ಹಲಸಿನ ಮರದಲ್ಲಿ ಮಿಡಿ ಕಾಯಿಗಳು ಬಿಡಲು ಪ್ರಾರಂಭವಾಗಿವೆ. ಇನ್ನು ಬರುವ ಚಳಿ, ಒಣ ಹವೆಯಿಂದ ಇನ್ನೂ ಸ್ವಲ್ಪ ಕಾಯಿ ಬಿಡಬಹುದು. ಬಿಟ್ಟ ಎಲ್ಲಾ ಕಾಯಿಗಳನ್ನೂ ಉಳಿಸಬೇಡಿ. ಒಂದು ಮರಕ್ಕೆ ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಕಾಯಿ ಉಳಿಸಿಕೊಂಡರೆ ಗುಣಮಟ್ಟದ ಹಲಸಿನ ಕಾಯಿ ಪಡೆಯಬಹುದು.
- ಹಲಸಿನ ಮರದಲ್ಲಿ ಮಿಡಿಗಳು ಸಾಕಷ್ಟು ಬಿಟ್ಟರೆ ಎಲ್ಲಾ ಕಾಯಿಗಳೂ ಒಳ್ಳೆಯ ರೀತಿಯಲ್ಲಿ ಬೆಳೆವಣಿಗೆ ಹೊಂದುವುದಿಲ್ಲ.
- ಕೆಲವು ಚಪ್ಪಟೆಯಾಗುತ್ತದೆ. ಕೆಲವು ಮಾತ್ರ ಪುಷ್ಟಿಯಾಗುತ್ತದೆ.
- ಚಪ್ಪಟೆ ಇಲ್ಲದ ಎಲ್ಲಾ ಭಾಗವೂ ಏಕಪ್ರಕಾರವಾಗಿ ಉಬ್ಬಿರುವ ಹಲಸಿನ ಕಾಯಿಯಲ್ಲಿ ಸೊಳೆಗಳು ಹೆಚ್ಚು.
- ಮುಳ್ಳುಗಳು ಅಗಲ ಬಿದ್ದ ಹಲಸು ಉತಮವಾಗಿ ಪರಾಗಸ್ಪರ್ಶಕ್ಕೆ ಒಳಗಾಗಿದೆ ಎಂದರ್ಥ. ಇದನ್ನು ಮರವೇ ಮಾಡುವುದಿಲ್ಲ. ನಾವು ಇದಕ್ಕೆ ಅವಕಾಶ ಕೊಡಬೇಕು.
ಥಿನ್ನಿಂಗ್ ಹೇಗೆ:
- ಹಲಸಿನ ಕಾಯಿಯನ್ನು ಬರೇ ಹಣ್ಣು ಮಾಡುವುದಕ್ಕೆ ಮಾತ್ರ ಬಳಸದೆ ಅದನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಕೆ ಮಾಡಬೇಕು.
- ಹಲಸಿನ ಎಳೆ ಮಿಡಿಗಳನ್ನು ಪಲ್ಯ , ಸಾಂಬಾರು ಮುಂತಾದ ಅಡುಗೆಗೆ ಉಪಯೋಗ ಮಾಡಬೇಕು.
- ಪ್ರಾರಂಭದ ಸೀಸನ್ ನಲ್ಲಿ ಹಲಸಿನ ಎಳೆ ಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುತ್ತದೆ.
- ಒಂದು ತೊಟ್ಟಿನಲ್ಲಿ ಒಂದೇ ಕಾಯಿ ಇರುವಂತೆ ಉಳಿದ ಕಾಯಿಯನ್ನು ತೆಗೆದು ಮಾರಾಟ ಮಾಡಬಹುದು. ನಾವೇ ಸ್ವ ಉಪಯೋಗವನ್ನೂ ಮಾಡಬಹುದು.
- ಹಲಸಿನ ಎಳೆ ಕಾಯಿಯನ್ನು ಕೊರೆದು ಸಣ್ಣ ತುಂಡುಗಳನ್ನಾಗಿ ಮಾಡಿ ಒಣಗಿಸಿ ಇಡಬಹುದು.
- ಇದು ಅಕಾಲದಲ್ಲಿ ಪಲ್ಯ ಸಾಂಬಾರು ಮಾಡಲು ಉಪಯೋಗಕ್ಕೆ ಬರುತ್ತದೆ.
- ಒತ್ತೊತ್ತಾಗಿರುವ ಕಾಯಿಯನ್ನು ತೆಗೆದು ಮಧ್ಯೆ ಗ್ಯಾಪ್ ಇರುವಂತೆ ಮಾಡಬೇಕು.
ಸಾಮಾನ್ಯ ಗಾತ್ರದ ಮರಕ್ಕೆ ಗರಿಷ್ಟ 10 ಮಿಡಿಯನ್ನು ಬೆಳೆಯಲು ಬಿಟ್ಟರೆ ಅದು ದೊಡ್ದದಾಗಿ ಪುಷ್ಟಿಯಾಗುತ್ತದೆ.ಮಿಡಿಯನ್ನು ತೆಗೆಯುವಾಗ ಓರೆ ಕೋರೆ ಬೆಳೆದ ಮತ್ತು ಒಂದೊಂದು ಭಾಗ ಒತ್ತಲ್ಪಟ್ಟ ಕಾಯಿಗಳನ್ನು ಮೊದಲು ತೆಗೆಯಿರಿ. ಅವು ಬೆಳೆದಾಗ ಪೊಳ್ಳು ಹಲಸಾಗುತ್ತದೆ.
ಯಾವ ಮಿಡಿ ಉಳಿಸಬೇಕು:
- ಮಿಡಿ ಉದ್ದವಾಗಿದ್ದು, ಅಥವಾ ಮೇಲ್ಮೈ ಏಕಪ್ರಕಾರವಾಗಿರುವ ಮಿಡಿಗಳನ್ನೇ ಉಳಿಸಿ.
- ಇಂತಹ ಕಾಯಿಗಳ ಮೇಲೆ ಒಂದು ಟವೆಲ್ ಅನ್ನು ಗಂಡು ಹೂವಿನ ಮೇಲೆ ಹಿತವಾಗಿ ಸವರಿ ಅದನ್ನು ಹೆಣ್ಣು ಮಿಡಿಯ ಮೇಲೆ ಸವರಿದರೆ ಪರಾಗಸ್ಪರ್ಶ ಉತ್ತಮವಾಗಿ ಕಾಯಿಯಲ್ಲಿ ಪೊಳ್ಳು ಆಗುವುದಿಲ್ಲ ಎನ್ನುತ್ತಾರೆ ತಮಿಳುನಾಡು ಪನೃತ್ತಿಯ ಹಲಸು ಬೆಳೆಗಾರರು.
- ಕಾಂಡದಲ್ಲಿ ಬಿಟ್ಟ ಕಾಯಿಗಳು ಕಾಂಡಕ್ಕೆ ತಾಗದಂತೆ ಇಳಿದಿದ್ದರೆ ಇದ್ದರೆ ಅದನ್ನು ಉಳಿಸಿ.
- ಕಾಂಡಕ್ಕೆ ತಾಗುವಂತಿದ್ದರೆ ಅದನ್ನು ತೆಗೆಯಿರಿ. ತೀರಾ ಸಪುರ ಗೆಲ್ಲಿನಲಿ ಬಿಟ್ಟ ಕಾಯಿಗಳನ್ನು ಎಳೆಯದಿರುವಾಗ ತೆಗೆಯುವುದು ಸೂಕ್ತ.
- ಕಾಯಿಯಲ್ಲಿ ಹೂ ಬಿಡುವ ಸಮಯದಲ್ಲಿ ಒಂದು ರೀತಿಯ ಪತಂಗ ಮೊಟ್ಟೆ ಇಡುತ್ತದೆ.
- ಇದರಿಂದ ಬಲಿಯುವಾಗ ಕಾಯಿಯ ಒಳ ಭಾಗದಲ್ಲಿ ಹಾಳಾಗುತ್ತದೆ.
- ಇದರ ನಿವಾರಣೆಗೆ ಮಿಡಿ ಸಣ್ಣದಿರುವಾಗ 1 ಗ್ರಾಂ ಡೆಲ್ಟ್ರಾಮೆಥ್ರಿನ್, ಅಥವಾ ಮೆಲಾಥಿಯಾನ್ ಪುಡಿಗೆ 1 ಗ್ರಾಂ ಸುಣ್ಣದ ಪುಡಿ ಮಿಶ್ರಣ ಮಾಡಿ ಬಟ್ಟೆಯಲ್ಲಿ ಕಟ್ಟಿ ಮಿಡಿ ಮೇಲೆ ತೆಳ್ಳಗೆ ಸವರುವುದರಿಂದ ಕಾಯಿಗೆ ಯಾವ ಹುಳ ಸೋಂಕು ಉಂಟಾಗಲಾರದು.
ಯಾವುದೇ ಕಾರಣಕ್ಕೆ ಹಲಸಿನ ಕಾಯಿ ಬಿಟ್ಟ ನಂತರ ಮರದ ಗೆಲ್ಲು ಕಡಿಯುವುದು ಮಾಡಬಾರದು. ಮರಕ್ಕೆ ಗಾಯ ಮಾಡಿ ಮೇಣ ಸ್ರಾವ ಆಗುವಂತೆ ಮಾಡಬಾರದು.
ಗುಣಮಟ್ಟದ ಹಲಸು ಎಂದರೆ ಅದರಲ್ಲಿ ಪೂರ್ತಿ ಸೊಳೆಗಳು ಇರಬೇಕು. ಎಲ್ಲೂ ಉಬ್ಬು ತಗ್ಗುಗಳು ಇರಬಾರದು. ಅಂತಹ ಹಲಸು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಹಪ್ಪಳ ಮುಂತಾದ ಉತ್ಪನ್ನ ತಯಾರಿಸುವುದಕ್ಕೆ ಇಂಥ ಹಲಸು ಉತ್ತಮ.