ಮರಮಟ್ಟುಗಳಲ್ಲಿ ಚಿನ್ನದ ಮರವೆಂದೇ ಖ್ಯಾತವಾದ ಸಾಗುವಾನಿ (ತೇಗ) ಮರವನ್ನು ನೇರವಾಗಿ ಬೆಳೆಯಲಿ ಎಂದೋ, ಇತರ ಉದ್ಡೆಶಗಳಿಗಾಗಿಯೋ ಗೆಲ್ಲು ಸವರುತ್ತೇವೆ. ಗೆಲ್ಲು ಸವರುವುದರಿಂದ ಮರದ ಗುಣಮಟ್ಟ ಏನಾಗುತ್ತದೆ ಎಂಬುದರ ಪೂರ್ಣ ಮಾಹಿತಿ.
ಬಹಳ ಜನ ನಮ್ಮ ಹಲಸಿನ ಮರ ಸಾಗುವಾನಿ ಮರ ಹೆಬ್ಬಲಸಿನ ಮರದಲ್ಲಿ ಒಡಕು( ಬಿರುಕು) ಬಂದು ಯಾವುದಕ್ಕೂ ಆಗದಂತಾಯಿತು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ನಾವೇ ಹೊರತು ಮರ ಅಲ್ಲ.
- ಸಾಗುವಾನಿ ಇರಲಿ, ಇನ್ಯಾವುದೇ ನಾಟಾ ಉದ್ದೇಶದ ಮರಮಟ್ಟುಗಳು ಇರಲಿ ನಾವು ತಿಳಿದೋ ತಿಳಿಯದೆಯೋ ಗೆಲ್ಲುಗಳನ್ನು ಸವರುತ್ತೇವೆ.
- ಬಹುತೇಕ ರೈತರು ವರ್ಷವೂ ಸೊಪ್ಪು ಕಟ್ಟಿಗೆಗಾಗಿ ಗೆಲ್ಲು ಸವರುತ್ತಾರೆ.
- ನಾನು ಇಷ್ಟು ಸಾಗುವಾನಿ ನೆಟ್ಟಿದ್ದೇನೆ, ಇಷ್ಟು ಹಲಸು ನೆಟ್ಟಿದ್ದೇನೆ.
- ಇದರ ಮೌಲ್ಯ ಲಕ್ಷಾಂತರ ರೂಪಾಯಿಗಳು ಎಂದು ಖುಷಿ ಪಟ್ಟುಕೊಂಡು ಇರುತ್ತೇವೆ.
- ಆದರೆ ಅಂತಹ ಗೆಲ್ಲು ಕಡಿದ ಮರ ಲಕ್ಷ ಬೆಲೆಬಾಳುವುದಿಲ್ಲ.
- ಸಾವಿರದಲ್ಲೇ ಅದರ ಮೌಲ್ಯ ಮುಗಿಯಬಹುದು ಅಥವಾ ಕಡಿದ ಮತ್ತು ಅರಣ್ಯ ಇಲಾಖೆಯ ಪರವಾನಿಗೆ ಪಡೆಯಲು ಮಾಡಿದ ಖರ್ಚೂ ಸಹ ಹುಟ್ಟದೆ ಇರಬಹುದು. ಯಾಕೆ ಹೀಗಾಗುತ್ತದೆ ಗೊತ್ತೇ?
ನಾಟಾ ಮರಮಟ್ಟುಗಳ ಗೆಲ್ಲು ಸವರುವಂತಿಲ್ಲ:
- ಅದು 2012 ನೇ ಇಸವಿ. ಕೇರಳದ ನೆಲಂಬೂರಿನ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಒಂದು ಸಾಗುವಾನಿ ಬೆಳೆದವರು ಮತ್ತು ಮರಮಟ್ಟುಗಳಿಗೆ ಸಂಬಂಧಿಸಿದಂತೆ ತಜ್ಞರ ಜೊತೆಗೆ ಸಂವಾದ ಕಾರ್ಯಕ್ರಮ ನಡೆದಿತ್ತು.
- ಆದರಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಸಾಗುವಾನಿ ಬೆಳೆಯುವ ರೈತರು ಅವರವರ ಅನುಭವನ್ನು ಹಂಚಿಕೊಂಡರು.
- ತಿರುವಾಂಕೂರು ಅರಣ್ಯ ಸಂರಕ್ಷಣಾಧಿಕಾರಿಗಳೊಬ್ಬರು ಸಾಗುವಾನಿ ಸೇರಿದಂತೆ ನಾಟಾ ಉದ್ದೇಶದ ಮರಮಟ್ಟುಗಳನ್ನು ನಿರ್ವಹಣೆ ಮಾಡಬೇಕು.
- ನಾವು ಸವರುವಾಗ ಮಡುವ ತಪ್ಪುಗಳೇನು.
- ಇದರಿಂದಾಗಿ ಮರಮಟ್ಟಿನ ಗುಣಮಟ್ಟ ಹೇಗೆ ಹಾಳಾಗುತ್ತದೆ ಎಂಬ ಬಗ್ಗೆ ಸವಿಸ್ತಾರವಾಗಿ ಹೇಳಿದ ವಿಷಯಗಳಲ್ಲಿ ನೆನಪಿರುವ ಕೆಲವು ಸಂಗತಿಗಳು ಇವು.
- ಕಾಡಿನಲ್ಲಿ ಬೆಳೆದ ಮರಮಟ್ಟುಗಳಿಗೂ ನಾವು ಬೆಳೆಸುವ ಮರಮಟ್ಟುಗಳಿಗೂ ಗುಣಮಟ್ಟದಲ್ಲಿ ವೆತ್ಯಾಸವಿರುತ್ತದೆ.
- ಕಾಡಿನ ಮರಮಟ್ಟುಗಳೇ ಗುಣಮಟ್ಟದಲ್ಲಿ ಶ್ರೇಷ್ಟ.
- ಕಾರಣ ಇಷ್ಟೇ ಅಲ್ಲಿ ಮರಮಟ್ಟುಗಳು ಬೆಳೆಯುತ್ತಿರುವಾಗ ಅದಕ್ಕೆ ಯಾವುದೇ ರೀತಿಯಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ.
- ಅವು ಸ್ವಚ್ಚಂದವಾಗಿ ಗೆಲ್ಲುಗಳನ್ನು ತಮಗೆ ಬೇಕಾದಂತೆ ಬೆಳೆಸಿಕೊಂಡು ಬದುಕುತ್ತವೆ.
- ಅಪರೂಪದಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ ಗೆಲ್ಲುಗಳು ಮುರಿಯುವುದಿದೆ.
- ಅದು ಅಪರೂಪ. ಆದರೆ ನಾವು ಬೆಳೆಸುವ ಮರಮಟ್ಟುಗಳನ್ನು ನಾವು ನೆಟ್ಟ ತಕ್ಷಣದಿಂದಲೇ ತರಬೇತಿಗೆ ಒಳಪಡಿಸುತ್ತೇವೆ.
- ನಮಗೆ ಬೇಕಾಗುವುದು ನೇರವಾದ ಮರದ ಕಾಂದ. ಅದಕ್ಕಾಗಿ ಗೆಲ್ಲುಗಳನ್ನು ಕಡಿಯುತ್ತೇವೆ.
- ಹೀಗೆ ಮಾಡುವುದರಿಂದ ಮರ ಬೇಗ ದಪ್ಪವಾಗಬಹುದು ಎಂಬುದು ನಮ್ಮ ಭ್ರಮೆ.
ವಾಸ್ತವವಾಗಿ ಯಾವುದೇ ನಾಟಾ ಉದ್ದೇಶಕ್ಕಾಗಿ ಬೆಳೆಸಿದ ಮರಮಟ್ಟುಗಳ ಗೆಲ್ಲುಗಳನ್ನು ಸವರಬಾರದು. ಅದನ್ನು ಹಾಗೆಯೇ ಬೆಳೆಯಲು ಬಿಡಬೇಕು. ಸಾಮಾನ್ಯವಾಗಿ ಎಲ್ಲಾ ಗೆಲ್ಲುಗಳೂ ತಮ್ಮ ವಯೋಮಾನ ಮುಗಿಯುವಾಗ ಒಣಗಿ ಉದುರುತ್ತವೆ. ಅದು ನೈಸರ್ಗಿಕ ಪ್ರೂನಿಂಗ್ ಆಗಿರುತ್ತದೆ.
ಪ್ರೂನಿಂಗ್ ಮಾಡಿದರೆ ಏನಾಗುತ್ತದೆ?
- ಮೊನ್ನೆ ತಾನೇ ಒಬ್ಬ ಮಿತ್ರರು ತಮ್ಮ ಅಂಗಳದ ಬದಿಯಲ್ಲಿ ಇದ್ದ ತೇಗದ ಮರವನ್ನು ಕಡಿದರಂತೆ.
- ಸುಮಾರು 1 ವರ್ಷದಿಂದ ಪರವಾನಿಗೆಗಾಗಿ ಅಲೆಯುತ್ತಾ ಇದ್ದವರು ಹೇಗೂ ಪರವಾನಿಗೆ ಗಿಟ್ಟಿಸಿಕೊಂದು ಮರ ಕಡಿದರು.
- ಕಡಿದು ತುಂಡು ಮಾಡುವಾಗ ಗೊತ್ತಾಯಿತು ಇದು ಏನೂ ಪ್ರಯೋಜನಕ್ಕಿಲ್ಲದ ಮರ ಎಂದು.
- ಮರ ಎತ್ತರವಾಗಿ ಬೆಳೆದಿತ್ತು. ದಪ್ಪವೂ ಇತ್ತು.
- ಆದರೇನಂತೆ ಅಗಾಗ ಗೆಲ್ಲುಗಳನ್ನು ಅಲ್ಪ ಸ್ವಲ್ಪ ಸವರುತ್ತಾ ಬೆಳೆಸಿದ ಮರವಾದ ಕಾರಣ ಅದರ ತಿರುಳಿನಲ್ಲಿ ತೂತು ಬಿದ್ದಿತ್ತು.
- ಗೆಲುಗಳನ್ನು ಕಡಿಯುವಾಗ ಅದರ ಗಾಯಗಳ ಮೂಲಕ ಶಿಲೀಂದ್ರ ಸೋಂಕು ಉಂಟಾಗುತ್ತದೆ.
- ಅದು ಮರದ ತಿರುಳು ಭಾಗಕ್ಕೆ ಪ್ರಸಾರವಾಗುತ್ತದೆ.
- ನಿಧಾನವಾಗಿ ಇದು ತಿರುಳಿನಲ್ಲಿ ಅವಕಾಶಗಳನ್ನು ಮಾಡಿಕೊಂಡು ಕೆಳಕ್ಕೂ ಮೇಲಕ್ಕೂ ಪ್ರಸಾರವಾಗುತ್ತದೆ.
- ಹೊರಭಾಗದಿಂದ ನೋಡುವಾಗ ಅನುಭವ ಇಲ್ಲದವರಿಗೆ ಒಳ್ಳೆಯ ಮರವೆಂದು ಕಂಡರೂ ಸಹ ಕಡಿಯುವ ಸಮಯದಲ್ಲಿ ಇದರ ಎಲ್ಲಾ ಬಣ್ಣ ಬಯಲಾಗುತ್ತದೆ.
- ಸಸಿ ಹಂತದಿಂದ ಗೆಲ್ಲು ಕಡಿದರೂ ಹೀಗೇ ಆಗುತ್ತದೆ.
- ಬೆಳೆದ ನಂತರ ಕಡಿದರೂ ಹೀಗೆಯೇ ಆಗುತ್ತದೆ.
- ಗೆಲ್ಲುಗಳನ್ನು ಕಡಿದ ಜಾಗ ವಾತಾವರಣದ ಮಳೆ, ಮುಂತಾದವುಗಳಿಗೆ ಸಿಲುಕಿ ಲಡ್ದಾಗುತ್ತಾ ಮುಂದುವರಿಯುತ್ತದೆ.
ಮರದ ಶಿರ ಭಾಗ ಕಡಿಯಲೇ ಬಾರದು. ಶಿರ ಭಾಗ ಕಡಿದ ಮರ ನಾಟಾ ಉದ್ದೇಶಕ್ಕೆ ಆಗುವುದೇ ಇಲ್ಲ. ಆಭಾಗದಿಂದ ಶಿಲೀಂದ್ರ ಸೋಂಕು ಉಂಟಾದರೆ ಅದು ಇದೀ ಮರದ ಕಾಂಡಕ್ಕೆ ಪ್ರಸಾರವಾಗುತ್ತದೆ.
ಹೇಗೆ ಗೆಲ್ಲು ಕಡಿಯಬಹುದು?
- ನಾಟಾ ಉದ್ದೇಶಕ್ಕಾಗಿ ಇರುವ ಮರಮಟ್ಟುಗಳ ಗೆಲ್ಲುಗಳನ್ನು ಅನಿವಾರ್ಯವಾಗಿ ಕಡಿಯಲೇ ಬೇಕಾದರೆ ಅದು ಮೂಡಿದ ಸ್ಥಳದಿಂದ 2 ಅಡಿ ಬಿಟ್ಟು ಕಡಿಯಬಹುದು.
- ಕಡಿಯುವಾಗ ಗೆಲ್ಲನ್ನು ಮೇಲಿನ ಗೆಲ್ಲಿಗೆ ಹಗ್ಗದಿಂದ ಕಟ್ಟಿ,ಕೆಳಭಾಗದಲ್ಲಿ (ಬೆನ್ನು ಭಾಗ) ಗಚ್ಚು ಹಾಕಿ ಮತ್ತೆ ಹೊಟ್ಟೆಯ ಭಾಗವನ್ನು ಕಡಿಯಬೇಕು.
- ಗೆಲ್ಲು ಕಡಿದು ಬೀಳುವಾಗ ಅದರ ಕಡಿದ ಕೆಳಭಾಗ ಸಿಗಿಯಬಾರದು. ಸಿಪ್ಪೆ ಹೋಗಬಾರದು.
- ಗೆಲ್ಲನ್ನು ಜಾಗರೂಕತೆಯಲ್ಲಿ ತುಂಡು ಮಾಡಬೇಕು. ತುಂಡು ಮಾಡಿದ ಭಾಗಕ್ಕೆ ಬೋರ್ಡೋ ಪೇಸ್ಟ್ ಅನ್ನು ಲೇಪಿಸಬೇಕು.
- ಅಲ್ಲಿ ಕೊಳೆಯುವಿಕೆ ಉಂಟಾಗಬಾರದು. ಆ ಭಾಗದಿಂದ ಮತ್ತೆ ಚಿಗುರುಗಳು ಮೂಡುವಂತಿರಬೇಕು.
- ನಂತರ ಕಡಿಯುವಾಗ ಚಿಗುರು ಬಂದದ್ದನ್ನು ಮಾತ್ರವೇ ನಿರ್ದಿಷ್ಟ ಅಳತೆಯಲ್ಲಿ ಕಡಿಯಬೇಕು.
- ಅನಿವಾರ್ಯವಾದಾಗ ಮಾತ್ರ ಗೆಲ್ಲು ಕಡಿಯಬೇಕು.
ಟೊಂಗೆ ಕಡಿದರೆ ಮರ ದಪ್ಪ ಅಗುವುದಿಲ್ಲ:
- ನಾವೆಲ್ಲಾ ತಿಳಿದುಕೊಂಡಂತೆ ಮರದ ಗೆಲ್ಲು ಅಥವಾ ಟೊಂಗೆಗಳನ್ನು ಕಡಿದರೆ ಕಾಂಡ ದಪ್ಪ ಅಗುವುದಿಲ್ಲ.
- ದಪ್ಪ ಅಗುವುದು ಮರದಲ್ಲಿ ಗೆಲ್ಲುಗಳು ಹೇರಳ ಸಂಖ್ಯೆಯಲ್ಲಿ ಇದ್ದಾಗ.
- ಹೆಚ್ಚು ಗೆಲ್ಲುಗಳು ಇದ್ದಾಗ ಮರದ ಬೆಳವಣಿಗೆಗೆ ಬೇಕಾದಷ್ಟು ಆಹಾರ ದೊರೆಯುತ್ತದೆ.
- ಕಾಂಡ ದಪ್ಪ ಅಗಲು ಇದು ನೆರವಾಗುತ್ತದೆ. ನೇರವಾಗಿ ಬೆಳೆಯುದುದೂ ಸಹ ಗೆಲ್ಲುಗಳ ಬೆಂಬಲ ಇದ್ದಾಗ ಮಾತ್ರ.
- ಗೆಲ್ಲುಗಳು ಮರವನ್ನು ಸಮತೋಲನದಲ್ಲಿ ಬೆಳೆಯಲು ಸಹಕರಿಸುತ್ತವೆ.
- ಹೆಚ್ಚು ಹೆಚ್ಚು ಗೆಲ್ಲುಗಳಿದ್ದಾಗ ಅದರಲ್ಲಿ ಹೆಚ್ಚು ಹೆಚ್ಚು ಎಲೆಗಳ ಉತ್ಪಾದನೆ ಆಗುತ್ತದೆ.
- ಅದು ಉದುರಿ ನೆಲಕ್ಕೆ ಬಿದ್ದು ಮಣ್ಣು ಫಲವತ್ತಾಗುತ್ತದೆ. ಮಣ್ಣು ಫಲವತ್ತಾದಷ್ಟೂ ಮರ ಚೆನ್ನಾಗಿಯೇ ಬೆಳೆಯುತ್ತದೆ.
- ಟೊಂಗೆಗಳಿಂದಾಗಿ ಮರ ಬೇರು ಸಮೇತ ಮಗುಚಿ ಬೀಳುತ್ತದೆ ಎಂಬುದು ತಪ್ಪು ತಿಳುವಳಿಕೆ.
- ಸಾಮಾನ್ಯವಾಗಿ ನಾಟಾ ಮರಮಟ್ಟುಗಳನ್ನು ನೆಡುವಾಗ ಹತ್ತಿರದ ಸಾಂದ್ರತೆಯಲ್ಲಿ ಬೆಳೆಸಿದರೆ ಅವು ನೇರವಾಗಿ ಬೆಳೆಯುತ್ತವೆ.
- ಕ್ರಮೇಣ ಕೆಲವು ಮರಗಳನ್ನು ತೆಗೆದು ಅಂತರ ಹೆಚ್ಚು ಮಾಡಿಕೊಡಬೇಕು.
- ನೇರವಾಗಿ ಬೆಳೆಯುವಾಗ ಬೆಳಕು ನೆತ್ತಿ ಮೇಲಿಂದಲೇ ಹೆಚ್ಚು ಬೀಳುವ ಕಾರಣ ಗೆಲ್ಲುಗಳು ದೊಡ್ದ ಪ್ರಮಾಣದಲ್ಲಿ ಬೆಳೆಯುವುದೂ ಇಲ್ಲ.
ಮರಮಟ್ಟು ಹೇಗಿರಬೇಕು:
- ನಾಟಾ ಮರಮಟ್ಟುಗಳಲ್ಲಿ ಗೆಲ್ಲುಗಳು ಕಡಿಯದೇ ಅದರಷ್ಟಕ್ಕೇ ಉದುರಿ ಬಿದ್ದಾಗ ಅಲ್ಲಿ ಒಂದು ರೀತಿಯಲ್ಲಿ ಗಂಟು ಏರ್ಪಡುತ್ತದೆ.
- ಈ ಗಂಟು ವಾಸಿಯಾದ ಗಾಯದ ತರಹ ಇರುತ್ತದೆ.
- ಸ್ವಲ್ಪ ಉಬ್ಬಿಕೊಂಡು ಇರುತ್ತದೆ.
- ಹೀಗೆ ಇರುವ ಮರಮಟ್ಟು ಉತ್ತಮ ನಾಟಾ ತಿರುಳನ್ನು ಹೊಂದಿರುತ್ತದೆ.
- ಗಂಟು ಇರುವಲ್ಲಿ ಒಂದು ರೀತಿಯ ಕಸೂತಿ ರಚನೆ (ಆರ್ಕ್) ಇರುತ್ತದೆ.
- ಇದು ಮರಕ್ಕೆ ಹೆಚ್ಚಿನ ನೋಟವನ್ನು ಕೊಡುತ್ತದೆ.
- ಗೆಲ್ಲು ಕಡಿಯದೇ ಅದರಷ್ಟಕ್ಕೇ ಗೆಲ್ಲು ಬೆಳೆದು ಉದುರಿದಾಗ ಇಂತಹ ರಚನೆ ಉಂಟಾಗುತ್ತದೆ.
ಮರಮಟ್ಟು ಬೆಳೆಸುವ ಯಾವುದೇ ರೈತರೂ ಅದರ ಗೆಲ್ಲುಗಳನ್ನು ಕಡಿಯಲು ಹೋಗಬೇಡಿ. ಗೆಲ್ಲು ಕಡಿಯಬೇಕಾಗಿ ಬರುವ ಸ್ಥಳದಲ್ಲಿ ನಾಟಾ ಉದ್ದೇಶದ ಮರಮಟ್ಟು ಬೆಳೆಸಬೇಡಿ. ಮರಮಟ್ಟು ಎಲ್ಲಿ ಇರಬೇಕೋ ಅಲ್ಲೇ ಇರಲಿ. ಕೃಷಿ ಅರಣ್ಯವಾಗಿದ್ದರೆ ಅದಕ್ಕೆ ಕತ್ತಿಯ ಪ್ರಹಾರ ಅನಿವಾರ್ಯವಾಗಬಹುದು. ಆದ ಕಾರಣ ಮರಮಟ್ಟನ್ನು ಬೆಳೆಸಿ ಅದರಿಂದ ಏನಾದರೂ ಆದಾಯ ಪಡೆಯಬೇಕೆಂಬ ಹಂಬಲ ಇದ್ದರೆ ಅದನ್ನು ಪ್ರತ್ಯೇಕವಾಗಿ ಬೆಳೆಸಿ.