ಮಂಗ-ಪಕ್ಷಿಗಳಿಂದ ಬೆಳೆ ರಕ್ಷಣೆ.

ಹಣ್ಣು ಹಂಪಲು  ಬೆಳೆಯಲ್ಲಿ  ಸುಮಾರು 50 % ಕ್ಕೂ ಹೆಚ್ಚು ಹಣ್ಣು ಹಕ್ಕಿ- ಬಾವಲಿ, ಮಂಗ, ಅಳಿಲು ನವಿಲು ಮತ್ತು ಪತಂಗಗಳಿಂದ ಹಾನಿಯಾಗುತ್ತದೆ. ಕೆಲವು ತಿಂದು ಹಾಳಾದರೆ ಮತ್ತೆ ಕೆಲವು ಗಾಯ ಮಾಡಿ  ಹಾಳು ಮಾಡುತ್ತವೆ. ಇದನ್ನು ತಡೆಯಲು ಇರುವ ಏಕೈಕ ಉಪಾಯ  ಬಲೆ ಹಾಕುವುದು..

  • ಬಲೆ ಹಾಕುವ ಪದ್ದತಿ ಸುಮಾರು 25-30 ವರ್ಷಗಳಿಂದ ದ್ರಾಕ್ಷಿ ಬೇಸಾಯದಲ್ಲಿ ಚಾಲ್ತಿಯಲ್ಲಿ  ಇತ್ತು.
  • ಈಗ ಇದು ಬಹುತೇಕ ಹಣ್ಣಿನ ಬೆಳೆಗಳಲ್ಲಿ ಬಳಸಲ್ಪಡುತ್ತದೆ. ಬಲೆ ಇಲ್ಲದಿದ್ದರೆ ಹಣ್ಣೇ ಇಲ್ಲ.

ಬೇಸಿಗೆಯಲ್ಲಿ ಬಹುತೇಕ ಹಣ್ಣಿನ ಬೆಳೆಗಳಲ್ಲಿ ಫಸಲು ಇರುತ್ತದೆ.  ಈ ಸಮಯದಲ್ಲಿ ಹಣ್ಣಿನ ಬೆಳೆಗಳನ್ನು ಭಕ್ಷಿಸಿ  ಹಾಳು ಮಾಡುವ ಪಕ್ಷಿಗಳ  ಕಾಟ ಅತ್ಯಧಿಕ. ಪಕ್ಷಿಗಳು ಬರೇ ಹಣ್ಣು ತಿನ್ನುವುದೇ  ಅಲ್ಲದೆ ಅದನ್ನು ಗರಿಷ್ಟ ಪ್ರಮಾಣದಲ್ಲಿ ಹಾಳು ಸಹ ಮಾಡುತ್ತವೆ. ಇದರಿಂದ ಬೆಳೆಗಾರರಿಗೆ ಅಧಿಕ ನಷ್ಟ ಉಂಟಾಗುತ್ತದೆ.

ದಾಳಿಂಬೆ ಹೊಲಕ್ಕೇ ಬಲೆ

ಹೊಲಕ್ಕೆ ಬಲೆ ಚಪ್ಪರ:

  • ಈ ನಷ್ಟವನ್ನು ತಡೆಯಲು ದಾಳಿಂಬೆ ಬೆಳೆಗಾರರು ಇಡೀ ಹೊಲಕ್ಕೆ ಬಲೆಯನ್ನು  ಹೊದಿಸುತ್ತಾರೆ.
  • ಅದೇ ರೀತಿಯಲ್ಲಿ ದ್ರಾಕ್ಷಿ ಬೆಳೆಗಾರರೂ ಸಹ ಬಲೆಯನ್ನು ಹೊದಿಸುತ್ತಾರೆ.
  • ಬಲೆ ಹಾಕಿ ಕೊಡುವ ಕಾಂಟ್ರಾಕ್ಟ್ ಕೆಲಸದವರೇ ಇದ್ದಾರೆ.
  • ಬಲೆ ಹಾಕುವುದರಿಂದ ದಂಶಕಗಳಾದ ಹಕ್ಕಿಗಳಿಂದ ಉಂಟಾಗುವ ಸುಮಾರು 20% ಫಸಲು ಉಳಿಯುತ್ತದೆ ಎನ್ನುತ್ತಾರೆ ಬೆಳೆಗಾರರು.

ಯಾವ ಬೆಳೆಗೆ :

  • ಬಲೆ ಹಾಕುವ ಮೂಲಕ ಫಸಲು ಸಂರಕ್ಷಣೆ ಮಾಡುವ ವಿಧಾನ ದ್ರಾಕ್ಷಿ – ದಾಳಿಂಬೆ ಅಲ್ಲದೆ ಅಂಜೂರ ಬೆಳೆಗೂ ಇದೆ.
  • ಅದೇ ರೀತಿಯಲ್ಲಿ  ಕರಾವಳಿ ಮಲೆನಾಡಿನಲ್ಲಿ ಬೆಳೆಯಲ್ಪಡುವ ರಾಂಬುಟಾನ್ ಹಣ್ಣಿಗೂ ಸಹ ಬಲೆ ಹಾಕಿ ಹಕ್ಕಿಗಳಿಂದ ರಕ್ಷಣೆ ಪಡೆಯಲಾಗುತ್ತದೆ.
  • ದ್ರಾಕ್ಷಿ – ದಾಳಿಂಬೆ  ಬೆಳೆಗಳಿಗೆ  ಬಲೆ  ಹಾಕುವ ಕೆಲಸವನ್ನು ಸರಳವಾಗಿಸಲು ಆ ಕೆಲಸ ಮಾಡುವವರು ಮೊದಲಾಗಿ ಅಲ್ಲಲ್ಲಿ  ಗೂಟಗಳನ್ನು ಹುಗಿದು ಅದಕ್ಕೆ ಸರಿಗೆಯನ್ನು  ಎಳೆಯುತ್ತಾರೆ.

  • ಆ ಸರಿಗೆಯ ಮೇಲೆ ಬಲೆಯನ್ನು ಎಳೆದು ಕೆಲಸ ಸರಳ ಮಾಡಿಕೊಳ್ಳುತ್ತಾರೆ.
  • ಆಗ ಮಿಡಿಗಳು ಉದುರುವುದು, ಬಳ್ಳಿ – ಗಿಡಗಳಿಗೆ ಹಾನಿಯಾಗುವುದು ತಪ್ಪುತ್ತದೆ.
  • ಆದರೆ ಅಂಜೂರ, ರಾಂಬೂಟಾನ್, ವಾಟರ್ ಆಪಲ್ ಬೆಳೆಯುವವರು ಬಲೆ ಹಾಕುವುದು ತುಂಬಾ  ಕಷ್ಟದ ಕೆಲಸ.
  • ಹೆಚ್ಚಾಗಿ ಬೆಳೆಗಾರರು ಇಡೀ ಮರಕ್ಕೆ  ಬಲೆಯನ್ನು ಎಳೆದು ಮುಚ್ಚುತ್ತಾರೆ.
  • ಈ ಕೆಲಸವನ್ನು ಸರಳವಾಗಿಸಲು  ಪ್ರತೀ ಮರದ ಸುತ್ತ ನಾಲ್ಕು ಗೂಟಗಳನ್ನು ಹುಗಿದು, ಅದರ ತುದಿ ಭಾಗಕ್ಕೆ ಸರಿಗೆಯನ್ನು ಕಟ್ಟಿ ಆ ಸರಿಗೆಯ ಮೇಲೆ  ಬಲೆಯನ್ನು  ಎಳೆಯುವುದು ಸುಲಭ.

ಹಕ್ಕಿಗಳಿಗೆ ಮಾತ್ರವಲ್ಲ:

  • ಮಹಾರಾಷ್ಟ್ರದ ಬಾರಾಮತಿಯಲ್ಲಿ ತೆಂಗಿನ  ಮರಕ್ಕೆ  ಕೋತಿಗಳ ಕಾಟ ತಡೆಯಲೂ  ಸಹ ಬಲೆಯನ್ನು ಬಳಕೆ ಮಾಡುತ್ತಾರೆ.
  • ಕೋತಿಗಳು, ನವಿಲುಗಳು  ಹಾಗೆಯೇ ಇನ್ನಿತರ  ಕೆಲವು ಕಾಡು  ಪ್ರಾಣಿಗಳನ್ನು ಬಲೆ ಹಾಕಿ ದೂರ ಮಾಡಬಹುದು.

ಬಲೆ ಹಾಕಿ ಬೆಳೆ ಸಂರಕ್ಷಣೆ ಮಾಡುವುದರಿಂದ 20- 25 % ಹೆಚ್ಚಿನ ಫಸಲನ್ನು ಪಡೆಯಬಹುದು.ಅನವಶ್ಯಕ ಕೀಟನಾಶಕ ಅಥವಾ ಇನ್ನಿತರ ಹಿಂಸಾತ್ಮಕ ವಿಧಾನ ಬೇಕಾಗಿಲ್ಲ.

Leave a Reply

Your email address will not be published. Required fields are marked *

error: Content is protected !!