ಹೈನುಗಾರಿಕೆ ಮಾಡುವರು ಎದುರಿಸುವ ಕಡಿಮೆ ಹಾಲಿನ ಇಳುವರಿ ಹಾಗೂ ಪೌಷ್ಟಿಕ ಆಹಾರದ ಕೊರೆತೆ ನೀಗಿಸಲು ಈಗ ವಿಜ್ಞಾನಿಗಳು ಚಾಕಲೇಟನ್ನು ಒಂದರ ಸಂಯೋಜನೆಯನ್ನು ಪರಿಚಯಿಸಿದ್ದಾರೆ. ಇದು ಪ್ರೋಟೀನು , ಶಕ್ತಿ ಎಲ್ಲವನ್ನೂ ಒಳಗೊಂಡಿರುತ್ತದೆ.
ಮನುಷ್ಯರು ಚಾಕಲೇಟ್ ತಿಂದರೆ ಶಕ್ತಿ ಹೆಚ್ಚುತ್ತದೆ. ಚಾಕಲೇಟಿನಲ್ಲಿರುವ ಸಕ್ಕರೆ ಹಾಗೂ ಇನ್ನಿತರ ಶಕ್ತಿ ವರ್ಧಕ ವಸ್ತುಗಳಿಂದಾಗಿ ಗಾತ್ರ ಸಣ್ಣದಾದರೂ ಅದರಿಂದ ಲಭ್ಯವಾಗುವ ಶಕ್ತಿ ಹೆಚ್ಚು. ಅದೇ ತತ್ವದಲ್ಲಿ ಪಶುಗಳಿಗೂ ಚಾಕಲೇಟು ತಯಾರಿಸಬಹುದಂತೆ. ಈ ಚಾಕಲೇಟುಗಳನ್ನು ಪಶುಗಳಿಗೆ ತಿನ್ನಿಸಿದರೆ ಅವುಗಳು ಹೆಚ್ಚು ಹಾಲು ಕೊಡಬಲ್ಲವು. ಶಾರೀರಿಕವಾಗಿ ದಷ್ಟಪುಷ್ಟವಾಗುವವು. ಗಬ್ಬ ನಿಲ್ಲದಾಗುವ ಸಮಸ್ಯೆ ನಿವಾರಣೆಯಾಗುತ್ತದೆ.
- ನಾವೆಲ್ಲಾ ಹೈನುಗಾರಿಕೆಯಾಗಿ ಪಶು ಪಾಲನೆ ಮಾಡುತ್ತೇವೆ. ಮನೆ ಬಳಕೆಯ ಹಾಲಿಗಾಗಿ ಪಶು ಪಾಲನೆ ಮಾಡುತ್ತೇವೆ.
- ಎಲ್ಲರೂ ಎದುರಿಸುವ ಅತೀ ದೊಡ ಸಮಸ್ಯೆ ಎಂದರೆ ಪಶು ಆಹಾರ.
- ಪೌಷ್ಟಿಕ ಪಶು ಅಹಾರ ಕೊಟ್ಟರೆ ಮಾತ್ರ ಅವುಗಳು ಶಾರೀರಿಕವಾಗಿ ಸಧೃಢವಾಗಿರುತ್ತವೆ.
- ಹಾಗೆಯೇ ಅಧಿಕ ಹಾಲನ್ನೂ ಕೊಡುತ್ತವೆ. ಆದರೆ ಪುಷ್ಟಿಕ ಆಹಾರ ಎಂಬುದೇ ಅತೀ ದೊಡ್ಡ ಸಮಸ್ಯೆ.
ಒಣ ಹುಲ್ಲು ಮತ್ತು ಸಮಸ್ಯೆಗಳು:
- ಪಶುಗಳಿಗೆ ನಾವು ಒಣ ಹುಲ್ಲು ಹಾಕುವುದು ರೂಢಿ.
- ಬೇಸಿಗೆಯ ನೀರೊತ್ತಾಯದ ಸಮಯದಲ್ಲಿ ಹಸಿ ಹುಲ್ಲು ಲಭ್ಯವಿಲ್ಲದ ಸಮಯದಲ್ಲಿ , ಮಳೆಗಾಲದ ವಿಪರೀತ ಮಳೆಯ ಸಮಯದಲ್ಲಿ ಒಣ ಭತ್ತದ ಹುಲ್ಲು, ಜೋಳದ ದಂಟುಗಳನ್ನು ಮೇವಾಗಿ ಕೊಡುತ್ತೇವೆ.
- ಈ ಮೇವಿನಲ್ಲಿ ಪ್ರೋಟೀನು, ಖನಿಜಾಂಶ ಸತ್ವಗಳು ಇರುವುದಿಲ್ಲ.
- ಪಶುಗಳು ತಮ್ಮ ಹೊಟ್ಟೆ ಹಸಿವಿಗಾಗಿ ಕೊಟ್ಟದ್ದನ್ನು ತಿನ್ನುತ್ತವೆ.
- ಇದರಿಂದಾಗಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ.
- ಸರಿಯಾದ ಸಮಯಕ್ಕೆ ಗಬ್ಬಕ್ಕೆ ಬರುವುದಿಲ್ಲ.
- ಇವು ಜೀರ್ಣ ಶಕ್ತಿಗೂ ಸಹಾಯಕವಲ್ಲ. ಹಸುಗಳು ಎಮ್ಮೆಗಳು, ಕುರಿ ಮೇಕೆಗಳು ದೇಹದಲ್ಲಿ ಸಣಕಲಾಗುತ್ತವೆ.
ಚಾಕಲೇಟ್ ಪೋಷಕಾಂಶಗಳ ನಿಧಿ:
- ಪಶುಗಳು ತಿನ್ನುವ ಈ ಚಾಕಲೇಟುಗಳಲ್ಲಿ ಎಲ್ಲಾ ಖನಿಜಾಂಶಗಳು, ಪ್ರೋಟೀನುಗಳು ಒಳಗೊಂಡಿವೆ.
- ಇದರಲ್ಲಿ 50% ದಷ್ಟು ಬೆಲ್ಲ, 7.5 % ಯೂರಿಯಾ, 10% ಕ್ಯಾಲ್ಸಿಯಂ ಆಕ್ಸೈಡ್, 25% ತೌಡು ( ಧವಸ ದಾನ್ಯಗಳ ಹೊಟ್ಟು ಅಥವಾ ಪುಡಿ) ಹಾಗೂ 5 % ಉಪ್ಪನ್ನು ಸೇರಿಸಲಾಗುತ್ತದೆ.
- ಇದು ಸಂಪೂರ್ಣ ಸಮತೋಲನ ಆಹಾರವಾಗಿದೆ. ಪಶುಗಳ ದೇಹ ತೂಕಕ್ಕನುಗುಣವಾಗಿ ಈ ಚಾಕಲೇಟನ್ನು ಬಳಕೆ ಮಾಡಬೇಕು.
- ಇದನ್ನು ಬಿಸಿ ಮಾಡುವ (Hot method) ಮೂಲಕವೂ ತಯಾರಿ ಮಾಡಬಹುದು.
- ಶೀತಲೀಕರಣ ವಿಧಾನದಲ್ಲೂ ತಯಾರಿಸಬಹುದು.45 -50 ಡಿಗ್ರಿ ಬಿಸಿಯಲ್ಲಿ ಇವೆಲ್ಲವನ್ನು ಮಿಶ್ರಣ ಮಾಡಿ ಚಾಕಲೇಟು ತಯಾರಿಸಲಾಗುತ್ತದೆ.
- ಶೀತಲೀಕರಣ ವಿಧಾನದಲ್ಲಿ (Cold method) ಮಾಡಲು ಇದಕ್ಕೆ 15 ದಿನ ಬೇಕಾಗುತ್ತದೆ.
- ಅದನ್ನು ಸೂಕ್ತ ರೀತಿಯಲ್ಲಿ ಸಂಗ್ರಹಣೆಯನ್ನೂ ಮಾಡಬೇಕು.
- ಬಿಸಿ ವಿಧಾನದಲ್ಲಿ ಮಾಡಿದ ಚಾಕಲೇಟು ಹೆಚ್ಚು ಸಮಯ ದಾಸ್ತಾನು ಇಡಲಿಕ್ಕೆ ಆಗುತ್ತದೆ.
ಇದು ಒಂದೇ ಆಹಾರ ಆಲ್ಲ:
- ಪಶು ಪಾಲನೆ ಮಾಡುವವರು ತಾವು ಕೊಡುವ ಇತರ ಆಹಾರಗಳ ಜೊತೆಗೆ ಇದನ್ನು ತಿನ್ನಿಸಬೇಕು.
- ಇದನ್ನೊಂದೇ ಕೊಡುವುದಲ್ಲ. ಒಣ ಹುಲ್ಲು, ಹಸಿ ಹುಲ್ಲು ಇನ್ಯಾವುದೇ ಮೇವನ್ನು ಕೊಡಿ.
- ಅದರ ಜೊತೆಗೆ ಈ ಚಾಕಲೇಟನ್ನು ತಿನ್ನಿಸಿ. ಆ ವಸ್ತುಗಳು ಚೆನ್ನಾಗಿ ಜೀರ್ಣವಾಗುತ್ತದೆ.
- ಹಸುಗಳು ಹೆಚ್ಚು ಹಾಲನ್ನೂ ಕೊಡುತ್ತವೆ.
- ಬರೇ ಇದನ್ನೊಂದೇ ಕೊಟ್ಟರೆ ಇದರಲ್ಲಿರುವ ಯೂರಿಯಾ ಅಂಶ ಪಶುಗಳ ದೇಹಕ್ಕೆ ತೊಂದರೆಯಾಗಿ ಪರಿಣಮಿಸಬಹುದು.
- ಚಾಕಲೇಟು ಸೇವನೆಯಿಂದ 14% ಹಾಲು ಹೆಚ್ಚಳವಾಗುತ್ತದೆ.
- ಶರೀರ ಸಧೃಢವಾಗಿ ಕ್ರಮ ಪ್ರಕಾರ ಕರು ಹಾಕುತ್ತವೆ.
- ದೇಹದ ತೂಕ, ಎಲುಬಿನ ಗಟ್ಟಿತನಕ್ಕೆ ಈ ಚಾಕಲೇಟು ನೆರವಾಗುತ್ತದೆ.
- ಇದನ್ನು ಬಳಸುವುದರಿಂದ ದುಬಾರಿ ಬೆಲೆಯ ಖನಿಜ ಮಿಶ್ರಣ ಬಳಸಬೇಕಾಗಿಲ್ಲ.
ಇದನ್ನು ಯಾರೂ ತಯಾರಿಸಬಹುದು:
- ಹೈನುಗಾರಿಕೆ ದುಬಾರಿಯಾಗುವುದಕ್ಕೆ ಮೂಲ ಕಾರಣ ಪಶು ಆಹಾರ.
- ಲಭ್ಯವಿರುವ ಪಶು ಆಹಾರಗಳಲ್ಲಿ ಬೆಲೆಗೆ ತಕ್ಕುದಾದ ಗುಣಮಟ್ಟ ಇರುವುದಿಲ್ಲ.
- ಹೈನುಗಾರರು ತಾವೇ ಸ್ವತಹ ಪಶು ಆಹಾರ ತಯಾರಿಸಿಕೊಳ್ಳುವಂತಾದರೆ ಹೈನುಗಾರಿಕೆ ಸರಳವಾಗುತ್ತದೆ.
- ಸ್ಥಳೀಯವಾಗಿ ದೊರೆಯುವ ಮೂಲವಸ್ತುಗಳನ್ನು ಬಳಸಿಕೊಂಡು ಸ್ವ ಸಹಾಯ ಸಂಘಗಳ ಮೂಲಕವೋ, ವೈಯಕ್ತಿಕವಾಗಿಯೋ ಇಂತಹ ಚಾಕಲೇಟು ರೂಪದ ಆಹಾರವನ್ನು ತಯಾರಿಸಿಕೊಂಡರೆ ತುಂಬಾ ಪ್ರಯೋಜನ.
ಬೆಲ್ಲ, ಧವಸ ಧಾನ್ಯದ ಹೊಟ್ಟು, ಸುಣ್ಣ, ಉಪ್ಪು ಮತ್ತು ಯೂರಿಯಾ ( ಯೂರಿಯಾ ಬದಲು ಶೇಂಗಾ ಹಿಂಡಿ ಬಳಕೆ ಮಾಡಬಹುದು) ಮುಂತಾರ ಎಲ್ಲಾ ಮೂಲವಸ್ತುಗಳೂ ಸ್ಥಳೀಯವಾಗಿ ದೊರೆಯುವ ವಸ್ತುಗಳಾದ ಕಾರಣ ಇದನ್ನು ಸ್ಥಳೀಯವಾಗಿ ತಯಾರಿಸುವುದು ಕಷ್ಟವಿಲ್ಲ.