪ್ ಮಾಡಿದಂತೆ ಆಗುತ್ತದೆ.
- ನಮ್ಮ ಹಿರಿಯರು ಮಣ್ಣು ಹಾಕುತ್ತಿದ್ದರು. ಬರೇ ಮಣ್ಣು ಮಾತ್ರವಲ್ಲ ನೆಲಕ್ಕೆ ಸ್ವಲ್ಪ ಸೊಪ್ಪು ಇತ್ಯಾದಿ ಹಾಕಿ ಅದರ ಮೇಲೆ ಮಣ್ಣು ಹಾಕುತ್ತಿದ್ದರು.
- ಹೀಗೆ ಮಾಡಲು ಸಾಧ್ಯವಾದರೆ ಇದೂ ಉತ್ತಮ ಕ್ರಮ.
- ಈಗ ಸೊಪ್ಪು ತರಲಿಕ್ಕೆ ಸೊಪ್ಪಿನ ಲಭ್ಯತೆ ಕಷ್ಟ.
- ಅದರ ಬದಲಿಗೆ ತೋಟದ ತ್ಯಾಜ್ಯಗಳಾದ ಅಡಿಕೆ, ತೆಂಗಿನ ಗರಿ ಇತ್ಯಾದಿಗಳನ್ನು ಹಾಕಿ ಅದರ ಮೇಲೆ ಹೆಚ್ಚೆಂದರೆ 4 ಇಂಚು ದಪ್ಪಕ್ಕೆ ಮಣ್ಣು ಹಾಕಬಹುದು.
- ಅದಕ್ಕಿಂತ ದಪ್ಪಕ್ಕೆ ಹಾಕಬಾರದು.
- ಮಣ್ಣು ಹಾಕುವಾಗ ಅಡಿಕೆ ಗಿಡ, ತೆಂಗಿನ ಗಿಡದ ಕಾಂಡ ಭಾಗ ಸುಮಾರು ½ ಅಡಿಯಷ್ಟಾದರೂ ಬಿಟ್ಟು ಉಳಿದ ಭಾಗಕ್ಕೆ ಮಣ್ಣು ಹಾಕಬಹುದು.
- ಕಾಂಡ ಭಾಗಕ್ಕೆ ತಾಗುವಂತೆ ಮಣ್ಣು ಹಾಕಬಾರದು.
- ಬುಡ ಭಾಗಕ್ಕೆ ತಾಗುವಂತೆ ಮಣ್ಣು ಹಾಕಿದರೆ ಬೇರು ಮೂಡುವ ಭಾಗಕ್ಕೆ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.
- ದಪ್ಪಕ್ಕೆ ಮಣ್ಣು ಹಾಕಬಾರದು. ಹೆಚ್ಚು ದಪ್ಪಕ್ಕೆ ಹಾಕಿದರೆ ಬೇರಿನ ಉಸಿರಾಟಕ್ಕೆ ತೊಂದರೆ ಆಗುತ್ತದೆ.
- ಹಿಂದೆ ನಮ್ಮ ಹಿರಿಯರು ಚಕ್ರ ಬುಟ್ಟಿ (ಬುಟ್ಟಿಯಲ್ಲಿ ತುಂಬಿದ ಮಣ್ಣನ್ನು ಸುತ್ತು ತಿರುಗುತ್ತಾ ಹೊಅರ ಚೆಲ್ಲುವುದು) ತರಕ ಹಾಕುತ್ತಿದ್ದ ಕಾರಣ ಇದೇ ಆಗಿದೆ.
- ಬರೆ ಬುಡಕ್ಕೆ ಮಾತ್ರವಲ್ಲ ಇಡೀ ತಲಕ್ಕೂ ಹಾಕಿದರೆ ಉತ್ತಮ.
- ಇದರಿಂದ ಸವಕಳಿಯಾದ ಮಣ್ಣನ್ನು ಮತ್ತೆ ಕೊಟ್ಟಂತಾಗುತ್ತದೆ.
- ತೇವಾಂಶ ಸಂರಕ್ಷಣೆಗೂ ಒಳ್ಳೆಯದು. ಮಣ್ಣಿನ ಸಡಿಲತನ ಹೆಚ್ಚಾಗಿ ಬೇರುಗಳ ಪ್ರಸಾರಕ್ಕೆ ಅನುಕೂಲವಾಗುತ್ತದೆ.
- ತೆಂಗು ಅಡಿಕೆ ಮರಗಳು ಏಕದಳ ಸಸ್ಯಗಳಾಗಿದ್ದು ಅವುಗಳ ಬೇರುಗಳು ಮಣ್ಣಿನ ಮೇಲುಸ್ತರದಲ್ಲೇ ಹೆಚ್ಚು ಹಬ್ಬುವ ಕಾರಣ ಇದಕ್ಕೆ ಅನುಕೂಲವಾಗುತ್ತದೆ.
- ಕೆಲವು ಕಡೆ ಬೆಳೆಗಾರರು ಉಳುಮೆ ಮಾಡುತ್ತಾರೆ. ಉಳುಮೆಗಿಂತ ಇದು ಉತ್ತಮ ಕ್ರಮ. ಉಳುಮೆ ಮಾಡಿದಂತೆ ಆಗುತ್ತದೆ.
- ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಎರಡು ಮರಗಳ ಮಧ್ಯಂತರದಲ್ಲಿ ಮಣ್ಣು ಏರಿ ಹಾಕುತ್ತಾರೆ.
- ಇದು ತೇವಾಂಶ ಸಂರಕ್ಷಣೆಗೆ ಮತ್ತು ಬೇರಿನ ಪ್ರಸಾರಕ್ಕೆ ಉತ್ತಮ.
ಗದ್ದೆಯ ಮಣ್ಣು, ಸಾವಯವ ವಸ್ತುಗಳು ಒಂದೆಡೆ ತಂಗಿ ಅಲ್ಲಿ ನಿರ್ಮಾಣವಾದ ಮೆಕ್ಕಲು ಮಣ್ಣು ಇಂತದ್ದನ್ನು ತೋಟಕ್ಕೆ ದಪ್ಪಕ್ಕೆ ಹರಡದಿದ್ದರೂ ತೆಳುವಾಗಿ ಹರಡಿದರೂ ಅದು ಸಾವಯವ ಸಮೃದ್ಧವಾಗಿರುವ ಕಾರಣ ಬೆಳೆಗೆ, ಮಣ್ಣಿಗೆ ತುಂಬಾ ಅನುಕೂಲವಾಗುತ್ತದೆ. ಇಂತಹ ಮಣ್ಣಿಗೆ ಒಂದು ಅಂಟು ಗುಣ ಇದ್ದು, ಮಣ್ಣು ಕೊಚ್ಚಣೆ ತಡೆಯಲು, ನೀರು ಹಿಡಿದಿಟ್ಟುಕೊಳ್ಳಲು ಅನುಕೂಲವಾಗಿರುತ್ತದೆ.
Good information sir