ಹರಿವೆ ಸೊಪ್ಪು ಒಂದು ಪೌಷ್ಟಿಕ ತರಕಾರಿ. ಇದನ್ನು ಅಮರಾಂತಸ್,(Amaranthus sp) ದಂಟಿನ ಸೊಪ್ಪು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ದೇಹದ ರಕ್ಷಣೆಗೆ ಬೇಕಾದ ಜೀವ ಸತ್ವಗಳನ್ನು ಒದಗಿಸುವ ಸೊಪ್ಪು ತರಕಾರಿ. ಸಾವಿರಾರು ವರ್ಷಗಳಿಂದಲೂ ಇದು ನಮ್ಮ ದೇಶದಲ್ಲಿ ಬೆಳೆಯಲ್ಪಡುತ್ತಿತ್ತು. ಭಾರತವೇ ಇದರ ಮೂಲ ಎನ್ನಬಹುದು. ಬೇರೆ ದೇಶಗಳಲ್ಲೂ ಇದು ಬೆಳೆಯಲ್ಪಡುತ್ತಿದೆ.
- ಹರಿವೆಯಲ್ಲಿ ನೂರಾರು ಪ್ರಬೇಧಗಳಿವೆ.
- ದಂಟಿನ ಉದ್ದೇಶಕ್ಕೆ, ಸೊಪ್ಪಿನ ಉದ್ದೇಶಕ್ಕೆ, ಬೀಜದ ಉದ್ದೇಶಕ್ಕೆ ಮತ್ತೆ ಕೆಲವು ಕಳೆ ಸಸ್ಯಗಳಾಗಿಯೂ ಇವೆ.
ವಾಣಿಜ್ಯ ತಳಿಗಳು:
- ದೇಶದ ವಿವಿಧ ಸಂಶೋಧನಾ ಸಂಸ್ಥೆಗಳು ಹರಿವೆಯ ಬೇರೆ ಬೇರೆ ಹೆಸರಿನ ತಳಿಗಳನ್ನು ಬಿಡುಗಡೆ ಮಾಡಿವೆ.
- ಸಂಶೋಧನಾ ಸಂಸ್ಥೆಗಳು ಕೈ ಹಾಕುವುದಕ್ಕೂ ಮುಂಚೆ ನಮ್ಮಲ್ಲಿ ಹಲವಾರು ತರಹದ ಹರಿವೆಗಳು ಪ್ರದೇಶವಾರು ಬೆಳೆಯಲ್ಪಡುತ್ತಿದ್ದವು.
- ಭಾರತದ ಮೂಲೆ ಮೂಲೆಯಲ್ಲೂ ಹರಿವೆ ಬೆಳೆಯಲಾಗುತ್ತದೆ. ಬಳಸಲ್ಪಡುತ್ತಿದೆ.
ಅರ್ಕಾ ಸುಗುಣ:
- ಇದು ಭಾರತೀಯ ತೋಟಗಾರಿಕಾ ಸಂಸ್ಥೆ ಹೇಸರಘಟ್ಟ ಬೆಂಗಳೂರು ಇವರು ಬಿಡುಗಡೆ ಮಾಡಿದ ತಳಿ.
- ಇದರ ಎಲೆ ಹಸುರು. ರಸಭರಿತವಾದ ಕಾಂಡವನ್ನು ಹೊಂದಿದೆ.
- ಬಿತ್ತನೆ ಮಾಡಿ 30 ದಿನಕ್ಕೆ ಕೊಯಿಲಿಗೆ ಬರುತ್ತದೆ.
- 90 ದಿನದ ಈ ಬೆಳೆಯನ್ನು 5-6 ಬಾರಿ ಕಟಾವು ಮಾಡಬಹುದು.
- ಹರಿವೆಗೆ ಬರುವ ತುಕ್ಕು ರೋಗ ತಡೆದುಕೊಳ್ಳುವ ಶಕ್ತಿ ಇದೆ.
ಅರ್ಕಾ ಅರುಣಿಮಾ:
- ಇದು ಕೆಂಪು (ನೇರಳೆ) ಎಲೆ ಮತ್ತು ದಂಟಿನ ಹರಿವೆ.
- ಇದೂ ಸಹ 90 ದಿನಗಳ ಬೆಳೆ. ಬಿತ್ತನೆ ಮಾಡಿ 20-30 ದಿನಕ್ಕೆ ಕಟಾವು.
- ಒಮ್ಮೆ ಬಿತ್ತಿದರೆ 5-6 ಬಾರಿ ಕಟಾವು ಮಾಡಬಹುದು.
- ಬೂದಿ ರೋಗ ನಿರೋಧಕ ಶಕ್ತಿ ಇದೆ.
ಅರ್ಕಾ ವರ್ಣ :
- ಇದು ನೇರಳೆ ಬಣ್ಣದ ದಂಟು ಉಳ್ಳ ತಳಿ.
- ಇದನ್ನೂ ಸಹ 5-6 ಸಲ ಕಟಾವು ಮಾಡಬಹುದು.
- ಉತ್ತಮ , ಗುಣಮಟ್ಟದ ಸೊಪ್ಪು- ದಂಟು.
ಹರಿವೆಯನ್ನು ವರ್ಷದ ಎಲ್ಲಾ ಋತುಮಾನದಲ್ಲೂ ಬೆಳೆಯಬಹುದು.
ಸಿಒ 1, 2,3, 4:
- ಈ ಎಂಬ ತಳಿಗಳನ್ನುತಮಿಳುನಾಡು ಕೃಷಿ ವಿಶ್ವವಿಧ್ಯಾನಿಯ ಕೊಯಂಬತ್ತೂರು ಇಲ್ಲಿಂದ ಬಿಡುಗಡೆ ಮಾಡಲಾಗಿದೆ.
- ಸಿ ಒ 1 ಸೊಪ್ಪು ಮತ್ತು ದಂಟಿಗೆ ಸೂಕ್ತ. ಬಿತ್ತನೆ ಮಾಡಿ 25 ದಿನಕ್ಕೆ ಕಠಾವು.
- ಸಿ ಒ 2 ಅಲ್ಪಾವಧಿ ತಳಿ. 4-5 ಬಾರಿ ಕಟಾವು ಮಾಡಬಹುದು.
- ಸಿಒ -3 ಇದು ಎಲೆ ತೆಗೆಯಲು ಸೂಕ್ತವಾದ ತಳಿ. ಉತ್ತಮ ಇಳುವರಿ ಬರುತ್ತದೆ.
- ಸಿ ಒ 4 ಎಲೆ ಮತ್ತು ಬೀಜಕ್ಕೆ ಸೂಕ್ತವಾದ ತಳಿ.
ಪೂಸಾ ಕೀರ್ತಿ :
- ಈ ತಳಿಯನ್ನು ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿ ಇವರು ಬಿಡುಗಡೆ ಮಾಡಿದ್ದಾರೆ.
- ಎಲೆ ಮತ್ತು ಕಾಂಡ ಎರಡೂ ತರಾಕಾರಿಯಾಗಿ ಬಳಕೆ ಮಾಡಬಹುದು.
ಪೂಸಾ ಕಿರಣ:
- ಇದು ಹಸುರು ಎಲೆಯ ಆತ್ಯಧಿಕ ಇಳುವರಿ ತಳಿ.
ಪೂಸಾ ಲಾಲ್ ಚೌಲಾನಿ :
- ಇದು ಕೆಂಪು ಎಲೆಯ ತಳಿ. ಮಳೆಗಾಲ ಮತ್ತು ಬೇಸಿಗೆ ಕಾಲ ಎರಡಕ್ಕೂ ಸೂಕ್ತವಾದ ತಳಿ.
ಚೊಟೀ ಚೌಲಾನಿ:
- ಸಣ್ಣ ಗಿಡ ಸಣ್ಣ ಎಲೆ. ಗಿಡ್ಡ ಸಸಿ, ಎಲ್ಲಾ ಋತುಮಾನಕ್ಕೂ ಸೂಕ್ತ ತಳಿ.
ಇದಲ್ಲದೆ ಹೊನ್ನಾವರದ ಕೆಂಪು ಹರಿವೆ,ಬಿಳಿ ದಂಟು ಹಸುರು ಸೊಪ್ಪಿನ ಹರಿವೆ, ಗುಲಾಬಿ ಬಣ್ಣದ ದಂಟು ಮತ್ತು ಹಸುರು ಎಲೆಯ ಹರಿವೆ ಹೀಗೆ ಹಲವಾರು ವಿಧದ ಹರಿವೆಗಳು ನಮ್ಮ ಸುತ್ತಮುತ್ತ ನೂರಾರು ವರ್ಷಗಳಿಂದಲೂ ಇದ್ದವು.ಕೆಲವು ಕೆಂಪು ಹರಿವೆಯ ಅಡುಗೆ ಮಾಡಿದರೆ ಅನ್ನ ನೆತ್ತರು ಬಣ್ಣ ಪಡೆಯುತ್ತಿತ್ತು.
ಹರಿವೆ ಬಿತ್ತನೆ:
- ಹರಿವೆ ಬೆಳೆಸಲು ಫಲವತ್ತಾದ ಸಡಿಲ ಮಣ್ಣು ಬೇಕು.
- ಅರ್ಧ ಪಾಲು ಹುಡಿಕೊಟ್ಟಿಗೆ ಗೊಬ್ಬರ ಮತ್ತು ಸಡಿಲ ಮಣ್ಣು ಮಿಶ್ರಣ ಮಾಡಿ ಪಾತಿ ಮಾಡಬೇಕು.
- ಬೇಸಿಗೆಯಲ್ಲಿ ನೆಲಮಟ್ಟದಿಂದ ಕೆಳ ಭಾಗಕ್ಕಿರುವಂತೆ ಪಾತಿ ಮಾಡಬೇಕು.
- ಮಳೆಗಾಲಕ್ಕೆ ನೆಲಮಟ್ಟದಿಂದ ಮೇಲಕ್ಕಿರುವಂತೆ ಮಾಡಬೇಕು.
- ಪಾತಿಯನ್ನು ಪೂರ್ತಿ ನೆನೆಸಿ, ಬೀಜವನ್ನು ನಾಲ್ಕು ಪಾಲು ಮಣ್ಣಿನಲ್ಲಿ ಅಥವಾ ಬೂದಿಯಲ್ಲಿ ಮಿಶ್ರಣ ಮಾಡಿ ಚೆಲ್ಲಬೇಕು.
- ಅದರ ಮೇಲೆ ತೆಳುವಾಗಿ ನೆಲ್ಲಿ ಸೊಪ್ಪು ತರಹದ ಸಣ್ಣ ಎಲೆಯ ಸೊಪ್ಪನ್ನು ಹಾಕಬೇಕು.
- ಇದರ ಲಬ್ಯತೆ ಇಲ್ಲದಿದ್ದಲ್ಲಿ ಭತ್ತದ ಸುಟ್ಟ ಕಪ್ಪು ಬೂದಿಯನ್ನು ಹಾಕಿ.
- ಇದು ಬೇರು ಬರಲು ಅನುಕೂಲ.
- ಪಾತಿಗೆ ರಾಸಾಯನಿಕ ಗೊಬ್ಬರ ಹಾಕಬಹುದು.
- ಅಥವಾ ತೀಷ್ಣ ಗೊಬ್ಬರಗಲಾದ ಹಿಂಡಿ ಇತ್ಯಾದಿಗಳನ್ನು ಬಳಕೆ ಮಾಡಬಹುದು.
- ದಿನಾ ನೀರನ್ನು ಸಣ್ಣ ಹನಿಯಾಗಿ ಕೊಡಬೇಕು.
- ಸಿಂಪರಣೆ ಮೂಲಕ ಗೊಬ್ಬರ ಕೊಟ್ಟಾಗ ಉತ್ತಮ ಬೆಳೆವಣಿಗೆ ಬರುತ್ತದೆ.
- ಸಸಿ ಸ್ವಲ್ಪ ದೊಡ್ಡದಾದ ನಂತರ ಬೇಕಾದಂತೆ ಬಳಕೆ ಮಾಡಬಹುದು.
ಕೀಟ ಬಾಧೆ:
- ಹರಿವೆಗೆ ಸಮಾನ್ಯವಾಗಿ ಬರುವ ಕೀಟ ಎಲೆ ತಿನ್ನುವ ಹುಳು. ಇದರ ನಿಯಂತ್ರಣಕ್ಕೆ ಬೂದಿಯನ್ನು ಎರಚಬಹುದು.
- ತಾಜಾ ತರಕಾರಿಯಾಗಿ ಬಳಸುವ ಕಾರಣ 1-2 ದಿನದಲ್ಲಿ ಉಳಿಕೆ ಅಂಶ ಇಲ್ಲದಾಗುವ ಕೀಟನಾಶಕ Decis ಅನ್ನು ಸಿಂಪರಣೆ ಮಾಡಬೇಕು.
- ಉಳಿದಂತೆ ಯಾವ ದೊಡ್ದ ರೋಗವೂ ಇಲ್ಲ.
ಹರಿವೆ ತಿಂದರೆ ಜೀರ್ಣ ಶಕ್ತಿ ಹೆಚ್ಚುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಇದನ್ನು ಪಾಟ್- ಗ್ರೋ ಬ್ಯಾಗ್ ಗಳಲ್ಲಿಯೂ ಬೆಳೆಸಬಹುದು.