ಒಂದುವರೆ ತಿಂಗಳ ಕಾಲ ಅಂತರ್ಜಲದೊಂದಿಗಿನ ಅತ್ಯಾಚಾರಕ್ಕೆ ಸ್ವಲ್ಪ ಬಿಡುವಾಗಿತ್ತು. ಆದರೂ ರಾತ್ರೆ ಹೊತ್ತು ಹಳ್ಳಿಯ ಮೂಲೆಗಳಲ್ಲಿ ವ್ಯವಹಾರ ನಡೆಯುತ್ತಿತ್ತು. ಈಗ ಮತ್ತೆ ಅತ್ಯಾಚಾರ ಪ್ರಾರಂಭವಾಗಿದೆ. ಹಳ್ಳಿಯ ಪೆಟ್ರೋಲ್ ಪಂಪುಗಳ ಮುಂದೆ ಮೂರು ನಾಲ್ಕು ಬೋರ್ ಲಾರಿಗಳು ಮೊಕ್ಕಾಂ ಹೂಡಿವೆ. ಒಂದು ತಿಂಗಳು ಅಂತರ್ಜಲಕ್ಕೆ ಬಿಡುಗಡೆ ಸಿಕ್ಕಿದೆ. ಹಾಗೆಯೇ ವರ್ಷದಲ್ಲಿ 2-3 ತಿಂಗಳು ಬಿಡುವು ಕೊಟ್ಟರೆ ಅದೆಷ್ಟೋ ಅಂತರ್ಜಲ ಶೋಷಣೆ ಕಡಿಮೆಯಾಗಬಹುದು.
ಅಂತರ್ಜಲದ ಕ್ಷೀಣಿಸುತ್ತಿದೆ:
- ನಮ್ಮಲ್ಲಿ ಒಂದಷ್ಟು ಜನ ಬೆಳೆಗಳ ಅವಶ್ಯಕತೆಗೆ ಬೇಕಾದಷ್ಟೇ ಬಳಸಲು ಅಂತರ್ಜಲವನ್ನು ಆವಲಂಭಿಸಿಲ್ಲ.
- ಅದನ್ನು ಬೇಕಾಬಿಟ್ಟಿ ಬಳಕೆ ಮಾಡಿ ಕೊನೆಗೆ ಯಾರಿಗೂ ಇಲ್ಲದಂತೆ ಮಾಡುವ ಶಪಥ ಮಾಡಿದ್ದಾರೆಯೋ ಎನ್ನಿಸುತ್ತಿದೆ.
- ಪ್ರಕೃತಿ ಮಾನವನ ಈ ವಿಕೃತ ಕೃತ್ಯಗಳಿಗೆ ಮುನಿದಿದೆ ಎಂಬುದು ಸ್ಪಷ್ಟವಾಗಿ ನಮಗೆ ಕಾಣುತ್ತಿದ್ದರೂ ನಾವು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
- ಮೊನ್ನೆ ಮಿತ್ರರೊಬ್ಬರ ಮನೆಯಲ್ಲಿ ಬೋರ್ ಹೊಡೆಸಿದ್ದರು. ಸುಮಾರು 550 ಅಡಿ ತನಕ ಒಂದು ತೊಟ್ಟೂ ನೀರು ಬರಲಿಲ್ಲವಂತೆ.
- ನಂತರ 600 ಅಡಿಗೆ ನೀರು ಬಂತು. ಸುಮಾರು 2 ಇಂಚು ಇರಬಹುದು ಎನ್ನುತ್ತಾರೆ.
- ಇದನ್ನು ಕೇಳಿದ ನನಗೆ ಎಲ್ಲಿವರೆಗೆ ತಲುಪಿತು ನಮ್ಮ ಅವಸ್ಥೆ ಎಂದು ಎಣಿಸಿತು.
- ಇಂದು ಅಧಿಕ ಮಳೆಯಾಗುವ ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಅಂತರ್ಜಲ ಮಟ್ಟ ತುಂಬಾ ಕೆಳಗೆ ಹೋಗಿದೆ.!
- 1994 ನೇ ಇಸವಿಯಲ್ಲಿ ನಾನೂ ಒಂದು ಬೋರ್ ಕೊರೆಸಿದ್ದೆ. ಸುಮಾರು 50 ಅಡಿಗೆ ನೀರು ಬಂದಿತ್ತು.
- ಒಂದು ಬೋರು ಹೊಡೆಸಲು ಮಾತ್ರ ಬಂಡವಾಳ ಇದ್ದುದು, ದೇವರ ದಯದಿಂದ ಅದರಲ್ಲಿ ನೀರು ಬಂತು.
- ಅದನ್ನು ನಾನು ಹಿತಮಿತವಾಗಿ ಬಳಕೆ ಮಾಡುವ ನಿರ್ಧಾರ ಮಾಡಿದ್ದೆ.
- ಹನಿ ನೀರಾವರಿ ಮಾಡಿ ಅದನ್ನು ಇಂದಿನ ತನಕವೂ ಬಳಕೆ ಮಾಡುತ್ತಿದ್ದೇನೆ.
- 2005 ನೇ ಇಸವಿಯಲ್ಲಿ ನಮ್ಮ ನೆರೆಯವರು ಒಂದು ಬೋರ್ ಕೊರೆಸಿದರು.ನೀರು ಸಿಕ್ಕಿತು.
ಬಹುಷಃ ಅಲ್ಲಿ ಮಳೆಗಾಲ ಹೊರತಾಗಿ ವಿದ್ಯುತ್ ಶಕ್ತಿ ಇದ್ದಾಗೆಲ್ಲಾ ಪಂಪು ನಿಂತೇ ಇಲ್ಲವೇನೋ. ಈಗ ಆ ಬಾವಿಯಲ್ಲೂ ನೀರು ತೀರಾ ಕಡಿಮೆಯಾಗಿದೆ. ಸಮೀಪದ ನನ್ನ ಬೋರ್ ನಲ್ಲೂ ಕಡಿಮೆಯಾಗಿದೆ.
- ಒಂದು ದೃಷ್ಟಿಯಲ್ಲಿ ಲಾಕ್ ಡೌನ್ ಜನರ ಅತಿರೇಕದ ಕಾರ್ಯಗಳ ತಡೆಗೆ ಅನುಕೂಲಕರವಾಗಿತ್ತು.
- ಪ್ರಾಣಿ, ಪಕ್ಷಿಗಳಿಗೆ. ಸ್ವಾತಂತ್ರ್ಯ ಸಿಕ್ಕಿತ್ತು. ಸಂಪನ್ಮೂಲಗಳ ಶೋಷಣೆ ಕಡಿಮೆಯಾಯಿತು. ಅದೇ ರೀತಿ ಅಂತರ್ಜಲಕ್ಕೂ.
- ಒಂದು ವೇಳೆ ಲಾಕ್ ಡೌನ್ ಹೇರದೇ ಇರುತ್ತಿದ್ದರೆ ಮನೆ ಹಿತ್ತಲು ಹೊಂದಿದವರೂ ಬೋರ್ ಕೊರೆಸಿ ನೀರು ಮಾರಾಟ ಮಾಡುವ ಸ್ಥಿತಿ ಉಂಟಾಗುತ್ತಿತ್ತು.
ನೀರು ಬೇಕು ಆದರೆ:
- ನೀರು ಬೆಳೆಗೆ ಬೇಕು. ಆದರೆ ಅದು ನಮ್ಮ ಸ್ವಯಾರ್ಜಿತ ಸ್ವತ್ತು ಅಲ್ಲ.
- ಇದನ್ನು ಮನಬಂದಂತೆ ಬಳಕೆ ಮಾಡುವುದು ಒಳ್ಳೆಯದಲ್ಲ.
- ಇದನ್ನು ನನ್ನಂತೆ ಒಬ್ಬರು ಇಬ್ಬರು ಮಾಡಿದರೆ ಸಾಲದು ಎಲ್ಲರೂ ಮಾಡಬೇಕು.
ಇದಕ್ಕಾಗಿ ಅಂತರ್ಜಲ ಬಳಕೆಗೆ ಬೇಸಿಗೆಯ ಫೆಬ್ರವರಿಯಿಂದ ಜೂನ್ ತನಕ ಲಾಕ್ ಡೌನ್ ಹೇರಿದರೆ ಬಹುಷ ನಮ್ಮ ಭೂಮಿಯಲ್ಲಿ ಅಂತರ್ಜಲ ಮಟ್ಟ ಸ್ವಲ್ಪವಾದರೂ ಉಳಿಯಬಹುದು.
ಕೊಳವೆ ಬಾವಿನೀರು- ದುರ್ಬಳಕೆ ಬೇಡ:
- ಒಂದು ಮರಕ್ಕೆ ದಿನಕ್ಕೆ ಎಷ್ಟು ಅಗತ್ಯವೋ ಆಷ್ಟು ನೀರನ್ನು ಬಳಕೆ ಮಾಡಿಕೊಂಡಿದ್ದರೆ , ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ.
- ಆದರೆ ನಾವು ಬೆಳೆಗಳಿಗೆ ಬೇಕಾಗುವುದಕ್ಕಿಂತ ಹತ್ತು ಪಟ್ಟು ನೀರನ್ನು ಕೊಟ್ಟು ಆದನ್ನು ಪೋಲು ಮಾಡುತ್ತಿದ್ದೇವೆ.
- ನೀರಿನ ಮಿತ ಬಳಕೆ ಮಾಡುವುದನ್ನು ಕಲಿಯಿರಿ. ಬೆಳೆಗಳಿಗೆ ಎಷ್ಟು ಬೇಕು ಅಷ್ಟೇ ನೀರನ್ನು ಕೊಡುವ ಅಭ್ಯಾಸ ಮಾಡಿಕೊಳ್ಳಿ.
- ಇದು ಬೆಳೆಗೂ ಒಳ್ಳೆಯದು, ಫಸಲಿಗೂ ಒಳ್ಳೆಯದು.
- ಅಧಿಕ ನೀರು ಕೊಡುವುದರ ಪರಿಣಾಮದಿಂದ ಫಲ ಹೆಚ್ಚುತ್ತದೆ ಎಂಬುದು ನಮ್ಮ ತಪ್ಪು ತಿಳುವಳಿಕೆ.
- ಮಿತ ನೀರಾವರಿಯಲ್ಲೇ ಫಸಲು ಹೆಚ್ಚು. ಸುಸ್ಥಿರ ಇಳುವರಿ ಮಿತ ನೀರಾವರಿಯಲ್ಲೇ ಸಿಗುವುದು.
- ಒಮ್ಮೆಯಾದರೂ ಹನಿ ನೀರಾವರಿಯ ಮೂಲಕ ಮಿತ ನೀರಾವರಿ ಮಾಡಿ ಬೆಳೆ ತೆಗೆಯುವ ರೈತರ ಹೊಲವನ್ನು ನೋಡಿ.
- ಮಣ್ಣು ಅಧಿಕ ನೀರು ಕುಡಿದರೆ ತನ್ನ ಜೈವಿಕ , ಬೌತಿಕ ಮತ್ತು ರಾಸಾಯನಿಕ ಗುಣವನ್ನು ಕಳೆದುಕೊಳ್ಳುತ್ತದೆ. ಇದನ್ನು ಸರಿಪಡಿಸಲು ತುಂಬಾ ಕಷ್ಟವಿದೆ.
ರೈತರೇ ನೀರು ನಮ್ಮ ಸ್ವಯಾರ್ಜಿತ ಸ್ವತ್ತು ಅಲ್ಲ. ಅದನ್ನು ನಾವು ಬಳಕೆ ಮಾಡಿ ನಮ್ಮ ಮಕ್ಕಳಿಗೂ ಉಳಿಸಬೇಕು. ಆದ ಕಾರಣ ಸಾಧ್ಯವಾದಷ್ಟು ಕೊಳವೆ ಬಾವಿ ನೀರನ್ನು ಮಿತ ಬಳಕೆ ಮಾಡಿ. ಹೆಚ್ಚು ಹೆಚ್ಚು ಕೊಳವೆ ಬಾವಿ ತೋಡಬೇಡಿ. ಕೊನೆಗೆ ಯಾವುದೂ ಇಲ್ಲದಂತಾದರೆ ನಾವೇ ಕಷ್ಟ ಅನುಭವಿಸಬೇಕಾಗುತ್ತದೆ.