ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ ಹೇಗೆ ?

ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ

ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ, ತುದಿ ಗಂಟು ಕಟ್ಟಿದಂತೆ ಅಗುವುದಕ್ಕೆ “ಬಂದ್ ರೋಗ” ಎನ್ನುತ್ತಾರೆ. ಇದು ರೋಗವಲ್ಲ ಬೇರು ಜಂತು ಹುಳ ಮುಖ್ಯ ಕಾರಣ. ಇದು ಬೇರನ್ನು ಬೆಳೆಯಲು ಬಿಡದೆ ಸಸ್ಯಕ್ಕೆ ಆಹಾರ ಸರಬರಾಜು ಕಡಿಮೆಯಾಗಿ ಅದರ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ. ಇದನ್ನು ರಾಸಾಯನಿಕವಾಗಿಯೂ, ಜೈವಿಕವಾಗಿಯೂ ಹತೋಟಿ ಮಾಡಬಹುದು.

 • ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಗಾರರ ತೋಟದಲ್ಲಿ ಮರಗಳ ಸುಳಿ ಭಾಗ ಕುಬ್ಜವಾಗುವುದು ಹೆಚ್ಚಾಗುತ್ತಿದೆ.
 • ಮಲೆನಾಡಿನ ಶಿವಮೊಗ್ಗ ಭಾಗದಲ್ಲಿ  ಇದು ಸುಮಾರು 30-40  ವರ್ಷದ ಹಿಂದೆಯೇ ಇತ್ತು. ಈಗ ಇದು ಎಲ್ಲಾ ಕಡೆ ವ್ಯಾಪಿಸಿದೆ.

ಲಕ್ಷಣಗಳು:

ಬಹುತೇಕ ಅಡಿಕೆ ಬೆಳೆಗಾರರ ತೋಟದಲ್ಲಿ 15-25 % ದಷ್ಟು ಅಡಿಕೆ ಮರ /ಸಸಿಗಳು ಸುಳಿ ಮುರುಟಿಕೊಂಡು ಅಲ್ಲಿಗೇ ಸುಳಿ ಬೆಳವಣಿಗೆ ಸ್ಥಗಿತವಾಗಿ  ರುವುದನ್ನು ಕಾಣಬಹುದು.

 • ಸುಳಿ ಭಾಗದಲ್ಲಿ  ಮೂಡುವ ಗರಿಯ ಮೊಗ್ಗು ಒಂದರಿಂದ ಒಂದು ಸಧೃಢವಾಗಿ ಬೆಳೆಯಬೇಕು.
 • ಒಂದು ಸುಳಿಯ ಬೆಳವಣಿಗೆ ಕುಂಠಿತವಾದರೆ ನಂತರದ ಸುಳಿ ಸಹ ಕುಂಠಿತವಾಗಿಯೇ ಬರುತ್ತದೆ.
 • ಕೊನೆಗೆ ಸುಳಿಯ ಗರಿಗಳೆಲ್ಲಾ ಕುಬ್ಜವಾಗಿ ಮರದ ಶಿರಭಾಗ ಕಿರಿದಾಗುತ್ತದೆ.
 • ಸುಳಿಯಿಂದ ಮೂಡುವ ಗರಿ ಮೊಗ್ಗು ಆರೋಗ್ಯಕರವಾಗಿದ್ದರೆ ಅದು ಸುಮಾರು 5-6  ಅಡಿ ಉದ್ದ ಮತ್ತು 2.5 ರಿಂದ 3 ಅಡಿ ಅಗಲಕ್ಕೆ ಬೆಳೆಯುತ್ತದೆ.
 • ಅದರ ಗರಿ ಕಡ್ಡಿಗಳು ಬಿಡಿಸಿಕೊಂಡಿರುತ್ತವೆ. ಒಂದು ವೇಳೆ ಅದು ಮುರುಟಿದರೆ ಅಲ್ಲಿ ಗರಿಗಳು ಪರಸ್ಪರ ಅಂಟಿಕೊಂಡು ಇರುತ್ತದೆ.
 • ಅದಕ್ಕೆ ನೈಜ ಗರಿಯ ಗಡಸುತನ ಇರುವುದಿಲ್ಲ. ಗರಿಯ ಉದ್ದ ಸುಮಾರು 1 ಅಡಿಯಿಂದ 2 ಅಡಿ ತನಕ ಮಾತ್ರ ಬೆಳೆಯುವುದನ್ನು ಕಾಣಬಹುದು.
 • ಎಲೆ ಭಾಗ ಬೆಳೆದು ಉದುರಿದ ನಂತರ ಮರದ ಕಾಂಡದ ಗಂಟುಗಳ ಅಂತರ ಕಡಿಮೆಯಾಗುವುದು ಕಾಣುತ್ತದೆ.
 • ಸುಳಿ ಮುರುಟಿ ಬೆಳೆದ ಭಾಗಕ್ಕೆ ರಸ ಹೀರುವ ತಿಗಣೆಗಳು ಪ್ರವೇಶವಾಗುತ್ತದೆ. ಅದನ್ನು ಭಕ್ಷಿಸಲು  ಇರುವೆಗಳು ಬರುತ್ತವೆ.
 • ಅದರೊಂದಿಗೆ  ಬಿಳಿ ಹಿಟ್ಟು ತಿಗಣೆಯೂ ಸೇರಿಕೊಳ್ಳುತ್ತದೆ. ಇದರಿಂದಾಗಾಗಿ ಸುಳಿ ಮುರುಟುವಿಕೆಗೆ ಮತ್ತಷ್ಟು ಅನುಕೂಲವಾಗುತ್ತದೆ.
 • ನಂತರ ಬರುವ ಗರಿಗಳೆಲ್ಲಾ ಕುಬ್ಜವಾಗುತ್ತಾ ಹೋಗಿ ಅದು ಫಲ ಕೊಡಲಾರದು.
 • ಇಂಥಃ ನ್ಯೂನತೆಗೆ ಹಿಡಿಮುಂಡಿಗೆಬಂದ್ ರೋಗ ಎಂಬ ಹೆಸರನ್ನು ಇಡಲಾಗಿದೆ.

ನೈಜ ಕಾರಣ ಏನು?

 • ಸೂಕ್ತ ಬಸಿಗಾಲುವೆ ಇಲ್ಲದಿರುವಿಕೆ, ಮಣ್ಣಿನ ಫಲವತ್ತತೆ ಅಂಶ ನ್ಯೂನ್ಯತೆಗೆ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.
 • ಬೇರಿನ ಬೆಳವಣಿಗೆಗೆ ಸಮರ್ಪಕ ಪರಿಸ್ಥಿಯನ್ನು ಒದಗಿಸಿಕೊಟ್ಟು  ಮಣ್ಣು ಪರೀಕ್ಷೆಯಾಧಾರದಲ್ಲಿ ಗೊಬ್ಬರ ಕೊಡಬೇಕು.
 • ಶೇ. 1 ಸತುವನ್ನು ಸಿಂಪರಣೆ ಮಾಡುವುದರಿಂದ ತಾತ್ಕಾಲಿಕ ಪರಿಹಾರ ಇದೆ ಎನ್ನುತ್ತಾರೆ.
 • ಆದರೆ ಇದಕ್ಕೆ ಶಾಶ್ವತ ಪರಿಹಾರ ಹೇಳಲಾಗುತ್ತಿಲ್ಲ.
 • ಇದು ಅಡಿಕೆ ಬೆಳೆಗಾರರ ಗಂಭೀರ ಸಮಸ್ಯೆಯಾಗಿದ್ದು ಗಣನೀಯ ನಷ್ಟ ಉಂಟುಮಾಡುವ ನ್ಯೂನ್ಯತೆಯಾದ ಕಾರಣ ರೈತರೂ ದಿಶೆಯಲ್ಲಿ ಪರೀಕ್ಷೆಗಳನ್ನು ಕೈಗೊಳ್ಳುತ್ತಲೇ ಇದ್ದಾರೆ.

ಗರಿಗಳು ಈ ರೀತಿ ಆಗುವುದೂ ಒಂದು ಬಂದ್ ರೋಗ

ಈ ಸಮಸ್ಯೆಯ ಬಗ್ಗೆ ಕೆಲವು ರೈತರು ಒಂದಷ್ಟು ಪ್ರಯೋಗಗಳನ್ನು  ಕೈಗೊಂಡು ಅದರಲ್ಲಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ.ಅದು ರೋಗವಲ್ಲ. ಅದು ಬೇರು ಜಂತು ಹುಳದ ( ನಮಟೋಡು) ಕಾರಣದಿಂದ ಉಂಟಾಗುವ ಸಮಸ್ಯೆ ಎಂಬ  ಒಂದು ತೀರ್ಮಾನಕ್ಕೆ  ಬಂದಿದ್ದಾರೆ.

 • ಇಂತಹ ತೊಂದರೆಗೆ ಒಳಗಾದ ಅಡಿಕೆ ಮರದ ಬೇರುಗಳನ್ನು  ಪರಿಶೀಲಿಸಿದಾಗ ಅದರಲ್ಲಿ ಆರೋಗ್ಯವಂತ ಬೇರಿನ ಲಕ್ಷಣ ಇರುವುದಿಲ್ಲ.
 • ಬೇರಿನ ಒಳ ಭಾಗ ಮತ್ತು ಹೊರಭಾಗದಲ್ಲಿ ಗಾಯಗಳಿರುವುದು ಕಂಡು ಬಂದಿರುತ್ತದೆ. 
 • ಅಡಿಕೆಯ ಆರೋಗ್ಯವಂತ ಬೇರುಗಳು ಮಾಸಲು ಬಿಳಿ ಬಣ್ಣದಲ್ಲಿರುತ್ತವೆ.
 • ಹಿಡಿ ಮುಂಡಿಗೆ ರೋಗ ತಗಲಿದ ಮರದ ಬೇರುಗಳ ಬೆಳೆವಣಿಗೆಯೂ ಸಾಕಷ್ಟು ಇರುವುದಿಲ್ಲ.
 • ಬೇರುಗಳು ಕಪ್ಪಗಾಗಿ ಕೊಳೆತಂತೆ ಇರುತ್ತವೆ. ಅದರಲ್ಲಿ ಕವಲು ಬೇರುಗಳ ಸಂಖ್ಯೆ  ತುಂಬಾ ಕಡಿಮೆ  ಇರುತ್ತದೆ.
 • ಅಡಿಕೆಯಲ್ಲಿ ಪರಾವಲಂಬಿ ಬೇರು ಜಂತು ಹುಳದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಈಗಿನ ಪ್ರಚಲಿತ ವಿದ್ಯಮಾನ.
 • ಜಂತು ಹುಳುಗಳಲ್ಲಿ ಬೇರೆ ಬೇರೆ ನಮೂನೆಯ  ಹುಳುಗಳಿದ್ದು ಬೇರು ಗಂಟು ನಮಟೋಡು,(Root knot nematodes) ಬೇರು ತೂತು ಮಾಡುವ lesion nematodes ಇವು ಅಡಿಕೆಗೆ ಹೆಚ್ಚಿನ ಹಾನಿ ಮಾಡುತ್ತವೆ.

ಪರಿಹಾರ:

 • ತೀರ್ಥಹಳ್ಳಿ, ಸಾಗರ ಕಡೆಯ ಕೆಲವು ರೈತರು ಸಮಸ್ಯೆಗೆ ಒಂದು ರಸ ಹೀರುವ ತಿಗಣೆಯೇ ಕಾರಣ ಎಂದು ಸುಳಿ ಭಾಗಕ್ಕೆ  ಮೋನೋಕ್ರೋಟೋಫೋಸ್ ಕಿಟನಾಶಕ ಸಿಂಪರಣೆ ಮಾಡುತ್ತಾರೆ.
 • ಕೆಲವರು ಬುಡ ಭಾಗಕ್ಕೆ  ಥಿಮೇಟ್ ಹಾಕುವುದೂ ಇದೆ.
 • ಇಲ್ಲಿಯೂ ಇದು ಸ್ವಲ್ಪ ಮಟ್ಟಿಗೆ ಹತೋಟಿ ಬಂದಿದೆ ಎಂಬುದಾಗಿ ರೈತರು ಹೇಳುತ್ತಾರೆ.
 • ಆದರೆ ಅದು ತಾತ್ಕಾಲಿಕ ಪರಿಹಾರವಾಗಿದ್ದು, ಇದರ ಬಳಕೆಯಿಂದ ಕೆಲವು ಇತರ ತೊಂದರೆಗಳೂ ಉಂಟಾಗುತ್ತವೆ.

ಬೇರು ಕೊರೆಯುವ ನಮಟೋಡು ( ಜಂತು ಹುಳು) ನಿಯಂತ್ರಣಕ್ಕೆ ಜೈವಿಕ ಪರಿಹಾರದಲ್ಲಿ  ಇರುವ ಕಾರಣ ಕೆಲವು ರೈತರು ಈ ಜೀವಾಣುವನ್ನು ಬಳಸಿ ಅದನ್ನು ನಿಯಂತ್ರಣ ಮಾಡಲು ಮುಂದಾದರು. ಪೆಸಿಲೋಮೈಸಿಸ್ Paecilomyces lilacinus ಎಂಬ ಜೀವಾಣು ಬೇರು ಸಂಬಂಧಿತ ಪರಾವಲಂಬಿ ಕೀಟಗಳ ನಿವಾರಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ.  ಪೆಸಿಲೋಮೈಸಿಸ್ ಲಿಲಾಸಿನಸ್ ಎಂಬ ಜೀವಾಣು ಮಿಶ್ರಣವನ್ನು ನೆಲಕ್ಕೆ ಸಿಂಪಡಿಸುವುದರಿಂದ  ಮಣ್ಣಿನ ಮೂಲಕ ಅದು ಬೇರು ಸಮೂಹಕ್ಕೆ ಹೋಗಿ ಅಲ್ಲಿ ನಮಟೋಡುಗಳ ಮೇಲೆ ಧಾಳಿ ಮಾಡುತ್ತದೆ. ಅದನ್ನು ಹತ್ತಿಕ್ಕುತ್ತದೆ.

 • ಬೇರುಗಳು ಸರಾಗವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ.
 • ಹೀಗೆ ಸಿಂಪಡಿಸಿದ 1 ತಿಂಗಳ ನಂತರ ಯಾವ ಗಿಡದಲ್ಲಿ  ಸುಳಿಗಳು ಮುರುಟಿಕೊಂಡು ಇದ್ದವೋ ಅಂಥ ಸಸ್ಯಗಳ ಸುಳಿಗಳು ಸಹಜ ರೀತಿಯಲ್ಲಿ ಬೆಳೆಯಲಾರಂಭಿಸುತ್ತವೆ.
 • ಇನ್ನೇನು ಇದನ್ನು  ತೆಗೆದು ಬೇರೆ ಸಸಿ ನೆಡುವುದೇ ಎಂಬ ತೀರ್ಮಾನಕ್ಕೆ ಬಂದಿದ್ದ ಸಸಿಗಳೂ ಸಹ ಹೊಸ ಸುಳಿಯನ್ನು ಆರೋಗ್ಯಕರವಾಗಿ ಮೂಡಿದ್ದನ್ನು ಗುರುತಿಸಲಾಗಿದೆ.

ಇದರಿಂದ ಅಡಿಕೆ ಸಸಿ ಮರಗಳಿಗೆ ಹಿಡಿಮುಂಡಿಗೆಬಂದ್ ಎಂಬ ನ್ಯೂನ್ಯತೆಯು ಯಾವುದೇ ಪೋಷಕಾಂಶದ ವೆತ್ಯಯದಿಂದ ಉಂಟಾಗುವುದಲ್ಲ. ಅದಕ್ಕೆ  ಶಾಶ್ವತ ಪರಿಹಾರ ಇಲ್ಲ ಎಂದಿಲ್ಲ. ಇದು ನಮಟೋಡುಗಳನ್ನು ನಾಶಮಾಡಿ, ಬೇರು ಬೆಳವಣಿಗೆಗೆ ಅನುಕೂಲ ಮಾಡಿಕೊಟ್ಟರೆ ಇದು ಸರಿಯಾಗುತ್ತದೆ. ಜೈವಿಕ ವಿಧಾನ ಯಾವುದೇ ವಿಷ ರಾಸಾಯನಿಕ ವಿಧಾನವಾಗಿರದೆ ಯಾರಿಗೂ ಯಾವುದೇ ಹಾನಿ ಇಲ್ಲ. ಜೀವಾಣುಗಳು ಬೇರು ವ್ಯೂಹವನ್ನು ಹಿಂಡುವ ನಮಟೋಡುಗಳಿಗೆ  ಪರಾವಲಂಬಿಯಾಗಿ ಬೆಳೆದು ಅದನ್ನು ನಾಶ ಮಾಡುತ್ತದೆ.

 

Leave a Reply

Your email address will not be published. Required fields are marked *

error: Content is protected !!