ಬೆಳೆಗಳಿಗೆ ಹಾನಿ ಮಾಡುವ ಕೀಟ – ರೋಗ ನಿಯಂತ್ರಣಕ್ಕೆ ವಿಷ ರಾಸಾಯನಿಕಗಳೇ ಅಂತಿಮ ಅಲ್ಲ. ಇವುಗಳಿಗೆ ಪರ್ಯಾಯ ಇದೆ. ಅದರ ಬದಲಿಗೆ ಜೈವಿಕ ಕೀಟ –ರೋಗ ನಿಯಂತ್ರಕಗಳು ಇವೆ. ಇವು ಉತ್ತಮವಾಗಿ ಕೆಲಸ ಮಾಡುತ್ತವೆ. ರಾಸಾಯನಿಕ ಕೀಟ ರೋಗ ನಿಯಂತ್ರಗಳೇ ಅಂತಿಮ ಅಲ್ಲ.
ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ ಮಾಡಿದರೆ ಕೆಲವು ಸರಳ , ಸುರಕ್ಷಿತ ಉಪಾಯಗಳು ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕ ಉಪಾಯಗಳಿಂದಲೇ ನಿಯಂತ್ರಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಇದನ್ನು ಜೈವಿಕ ಕೀಟ- ರೋಗ ನಿಯಂತ್ರಣ ಎನ್ನುತ್ತಾರೆ. ಇದು ಯಾರಿಗೂ ಯಾವ ರೀತಿಯಲ್ಲೂ ಅಪಾಯ ಇಲ್ಲದ ವಿಧಾನ.
ಪ್ರತಿಯೊಂದೂ ಜೀವಿಗೂ ಮತ್ತೊಂದು ವೈರಿ ಜೀವಿ ಇರುತ್ತದೆ. ಇಲಿಯನ್ನು ತಿನ್ನಲು ಹಾವು ಇದ್ದರೆ ಹಾವನ್ನು ತಿನ್ನಲು ಮುಂಗುಸಿ, ನವಿಲುಗಳಿರುತ್ತವೆ ಮತ್ತೆ ಅವುಗಳನ್ನು ತಿನ್ನಲು ಹೆಬ್ಬಾವು ಹೀಗೆ ಒಂದಕ್ಕೊಂದು ವೈರಿಗಳನ್ನು ಪ್ರಕೃತಿ ಸೃಷ್ಟಿ ಮಾಡಿರುತ್ತದೆ.
- ಕೆಲವು ಸೂಕ್ಷ್ಮ (ಕಣ್ಣಿಗೆ ಕಾಣದ ) ಜೀವಿಗಳ ಮೂಲಕ ಬೆಳೆಗಳಿಗೆ ಹಾನಿ ಮಾಡುವ ಕೀಟಾಣುಗಳು ಮತ್ತು ರೋಗಾಣುಗಳನ್ನು ನಿಯಂತ್ರಿಸಲು ಆಗುತ್ತದೆ.
- ಇವುಗಳಲ್ಲಿ ಶಿಲೀಂದ್ರಗಳು ಮತ್ತು ಬ್ಯಾಕ್ಟೀರಿಯಾಗಳು ಸೇರಿವೆ. ಇವು ತನ್ನ ಜೀವನ ಚಕ್ರವನ್ನು ವೈರಿ ಜೀವಿಯ ಜೊತೆಗೆ ಮಾಡಿ ಅದನ್ನು ಸಾಯುವಂತೆ ಮಾಡುತ್ತದೆ, ಅಥವಾ ಹತ್ತಿಕ್ಕುತ್ತದೆ.
ಜೈವಿಕ ರೋಗ ನಾಶಕ ಟ್ರೈಕೋಡರ್ಮಾ :
- ಕೊಳೆಯುವಿಕೆ ರೋಗಗಳಾದ ಸೊರಗು ರೋಗ, ಬೇರು ಕೊಳೆ ರೋಗ, ಸುಳಿ ಕೊಳೆ ರೋಗ, ಹಾಗೆಯೇ ಇನ್ನಿತರ ಶಿಲೀಂದ್ರ ಸಂಬಂಧಿತ ಕೊಳೆಯುವ ರೋಗಗಳನ್ನು ನಿಯಂತ್ರಿಸುವುದಕ್ಕೆ ರಾಸಾಯನಿಕ ಶಿಲೀಂದ್ರ ನಾಶಕದ ಬದಲಿಗೆ ಟ್ರೈಕೋಡರ್ಮಾ ಎಂಬ ಒಂದು ಶಿಲೀಂದ್ರ ಜೀವಿಯನ್ನು ಬಳಕೆ ಮಾಡಬಹುದು.
- ಇದು ಈ ಕೊಳೆ ರೋಗ ತರುವ ಶಿಲೀಂದ್ರದ ಮೇಲೆ ಪರಾವಲಂಬಿಯಾಗಿ ಬದುಕಿ ಅದನ್ನು ನಾಶ ಮಾಡುತ್ತದೆ.
- ಇದನ್ನು ಮಣ್ಣು ಮೂಲದಿಂದಲೇ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಅಭಿವೃದ್ದಿಪಡಿಸಿ ಮತ್ತೆ ಮಣ್ಣಿಗೆ ಸೇರಿಸಲಾಗುತ್ತದೆ.
- ಇದರಲ್ಲಿ Trichoderma asperellum, T. harzianum, T viride, T hamatum ಎಂಬ ನಾಲ್ಕು ಪ್ರಾಕಾರಗಳು ಇದ್ದು, ಟ್ರೈಕೋಡರ್ಮಾ ಹಾರ್ಜಿಯಾನಂ, ಮತ್ತು ವಿರಿಡೆಗಳು ಕೊಳೆಯುವಿಕೆ ಸಂಬಂಧಿತ ರೋಗಗಳಿಗೆ ಪರಿಣಾಮಕಾರಿಯಾಗಿರುತ್ತವೆ.
ಸೂಡೋಮೋನಸ್: Pseudomonas:
- ಇದು ಒಂದು ಬೆಳೆವಣಿಗೆ ಪ್ರಚೋದಕ ಮತ್ತು ರೋಗ ನಿರೋಧಕ ಶಕ್ತಿ ಪಡೆದ ಎರಡು ಕಾರ್ಯ ಮಾಡಬಲ್ಲ ಬ್ಯಾಕ್ಟೀರಿಯಾ.
- ಇದು ಬೇರು ಪರಾವಲಂಬಿ ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ ರೋಗಕಾರಕಗಳ ಮೇಲೆ ಧಾಳಿ ಮಾಡುವ ಗುಣ ಹೊಂದಿದೆ.
- ತೋಟಗಾರಿಕಾ ಬೆಳೆಗಳು, ತರಕಾರಿ ಬೆಳೆಗಳು ವಾಣಿಜ್ಯ ಬೆಳೆಗಳ ಹಲವಾರು ಬೇರು ಸಂಬಂಧಿತ ರೋಗ ತಡೆಯಲು ಬಳಸಬಹುದು.
- ಇಷ್ಟೇ ಅಲ್ಲದೆ ಬೀಜಕ್ಕೆ ಬೀಜೋಪಾಚಾರ ಮಾಡಿದರೆ ಮೊಳಕೆ ಬರುವುದು ಉತ್ತಮವಾಗುತ್ತದೆ.
- ಸಸ್ಯ ಕೋಶಗಳಲ್ಲಿದ್ದುಕೊಂಡು ರಕ್ಷಣೆ ಕೊಡುತ್ತದೆ.
ಬೆವೇರಿಯಾ : Beauveria bassiana:
- ಇದು ಒಂದು ಶಿಲೀಂದ್ರ ಕೀಟ ನಾಶಕ. ಇದನ್ನು ಬೀಜಾಣು ರೂಪದಲ್ಲಿ ಒದಗಿಸುತ್ತಾರೆ.
- ಇದನ್ನು ಬೆಳೆಗಳ ಮೇಲೆ ಸಿಂಪಡಿಸಿದಾಗ ಅದು ಎಲೆ , ಕಾಂಡ ಫಲದ ಮೇಲೆ ಬೀಜಾಣುಗಳಾಗಿ ಉಳಿದುಕೊಂಡು ಅದಕ್ಕೆ ತೊಂದರೆ ಮಾಡುವ ಜಿಗಿ ಹುಳ, ಬಿಳಿ ನೊಣ, ಬೇರು ಹುಳ, ಮುಂತಾದವುಗಳನ್ನು ಕೊಲ್ಲುತ್ತದೆ.
- ಬೆಳೆಗಳಿಗೆ ಹಾನಿ ಮಾಡುವ ಕೀಟಗಳ ಮೇಲೆ ಬಿಳಿ ಪರೆಯಂತೆ ಬೆಳೆದು ಅದಕ್ಕೆ ಉಸಿರು ಕಟ್ಟುವಂತೆ ಮಾಡಿ ಅದನ್ನು ಸಾಯಿಸುತ್ತದೆ.
ವರ್ಟಿಸೀಲಿಯಂ: Verticillium Lecanii:
- ಇದು ಶಿಲೀಂದ್ರ ಕೀಟ ನಾಶಕ. ಸಸ್ಯಗಳ ಫಲ, ಎಲೆ , ಹೂವು ರಸ ಹೀರುವ ಕೀಟ, ಚುಚ್ಚಿ ಮೊಟ್ಟೆ ಇಡುವ ಕೀಟ , ಹೇನು,ಥ್ರಿಪ್ಸ್, ಜೇಡರ ನುಶಿ, ಕೆಂಪು ಜೇಡರ ನುಶಿ, ಮುಂತಾದ ಕೀಟಗಳಲ್ಲಿ ಪರಾವಲಂಬಿಯಾಗಿ ಬೆಳೆದು ಅದನ್ನು ಸಾಯಿಸುತ್ತದೆ.
- ಕಾಂಪೋಸ್ಟ್ ನೊಂದಿಗೆ ಮಿಶ್ರಣ ಮಾಡಿ ಮಣ್ಣಿಗೆ ಬಳಕೆಮಾಡುವಂತದ್ದು, ಸಿಂಪರಣೆ ಮಾಡುವಂತಹ ಗ್ರೇಡುಗಳಲ್ಲಿ ಲಭ್ಯವಿರುತ್ತದೆ
ಬ್ಯಾಸಿಲಸ್ ತುರುಂನ್ಸಿಸ್: Bacillus thuringiensis (Bt) :
- ಇದು ಒಂದು ಒಂದು ಬ್ಯಾಕ್ಟೀರಿಯಾ ಆಗಿದ್ದು, ಇದು ರಸ ಹೀರುವ ಹುಳುಗಳಾದ ಕಂಬಳಿ ಹುಳ, ಎಲೆ ತಿನ್ನುವ ಹುಳ, ಕಾಯಿ ಕೊರೆಯುವ ಹುಳ, ಹೂ ತಿನ್ನುವ ಹುಳ, ಚಿಟ್ಟೆ ಪತಂಗಗಳನ್ನು ಅವುಗಳ ಶರೀರದ ಒಳ ಹೋಗಿ ಅಲ್ಲಿ ತನ್ನ ವಿಷವನ್ನು ಸ್ರವಿಸಿ ಅದನ್ನು ಸಾಯುವಂತೆ ಮಾಡುತ್ತದೆ.
- ಇದೂ ಸಹ ಎಲೆ, ಹೂವು, ಕಾಯಿ ಮುಂತಾದ ಕಡೆ ಬೀಜಾಣು ರೂಪದಲ್ಲಿ ಬದುಕಿ ಅದನ್ನು ಭಕ್ಷಿಸಲು ಬಂದ ಕೀಟದ ಶರೀರದ ಒಳ ಸೇರಿ ಅದನ್ನು ಕೊಲ್ಲುತ್ತದೆ.
ಮೆಟರೈಜಿಯಂ: Metarhizium anisopliae:
ಇದು ಶಿಲೀಂದ್ರವಾಗಿದ್ದು, ಪರಾವಲಂಭಿ ಜೀವಿಯಾಗಿ ನೆಲದ ಅಡಿಯಲ್ಲಿರುವ ಹುಳುಗಳನ್ನು ನಾಶಮಾಡುವ ಜೀವಿ.ಈ ಜೀವಿಯ ಬೀಜಾಣುಗಳು ಹಸುರು ಬಣ್ಣದಲ್ಲಿರುವ ಕಾರಣದಿಂದ ಇದಕ್ಕೆ ಗ್ರೀನ್ ಮೆಟಾ ಪೆಸ್ಟಿಸೈಡ್ (Green-Meta- pesticide) ಎನ್ನುತ್ತಾರೆ. ಬೇರು ಹುಳ, ನಮಟೋಡು, ಗೆದ್ದಳು, ಹಾಗೂ ಇನ್ನಿತರ ಹಾನಿಕಾರಕ ಹುಳುಗಳನ್ನು ಇದು ಪರಾವಲಂಬಿಯಾಗಿ ಪೀಡಿಸಿ ಸಾಯಿಸುತ್ತದೆ.
ಪೆಸಿಲೋ ಮೈಸಿಸ್: Paecilomyces lilacinus:
ಇದು ಶಿಲೀಂದ್ರ ಜೈವಿಕ ಕೀಟ ನಾಶಕ. ಇದು ಬೇರು ಹಾನಿ ಮಾಡುವ ಸೂಕ್ಷ್ಮ ಜಂತು ಹುಳುಗಳು,(ದುಂಡು ಹುಳ) ಗೆದ್ದಳು, ಹುಳು ಹುಪ್ಪಟೆಗಳನ್ನು ನಾಶ ಮಾಡುತ್ತದೆ. ಮಲ್ಲಿಗೆ , ಅಲಸಂಡೆ, ದಾಳಿಂಬೆ, ಅಡಿಕೆ, ಬಾಳೆ, ಬದನೆ, ಬೆಂಡೆ, ಸೌತೆ, ಏಲಕ್ಕಿ, ಆಲೂಗಡ್ಡೆ ತರಕಾರಿ ಬೆಳೆಗಳ ಕಾಣುವ ಜಂತು ಹುಳ ಅಥವಾ ನಮಟೋಡು ಎಂಬ ಕಣ್ಣಿಗೆ ಕಾಣದ ನಿಯಂತ್ರಣಕ್ಕೆ ಅತ್ಯಂತ ಕ್ಲಿಷ್ಟಕರವಾದ ಹುಳವನ್ನು ನಾಶ ಮಾಡುವ ನಮಟೋ ಪಥೋಜೆನಿಕ್ ಶಿಲೀಂದ್ರ.
EPN ಎಂಟಮೋ ಪಥೋಜೆನಿಕ್ ನಮಟೋಡ್:
- ಇದು ಜೈವಿಕ ಕೀಟ ನಿಯಂತ್ರಕವಾಗಿದೆ.ENTOMOPATHOGENIC NEMATODE (EPN)
- ಮಣ್ಣು ಜನ್ಯವಾದ ಬೇರು ಹುಳ, ಕೈತೋಟದ ಬೇರು ಹಾಳು ಮಾಡುವ ಹುಳ, ಕೆಲವು ತರಹದ ದುಂಬಿಗಳು, ಪತಂಗಗಳು ಹಾಗೂ ಇನ್ನಿತರ ಮಣ್ಣಿನಲ್ಲಿದ್ದುಕೊಂಡು ಬೇರು ಮತ್ತು ಕಾಂಡಕ್ಕೆ ಹಾನಿ ಮಾಡುವ ಹುಳ, ಕೀಡೆಗಳ ನಿಯಂತ್ರಣಕ್ಕೆ ಸಹಕಾರಿ.
- ಸರಳವಾಗಿ ಹೇಳಬೇಕೆಂದರೆ ಒಂದು ರೀತಿಯ ಮೇಣದ ಹುಳದ (Greater moth wax) ಒಳಗೆ ಈ ನಮಟೊಡುಗಳನ್ನು ಬೆಳೆಸಲಾಗುತ್ತದೆ.
- ಹುಳದ ಶರೀರದ ಒಳಗೆ ಬೆಳೆದ ನಮಟೋಡುಗಳನ್ನು ಸಂಗ್ರಹಿಸಿ ಸ್ವಚ್ಚಗೊಳಿಸಿ ಕೀಟಗಳ ನಿಯಂತ್ರಣಕ್ಕೆ ಬಳಕೆ ಮಾಡಲಾಗುತ್ತದೆ.
- ಇದನ್ನು ದ್ರವರೂಪದಲ್ಲಿ ಪೂರೈಕೆ ಮಾಡುತ್ತಾರೆ.
- ಅಡಿಕೆಯ ಬೇರು ಹುಳ, ಬಾಳೆಯ ಕಾಂಡ ಕೊರಕ, ತೆಂಗು, ಗಡ್ಡೆ ಗೆಣಸು ಬೆಳೆಗಳು, ಗೇರು, ರಬ್ಬರ್ ಕಾಫೀ ಮುಂತಾದ ಬೆಳೆಗಳಿಗೆ ಬಳಕೆ ಮಾಡಲಾಗುತ್ತದೆ.
- ಇದು ಬಹಳ ಉತ್ತಮವಾಗಿ ಕೆಲಸ ಮಾಡುತ್ತದೆ.
ವ್ಯಾಂ: Vesicular-arbuscular mycorrhiza (VAM):
- ವೆಸಿಕ್ಯುಲರ್ ಅರ್ಬುಸಿಕ್ಯುಲರ್ ಮೈಕೋರೈಜಾ ಈ ಶಿಲೀಂದ್ರವು ಸಸ್ಯ ಬೆಳವಣಿಗೆ ಹಾಗೂ ಸಸ್ಯ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.
- ಇದು ಬೇರು ವಲಯದಲ್ಲಿ ಬೇರಿನ ಸುತ್ತ, ರಕ್ಷಕವಾಗಿ ಇದ್ದು ಯಾವುದೇ ರೋಗ ಕಾರಕಗಳ ಒಳ ಪ್ರವೇಶವನ್ನು ತಡೆಯುತ್ತದೆ.
- ಸಸ್ಯ ಬೆಳವಣಿಗೆಗೆ ನಾವು ಒದಗಿಸುವ ಪೋಷಕಾಂಶ ಲಘು ಪೋಶಕಗಳನ್ನು ಸಮರ್ಪಕವಾಗಿ ಸಸ್ಯಗಳಿಗೆ ದೊರೆಯುವಂತೆ ಮಾಡಲು ಸಹಕರಿಸುತ್ತದೆ.
- ಇದರಿಂದ 10-20% ಇಳುವರಿಯೂ ಹೆಚ್ಚುತ್ತದೆ. ಕಾಂಡ ದಪ್ಪವಾಗಿ ಬೆಳೆಯುತ್ತದೆ.
- ಬೀಜೋಪಾಚಾರಕ್ಕೆ ಬಳಸಬಹುದು ದ್ರವ ಮಾಡಿ ಬೆಳೆಗಳ ಬುಡಕ್ಕೆ ಹಾಕಬಹುದು. ಕಾಂಪೋಸ್ಟು ನೊಂದಿಗೆ ಮಿಶ್ರಣ ಮಾಡಬಹುದು.
ಜೈವಿಕ ನಿಯಂತ್ರಕ ಅಥವಾ ರೋಗ ಕೀಟ ನಿಯಂತ್ರಕವು ಬಳಕೆ ಮಾಡುವ ಮಾನವನಿಗೆ ಪರಿಸರಕ್ಕೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಇದನ್ನು ಒಮ್ಮೆ ಬಳಕೆ ಮಾಡಿ ನಿಯಂತ್ರಣ ಆಗುತ್ತದೆ ಎಂದು ಗ್ರಹಿಸುವಂತಿಲ್ಲ. 2-3-4 ಬಾರಿ ಕೀಟಗಳ ಬಾಧೆ ಹೆಚ್ಚಾಗಿರುವ ಸಮಯದಲ್ಲಿ ಬಳಕೆ ಮಾಡಿದರೆ ಅವುಗಳ ಸಂತತಿಯನ್ನು ಕಡಿಮೆ ಮಾಡುತ್ತದೆ. ಬಹುತೇಕ ಎಲ್ಲಾ ಜೈವಿಕ ನಿಯಂತ್ರಕಗಳು ಹುಳ, ಕೀಟ, ರೋಗ ಕಾರಕ ಶಿಲೀಂದ್ರ ಬ್ಯಾಕ್ಟೀರಿಯಾಗಳ ಶರೀರದ ಒಳಗೆ ಸೇರಿಕೊಂಡು ಅವುಗಳಿಗೆ ರೋಗಕಾರಕವಾಗಿ ಪರಿಣಮಿಸಿ ಅದನ್ನು ಸಾಯಿಸುವಂತದ್ದು.