ಕಾಂಡ ಎಂದರೆ ಅದರಲ್ಲಿ ಎಲ್ಲಾ ಜೀವ ಸತ್ವಗಳೂ ಸರಬರಾಜು ಆಗುವ ಸ್ಥಳ. ಇಲ್ಲಿ ಯಾವುದೇ ಗಾಯವಾದರೂ ರಕ್ತ ಸ್ರವಿಸಿದಂತೆ ರಸಸ್ರಾವ ಆಗುತ್ತದೆ.ಗಾಯ ಅಲ್ಲದೆ ಕೆಲವು ರೋಗ ಕಾರಕಗಳ ಸೋಂಕಿನಿಂದಲೂ ರಸಸ್ರಾವ ಆಗುತ್ತದೆ. ಇದನ್ನು ಸ್ಟೆಮ್ ಬ್ಲೀಡಿಂಗ್ ಎನ್ನುತ್ತಾರೆ.
- ಇದೊಂದು ಪ್ರಮುಖ ರೋಗವಾಗಿದ್ದು, ತೆಂಗು ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಇದೆ.
- ಮೊದಲಾಗಿ ಇದು ಶ್ರೀಲಂಕಾ ದೇಶದಲ್ಲಿ ಕಂಡು ಬಂತು.
- ನಂತರ ನಮ್ಮ ದೇಶ ಮತ್ತು ತೆಂಗು ಬೆಳೆಯಲಾಗುವ ಇತರ ದೇಶಗಳಿಗೂ ಪ್ರಸಾರವಾಯಿತು.
ಹೇಗೆ ರೋಗ ಬರುತ್ತದೆ:
- ಕಾಂಡದಲ್ಲಿ ರಸ ಸೋರುವುದಕ್ಕೆ ಒಂದು ಶಿಲೀಂದ್ರ ಕಾರಣ.
- ಥೆಲವಿಯೋಪ್ಸಿಸ್ ಪ್ಯಾರಡಾಕ್ಸ್ ಎಂಬ ಈ ಶಿಲೀಂದ್ರ ತೆಂಗಿನ ಮರದ ಬಿರುಕುಗಳ ಮೂಲಕ ಒಳ ಸೇರುತ್ತದೆ.
- ಅತಿಯಾದ ಮಳೆಯಾದಾದ ಬುಡದಲ್ಲಿ ಹೆಚ್ಚು ಸಮಯ ನೀರು ನಿಂತ ಸ್ಥಿತಿ ಉಂಟಾದರೆ ಬರುತ್ತದೆ.
- ಬೇಸಿಗೆಯಲ್ಲಿ ನೀರಿನ ಒತ್ತಾಯ ಅದರೂ ಸಹ ಬರುತ್ತದೆ.
- ಅಸಮತೋಲನ ಪೋಷಕಾಂಶಗಳನ್ನು ಕೊಡುವುದರಿಂದ ನಿರೋಧಕ ಶಕ್ತಿ ಕಡಿಮೆಯಾಗಿಯೂ ಬರುತ್ತದೆ.
ರೋಗ ಬಂದ ಚಿನ್ಹೆ:
- ಪ್ರಾರಂಭದಲ್ಲಿ ಕಾಂಡದ ತೊಗಟೆಯ ಭಾಗದಿಂದ ದಟ್ಟ ಕೆಂಪು ಬಣ್ಣದ ದ್ರವ ಹೊರ ಸೂಸುತ್ತದೆ.
- ಅದರ ಜೊತೆಗೆ ಮೇಣವೂ ಸ್ರವಿಸುತ್ತದೆ. ಈ ದ್ರವ ಕೆಲವು ದಿನಗಳಲ್ಲಿ ಒಣಗಿ ಕಾಂಡದ ಮೇಲೆ ಕಪ್ಪು ಕಲೆ ಕಾಣಿಸುತ್ತದೆ.
- ಅದರ ತೊಗಟೇ ಭಾಗ ಸ್ವಲ್ಪ ಸ್ವಲ್ಪವೇ ಕೊತ್ತು ಕೆಳಕ್ಕೆ ಬೀಳುವುದೂ ಇದೆ. ತೊಗಟೆ ಬಾಗ ತನ್ನ ಸ್ವಾಭಾವಿಕ ಬಣ್ಣವನ್ನು ಕಳೆದುಕೊಂಡಿರುತ್ತದೆ.
- ಸ್ವಲ್ಪ ಸ್ವಲ್ಪವೇ ಅದು ಮೇಲ್ಭಾಗಕ್ಕೆ ಪ್ರಸಾರವಾಗಿ ಮರದ ಕಾಂಡದಲ್ಲಿ ಸ್ವಲ್ಪ ಮಟ್ಟಿನ ಬಿರುಕುಗಳೂ ಕಾಣಿಸುತ್ತದೆ.
- ಹೀಗಾದಾಗ ಮರದ ಶಿರ ಭಾಗದ ಗರಿಗಳು ಕಡಿಮೆಯಾಗುತ್ತದೆ. ಕೆಳಭಾಗದ ಗರಿಗಳು ಅಪ್ರಾಪ್ತ ಬೆಳವಣಿಗೆಯಲ್ಲಿರುವಾಗಲೇ ಒಣಗಿ ಕಾಂಡಕ್ಕೆ ಜೋತು ಬೀಳುತ್ತದೆ.
- ಗೊನೆಯಲ್ಲಿರುವ ಎಳೆ ಮಿಡಿ, ಎಳನೀರು ಉದುರಲಾರಂಭಿಸುತ್ತದೆ. ಶಿರ ಭಾಗದಲ್ಲಿ ಗರಿಗಳು ತುಂಬಾ ಕಡಿಮೆಯಾಗಿ ಮರ ಸಾಯುವ ಸ್ಥಿತಿ ಉಂಟಾಗುತ್ತದೆ.
- ಇಷ್ಟಾಗಲು ಸುಮಾರು 2-3 ವರ್ಷವೂ ತಗಲುತ್ತದೆ.
ಈ ರೋಗ ಉಲ್ಬಣತೆಯು ಜುಲೈ ನಿಂದ ನವೆಂಬರ್ ತನಕ ಹೆಚ್ಚು. ಉಳಿದ ಸಮಯದಲ್ಲಿ ಇಲ್ಲದಿಲ್ಲ.
ಹತೋಟಿ ಕ್ರಮ:
- ಈ ರೋಗದ ಪ್ರಾರಂಭದ ಚಿನ್ಹೆಗಳನ್ನು ಗುರುತಿಸಿದರೆ ಮಾತ್ರ ಹತೋಟಿ ಮಾಡಲು ಸಾಧ್ಯ.
- ತೀರಾ ತಡವಾದರೆ ಯಾವ ಉಪಚಾರವೂ ಪ್ರಯೋಜನೆಕ್ಕೆ ಬರಲಾರದು.
- ರಸ ಸ್ರಾವ ಉಂಟಾದ ಮರದ ಕಾಂಡವನ್ನು ಸಿಪ್ಪೆ ಭಾಗವನ್ನು ಕತ್ತಿ ಇಲ್ಲವೇ ಇನ್ಯಾವುದಾದರೂ ಸಾಧನದ ಮೂಲಕ ಕೆತ್ತಬೇಕು .
- ಕೆತ್ತಿ ತೆಗೆದ ಈ ಭಾಗಕ್ಕೆ 1 ಲೀ.ನೀರಿಗೆ 5 ಮಿಲಿ ಹೆಕ್ಸಾಕೊನೆಜಾಲ್ ಅನ್ನು ಲೇಪನ ಮಾಡಬೇಕು.
- ಕೆತ್ತಿ ತೆಗೆದ ತೊಗಟೆಯ ಭಾಗಗಳನ್ನು ಅಲ್ಲೇ ಬಿಸಾಡಬಾರದು. ಸ್ವಲ್ಪವೂ ಉಳಿಸದೇ ಅದನ್ನು ಸುಡಬೇಕು.
ಕೆತ್ತಿ ತೆಗೆಯುವಾಗ ಬುಡ ಭಾಗದಲಿ ಪ್ಲಾಸ್ಟಿಕ್ ಇಲ್ಲವೇ ಏನಾದರೂ ನೆಲಹಾಸು ಹಾಸಿ ಅದರಲ್ಲಿ ಸಿಪ್ಪೆ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು.
- ರೋಗ ಗ್ರಸ್ತ ಭಾಗದ ಮೇಲೆ ಟ್ರೈಕೋಡರ್ಮಾವನ್ನು ಲೇಪನ ಮಾಡಬೇಕು.
- ಮರಕ್ಕೆ ಶಿಫಾರಿತ ಪ್ರಮಾಣದ ಗೊಬ್ಬರ ಕೊಡುವುದೂ ಅಲ್ಲದೆ ಬೇವಿನ ಹಿಂಡಿಯನ್ನು ಹಾಕಬೇಕು.
- ಶಿಲೀಂದ್ರ ನಾಶಕ ಲೇಪಿಸಿದ ಭಾಗಕ್ಕೆ ಸಿಮೆಂಟ್ ಗಾರೆ ಲೇಪನ ಮಾಡಬಹುದು.
- ಗೇರು ಬೀಜದ ಎಣ್ಣೆಯನ್ನು ದಪ್ಪಕ್ಕೆ ಲೇಪನ ಮಾಡಿದರೆ ಒಳ್ಳೆಯದಾಗುತ್ತದೆ.
- ಉಪಯೋಗಿಸಿದ ಮಡ್ ಆಯಿಲ್ ಸಹ ಲೇಪನಕ್ಕೆ ಬಳಕೆ ಮಾಡಬಹುದು.
- ಇವು ಶಿಲೀಂದ್ರವನ್ನು ಉಸಿರುಕಟ್ಟಿಸುತ್ತದೆ.
- ಎಲ್ಲದಕ್ಕೂ ಮೊದಲಾಗಿ ಪ್ರಾರಂಭಿಕ ಹಂತದಲ್ಲಿ ಗುರುತಿಸಬೇಕು.
ತೆಂಗಿನ ಮರದ ಕಾಂಡಕ್ಕೆ ಗಾಯ ಮಾಡಬಾರದು. ಗಾಯ ಆದ ಭಾಗಕ್ಕೆ ಸಿಮೆಂಟ್ ಗಾರೆಯನ್ನು ಹಚ್ಚಬೇಕು. ಕೆಲವು ಬಾರಿ ತೆಂಗಿನ ಮರಕ್ಕೆ ಸಿಡಿಲು ಹೊಡೆದರೂ ಕಾಂದದಲ್ಲಿ ರಸ ಸ್ರಾವ ಉಂಟಾಗುತ್ತದೆ. ಕೆಂಪು ಮೂತಿ ಹುಳ ಬಾಧಿಸಿದಾಗಲೂ ಆಗುತ್ತದೆ. ಅದನ್ನು ಗಮನಿಸಬೇಕು.
ತೆಂಗಿನ ಮರಕ್ಕೆ ಒಂದೇ ಕಾಂಡ. ಒಂದೇ ಚಿಗುರುವ ಮೊಳಕೆ ಇರುವ ಕಾರಣ ಕಾಂಡದ ಯಾವ ಭಾಗಕ್ಕೂ ಗಾಯ ಆಗಬಾರದು. ಇದು ಕಾಂಡ ರಸಸ್ರಾವಕ್ಕೆ ಕಾರಣವಾಗುತ್ತದೆ.