ಅಡಿಕೆ ಮರದ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಮಿಡಿಗಳೂ ಕಾಯಿ ಕಚ್ಚಿಕೊಳ್ಳುವುದಿಲ್ಲ. ಸ್ವಲ್ಪ ಉದುರುತ್ತವೆ. ಹೆಚ್ಚಿನವು ಉಳಿಯುತ್ತದೆ. ಎಲ್ಲವೂ ಉದುರಿದರೆ , ಲೆಕ್ಕಕ್ಕಿಂತ ಹೆಚ್ಚು ಉದುರಿದರೆ ಆಗ ತಲೆ ಬಿಸಿ ಮಾಡುವ ಬದಲಿಗೆ ಕೆಲವು ನಿರ್ವಹಣೆ ಮಾಡಿ ಉಳಿಸುವ ಪ್ರಯತ್ನ ಮಾಡಬೇಕು.
- ಅಡಿಕೆ ಮರದ ಹೂ ಗೊಂಚಲಿನಲ್ಲಿ ಅಕ್ಕಿಯ ತರಹ ಇರುವಂತದ್ದು, ಗಂಡು ಹೂವು.
- ಕಡಲೆ ಗಾತ್ರದ ತರಹ ಇರುವಂತದ್ದು ಹೆಣ್ಣು ಹೂವು.
- ಹೂ ಗೊಂಚಲು ಅರಳಿದ ತಕ್ಷಣದಿಂದಲೇ ಗಂಡು ಹೂವು ಅರಳಲಾರಂಭಿಸುತ್ತದೆ.
- ಅದು ಸುಮಾರು 24 ದಿನದ ತನಕವೂ ಮುಂದುವರಿಯುತ್ತದೆ.
- ಅದೆಲ್ಲಾ ಉದುರಿದ ನಂತರ ಹೆಣ್ಣು ಹೂವು ಅರಳುತ್ತದೆ.
- ಹೆಣ್ಣು ಹೂ ಅರಳಿದಾಗ ಅದಕ್ಕೆ ಗಂಡು ಹೂವಿನ ಪರಾಗ ಕಣಗಳು ದೊರೆಯಬೇಕು.
- ಅದು ಸಕಾಲಕ್ಕೆ ಸರಿಯಾಗಿ ದೊರೆತರೆ ಪರಾಗ ಸ್ಪರ್ಷ ಸರಿಯಾಗಿ ನಡೆದು ಕಾಯಿ ಕಚ್ಚಿಕೊಳ್ಳುತ್ತದೆ.
- ಪರಾಗ ಕಣಗಳು ಗಾಳಿಯಲ್ಲಿ ಪ್ರಸಾರವಾಗುತ್ತದೆ. ಪರಾಗ ಸ್ಪರ್ಷ ಮಾಡುವ ಹಲವು ಕೀಟಗಳೂ ಇವೆ.
ಯಾಕೆ ನಳ್ಳಿ ಉದುರುತ್ತದೆ:
- ಬೇಸಿಗೆಯಲ್ಲಿ ನಳ್ಳಿ ಉದುರುವ ಸಮಸ್ಯೆಗೆ ಒಂದು ಕಾರಣ ಸಿಂಗಾರ ತಿನ್ನುವ ಕೀಟ.
- ಕೊಲೆಟ್ರಾಟ್ರೈಕಂ ಶಿಲೀಂದ ಬಾಧೆಯಿಂದ ಸಿಂಗಾರದಲ್ಲಿ ಮಿಡಿಗಳು ಉದುರುತ್ತದೆ.
- ಬೇಸಿಗೆಯಲ್ಲಿ ಶಿಲೀಂದ್ರ ಬಾಧೆಯ ಸಾಧ್ಯತೆ ತುಂಬಾ ಕಡಿಮೆ ಇದ್ದು, ಅತಿಯಾಗಿ ನೀರು ಉಣಿಸುವ ಸ್ಥಳಗಳಲ್ಲಿ ಈ ಸಾಧ್ಯತೆ ಇದೆ.
- ಸಮರ್ಪಕ ಪೋಷಕಾಂಶಗಳ ಕೊರತೆಯಿಂದಲೂ ನಳ್ಳಿ ಉದುರುವ ಸಮಸ್ಯೆ ಉಂಟಾಗುತ್ತದೆ.
- ಹೂ ಬಿಡುವ ಸಮಯದಲ್ಲಿ ಅಧಿಕ ಪೊಷಕಾಂಶಗಳ ಅವಶ್ಯಕ. ಕೊರತೆ ಉಂಟಾದರೆ ನಳ್ಳಿ ಉದುರುವ ಸಮಸ್ಯೆ ಉಂಟಾಗುತ್ತದೆ.
- ಹೂಗೊಂಚಲಿನಲ್ಲಿ ಹೆಣ್ಣು ಹೂವುಗಳು ಪರಾಗ ಸ್ವೀಕರಿಸುವ ಸಮಯದಲ್ಲಿ ಸಾಕಷ್ಟು ಪರಾಗ ಕಣಗಳು ಗಾಳಿಯ ಮೂಲಕ ಲಭ್ಯವಾಗದೇ ಇದ್ದರೂ ಸಹ ಪರಾಗ ಸ್ಪರ್ಶ ಆಗದೆ ಮಿಡಿ ಉದುರುತ್ತದೆ.
- ಪರಾಗ ಕಣಗಳ ಪಕ್ವತೆಯೂ ಸಹ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಪರಿಹಾರಗಳು:
- ಸಿಂಗಾರ ತಿನ್ನುವ ಹುಳದ ಬಾಧೆ ನಿವಾರಣೆಗೆ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಒಂದು ಬಾರಿ ಕೀಟ ನಾಶಕ ಸಿಂಪರಣೆ ಮಾಡಬೇಕು.
- ಕ್ಲೋರೋ ಫೆರಿಫೋಸ್, ಡೈಮಿಥೋಯೇಟ್, ಎಕಾಲೆಕ್ಸ್ ಮುಂತಾದ ಕೀಟ ನಾಶಕಗಳನ್ನು ಬಳಕೆ ಮಾಡಬಹುದು.
- ಅಂತರ್ ವ್ಯಾಪೀ ಕೀಟನಾಶಕ ಬಳಸುವವರು ಒಂದನ್ನೇ ಹೆಚ್ಚು ಬಾರಿ ಬಳಕೆ ಮಾಡಿದರೆ ಕೀಟಗಳಿಗೆ ನಿರೋಧಕ ಶಕ್ತಿ ಬರುತ್ತದೆ.
- ಕೀಟ ನಾಶಕ ಬಳಕೆ ಮಾಡಲು ಇಷ್ಟ ಇಲ್ಲದವರು ಮರದ ಹೂಗೊಂಚಲಿಗೆ ಬೇವು ಅಥವಾ ಹೊಂಗೆ ಸೋಪಿನ ಕೀಟ ನಾಶಕವನ್ನು ಸಿಂಪಡಿಸಬಹುದು.
- ಇದಲ್ಲದೆ ಅಡಿಕೆ ಮರದ ಬುಡ ಭಾಗಕ್ಕೆ ಬೆವೇರಿಯಾ ಬಾಸಿಯಾನಾ ಜೈವಿಕ ಕೀಟನಾಶಕವನ್ನು ಬಳಕೆ ಮಾಡಬೇಕು.
- ಶಿಲೀಂದ್ರ ಬಾಧೆ ಇದ್ದಲ್ಲಿ ಇದರ ನಿಯಂತ್ರಣಕ್ಕೆ ಸಿಂಗಾರಕೆ ಸಾಪ್ (SAFF)ಶಿಲೀಂದ್ರ ನಾಶಕ (Carbendazim 12% +Mancozeb 63%) ಅಥವಾ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು ಸಿಂಪಡಿಸಬೇಕು.
- ಇದನ್ನು ಕೀಟ ನಾಶಕದ ಜೊತೆಗೆ ಮಿಶ್ರಣ ಮಾಡಿದರೆ ಒಂದರ ಫಲಿತಾಂಶ ಕಡಿಮೆಯಾಗುತ್ತದೆ.
- ಪ್ಲಾನೋಫಿಕ್ಸ್ (Planofix) ಎಂಬ ಬೆಳವಣಿಗೆ ಪ್ರಚೋದಕ (1 ಮಿಲಿ)ವನ್ನು ಶಿಲೀಂದ್ರ ನಾಶಕ ಅಥವಾ ಕೀಟನಾಶಕ ಅಥವಾ ಪೋಷಕಾಂಶಗಳ ಜೊತೆಗೆ ಮಿಶ್ರಣ ಮಾಡಿದರೆ ಮಿಡಿಗೆ ಶಕ್ತಿ ಬರುತ್ತದೆ.
ಪೋಷಕಾಂಶಗಳಿಂದ ನಿರ್ವಹಣೆ:
- ಸಿಂಗಾರ ಬಿಡುವ ಸಮಯದಲ್ಲಿ ಸಾರಜನಕ + ರಂಜಕ + ಪೊಟ್ಯಾಶಿಯಂ ಉಳ್ಳ ಪೋಷಕಾಂಶಗಳನ್ನು ಕೊಡಬೇಕು.
- 10 ಕಿಲೋ ಸುಫಲಾ ಗೊಬ್ಬರವನ್ನು ದ್ರವೀಕರಿಸಿ ಬುಡ ಭಾಗಕ್ಕೆ ಪ್ರತೀ ಮರಕ್ಕೆ 2 ಲೀ. ನಂತೆ ನೀರಾವರಿ ಮಾಡಿದ ನಂತರ ಪ್ರತೀ ತಿಂಗಳಿಗೊಮ್ಮೆ ಕೊಡುವುದರಿಂದ ಪೊಷಕಾಂಶದ ತೃಷೆ ಕಡಿಮೆಯಾಗುತ್ತದೆ.
- ಹೂ ಬಿಡುವ ಸಮಯದಲ್ಲಿ ಅಡಿಕೆಗೆ ಸೂಕ್ಷ್ಮ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ.
- ಗೊಬ್ಬರದ ಜೊತೆ ಪ್ರತೀ ಸಸಿಗೆ 1 ಗ್ರಾಂ ಪ್ರಮಾಣದಲ್ಲಿ ಚಿಲೇಟೆಡ್ ಮೈಕ್ರೋ ನ್ಯೂಟ್ರಿಯೆಂಟ್ ಮಿಕ್ಸ್ ಅನ್ನು ಸೇರಿಸಿ ಕೊಡುವುದು ಫಲಕಾರಿ.
- ಬೋರಾನ್ ಕೊರತೆಯಿಂದ ಹೂ ಗೊಂಚಲಿನ ಪರಾಗ ಕಣಗಳು ವೀಕ್ ಆಗಬಹುದು.
- ಆಗುವ ಸಾಧ್ಯತೆ ಇದ್ದು, ಪ್ರತೀ ಮರಕ್ಕೆ ತಿಂಗಳಿಗೆ 1 ಗ್ರಾಂ ಪ್ರಮಾಣದಲ್ಲಿ ಬೋರಾನ್ 20% ವನ್ನು ಪೊಷಕಾಂಶದ ಜೊತೆಗೆ ಸೇರಿಸಿ ಕೊಡಬೇಕು.
- ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಹನಿ ನೀರಾವರಿಯ ಮೂಲಕ ಕೊಡುವವರು ಪ್ರತೀ ವಾರಕೊಮ್ಮೆ 12:61:0 13:0:45 ಈ ಪೋಷಕಗಳನ್ನು ಬದಲಿಸಿ ಬದಲಿಸಿ ಕೊಡಬೇಕು.
- ಅದರ ಜೊತೆಗೆ ಸೂಕ್ಷ್ಮ ಪೋಷಾಂಶ ಮತ್ತು ಬೋರಾನ್ ಸೇರಿಸುವುದು ಅಗತ್ಯ.
- ಈ ಸಮಯದಲ್ಲಿ ಅಂದರೆ 2 -3 ಹೂ ಗೊಂಚಲು ಇರುವಾಗ ಸಿಂಗಾರಕ್ಕೆ 19:19:19 ಪೋಷಕಾಂಶ 1 ಕಿಲೊ ಮತ್ತು 200 ಗ್ರಾಂ ಸೂಕ್ಷ್ಮ ಪೋಷಕಾಂಶ ಮತ್ತು ಬೋರಾನ್ 100 ಗ್ರಾಂ ಅನ್ನು 200 ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ.
ಅಡಿಕೆ ತೆಗೆಯುವಾಗ ಮರದಲ್ಲಿ ಉಳಿದ ಒಣಗಿದ ಹೂ ಗೋಚಲು ಮತ್ತು ಹಾನಿಯಾದ ಹೊಸ ಹೂ ಗೊಂಚಲುಗಳನ್ನು ಪೂರ್ತಿ ತೆಗೆದು ಸ್ವಚ್ಚ ಮಾಡುವುದರಿಂದ ಸಿಂಗಾರ ಒಣಗುವಿಕೆ ಮತ್ತು ಮಿಡಿ ಉದುರುವಿಕೆ ತುಂಬಾ ಕಡಿಮೆಯಾಗುತ್ತದೆ. ಮರದ ಆರೋಗ್ಯದ ಮೇಲೆ ಹೂಗೊಂಚಲಿನಲ್ಲಿ ಮಿಡಿ ಉಳಿಯುವಿಕೆ ನಿಂತಿರುತ್ತದೆ. ಅದನ್ನು ಮೊದಲು ಸರಿಮಾಡಿಕೊಳ್ಳಬೇಕು.
Excellent post with details. Thank you.