ಹಳ್ಳಿಯ ಯುವಕರಿಗೆ ಉದ್ಯೋಗ ಕೊಡಬಲ್ಲ ಅಣಬೆ ಕೃಷಿ.

 ಆರ್ಥಿಕ ಸಂಕಷ್ಟದಿಂದ ಪಟ್ಟಣ ತೊರೆದು ಜನ ಹಳ್ಳಿಯೆಡೆಗೆ ಮುಖಮಾಡಿದ್ದಾರೆ. ಕೆಲವರಿಗೆ ಇನ್ನು ಪಟ್ಟಣದ ಸಹವಾಸವೇ ಬೇಡ ಎಂಬಂತಾಗಿದೆ.   ವೃತಿ ಅರಸುವ ಆಸಕ್ತರಿಗೆ  ಮನೆಯ ಕಡಿಮೆ ಸ್ಥಳಾವಕಾಶದಲ್ಲೂ  ಮಾಡಬಹುದಾದ ಲಾಭದ ಉದ್ದಿಮೆ ಅಣಬೆ ಬೇಸಾಯ. ವಿಶೇಷ ವಿಧ್ಯಾವಂತರೂ ಅಗಬೇಕಾಗಿಲ್ಲ. ಭಾರೀ ಬಂಡವಾಳವೂ ಬೇಕಾಗಿಲ್ಲ. ಇನ್ನೂ ಇದರೊಂದಿಗೆ ಜೇನು ಸಾಕಣೆಯಂತ ವೃತ್ತಿ ಮಾಡಿದರೆ ಮತ್ತೂ ಅನುಕೂಲ.    


 • ಅಣಬೆ ಬೆಳೆಸಲು ಹೆಚ್ಚು ಬಂಡವಾಳ ಬೇಡ. ವೃತ್ತಿಯಲ್ಲಿ ಸ್ವಲ್ಪ ಶ್ರದ್ಧೆ ಇದ್ದರೆ ಸಾಕು.
 • ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸಿದರೆ ಇದರಲ್ಲಿ ಹಿಂತಿರುಗಿ ನೊಡುವ ಪ್ರಮೇಯವೇ ಬರಲಾರದು.

ಅಣಬೆ ಔಷಧೀಯ ಮತ್ತು ಸಸ್ಯಾಹಾರ:

 • ಸಂಪ್ರದಾಯಸ್ತರು ಅಂದುಕೊಂಡಂತೆ ಅಣಬೆ ಮಾಂಸಹಾರ ವರ್ಗಕ್ಕೆ ಸೇರುವುದಿಲ್ಲ, ಇದು ಶೇ. 20 ರಿಂದ 30 ರಷ್ಟು ಪ್ರೋಟೀನ್ ಇರುವ ರುಚಿಕಟ್ಟಾದ ಸಸ್ಯಾಹಾರ. 
 • ಅಣಬೆ ಎಲ್ಲಾ ಬಗೆಯ ಪೋಷಕಾಂಶಗಳನ್ನು ಹೊಂದಿದ್ದು ಒಂದು ಪರಿಪೂರ್ಣವಾದ ಆಹಾರವಾಗಿದೆ, ಅಲ್ಲದೇ ಇದರಲ್ಲಿ ಕೆಲ ಔಷಧಿಯ ಗುಣ ಕೂಡಾ ಇದ್ದು ರಕ್ತದೊತ್ತಡ, ಡಯಾಬಿಟೀಸ್, ಬೊಜ್ಜು, ಹೃದಯ ಕಾಯಿಲೆ ಇರುವವರಿಗೆ ತುಂಬಾ ಉಪಯುಕ್ತ.
 • ವೈಜ್ಞಾನಿಕವಾಗಿ ಈ ಅಣಬೆ ಸಸ್ಯರಾಜ್ಯಕ್ಕೆ ಸೇರಿರುವ ಶಿಲೀಂಧ್ರ ಇದರಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಬೇಧಗಳಿದ್ದರೂ ಸುಮಾರು 2000 ಗಳಷ್ಟು ಅಣಬೆಗಳು ತಿನ್ನಲು ಯೋಗ್ಯವಾಗಿವೆ.

ಚಿಪ್ಪು ಅಣಬೆ ಬೆಳೆ ಸುಲಭ:

 • ಅಣಬೆಗಳಲ್ಲಿ ಸುಮಾರು 20 ಬಗೆಯವುಗಳನ್ನು ಕೃತಕವಾಗಿ ಬೆಳೆಸಿ ಬಳಸಲಾಗುತ್ತದೆ.
 • ಅವುಗಳಲ್ಲಿ ಚಿಪ್ಪು ಅಣಬೆ ಜಾತಿಯು ತುಂಬಾ ಪ್ರಚಲಿತವಾಗಿದೆ.
 • ಈ ಅಣಬೆಯನ್ನು ಡಿಂಗ್ರಿ ಅಣಬೆ ಎಂದೂ ಕರೆಯಲಾಗುತ್ತದೆ.
 • ವೈಜ್ಞಾನಿಕವಾಗಿ  ಇದನ್ನು Oyester mushroom ಎನ್ನಲಾಗುತ್ತದೆ.

ಈ ಚಿಪ್ಪು ಅಣಬೆಗಳ ಬೆಳೆ ಸುಲಭ ಮತ್ತು ಬಂಡವಾಳವೂ ಕಡಿಮೆ ಸಾಕು. 25 ರಿಂದ 30 ಡಿಗ್ರಿ   ಉಷ್ಣತೆ ಮತ್ತು ಶೇ. 80 ರಷ್ಟು ಆಧ್ರ್ರತೆಗಳಲ್ಲಿ ಯಶಸ್ವಿ ಬೆಳೆ ಸಾಧ್ಯ. ಉಷ್ಣತೆ 35 ಡಿಗ್ರಿ  ಮೀರಿದರೆ ಇಳುವರಿ ಕುಂಟಿತವಾಗುತ್ತದೆ. ಈ ಅಣಬೆಗೆ ಕಳೆ ಶಿಲೀಂದ್ರದ ಕಂಟಾಮಿನೇಷನ್ ಸಮಸ್ಯೆ ಕಡಿಮೆ ಎನ್ನಬಹುದು.

ಸಮಸ್ಯೆಗಳು ಏನಿವೆ:

 • ಬೇಕಾದ ತಳಿಯ ಸ್ವಚ್ಚ ಬೀಜಗಳ ನಿರಂತರ ಲಭ್ಯತೆ ಒಂದು ಕೊರತೆ.
 • ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಬರುವ ಈ ಬೆಳೆ ರೈತರ ಕೈಯಲ್ಲಿ ಸೋಲುತ್ತಿದೆ.
 • ಕಳೆ ಶಿಲೀಂಧ್ರಗಳಿಂದ ಬೆಳೆ ಕಲುಶಿತವಾಗುವುದು.
 • ಅಣಬೆ ಒಂದು ಶಿಲೀಂಧ್ರ. ಅದರಂತೆಯೇ ನಿಸರ್ಗದಲ್ಲಿ ಅಸಂಖ್ಯ ಶಿಲೀಂಧ್ರಗಳಿವೆ. ಅಣಬೆಯೊಂದಿಗೆ ಇವು ಅಭಿವೃದ್ಧಿ ಹೊಂದಿ ಬೆಳೆ ನಾಶ ಮಾಡುತ್ತವೆ.ಇದೊಂದು ತುಂಬಾ ಸೂಕ್ಷ್ಮ ಸಮಸ್ಯೆಯಾಗಿದೆ.
 • ಆದಾಗ್ಯೂ ಯುವ ಕೃಷಿಕರು ವೈಜ್ಞಾನಿಕ ತಿಳುವಳಿಕೆಯೊಂದಿಗೆ ಸೂಕ್ತ ತರಬೇತಿ ಪಡೆದು ಅಣಬೆ ಬೆಳೆಯ ಹೊರಟರೆ, ಈ ಸಮಸ್ಯೆ ನಿವಾರಣೆ ಅಸಾಧ್ಯವಲ್ಲ.

ಇದು  ತಿಳಿದಿರಲಿ :

ಅಣಬೆ ಬೀಜ ಮೊಳಕೆ ಒಡೆಯುತ್ತಿರುವುದು
 • ಎಲ್ಲಾ ಅಣಬೆಗಳ ಕೊಡೆಯ ಅಡಿಯಲ್ಲಿ ಸೂಕ್ಷ್ಮ ರಚನೆಯಿರುತ್ತದೆ, ಅದನ್ನು ಗಿಲ್ ಎನ್ನುತ್ತಾರೆ.
 • ಗಿಲ್‍ಗಳ ನಡುವೆ ಪೌಡರಿನಂತ ಬೀಜಗಳನ್ನು ಉತ್ಪಾದಿಸುತ್ತವೆ, ಆದರೆ ಇವುಗಳನ್ನು ಸಂಗ್ರಹಿಸಿ ಬೆಳೆ ಮಾಡುವುದು ಕಷ್ಟಸಾಧ್ಯ.
 • ಹಾಗಾಗಿ ಮೂಲ ಶಿಲೀಂದ್ರವನ್ನು ಪ್ರಯೋಗಾಲಯದಲ್ಲಿ ಜೋಳದ ಕಾಳುಗಳ ಮೇಲೆ ಬೆಳೆಸಿ ರೈತರ ಬಳಕೆಯ ಅಣಬೆ ಬೀಜ ಅಥವಾ ಸ್ಪಾನ್ ತಯಾರಿಸಲಾಗುತ್ತದೆ.
 • ಇದರಿಂದ ಬತ್ತದ ಹುಲ್ಲಿನ ಮೇಲೆ ಶಿಲೀಂಧ್ರ ಬೆಳೆಸಿ ಅಣಬೆಯನ್ನು ಉತ್ಪಾದಿಸಲಾಗುತ್ತದೆ.
 • ಇದು ತುಂಬಾ ಸೂಕ್ಷ್ಮದ ಕೆಲಸವಾಗಿದ್ದು ವೈಜ್ಞಾನಿಕ ತಿಳುವಳಿಕೆ ಪಕ್ಕಾ ತರಬೇತಿ ಪಡೆದು ಚಾಚೂ ತಪ್ಪದೇ ಅನುಸರಿಸಬೇಕು.
 • ದೊಡ್ಡ ಪ್ರಮಾಣದಲ್ಲಿ ಪರಿಶುದ್ಧ ಸ್ಪಾನ್ ತಯಾರಿಸಲು ವೈಜ್ಞಾನಿಕವಾಗಿ ಲ್ಯಾಮಿನಾರ್ ಗಾಳಿಯ ಹರಿವಿನ  ಕೋಣೆಯನ್ನು ಬಳಸುತ್ತಾರೆ.

ಅಣಬೆ ಸ್ಪಾನ್ (ಬೀಜ) ಉತ್ಪಾದನೆ ವಿಧಾನ :

 • ಯಾವುದೇ ಶಿಲೀಂದ್ರದ ಸೋಂಕಿಲ್ಲದ, ಒಡೆದ ಕಾಳುಗಳಿಲ್ಲದ, ಸ್ವಚ್ಚವಾದ ಬಿಳಿ ಜೋಳ ತರಬೇಕು.
 • ಚೆನ್ನಾಗಿ ತೊಳೆದು ಅರ್ಧ ಹಂತಕ್ಕೆ ಬೇಯಿಸಬೇಕು ಅಂದರೆ, ಕಾಳುಗಳ ಮೈಮೇಲೆ ಬಿರುಕುಗಳು ಬಿಡಬೇಕು. ಆದರೆ ಪೂರ್ತಿ ಅರಳಬಾರದು.
 • ನೀರು ಬಸಿದು, ನಾಲ್ಕು ಗಂಟೆಗಳ ಕಾಲ ಒಂದು ಸ್ವಚ್ಚ ಬಟ್ಟೆಯ ಮೇಲೆ ಹರಗಿ ಆರಲು ಬಿಡಬೇಕು.
 • ನಂತರ ಕಾಳಿನ ಒಣ ತೂಕದ ಶೇ. 15 ರಷ್ಟು ಪ್ರಮಾಣದಲ್ಲಿ ಚಾಕ್ ಪೌಡರ್ ಮತ್ತು ಶೇ. 10 ರಷ್ಟು ಜಿಪ್ಸಂ ಪುಡಿಗಳನ್ನು ಬೆರಸಿ ಚೆನ್ನಾಗಿ ಕಲಸಬೇಕು.
 • ಜೋಳದ ಕಾಳುಗಳು ಬಿಡಿ-ಬಿಡಿಯಾಗಿರಲು ಮತ್ತು ಅದರ ರಸಸಾರ ಮಟ್ಟ ಸೂಕ್ತವಾಗಿಸಲು ಈ ಪುಡಿಗಳ ಬಳಕೆ ಅಗತ್ಯ.
 • ತದನಂತರ ಇದನ್ನ 200 ಗೇಜಿನ ಪಿ.ಪಿ. ಚೀಲದಲ್ಲಿ ತುಂಬಿಸಿ ಕುತ್ತಿಗೆಯಲ್ಲಿ ಹತ್ತಿಯ ಬೆರಡೆಯನ್ನು ಸೇರಿಸಿ, ಬಿಗಿಯಾಗಿ ಕಟ್ಟಬೇಕು.
 • ಇವುಗಳನ್ನು ಆಟೋಕ್ಲೇವ್‍ನಲ್ಲಿ 120 ಪೌಂಡ್ ಒತ್ತಡದಲ್ಲಿ, 2 ಗಂಟೆಗಳ ಕಾಲ ನಿರ್ಜೀವಿಕರಣ ಮಾಡಬೇಕು. 
 • ನಂತರ 4 ಗಂಟೆಗಳ ಕಾಲ ಆರಲು ಬಿಡಬೇಕು. ಯಾವುದೇ ಕಾರಣಕ್ಕೂ ಕೊಟ್ಟೆಯ ಬಾಯಿ ಬಿಚ್ಚಬಾರದು.
 • ಪೂರ್ತಿ ತಂಪಾದ ನಂತರ, ಈ ಜೋಳದ ಕಾಳುಗಳಿಗೆ ಶಿಲೀಂದ್ರ ವರ್ಗಾವಣೆ ಪೆಟ್ಟಿಗೆಯಲ್ಲಿ ಮೂಲ ಶಿಲೀಂದ್ರವನ್ನು  ಸೇರಿಸಿ. ಈ ಹಂತದಲ್ಲಿ ತುಂಬಾ ಜಾಗ್ರತೆ ಅಗತ್ಯ.
 • ಈ ಪಾಕೇಟನ್ನು ತಂಪಾಗಿರುವ ಕತ್ತಲೆ ಕೋಣೆಯಲ್ಲಿ 10 ರಿಂದ 12 ದಿನ ಇಟ್ಟರೆ, ಅಣಬೆ ಶಿಲೀಂದ್ರದ ಸೂಕ್ಷ್ಮ ಎಳೆಗಳು ಜೋಳದ ಕಾಳುಗಳನ್ನು ಆವರಿಸಿ ದಟ್ಟವಾಗಿ ಬಿಳಿ ಬಣ್ಣದಲ್ಲಿ ಬೆಳೆದಿರುತ್ತದೆ.
 • ಪಾಕೇಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದರಲ್ಲಿ ಕಳೆ ಶಿಲೀಂದ್ರ ಬೆಳೆದಿದ್ದಲ್ಲಿ, ಅದನ್ನು ಮಣ್ಣಲ್ಲಿ ಹೂತು ಹಾಕಿ ನಾಶಪಡಿಸಬೇಕು.

ಬೀಜ ಹಾಕಿದ ನಂತರ ಈ ರೀತಿ ತಂಪು ಕೊಣೆಯಲ್ಲಿ ಸ್ಟಾಂಡ್ ನಲ್ಲಿ ಶೇಖರಿಸಬೇಕು.

 ಇದು  ಅಗತ್ಯ:

 • ಸ್ಪಾನ್ ತಾಜಾ ಇದ್ದಾಗಲೇ ಬಳಸುವುದು ಒಳಿತು.
 • ಒಂದು ವಾರಗಳ ಕಾಲ ತಂಗಳು ಪೆಟ್ಟಿಗೆಯಲ್ಲಿಟ್ಟು ಕೂಡಾ ಬಳಸಬಾರದು.
 • ತುಂಬಾ ದಿನ ಕಳೆದ ಸ್ಪಾನ್ ನಿಂದ ಅಣಬೆ ಇಳುವರಿ ಕಡಿಮೆಯಾಗುತ್ತದೆ.
 • ಒಮ್ಮೆ ಪಾಕೇಟ್ ತರೆದರೆ ಪೂರ್ತಿ ಬಳಸಬೇಕು. ಮತ್ತೆ ಕಟ್ಟಿಟ್ಟು ಬಳಸಬಾರದು.

ಸರ್ಕಾರಿ ಪ್ರಯೋಗಾಲಯಗಳಲ್ಲಿ ಪಿ.ಪಿ. ಚೀಲಗಳಲ್ಲಿ 250 ಗ್ರಾಂ. ಪ್ರಮಾಣದ ಸ್ಪಾನ್ ತಯಾರಿಸಿ, 10 ರೂ. ಗೆ ಮಾರುತ್ತಾರೆ. ಆದರೆ ರೈತರ ವಾಣಿಜ್ಯ ಬೆಳಸಿ ಸುಮಾರು 1/2 – 1 ಕಿ.ಗ್ರಾಂ. ಪ್ರಮಾಣದ ಸ್ಪಾನ್ ಪಾಕೇಟು ಸೂಕ್ತ.

 ಚಿಪ್ಪು  ಅಣಬೆ ಬೆಳೆಯುವ ವಿಧಾನ : 

 • ಅಣಬೆಯನ್ನು ಭತ್ತ, ರಾಗಿ, ಗೋಧಿ ಹುಲ್ಲುಗಳು, ಕಾಫೀಸಿಪ್ಪೆ ಕಬ್ಬಿನ ತರಗು ಮುಂತಾದ ವಿವಿಧ ಕೃಷಿ ಕಚ್ಚಾ ವಸ್ತುಗಳ ಮೇಲೆ ಬೆಳೆಸಬಹುದು. ಆದರೆ ಎಲ್ಲಡೆ ಸಿಗುವ ಭತ್ತದ ಹುಲ್ಲು ಹೆಚ್ಚಾಗಿ ಬಳಕೆಯಲ್ಲಿದೆ.
 • ಅಣಬೆ ಬೆಳೆಸಲು ಸದೃಢವಾಗಿರುವ, ಚೆನ್ನಾಗಿ ಒಣಗಿರುವ ಭತ್ತದ ಹೊಸ ಹುಲ್ಲನ್ನು ಆಯ್ದುಕೊಳ್ಳಿ. ಮೃದು ಹುಲ್ಲುಗಳಾದರೆ, ಹೆಚ್ಚು ನೀರು ಹಿಡಿದಿಟ್ಟುಕೊಂಡು ನಂತರ ಕೊಳೆಯುತ್ತದೆ.
 • ಹುಲ್ಲು ಸ್ವಚ್ಚವಾಗಿರಬೇಕು. ಮಳೆಗೆ ಸಿಲುಕಿ ಕಪ್ಪಾದ, ಶಿಲೀಂಧ್ರಗಳಿರುವ ಹುಲ್ಲು ಬೇಡ. ಇದು ಸೋಂಕಿಗೆ ಕಾರಣವಾಗುತ್ತದೆ.
 • ಗಟ್ಟಿ ಹುಲ್ಲು ಕತ್ತರಿಸಲು ಸುಲಭ ಮತ್ತು ಶಿಲೀಂದ್ರ ಬೆಳೆಗಳು ಹಬ್ಬಿ ಬೆಳೆಯಲು ಅನುಕೂಲಕರ.
 • ಭತ್ತದ ಹುಲ್ಲನ್ನು ಕತ್ತರಿಸಿ, ನೀರಿನಲ್ಲಿ 6-8 ಗಂಟೆಗಳ ಕಾಲ ನೆನೆಸುವುದು, ನಂತರ ನೀರಿನಲ್ಲಿ 30-45 ನಿಮಿಷಗಗಳ ಕಾಲ ಕುದಿಸಿ ನೀರನ್ನು ಬಸಿಯಬೇಕು.ಮತ್ತು ಅಣಬೆ ಬೀಜಗಳನ್ನು ಬಿಡಿಸಿಟ್ಟುಕೊಳ್ಳಿ.
 •  ನೆನಪಿರಲಿ ಸ್ಪಾನಿಂಗ್ ಮಾಡುವವರ ಕೈ ಸ್ವಚ್ಚವಾಗಿರಬೇಕು. ಹುಲ್ಲು ಹಾಕುವವ ಬೀಜ ಮುಟ್ಟಬಾರದು. ಬೀಜ ಹಾಕುವವ ಹುಲ್ಲು ಮುಟ್ಟಬಾರದು.

ಮೊದಲು ತಯಾರಿಸಿಟ್ಟ ಬಿಸಿ-ಹಾರಿದ ಹುಲ್ಲನ್ನು ಹಂತ ಹಂತವಾಗಿ ಪಿ.ಪಿ. ಪ್ಲಾಸ್ಟಿಕ್ ಕವರಿನಲ್ಲಿ ತುಂಬುತ್ತಾ ಬನ್ನಿ. ಎರಡು ಇಂಚು ಹುಲ್ಲು ಹಾಕಿ ಒಂದು ಹಾಸು ಸ್ಪಾನ್ ಕಾಳುಗಳನ್ನು ಉದುರಿಸಿ, ಮತ್ತೆ ಹುಲ್ಲಿನ ಹಾಸು, ಹೀಗೆ ಪದರಗಳನ್ನು ಪುನರಾವರ್ತಿಸಿ, ಕಟ್ಟ ಕಡೆಯಲ್ಲಿ ಸ್ಪಾನ್ ಪದರವಿರಲಿ.

 •  ಶಿಲೀಂಧ್ರದ ಎಳೆಗಳು ಹುಲ್ಲುಗಳನ್ನು ಪÀÇರ್ತಿ ಆವರಿಸಿ, ಬೆಳೆಯಲು 15-20 ದಿನಗಳು ಬೇಕಾಗುತ್ತದೆ.
 •  ಅಣಬೆಯ ಶಿಲೀಂಧ್ರವು ಹುಲ್ಲನ್ನು ಪೂರ್ತಿಯಾಗಿ ಆವರಿಸಿ ಬೆಳೆದಿದ್ದಲ್ಲಿ, ಪ್ಲಾಸ್ಟಿಕ್ ಅನ್ನು ಕತ್ತರಿಸಿ ತೆಗೆಯಿರಿ.
 •  7-8 ದಿನಗಳಲ್ಲಿ ಅಣಬೆಗಳು ಪೂರ್ತಿ ಅರಳಿ ಚಿಪ್ಪಿನಂತೆ ಬೆಳೆದಿರುತ್ತದೆ.
 •   ಅವು ಧೂಳಿನಂತ ಸೂಕ್ಷ್ಮ ಬೀಜಗಳನ್ನು ಉದುರಿಸುವ ಮೊದಲು ಕಟಾವು ಮಾಡಬೇಕು. ತಡ ಮಾಡಿದ್ದಲ್ಲಿ ಬಣ್ಣ ಕಳೆದುಕೊಂಡು ಬಹು ಬೇಗ ಹಾಳಾಗುತ್ತದೆ.
 •   ಕಟಾವು ಸುಲಭವಾಗಲು ಒಂದು ದಿನ ನೀರು ಸಿಂಪರಣೆ ನಿಲ್ಲಿಸುವುದು ಒಳ್ಳೆಯದು.
 •   ಕಂಟಾಮಿನೇಷನ್ ಸಮಸ್ಯೆ ಇಲ್ಲದಿದ್ದರೆ, ಈ ರೀತಿ ಮೂರು ಬೆಳೆ ಪಡೆಯಬಹುದು.

ಅಣಬೆ ಬೆಳೆಸುವ ವೃತ್ತಿಯನ್ನು ಮಾಡುವವರಿಗೆ ಅಲ್ಲಲ್ಲಿ  ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಸಂಶೋಧನಾ ಸಂಸ್ಥೆಗಳು, ರುಡ್ ಸೆಟ್ ಸಂಸ್ಥೆಗಳು ತರಬೇತು ನೀಡುತ್ತವೆ. ಇದನ್ನು ಬಳಸಿಕೊಂಡು ತಜ್ಞತೆಯನ್ನು ಸಂಪಾದಿಸಬಹುದು
 ಲೇಖಕರು : ಪೂಜಾ ಎಸ್.ಪಿ., ಪಿ.ಹೆಚ್.ಡಿ. ಸಂಶೋಧನಾ ವಿದ್ಯಾರ್ಥಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ  ಶಾಸ್ತ್ರ ವಿಭಾಗ., ಕೃ.ವಿ.ವಿ. ಬೆಂಗಳೂರು.  ಡಾ|| ಶ್ರೀನಿವಾಸ್ ಬಿ.ವಿ. ಮಣ್ಣು ವಿಜ್ಞಾನಿ., ಐ.ಸಿ.ಎ.ಆರ್., ಕೆ.ವಿ.ಕೆ., ಕಲಬುರ್ಗಿ.  ಮಾನಸ ಎಲ್.ಪಿ., ಎಂ.ಎಸ್ಸಿ. (ಕೃಷಿ), ಕೃ.ವಿ.ವಿ. ಧಾರವಾಡ. ಮತ್ತು    ರುಹೀನ್‍ತಾಜ್ ಎಂ.ಎಸ್ಸಿ. (ಕೃಷಿ), ಕೃ.ಮ.ವಿ., ವಿಜಯಪುರ.
end of the article
search words: mushroom cultivation # Rural self employment # oyster mushroom #  Mushrooom cultivation technique # krushiabhivruddi # Krushi #

Leave a Reply

Your email address will not be published. Required fields are marked *

error: Content is protected !!