ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ ಮಾಡಿದರೆ ಕೆಲವು ಸರಳ, ಸುರಕ್ಷಿತ ಬೆಳೆ ಸಂರಕ್ಷಣಾ ವಿಧಾನಗಳು ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕವಾಗಿ ರಾಸಾಯನಿಕ ಬಳಕೆ ಇಲ್ಲದೆ ನಿಯಂತ್ರಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಇದನ್ನು ಜೈವಿಕ ಕೀಟ- ರೋಗ ನಿಯಂತ್ರಣ ಎನ್ನುತ್ತಾರೆ. ಇದು ಯಾರಿಗೂ ಯಾವ ರೀತಿಯಲ್ಲೂ ಅಪಾಯ ಇಲ್ಲದ ಜೀವಾಣುಗಳಾಗಿದ್ದು, ಎಲ್ಲದರ ಮೂಲ ಮಣ್ಣೇ ಆಗಿರುತ್ತದೆ.
ಒಂದು ತೋಟದಲ್ಲಿ ಎಲ್ಲದಕ್ಕೂ ರೋಗ ಅಥವಾ ಕೀಟ ಸಮಸ್ಯೆ ಉಂಟಾಗಿ,ಕೆಲವು ಮರಗಳು/ ಸಸಿಗಳು ಏನೂ ಅಗದೆ ಉಳಿದುಕೊಂಡಿರುತ್ತವೆ. ಹಾಗೆಯೇ ಕಾಡಿನಲ್ಲಿ ಅದರಷ್ಟಕ್ಕೆ ಬೆಳೆಯುವ ಕೆಲವು ಮರ ಮಟ್ಟುಗಳಿಗೆ ಯಾವ ರೋಗ,ಕೀಟ ಸಮಸ್ಯೆಯೂ ಇರುವುದಿಲ್ಲ. ಇದನ್ನೆಲ್ಲಾ ನಾವೂ ಗಮನಿಸಿರಬಹುದು. ತಜ್ಞರು ಇದನ್ನೆಲ್ಲಾ ಗಮನಿಸಿ, ಅದನ್ನು ಪರೀಕ್ಷೆ ಮಾಡಿ ನೋಡಿದಾಗ ಅವರ ಗಮನಕ್ಕೆ ಬಂದುದು, ಆ ನಿರ್ದಿಷ್ಟ ಸ್ಥಳದಲ್ಲಿ ಕೆಲವು ರಕ್ಷಣಾತ್ಮಕ ಜೀವಾಣುಗಳು ಇರುವಿಕೆ, ಅವು ಬೆಳೆಗೆ ರೋಗ ತಡೆದುಕೊಳ್ಳುವ ಶಕ್ತಿಯನ್ನು ಕೊಟ್ಟಿವೆ.ಅಧ್ಯಯನಾಕಾರರು ಇಂತಹ ಬೇರೆ ಬೇರೆ ಜೀವಾಣುಗಳನನ್ನು ಗುರುತಿಸಿದ್ದಾರೆ. ಅವುಗಳ ಕೆಲಸವನ್ನು ಅಧ್ಯಯನ ಮಾಡಿದ್ದಾರೆ. ಯಾವುದು ಪ್ರಯೋಗಾಲಯದಲ್ಲಿ ಬೆಳೆಸಿ ಮತ್ತೆ ಮಣ್ಣಿಗೆ ಸೇರಿಸಿದಾಗ ಅವು ಬದುಕಿ ಉಳಿದು ತಮ್ಮ ಕೆಲಸವನ್ನು ಮಾಡುತ್ತವೆ ಎಂದು ತಿಳಿದು ಅವುಗಳನ್ನು ಬಳಕೆ ಮಾಡಲು ಬಿಡುಗಡೆ ಮಾಡಿದ್ದಾರೆ. ಅವು ಈಗ ನಾವು ಕಾಣುತ್ತಿರುವ ವಿವಿಧ ಜೀವಾಣುಗಳು. ಇವುಗಳಲ್ಲಿ ಬೆಳೆ ಪೋಷಕಗಳನ್ನು ಒದಗಿಸಿಕೊಡಬಲ್ಲ ಜೀವಾಣುಗಳು, ಬೆಳೆ ಸಂರಕ್ಷಕ ಜೀವಾಣುಗಳು ಎಂದು ವರ್ಗೀಕರಣ ಮಾಡಿದ್ದಾರೆ, ಬೆಳೆ ಸಂರಕ್ಷಕಗಳಲ್ಲಿ ಸಾರಜನಕ ಸ್ಥಿರೀಕರಿಸುವ (Bio N)ಜೀವಾಣುಗಳು, ರಂಜಕ ಕರಗಿಸುವ (Bio P) ಜೀವಾಣುಗಳು, ಪೊಟ್ಯಾಶ್ (Bio K)ಒಟ್ಟುಗೂಡಿಸುವವುಗಳು, ಹಾಗೆಯೇ ಬೆಳವಣಿಗೆ ಪ್ರಚೋದಕಗಳು,(PGPR) ಸೂಕ್ಷ್ಮ ಪೋಷಕಾಂಶ ಒದಗಿಸುವ (Micro nutrient providers)ಜೀವಾಣುಗಳು ಇದ್ದರೆ, ಕೀಟ ರೋಗ ನಿಯಂತ್ರಕ ಅಥವಾ ರಕ್ಷಕ ಜೀವಾಣುಗಳನ್ನು ಈ ಕೆಳಗೆ ವಿವರವಾಗಿ ತಿಳಿಸಲಾಗಿದೆ.
- ಪ್ರತಿಯೊಂದೂ ಜೀವಿಗೂ ಮತ್ತೊಂದು ವೈರಿ ಜೀವಿ ಇರುತ್ತದೆ.
- ಇಲಿಯನ್ನು ತಿನ್ನಲು ಹಾವು ಇದ್ದರೆ ಹಾವನ್ನು ತಿನ್ನಲು ಮುಂಗುಸಿ, ನವಿಲುಗಳಿರುತ್ತವೆ ಮತ್ತೆ ಅವುಗಳನ್ನು ತಿನ್ನಲು ಹೆಬ್ಬಾವು ಹೀಗೆ ಒಂದಕ್ಕೊಂದು ವೈರಿಗಳನ್ನು ಪ್ರಕೃತಿ ಸೃಷ್ಟಿ ಮಾಡಿರುತ್ತದೆ.
ಕೆಲವು ಸೂಕ್ಷ್ಮ (ಕಣ್ಣಿಗೆ ಕಾಣದ ) ಜೀವಿಗಳ ಮೂಲಕ ಬೆಳೆಗಳಿಗೆ ಹಾನಿ ಮಾಡುವ ಕೀಟಾಣುಗಳು ಮತ್ತು ರೋಗಾಣುಗಳನ್ನು ನಿಯಂತ್ರಿಸಲು ಆಗುತ್ತದೆ. ಇವುಗಳಲ್ಲಿ ಶಿಲೀಂದ್ರಗಳು ಮತ್ತು ಬ್ಯಾಕ್ಟೀರಿಯಾಗಳು ಸೇರಿವೆ. ಇವು ತನ್ನ ಜೀವನ ಚಕ್ರವನ್ನು ವೈರಿ ಜೀವಿಯ ಜೊತೆಗೆ ಮಾಡಿ ಅದನ್ನು ಸಾಯುವಂತೆ ಮಾಡುತ್ತದೆ, ಅಥವಾ ಹತ್ತಿಕ್ಕುತ್ತದೆ.
ಟ್ರೈಕೋಡರ್ಮಾ;
- ಕೊಳೆಯುವಿಕೆ ರೋಗಗಳಾದ ಸೊರಗು ರೋಗ, ಬೇರು ಕೊಳೆ ರೋಗ, ಸುಳಿ ಕೊಳೆ ರೋಗ, ಹಾಗೆಯೇ ಇನ್ನಿತರ ಶಿಲೀಂದ್ರ ಸಂಬಂಧಿತ ಕೊಳೆಯುವ ರೋಗಗಳನ್ನು ನಿಯಂತ್ರಿಸುವುದಕ್ಕೆ ಇದನ್ನು ಬಳಸಲಾಗುತ್ತದೆ.
- ರಾಸಾಯನಿಕ ಶಿಲೀಂದ್ರ ನಾಶಕದ ಬದಲಿಗೆ ಟ್ರೈಕೋಡರ್ಮಾ ಬಳಸಿದರೆ ಅದು ರೋಗ ಪ್ರತಿಬಂಧಿ ಕೆಲಸ ಮಾಡುತ್ತದೆ.
- ಕೊಳೆ ರೋಗ ತರುವ ಶಿಲೀಂದ್ರದ ಮೇಲೆ ಪರಾವಲಂಬಿಯಾಗಿ ಬದುಕಿ ಅದನ್ನು ನಾಶ ಮಾಡುತ್ತದೆ.
- ಇದನ್ನು ಮಣ್ಣು ಮೂಲದಿಂದಲೇ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ ಮತ್ತೆ ಮಣ್ಣಿಗೆ ಸೇರಿಸಲಾಗುತ್ತದೆ.
ಸೂಡೋಮೋನಸ್:
- Pseudomonas ಇದು ಒಂದು ಬೆಳೆವಣಿಗೆ ಪ್ರಚೋದಕ ಮತ್ತು ರೋಗ ನಿರೋಧಕ ಶಕ್ತಿ ಪಡೆದ ಎರಡು ಕಾರ್ಯ ಮಾಡಬಲ್ಲ ಬ್ಯಾಕ್ಟೀರಿಯಾ.
- ಇದು ಬೇರು ಪರಾವಲಂಬಿ ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ ರೋಗಕಾರಕಗಳ ಮೇಲೆ ಧಾಳಿ ಮಾಡುವ ಗುಣ ಹೊಂದಿದೆ.
- ತೋಟಗಾರಿಕಾ ಬೆಳೆಗಳು, ತರಕಾರಿ ಬೆಳೆಗಳು ವಾಣಿಜ್ಯ ಬೆಳೆಗಳ ಹಲವಾರು ಬೇರು ಸಂಬಂಧಿತ ರೋಗ ತಡೆಯಲು ಬಳಸಬಹುದು.
- ಇಷ್ಟೇ ಅಲ್ಲದೆ ಬೀಜಕ್ಕೆ ಬೀಜೋಪಾಚಾರ ಮಾಡಿದರೆ ಮೊಳಕೆ ಬರುವುದು ಉತ್ತಮವಾಗುತ್ತದೆ.
- ಸಸ್ಯ ಕೋಶಗಳಲ್ಲಿದ್ದುಕೊಂಡು ರಕ್ಷಣೆ ಕೊಡುತ್ತದೆ.
ಬೆವೇರಿಯಾ :
- Beauveria bassiana ಇದು ಒಂದು ಶಿಲೀಂದ್ರ ಕೀಟ ನಾಶಕ.
- ಇದನ್ನು ಬೀಜಾಣು ರೂಪದಲ್ಲಿ ಒದಗಿಸುತ್ತಾರೆ.
- ಇದನ್ನು ಬೆಳೆಗಳ ಮೇಲೆ ಸಿಂಪಡಿಸಿದಾಗ ಅದು ಎಲೆ , ಕಾಂಡ ಫಲದ ಮೇಲೆ ಬೀಜಾಣುಗಳಾಗಿ ಉಳಿದುಕೊಂಡು ಅದಕ್ಕೆ ತೊಂದರೆ ಮಾಡುವ ಜಿಗಿ ಹುಳ, ಬಿಳಿ ನೊಣ, ಬೇರು ಹುಳ, ಮುಂತಾದವುಗಳನ್ನು ಕೊಲ್ಲುತ್ತದೆ.
- ಬೆಳೆಗಳಿಗೆ ಹಾನಿ ಮಾಡುವ ಕೀಟಗಳ ಮೇಲೆ ಬಿಳಿ ಪರೆಯಂತೆ ಬೆಳೆದು ಅದಕ್ಕೆ ಉಸಿರು ಕಟ್ಟುವಂತೆ ಮಾಡಿ ಅದನ್ನು ಸಾಯಿಸುತ್ತದೆ.
ವರ್ಟಿಸೀಲಿಯಂ:
- Verticillium Lecanii,ಇದು ಶಿಲೀಂದ್ರ ಕೀಟ ನಾಶಕ.
- ಸಸ್ಯಗಳ ಫಲ, ಎಲೆ , ಹೂವು ರಸ ಹೀರುವ ಕೀಟ, ಚುಚ್ಚಿ ಮೊಟ್ಟೆ ಇಡುವ ಕೀಟ , ಹೇನು,ಥ್ರಿಪ್ಸ್, ಜೇಡರ ನುಶಿ, ಕೆಂಪು ಜೇಡರ ನುಶಿ, ಮುಂತಾದ ಕೀಟಗಳಲ್ಲಿ ಪರಾವಲಂಬಿಯಾಗಿ ಬೆಳೆದು ಅದನ್ನು ಸಾಯಿಸುತ್ತದೆ.
ಬ್ಯಾಸಿಲಸ್ ತುರುಂನ್ಸಿಸ್:
- Bacillus thuringiensis (Bt) ಇದು ಒಂದು ಒಂದು ಬ್ಯಾಕ್ಟೀರಿಯಾ.
- ಇದು ರಸ ಹೀರುವ ಹುಳುಗಳಾದ ಕಂಬಳಿ ಹುಳ, ಎಲೆ ತಿನ್ನುವ ಹುಳ, ಕಾಯಿ ಕೊರೆಯುವ ಹುಳ, ಹೂ ತಿನ್ನುವ ಹುಳ, ಚಿಟ್ಟೆ ಪತಂಗಗಳನ್ನು ಅವುಗಳ ಶರೀರದ ಒಳ ಹೋಗಿ ಅಲ್ಲಿ ತನ್ನ ವಿಷವನ್ನು ಸ್ರವಿಸಿ ಅದನ್ನು ಸಾಯುವಂತೆ ಮಾಡುತ್ತದೆ.
- ಇದೂ ಸಹ ಎಲೆ, ಹೂವು, ಕಾಯಿ ಮುಂತಾದ ಕಡೆ ಬೀಜಾಣು ರೂಪದಲ್ಲಿ ಬದುಕಿ ಅದನ್ನು ಭಕ್ಷಿಸಲು ಬಂದ ಕೀಟದ ಶರೀರದ ಒಳ ಸೇರಿ ಅದನ್ನು ಕೊಲ್ಲುತ್ತದೆ.
ಮೆಟರೈಜಿಯಂ:
- Metarhizium anisopliae, ಇದು ಶಿಲೀಂದ್ರವಾಗಿದ್ದು, ಪರಾವಲಂಭಿ ಜೀವಿಯಾಗಿ ನೆಲದ ಅಡಿಯಲ್ಲಿರುವ ಹುಳುಗಳನ್ನು ನಾಶಮಾಡುವ ಜೀವಿ.
- ಈ ಜೀವಿಯ ಬೀಜಾಣುಗಳು ಹಸುರು ಬಣ್ಣದಲ್ಲಿರುವ ಕಾರಣದಿಂದ ಇದಕ್ಕೆ ಗ್ರೀನ್ ಮೆಟಾ ಪೆಸ್ಟಿಸೈಡ್ (Green-Meta- pesticide) ಎನ್ನುತ್ತಾರೆ.
- ಬೇರು ಹುಳ, ನಮಟೋಡು, ಗೆದ್ದಳು, ಹಾಗೂ ಇನ್ನಿತರ ಹಾನಿಕಾರಕ ಹುಳುಗಳನ್ನು ಇದು ಪರಾವಲಂಬಿಯಾಗಿ ಪೀಡಿಸಿ ಸಾಯಿಸುತ್ತದೆ.
ಪೆಸಿಲೋ ಮೈಸಿಸ್:
- Paecilomyces lilacinus ಇದು ಶಿಲೀಂದ್ರ ಜೈವಿಕ ಕೀಟ ನಾಶಕ.
- ಇದು ಬೇರು ಕೊರೆಯುವ ಸೂಕ್ಷ್ಮ ಜಂತು ಹುಳುಗಳು, ಗೆದ್ದಳು, ಹುಳು ಹುಪ್ಪಟೆಗಳನ್ನು ನಾಶ ಮಾಡುತ್ತದೆ.
- ಮಲ್ಲಿಗೆ , ಅಲಸಂಡೆ, ದಾಳಿಂಬೆ, ಅಡಿಕೆ, ಬಾಳೆ, ಬದನೆ, ಬೆಂಡೆ, ಸೌತೆ, ಏಲಕ್ಕಿ, ಆಲೂಗಡ್ಡೆ ತರಕಾರಿ ಬೆಳೆಗಳ ಕಾಣುವ ಹುಳು ಮತ್ತು ಕಾಣದ ಹುಳುಗಳನ್ನು ನಾಶ ಮಾಡುವ ನಮಟೋ ಪಥೋಜೆನಿಕ್ ಶಿಲೀಂದ್ರ.
ವ್ಯಾಂ:
- Vesicular-arbuscular mycorrhiza (VAM)ವೆಸಿಕ್ಯುಲರ್ ಅರ್ಬುಸಿಕ್ಯುಲರ್ ಮೈಕೋರೈಜಾ ಈ ಶಿಲೀಂದ್ರವು ಸಸ್ಯ ಬೆಳವಣಿಗೆ ಹಾಗೂ ಸಸ್ಯ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ
- ಇದು ಬೇರು ವಲಯದಲ್ಲಿ ಬೇರಿನ ಸುತ್ತ, ರಕ್ಷಕವಾಗಿ ಇದ್ದು ಯಾವುದೇ ರೋಗ ಕಾರಕಗಳ ಒಳ ಪ್ರವೇಶವನ್ನು ತಡೆಯುತ್ತದೆ.
- ಸಸ್ಯ ಬೆಳವಣಿಗೆಗೆ ನಾವು ಒದಗಿಸುವ ಪೋಷಕಾಂಶ ಲಘು ಪೋಶಕಗಳನ್ನು ಸಮರ್ಪಕವಾಗಿ ಸಸ್ಯಗಳಿಗೆ ದೊರೆಯುವಂತೆ ಮಾಡಲು ಸಹಕರಿಸುತ್ತದೆ.
- ಇದರಿಂದ 10-20% ಇಳುವರಿಯೂ ಹೆಚ್ಚುತ್ತದೆ. ಕಾಂಡ ದಪ್ಪವಾಗಿ ಬೆಳೆಯುತ್ತದೆ.
- ಬೀಜೋಪಾಚಾರಕ್ಕೆ ಬಳಸಬಹುದು ದ್ರವ ಮಾಡಿ ಬೆಳೆಗಳ ಬುಡಕ್ಕೆ ಹಾಕಬಹುದು. ಕಾಂಪೋಸ್ಟು ನೊಂದಿಗೆ ಮಿಶ್ರಣ ಮಾಡಬಹುದು.
ಬರೇ ಇಷ್ಟೇ ಅಲ್ಲ. ರಾಸಾಯನಿಕ ಪೋಷಕಗಳನ್ನು ಹೆಚ್ಚು ಮಾಡಿಕೊಡುವ, ಅದನ್ನು ಜೀರ್ಣಿಸಿ ಕೊಡುವ, ಹಲವಾರು ಜೀವಾಣುಗಳಿವೆ. ತಜ್ಞರು ಜೀವಾಣುಗಳಲ್ಲಿ ಹೊಸ ಹೊಸತನ್ನು ಹುಡುಕುತ್ತಲೇ ಇದ್ದಾರೆ. ಪ್ರಯೋಗಗಳ ಮೂಲಕ ಯಶಸ್ಸು ಕಂಡ ಜೀವಾಣುಗಳನ್ನು ಆಗಾಗ ಕೃಷಿ ಬಳಕೆಗೆ ಬಿಡುಗಡೆ ಮಾಡುತ್ತಾರೆ. ಇವುಗಳನ್ನು ಸಂಶೋಧನಾ ಸಂಸ್ಥೆಗಳು ಮತ್ತು ಅನುಮತಿ ಪಡೆದ ಖಾಸಗಿಯರ ಮೂಲಕ ಅಧಿಕ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ರೈತರಿಗೆ ಲಭ್ಯವಾಗುವಂತೆ ಮಾಡಿದ್ದಾರೆ.