ಕರ್ನಾಟಕದಲ್ಲಿ ಕರಾವಳಿ ಮಲೆನಾಡು ಭಾಗಗಳಲ್ಲಿ ಸುಮಾರು 750 ಮಿಕ್ಕಿ ಅತ್ಯಾಧುನಿಕ ಗೋಡಂಬಿ ಸಂಸ್ಕರಣೆ ಮತ್ತು ರಪ್ತು ಉದ್ದಿಮೆಗಳಿವೆ. 1000 ಕೂ ಮಿಕ್ಕಿ ಪೀಸ್ ವರ್ಕ್ ಮಾಡಿ ಕೊಡುವ ಸಣ್ಣ ಸಣ್ಣ ಘಟಕಗಳಿವೆ. ಆದರೆ ಬೆಳೆಗಾರರಿಗೆ ಮಾತ್ರ ಸಿಗುವುದು ಯಾವಾಗಲೂ ಉತ್ಪಾದನಾ ವೆಚ್ಚಕ್ಕಿಂತ ಬೆಲೆ ಕಡಿಮೆ…
- ಒಂದು ಗೇರು ಮರದಿಂದ ಗೇರು ಹಣ್ಣುಗಳನ್ನು ಕೊಯಿಲು ಮಾಡಿ ಅದರ ಬೀಜ ಬೇರ್ಪಡಿಸಿ ಒಣಗಿಸಿ ಅದನ್ನು ಕೊಳ್ಳುವವರಲ್ಲಿಗೆ ಒಯ್ಯುವ ಕೆಲಸದ ಮಜೂರಿ ಕಿಲೋಗೆ 100 ಕ್ಕೂ ಮಿಕ್ಕಿ ತಗಲುತ್ತದೆ.
- ಆದರೆ ಅದರ ಕೊಳ್ಳೂವ ದರ ಯಾವಾಗಲೂ ಅದಕ್ಕಿಂತ ಕಡಿಮೆ ಇರುತ್ತದೆ.
- ಗೋಡಂಬಿ ಸಂಶೋಧನಾ ಸಂಸ್ಥೆಗಳು ಮತ್ತು ಗೋಡಂಬಿ ಅಭಿವೃದ್ದಿ ಮಂಡಳಿ, ಗೇರು ಬೆಳೆ ವಿಸ್ತರಣೆ ಬಗ್ಗೆ ಉಸ್ತುಕತೆಯಲ್ಲಿ ಕೆಲಸ ಮಾಡುತ್ತವೆಯೇ ಹೊರತು ರೈತರು ಬೆಳೆದ ಗೇರು ಬೀಜದ ಉತ್ಪಾದನಾ ವೆಚ್ಚಕ್ಕನುಗುಣವಾದ ಬೆಲೆ ನಿರ್ಧರಣೆ ಬಗ್ಗೆ ಸೊಲ್ಲೆತ್ತುವುದಿಲ್ಲ.
ಗೇರು ಬೀಜದ ಉತ್ಪಾದನಾ ವೆಚ್ಚ:
- ಗೇರು ಬೀಜದ ಉತ್ಪಾದನೆ ಖರ್ಚನ್ನು ಬಹುಷಃ ಯಾರು ಲೆಕ್ಕಾಚಾರವನ್ನೇ ಹಾಕುತ್ತಿಲ್ಲ.
- ಗುಡ್ಡದ ಭೂಮಿಗೆ ಇದು ಇತರ ಬೆಳೆಗಳಿಗಿಂತ ಲಾಭದ ಬೆಳೆ ಎಂದು ನಾಟಿ ಮಾಡಲು ಮುಂದಾಗುತ್ತಿದ್ದಾರೆ.
- ಸಸ್ಯೋತ್ಪಾದನೆ ಮಾಡಿ ಸಸಿ ಒದಗಿಸುವ ಸರಕಾರೀ ಪ್ರಾಯೋಜಿತ ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ನರ್ಸರಿಗಳು ಜೊತೆಗೆ ಗೊಡಂಬಿ ಅಭಿವೃದ್ದಿ ಮಂಡಳಿಯವರೂ ಸಹ ರೈತರ ಶ್ರಮವನ್ನು ಲೆಕ್ಕಾಚಾರ ಹಾಕದೆ ಗೊಡಂಬಿ ಬೆಳೆ ಲಾಭದಾಯಕ ಎನ್ನುತ್ತಾರೆ.
- ಗೇರು ಸಸಿಯನ್ನು ನಾಟಿ ಮಾಡಲು ಭೂಮಿ ಸಿದ್ದತೆಗೆ ಒಂದು ಗಿಡಕ್ಕೆ ಕನಿಷ್ಟ 100 ರೂ. ಖರ್ಚು ಇದೆ.
- ಇದಲ್ಲದೆ ವರ್ಷಕ್ಕೆ ಒಮ್ಮೆಯಾದರೂ ಕಳೆ ಇತ್ಯಾದಿ ತೆಗೆದು ಗೊಬ್ಬರ ಹಾಕಲು, ಬುಡ ಭಾಗದ ಸ್ವಚ್ಚತೆಗೆ ಮತ್ತೆ ವಾರ್ಷಿಕ ರೂ. 100 ಖರ್ಚು ಬಂದೇ ಬರುತ್ತದೆ.
ಉತ್ತಮ ಇಳುವರಿ ಪಡೆಯಲು ಮೂರು ಬಾರಿ ಕೀಟನಾಶಕ ಸಿಂಪರಣೆಗೆ ಮರವೊಂದಕೆ ಕನಿಷ್ಟ 100 ರೂ. ಖರ್ಚು ಇದೆ.
- ಒಂದು ಗಿಡದಲ್ಲಿ ದಿನಕ್ಕೆ ಹೆಚ್ಚೆಂದರೆ 250 ಗ್ರಾಂ ಗೇರು ಬೀಜ ದೊರೆಯುತ್ತದೆ.
- ಇಷ್ಟು ಗೇರು ಬೀಜವನ್ನು ಸಂಗ್ರಹಿಸಲು ಮರದ ಬುಡಕ್ಕೆ ಪ್ರತೀ ದಿನ ಒಡಾಡಲು ಬೇಕಾಗುವ ಹೊತ್ತು ಅರ್ದ ಗಂಟೆ.
- ಒಂದು ಎಕರೆಯಲ್ಲಿ ಸುಮಾರು 100 ಮರಗಳಿದರೆ ಅದೆಲ್ಲದರ ಬುಡಕ್ಕೆ ದಿನಾ ಒಂದು ಬಾರಿ ಹೋಗಲು ಕನಿಷ್ಟ ಎರಡು ಆಳು ದಿನಾ ಬೇಕಾಗುತ್ತದೆ.
- ಅವರ ದಿನದ ಮಜೂರಿ ಕನಿಶ್ಟ 1200 ರೂ. ಗಳಾಗುತ್ತದೆ.
- ಇವರ ಈ ಕೆಲಸದ ಅವಧಿಯಲ್ಲಿ ಹೆಚ್ಚೆಂದರೆ 10 ಕಿಲೋ ಗೇರು ಬೀಜ ದೊರೆಯಬಹುದು.
ಇದೆಲ್ಲಾ ಲೆಕ್ಕಾಚಾರ ಹಾಕಿದರೆ ಒಂದು ಕಿಲೋ ಗೇರು ಬೀಜಕ್ಕೆ150 ಕ್ಕೂ ಹೆಚ್ಚಿನ ಉತ್ಪಾದನಾ ವೆಚ್ಚ ತಗಲುತ್ತದೆ.
ಗೇರು ಬೀಜಕ್ಕೆ ಕಳೆದ ಐದು ವರ್ಷಗಳ ಸರಾಸರಿ ಬೆಲೆ 90 ರೂ. ಗಳಷ್ಟು . ಇದೆಲ್ಲಾ ತಿಳಿದೂ ನಮ್ಮ ತಜ್ಜರು ಯಾವ ಲೆಕ್ಕಾಚಾರದದಲ್ಲಿ ಗೋಡಂಬಿ ಬೆಳೆ ಲಾಭದಾಯಕ ಬೆಳೆಸಿ ಬೆಳೆಸಿ ಎಂದು ಪ್ರಚಾರದಲ್ಲಿ ನಿರತರಾಗುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ.
ಖರೀದಿಗೆ ಸ್ಪರ್ಧೆ ಬೇಕು:
- ಗೇರು ಬೀಜದ ಖರೀದಿಗೆ ಈಗ ಇರುವ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು.
- ಕಚ್ಚಾ ಗೇರು ಬೀಜಕ್ಕೆ ದರ ನಿರ್ಧರಣೆ ಎಂಬುದು ಉತ್ಪಾದನಾ ವೆಚ್ಚಕ್ಕನುಗುಣವಾಗಿ ನಿರ್ಧಾರ ಆಗಬೇಕು.
- ಸಿದ್ದ ಗೋಡಂಬಿಗೆ ಹೇಗೆ ಉತ್ಪಾದನಾ ವೆಚ್ಚಕ್ಕನುಗುಣವಾಗಿ ಬೆಲೆ ನಿರ್ಧಾರ ಆಗುತ್ತದೆಯೋ ಅದೇ ರೀತಿಯಲ್ಲಿ ಕಚ್ಚಾ ಗೋಡಂಬಿಗೂ ಆಗಬೇಕು.
- ರೈತರು ಶ್ರಮಪಟ್ಟು ಬೆಳೆಯುವ ಗೇರು ಬೀಜಕ್ಕೆ ಸೀಸನ್ ಗೆ ಮುಂಚೆ ಈ ದರವನ್ನು ಗೋಡಂಬಿ ಅಭಿವೃದ್ದಿ ಮಂಡಳಿ ನಿರ್ಧಾರ ಮಾಡಬೇಕು.
- ಪ್ರಸ್ತುತ ಈ ಬೆಲೆ ನಿರ್ಧಾರ ಮಾಡುವವರು ಕಚ್ಚಾ ಗೇರು ಬೀಜ ಕೊಳ್ಳುವ ಉದ್ದಿಮೆದರಾರರು.
ಕಳೆದ ಮೂರು ವರ್ಷಕ್ಕೆ ಹಿಂದೆ ಒಮ್ಮೆ ಮಾತ್ರ ಕಚ್ಚಾ ಗೇರು ಬೀಜದ ದರ 125 ಸುಮಾರಿಗೆ ತಲುಪಿತ್ತು. ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಗೇರು ಬೀಜ ದೇಶೀಯ ಉದ್ದಿಮೆಗಳಿಗೆ ಸಾಕಾಗುವುದಿಲ್ಲ ಎಂದು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.
- ಆದರೆ ನಮ್ಮ ದೇಶದ ಬೆಳೆಗಾರರಿಗೆ ಮಾತ್ರ ಬೆಳೆ ಬೆಳೆಸಲು ತಗಲುವ ಉತ್ಪಾದನಾ ವೆಚ್ಚದಷ್ಟೂ ಬೆಲೆಯನ್ನು ನಿರ್ಧಾರ ಮಾಡಲಾಗುವುದಿಲ್ಲ.
ಬೆಳೆಗಾರರು ಒತ್ತಾಯಿಸಿ:
- ಗೋಡಂಬಿ ಸಂಸ್ಕರಣೆ ಮಾಡುವವರು ಸಂಘಟನೆ ಮಾಡಿಕೊಂಡು ತಮ್ಮ ಉತ್ಪನ್ನಕ್ಕೆ ದರ ನಿರ್ಧಾರ ಮಾಡುತ್ತಾರೆ.
- ಸರಕಾರಕ್ಕೆ ಒತ್ತಡ ಹಾಕಿ ವಿದೇಶಗಳಿಂದ ಗೇರು ಬೀಜ ಆಮದು ಮಾಡಿಕೊಂಡೂ ದೇಶದ ಬೆಳೆಗಾರರ ಉತ್ಪನ್ನದ ಬೆಲೆ ಇಳಿಸುತ್ತಾರೆ.
- ಆದರೆ ಬೆಳೆಗಾರರು ಮಾತ್ರ ಸಂಘಟಿತರಾಗದೇ ಪಾಲಿಗೆಬಂದದ್ದು ಪಂಚಾಮೃತ ಎಂದು ಯಾವ ಬೆಲೆಯಾದರೂ ಅದಕ್ಕೆ ಹೊಂದಿಕೊಳ್ಳುತ್ತಾರೆ.
ಇದರಿಂದ ಹೊರ ಬರಲು ಗೋಡಂಬಿ ಬೆಳೆಗಾರರು ಸಹ ಸಂಘಟನೆಯ ಮೂಲಕ ಹೋರಾಡಬೇಕಾಗಿದೆ. ಗೊಡಂಬಿ ಬೆಳೆಗಾರರು ಒಗ್ಗಟ್ಟಾಗಬೇಕು ಮತ್ತು ತಮ್ಮ ಉತ್ಪಾದನಾ ವೆಚ್ಚಕ್ಕನುಗುಣವಾದ ಬೆಲೆ ಪಡೆಯುವಂತಾಗಬೇಕು.