ಅದ್ಭುತ ಇಳುವರಿಗೆ ರವದಿಯ ಕಾಂಪೋಸ್ಟು ಮಾಡಿ.

ಕಬ್ಬು ಬೆಳೆಗಾರರು ಹೆಚ್ಚಾಗಿ ಬೆಳೆ ಆದ ನಂತರ ರವದಿ ಸುಡುತ್ತಾರೆ. ಸುಡುವುದರಿಂದ ಪೊಟ್ಯಾಶ್ ಸತ್ವ ಉಳ್ಳ ಬರೇ ಬೂದಿ ಮಾತ್ರ ಮರಳಿ ದೊರೆಯುತ್ತದೆ. ಅದರ ಪ್ರಮಾಣ ಅತೀ ಅಲ್ಪ. ಅದರ ಬದಲು ಕಾಂಪೋಸ್ಟು ಮಾಡಿದರೆ,  ಹೆಚ್ಚಿನ  ಪ್ರಯೋಜನ ದೊರೆಯುತ್ತದೆ. ಹೆಚ್ಚಿನ ಲಭ್ಯ ರೀತಿಯ ಪೋಷಕಗಳು ಸಿಗುತ್ತವೆ.

ಬೆಳೆ ತ್ಯಾಜ್ಯಗಳಲ್ಲಿ ಏನಿರುತ್ತದೆ:

 • ಬಹುತೇಕ ಬೆಳೆ  ತ್ಯಾಜ್ಯಗಳಲ್ಲಿ  ಬೆಳೆಗಳಿಗೆ ಪೂರೈಕೆ ಮಾಡಲಾದ ಸತ್ವಾಂಶಗಳು ಸ್ವಲ್ಪ ಪ್ರಮಾಣದಲ್ಲಿ ಉಳಿದಿರುತ್ತದೆ.
 • ಪೋಷಕಾಂಶಗಳ ಲೆಕ್ಕಾಚಾರದಲ್ಲಿ ನೋಡಿದರೆ  ಬೆಳೆ  ತ್ಯಾಜ್ಯಗಳಲ್ಲಿ ಸಾವಯವ ಇಂಗಾಲ, ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಅಲ್ಲದೆ ಗಂಧಕ, ಕೆಲವು ಲವಣಗಳು ಇರುತ್ತವೆ.
 • ಇದನ್ನು ಸುಡುವುದರಿಂದ ಲವಣ ಮತ್ತು ಪೊಟ್ಯಾಶ್ ಸ್ವಲ್ಪ ಉಳಿಯುತ್ತದೆಯಾದರೂ ಉಳಿದವುಗಳು ಸಂಪೂರ್ಣವಾಗಿ ನಷ್ಟವಾಗುತ್ತವೆ.
 • ಕಬ್ಬಿನ ರವದಿಯಲ್ಲಿ  ಲೆಕ್ಕಾಚಾರದಂತೆ 0.35% ಸಾರಜನಕ, 0.13% ರಂಜಕ ಮತ್ತು 0.65% ಪೊಟ್ಯಾಶಿಯಂ ಇದೆ.
 • ಒಂದು ಟನ್ ರವದಿಯಲ್ಲಿ 3.5 ಕಿಲೋ  ಸಾರಜನಕ,  1.3 ಕಿಲೋ ರಂಜಕ ಮತ್ತು  6.5 ಕಿಲೋ ಪೊಟ್ಯಾಶಿಯಂ ಇದೆ.
 • ಒಂದು ಹೆಕ್ಟೇರ್ ಪ್ರದೇಶದಲ್ಲಿ 50 ಕಿಲೋ ಸಾರಜನಕ, 20 ಕಿಲೋ ರಂಜಕ ಮತ್ತು  100 ಕಿಲೋ ಪೊಟ್ಯಾಶಿಯಂ ಇರುತ್ತದೆ.
 • ಇದು ಬರೇ ರವದಿಯಲ್ಲಿ ಮಾತ್ರ.

ಸುಡುವುದರಿಂದ ಏನಾಗುತ್ತದೆ:

 • ರವದಿಯನ್ನು ಹೊಲದಲ್ಲೇ ಸುಡುವುದರಿಂದ ಕೆಲವು ಅನುಕೂಲಗಳಿವೆಯಾದರೂ ಅದರ ಮೌಲ್ಯವನ್ನು ನೋಡಿದಾಗ ಸುಡುವುದು ನಷ್ಟ.
 •   ನೆಲವು ಒಮ್ಮೆ  ಬಿಸಿಯಾಗುವ ಕಾರಣ ಮೇಲು ಮಣ್ಣಿನಲ್ಲಿರುವ ಅಗತ್ಯ  ಸೂಕ್ಷ್ಮ ಜೀವಿಗಳು ಸತ್ತು ಹೋಗುತ್ತವೆ.
 • ಹೆಚ್ಚು ದಪ್ಪದ ರಾಶಿ ಇದ್ದಲ್ಲಿ  ಕೂಳೆ ಬೆಳೆಗೆ ಬಿಡುವ ಬುಡ ಭಾಗಕ್ಕೂ ಸಹ ಹೆಚ್ಚಿನ ಬಿಸಿ ತಾಗಿ ಅದರ ಮೊಳಕೆ ಬರುವಿಕೆಗೆ ತುಂಬಾ ತೊಂದರೆ ಆಗುತ್ತದೆ.
 • ಬೆಳೆಗೆ ಬೇಕಾಗುವ ಅನುಕೂಲಕರ ಮಣ್ಣಿನ ಗುಣಕ್ಕೆ ತೊಂದರೆಯುಂಟಾಗುತ್ತದೆ.
 • ಕೂಳೆ ಬೆಳೆಯಲ್ಲಿ ತುಂಬಾ ಗ್ಯಾಪ್ ಉಂಟಾಗುತ್ತದೆ.
 • ಸುಡುವುದರಿಂದ ವಾತಾವರಣಕ್ಕೂ ತೊಂದರೆ ಇದೆ.
 • ಹಾಗೆಂದು ಕೆಲವು ಕೀಟ ಸಮಸ್ಯೆಗಳಿದ್ದರೆ  ಸುಟ್ಟಾಗ ಅದರ ಹತೋಟಿ ಆಗುತ್ತದೆ.

ರವದಿಯ ಕಾಂಪೋಸ್ಟು:

 • ರವದಿಯನ್ನೆಲ್ಲಾ ಒಟ್ಟು ಸೇರಿಸಿ  ಹೊಲದಲ್ಲೇ  ತ್ವರಿತವಾಗಿ ಕಾಂಪೋಸ್ಟು ಮಾಡಬಹುದು.
 • ಸುಮಾರು 2 ತಿಂಗಳ ಅವಧಿಯಲ್ಲಿ  ಹುಡಿ ಕಾಂಪೋಸ್ಟು ಮಾಡಬಹುದಾದ ಸೂಕ್ಷ್ಮಾಣು ಜೀವಿಗಳು  ಲಭ್ಯವಿವೆ.
 • ಕಾಂಪೋಸ್ಟಿಂಗ್ ಬ್ಯಾಕ್ಟೀರಿಯಾಗಳ ಬಳಕೆಯಿಂದ ಹೊಲದ ಬದುಗಳಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಕಾಂಪೋಸ್ಟು ರಾಶಿ ಮಾಡಬಹುದು.
 • ಇದಕ್ಕೆ ಹೊಂಡ ಬೇಕಾಗಿಲ್ಲ. ನೆಲಕ್ಕೆ  ಮಲ್ಚಿಂಗ್ ಶೀಟನ್ನು ಹಾಕಿ ಅದರ ಮೇಲೆ ರವದಿಯನ್ನು  ಹಾಕಿ ಅದು ತೇವ ಆಗುವಂತೆ ನೀರನ್ನು ಚಿಮುಕಿಸಬೇಕು.

sugarcane trash hipped for coposting

 • ಪ್ರತೀ 1 ಅಡಿ ರವದಿಯ  ರಾಶಿಗೆ  ಅದು ತೇವಗೊಂಡು ಮೆದುವಾಗುವಷ್ಟು ನೀರು ಹಾಕಿ ಅದರ ಮೇಲೆ ಕಾಂಪೋಸ್ಟು ಮಾಡುವ ಬ್ಯಾಕ್ಟೀರಿಯಾ ಮಿಶ್ರಣವನ್ನು ಚಿಮುಕಿಸಬೇಕು.
 • ಹಾಗೆಯೇ ಇನ್ನೊಂದು ಅಂತಸ್ತು ಹಾಕಿ ಮತ್ತೆ  ಕಾಂಪೋಸ್ಟು ಮಾಡುವ ಬ್ಯಾಕ್ಟೀರಿಯಾ ಹಾಕಬೇಕು.
 • ಎರಡು ಅಥವಾ ಮೂರು  ಅಂತಸ್ತಿನಲ್ಲಿ ಏರಿ ರಾಶೀ ಮಾಡಿ ಅದರ ಮೇಲೆ ತೇವಾಂಶ ಆರದಂತೆ ಮಲ್ಚಿಂಗ್ ಶೀಟು  ಹೊದಿಸಿ ಅದರ ಮೇಲೆ ನೆರಳು ಮಾಡಬೇಕು.
 • ಮಲ್ಚಿಂಗ್ ಶೀಟಿನ ಬದಲು ಸೆಣಬಿನ ಚೀಲವನ್ನೂ ಮುಚ್ಚಬಹುದು. ಕಾಂಪೋಸ್ಟು ಮಾಡುವ ಬ್ಯಾಕ್ಟೀರಿಯಾಗಳಲ್ಲಿ  ನಿರ್ವಾತ ವಾಗಿ ಕೆಲಸ ಮಾಡುವ(ಎನರೋಬಿಕ್ ) ತೆರೆದ ಹವಾಮಾನದಲ್ಲಿ( ಎರೋಬಿಕ್) ಕೆಲಸ ಮಾಡುವ ಎರಡು ವಿಧಗಳಿವೆ.
 • ರೈತರು ಕಾಂಪೋಸ್ಟು ಮಾಡುವ ವಿಧಾನಕ್ಕೆ ಅನುಗುಣವಾಗಿ ಇದನ್ನು ಆಯ್ಕೆ  ಮಾಡಬೇಕು.

ಇದು ಎರಡೇ ತಿಂಗಳಲ್ಲಿ  ಪೂರ್ತಿ ಹುಡಿಯಾಗುತ್ತದೆ. ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಯೂರಿಯಾ ( ಟನ್ ಗೆ 5 ಕಿಲೋ) 5 ಕಿಲೋ ಮತ್ತು 10 ಕಿಲೋ ಶಿಲಾ ರಂಜಕ ಮತ್ತು ಅಗತ್ಯ ಇದ್ದರೆ 5 ಕಿಲೋ ಜಿಪ್ಸಂ  ಹಾಕಿದರೆ  ಕಾಂಪೋಸ್ಟಿನ ಗುಣಮಟ್ಟ ಬಹಳ ಉತ್ತಮವಾಗುತ್ತದೆ.  ಕಾಂಪೋಸ್ಟಿಂಗ್ ಬ್ಯಾಕ್ಟೀರಿಯಾ ಹಾಕಿದರೆ  ತಿರುವಿ ಹಾಕಬೇಕಾಗಿಲ್ಲ.

 • ಒಂದು ವೇಳೆ  ಸೂಕ್ಷ್ಮಾಣು ಜೀವಿ ಮಿಶ್ರಣವನ್ನು ಹಾಕದೇ ಇದ್ದರೆ  ಫಲವತ್ತಾದ ಗದ್ದೆ ಇಲ್ಲವೇ ಮರಮಟ್ಟುಗಳ ಬುಡದ ಮೆಕ್ಕಲು ಮಣ್ಣನ್ನು ಒಂದು ಅಂತಸ್ತಿನ ಮೇಲೆ 10ಕಿಲೋದಷ್ಟು ಹಾಕಿ ಮಾಡಬಹುದು.
 • ಮಣ್ಣು ಜನ್ಯ  ಹತ್ತಾರು ಎರೆಹುಳುಗಳನ್ನು ಮಣ್ಣಿನ ಜೊತೆ ಸೇರಿಸಿದರೆ  ಬೇಗ ಕಾಂಪೋಸ್ಟು ಆಗುತ್ತದೆ.
 • ಹೀಗೆ ಮಾಡಿದಾಗ ಒಮ್ಮೆ ಯಾದರೂ ತಿರುವು ಹಾಕಬೇಕು.

ಹೊಲದಲ್ಲೇ ಇದನ್ನು ಮಾಡಬೇಕು. ಆಗ ಖರ್ಚು ಇಲ್ಲ. ಕಾಂಫೊಸ್ಟು ಮಾಡುವ ಸ್ಥಳಕ್ಕೆ ತೆಂಗಿನ ಗರಿ ಇಲ್ಲವೇ ಇನ್ನೇನಾದರೂ ( ಬಾಳೆ ಗರಿಯೂ ಆಗುತ್ತದೆ) ನೆರಳು ಕೊಡುವ ತ್ಯಾಜ್ಯದ ಮರೆ ಮಾಡಬೇಕು. ವಾರಕ್ಕೊಮ್ಮೆ  ತೇವಾಂಶ ಕಡಿಮೆಯಾಗದಂತೆ  ನೀರು ಚಿಮುಕಿಸಬೇಕು.

ಈ ಕಾಂಪೋಸ್ಟು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇದರಲ್ಲಿ  ಕೆಲವು ಬೆಳೆ  ಪೋಷಕ ಮತ್ತು ಕೀಟ ರೋಗ ನಿಯಂತ್ರಕ ಸೂಕ್ಷ್ಮಾಣು ಜೀವಿಗಳನ್ನು  ಸೇರಿಸಿ ಬೆಳೆಗೆ  ಮತ್ತೆ ಬಳಸಿದರೆ  ಉತ್ತಮ ಇಳುವರಿ ಬರುತ್ತದೆ.     

Leave a Reply

Your email address will not be published. Required fields are marked *

error: Content is protected !!