ಈ ವರ್ಷದ ಅಡಿಕೆ ಕೊಯಿಲು ಪ್ರಾರಂಭವಾಗಿದ್ದು, ಬಯಲು ಸೀಮೆಯಲ್ಲಿ ಒಂದು ಕೊಯಿಲು ಆಗಿದೆ. ಚೇಣಿ ಮಾಡುವವರ ಖರೀದಿಯ ಭರ ಮತ್ತು ದಿನದಿಂದ ದಿನಕ್ಕೆ ಏರುತ್ತಿರುವ ಕೆಂಪಡಿಕೆಯ ವಹಿವಾಟನ್ನು ನೋಡಿದರೆ ಕೆಂಪು ಈ ಸಲ ಮತ್ತೆ ಮೇಲೇರುವ ಮುನ್ಸೂಚನೆ ಕಾಣಿಸುತ್ತಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ 45,000 ದಾಟಿದ್ದ ಕೆಂಪಡಿಕೆ ಧಾರಣೆ ಮತ್ತೆ ಕೊರೋನಾ, ಲಾಕ್ ಡೌನ್ ಕಾರಣದಿಂದ ಮತ್ತೆ ಆ ಮಟ್ಟಕ್ಕೆ ಏರಲೇ ಇಲ್ಲ. ಈಗ ಮತ್ತೆ ಕೆಂಪಡಿಕೆಯ ಸರದಿ ಕಂಡು ಬರುತ್ತಿದೆ. ಚಾಲಿ ಧಾರಣೆ ಕರಾವಳಿಯಲ್ಲಿ 46,000 ತಲುಪಿದ್ದು, ಚಿತ್ರದುರ್ಗದಲ್ಲಿ ರಾಶಿ 47,600- 47,900 ತನಕ ವ್ಯವಹಾರ ಆಗುತ್ತಿದೆ. ಈಗ ನಡೆಯುತ್ತಿರುವ ವಿದ್ಯಮಾನಗಳು ಚಾಲಿಯನ್ನು ಹಿಂದಿಕ್ಕಿ ಕೆಂಪಡಿಕೆ ಮುಂದೆ ಹೋಗುವಂತೆ ಕಾಣಿಸುತ್ತಿದೆ.
- ವ್ಯವಹಾರ ಎಲ್ಲವೂ ನಾವು ಎಣಿಸಿದಂತೆ ಇಲ್ಲ.
- ಅಡಿಕೆ ಬೆಳೆ ಚೆನ್ನಾಗಿದ್ದ ವರ್ಷದಲ್ಲಿ ಬೆಲೆ ಏರಿಕೆ ಆಗುತ್ತದೆ.
- ಕಡಿಮೆ ಇದ್ದಾಗ ಬೆಲೆ ಇಳಿಕೆ ಆಗುತ್ತದೆ.
- ಇದೆಲ್ಲವೂ ವ್ಯಾಪಾರದ ತಂತ್ರಗಾರಿಕೆ.
- ಕರಾವಳಿ ಮಲೆನಾಡಿನ ರೈತರು ಸ್ವಲ್ಪ ಮಟ್ಟಿಗೆ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವುದನ್ನು ಬಿಗು ಮಾಡಿದ ಕಾರಣ ದರ ಸ್ಥಿರತೆ ಉಂಟಾಗಿರುವುದು ಬಿಟ್ಟರೆ, ಬೆಳೆಗಾರರು ಸ್ವಲ್ಪ ಅಂಜಿದರೂ ಮಾರುಕಟ್ಟೆ ಬೀಳುತ್ತದೆ.
- ಬೆಳೆಗಾರರು ದರ ಏರಿದಾಗಲೂ ಅಲ್ಪ ಸ್ವಲ್ಪ ಮಾರಾಟ ಮಾಡುತ್ತಾರೆ.
- ಇಳಿದಾಗ ಮತ್ತೆ ಏರಿಕೆ ಆದ ಮೇಲೆಯೇ ಕೊಡುವುದು ಎಂದು ಪಟ್ಟು ಹಿಡಿದು ಕುಳಿತ ಕಾರಣ ವ್ಯಾಪಾರಿಗಳ ಆಟಕ್ಕೆ ಅಂತಹ ಕಿಮ್ಮತ್ತು ಸಿಗಲಿಲ್ಲ.
- ಇದೇ ಕಾರಣಕ್ಕೆ ಚಾಲಿ ಅಡಿಕೆ ಧಾರಣೆ ಗಣನೀಯವಾಗಿ ಏರಿಕೆಯಾಗಿದೆ ಎಂಬುದಾಗಿ ಕೆಲವರು ಹೇಳುತ್ತಾರೆ.
ಕೆಲವು ಮೂಲಗಳ ಪ್ರಕಾರ ರಾಜಕೀಯದಲ್ಲಿ ಪ್ರಭಾವಿಯೊಬ್ಬರು ಕೃಷಿ ಉತ್ಪನ್ನಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ರಾಜ್ಯದ ಕೆಲವು ದೊಡ್ದ ವರ್ತಕರು ಕೈವಶಮಾಡಿಕೊಂಡು ಚಾಲಿಯ ದರ ಏರಲು ಕಾರಣರಾಗಿದ್ದಾರೆ. ಪಾನ್ ತಿನ್ನುವ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಇವರ ಮಾರಾಟ ಜಾಲ ಹಬ್ಬಿದ್ದು, ಕೆಂಪಡಿಕೆ ಇಲ್ಲಿಗೆ ತೀರಾ ಅತ್ಯಲ್ಪ ಪ್ರಮಾಣದಲ್ಲಿ ಹೋಗುತ್ತಿದೆಯಂತೆ. ತಮ್ಮ ಪ್ರಭಾವದಿಂದ ಗಡಿ ಬಿಗುಮಾಡಿ ಅಡಿಕೆ ಆಮದು ತಡೆಹಿಡಿಯಲಾಗುತ್ತಿದೆಯಂತೆ. ಇದು ಎಲ್ಲಿ ತನಕ ಮುಂದುವರಿಯುವುದು ಎಂಬುದು ಯಾರಿಗೂ ತಿಳಿಯದಾಗಿದೆ.
ಚಾಲಿ ಪ್ರಮಾಣ ಹೆಚ್ಚಾಗಿದೆ:
- ಕಳೆದ ವರ್ಷದ ಚಾಲಿ ಧಾರಣೆ ಏರಿಕೆಯ ಪರಿಣಾಮ ಬಹಳ ಜನ ಬೆಳೆಗಾರರು ಕೆಂಪಡಿಕೆಯ ಜೊತೆಗೆ ಚಾಲಿಯನ್ನೂ ಅಧಿಕ ಪ್ರಮಾಣದಲ್ಲಿ ಮಾಡಿದ ಬಗ್ಗೆ ವರದಿಗಳಿವೆ.
- ಶಿರಸಿ, ಸಾಗರ, ಯಲ್ಲಾಪುರ, ಹಾಗೆಯೇ ಭದ್ರಾವತಿ, ತರೀಕೆರೆ, ಚೆನ್ನಗಿರಿ, ಸಿರಾ ಮುಂತಾದ ಕಡೆ ರೈತರು ಸ್ವಲ್ಪ ಚಾಲಿಗೆ ಬಿಟ್ಟಿದ್ದಾರೆ.
- ಕರಾವಳಿಯಲ್ಲಿ ಕಳೆದ ವರ್ಷ ಬೆಳೆ ಕಡಿಮೆ ಇತ್ತು.
- ಅದರ ಹಿಂದಿನ ವರ್ಷವೂ ಕೊಳೆ ರೋಗ ಹಾಗೆಯೇ ಸಿಂಗಾರ ಒಣಗುವಿಕೆಯ ಕಾರಣ ಬೆಳೆ ಕಡಿಮೆಯೇ.
- ಈ ವರ್ಷ ಬೆಳೆ ಚೆನ್ನಾಗಿದೆ. ಮಳೆ ಕಡಿಮೆಯಾದ ಕಾರಣ ಕೊಳೆ ರೋಗವೂ ಇಲ್ಲ.
- ಹಾಗಿರುವಾಗ ಇಲ್ಲಿ ಸುಮಾರು 10-20% ಬೆಳೆ ಹೆಚ್ಚು ಇದೆ.
- ಹೊಸ ತೋಟಗಳ ಕಾರಣದಿಂದಲೂ 10-15% ಬೆಳೆ ಹೆಚ್ಚಾಗಿದೆ.
- ಆದ ಕಾರಣ ಚಾಲಿಯ ಬೆಲೆ ಹಿಂದೆ ಬಾರದಿದ್ದರೂ ಮುಂದೆ ಹೋಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ.
ಉತ್ತರ ಕನ್ನಡದ ಬಹುತೇಕ ಬೆಳೆಗಾರರು ಚಾಲಿಯನ್ನು ಈಗಾಗಲೇ ಮಾರಾಟ ಮಾಡಿದ್ದು. ಅದು ಸಿರಸಿ ಯಲ್ಲಾಪುರ ಸಿದ್ದಾಪುರಗಳಲ್ಲಿ ವ್ಯಾಪಾರಿಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ದಾಸ್ತಾನು ಇದೆ ಎಂಬ ಸುದ್ದಿ ಇದೆ. ಅದು ಮುಗಿಯುವ ವರೆಗೆ ದರ ಏರಿಕೆ ಇರಬಹುದು ಎನ್ನಲಾಗುತ್ತಿದೆ.
ಮೊನ್ನೆ ಏರಿಕೆಯಾದ ಕಾರಣ:
ಜುಲೈ ತಿಂಗಳಲ್ಲಿ ಹೊಸ ಚಾಲಿ ದರ 43,000 ತನಕ ಇದ್ದುದು, ಆಗಸ್ಟ್ ತಿಂಗಳಿಗೆ 45,000 ಮತ್ತೆ ಆಗಸ್ಟ್ ಎರಡನೇ ವಾರಕ್ಕೆ 46,000 ಆದ ಕಾರಣ ಮತ್ತೇನೂ ಅಲ್ಲ. ವ್ಯಾಪಾರಸ್ತರು ತಮ್ಮ ಸ್ಟಾಕು ಕ್ಲೀಯರೆನ್ಸ್ ಮಾಡುವುದಕ್ಕಾಗಿ. ಹೇಗೂ ದರ ಏರಿಕೆ ಆದಾಗ ಅಡಿಕೆ ಬರುವುದಿಲ್ಲ ಎಂಬ ವಾಸ್ತವಿಕ ಅಂಶ ತಿಳಿದಿರುವ ವ್ಯಾಪಾರಿಗಳು ತಮ್ಮ ಸ್ಟಾಕು ವಿಲೇವಾರಿಗಾಗಿ ದರ ಏರಿಸಿ, ರೈತರಲ್ಲಿ ಅಡಿಕೆ ಇಲ್ಲ ಎಂಬ ವದಂತಿ ಹುಟ್ಟು ಹಾಕಿ ತಮ್ಮ ಸ್ಟಾಕು ಮುಗಿಸುತ್ತಿದ್ದಾರೆ. ಇದೇ ಕಾರಣಕ್ಕೆ ಹಳೆ ಅಡಿಕೆಯ ದರ ಇಳಿಕೆ ಮಾಡಲಾಗಿದೆ. ಹೊಸತನ್ನು ಏರಿಸಲಾಗಿದೆ. ಖಾಸಗಿಯವರು ಸಹಕಾರಿಗಳ ಜೊತೆಗೆ ಯಾವಾಗಲೂ ಸ್ಪರ್ಧೆಯಲ್ಲಿರುತ್ತಾರೆ. ಆದರೆ ಈಗ ಅವರೂ ಸಹಕಾರಿಗಳ ಜೊತೆಗೇ ಇದ್ದಾರೆ. ಕಾರಣ ಅವರಿಗೂ ಸಧ್ಯದಲ್ಲೇ ಸ್ವಲ್ಪ ಇಳಿಕೆ ಆಗುತ್ತದೆ ಎಂಬುದು ತಿಳಿದಂತಿದೆ. ಹಳೆಯದನ್ನು ಕೊಡುವ ಅನಿವಾರ್ಯತೆ ಇರುತ್ತದೆ. ಜೊತೆಗೆ ಹಳೆಯ ಅಡಿಕೆ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹೊಸತನ್ನು ಇಟ್ಟು ಕಾದು ನೋಡುತ್ತಾರೆ. ಕೆಲವು ಖಾಸಗಿ ವರ್ತಕರ ಪ್ರಕಾರ ಚಾಲಿ ದರದಲ್ಲಿ ಸಧ್ಯವೇ ಸಣ್ಣ ಇಳಿಕೆ ಉಂಟಾಗಬಹುದು. ಕ್ವಿಂಟಾಲು ಮೇಲೆ 10000 ಕಡಿಮೆ ಬರಬಹುದು. ಬೆಳೆಗಾರರು ತರಾತುರಿಯಲ್ಲಿ ಅಡಿಕೆ ಮಾರಾಟ ಮಾಡದೆ ಇದ್ದರೆ ಮತ್ತೆ ತಿಂಗಳ ಒಳಗೆ ಪುನಹ ದರ ಎರಿಕೆ ಆಗಬಹುದು.ಆದರೂ ಈ ವರ್ಷ ಕಳೆದ ವರ್ಷದ ದರ ನಿರೀಕ್ಷೆ ಫಲ ಕೊಡಲಿಕ್ಕಿಲ್ಲ.
ಕೆಂಪಡಿಕೆಯ ಕಥೆ:
ಕೆಂಪಡಿಕೆಯ ಉತ್ಪಾದನೆ ಸಾಕಷ್ಟು ಇದೆ. ಅದೇ ಪ್ರಕಾರ ಗುಟ್ಕಾದ ಬಳಕೆಯೂ ಹೆಚ್ಚಾಗುತ್ತಲೇ ಇದೆ. ಈ ವರ್ಷ ಚೇಣಿ ಮಾಡುವವರು ಹಸಿ ಅಡಿಕೆ ಕ್ವಿಂಟಾಲಿಗೆ 7000 ತನಕ ಖರೀದಿ ಮಾಡುತ್ತಿದ್ದಾರೆ. ಈ ದರಕ್ಕೆ ಖರೀದಿ ಮಾಡಬೇಕಾದರೆ ರಾಶಿ ಬೆಲೆ 50,000 ದಾಟಲೇ ಬೇಕು. ಜೊತೆಗೆ ಮಾರುಕಟ್ಟೆಯಲ್ಲಿ ಟೆಂಡರ್ ಕೂಡಾ ದಿನದಿಂದ ದಿನಕ್ಕೆ ಸ್ವಲ್ಪ ಸ್ವಲ್ಪ ಹೆಚ್ಚು ಮಾಡುತ್ತಿದ್ದಾರೆ. ಬೇಡಿಕೆ ಇದೆ. ಯಾರೋ ಖರೀದಿದಾರರು ದಾಸ್ತಾನಿಗೆ ಮುಂದಾಗಿದ್ದಾರೆ ಎಂಬುದು ಇದರ ಮುನ್ಸೂಚನೆ. ಆದ ಕಾರಣ ಕೆಂಪಡಿಕೆ ಈ ವರ್ಷ ಸ್ವಲ್ಪ ತೇಜಿ ಆಗಬಹುದಾದ ಸಾಧ್ಯತೆ ಕಂಡು ಬರುತ್ತಿದೆ.
ಇಂದಿನ ಅಡಿಕೆ ಧಾರಣೆ:
- ಚಾಲಿ ಪುತ್ತೂರು ಮಂಗಳೂರು ಎಲ್ಲಾ ಕಡೆ ಹೊಸತು 46,000 ಗರಿಷ್ಟ ದರ
- ಹಳೆಯದು :51,000 ( ಅಲ್ಪ ಪ್ರಮಾಣದಲ್ಲಿ ಅವಕ ಇದೆ)
- ಶಿರಸಿ, ಚಾಲಿ :40,400 -41,500 , ಹೊಸನಗರ ಚಾಲಿ: 39,600 -40,000
- ಯಲ್ಲಾಪುರ ಚಾಲಿ: 40,100 -41,300 ಸಾಗರ ಚಾಲಿ: 38,000 -39,500
- ಚಿತ್ರದುರ್ಗ ರಾಶಿ: 47,669 – 47,889
- ಹೊಸನಗರ ರಾಶಿ 44,599 45,199
- ಯಲ್ಲಾಪುರ 44,489 47,299
- ಸಾಗರ 45,699 46,519
- ಸಿದ್ದಾಪುರ 44,749 45,109
- ತುಮಕೂರು 43,100 43.600
- ಶಿರಸಿ: 43,442 – 44,599
- ಚೆನ್ನಗಿರಿ : 47,200 -47400
ಕೆಂಪು ಗೋಟಿನ ದರ ಏರಿಕೆಯಾಗುತ್ತಿದೆ. ಕೊಯಿಲಿನ ಸಮಯದಲ್ಲಿ ದರ ಚೇತರಿಕೆ ಮುಂದೆ ಏರಿಕೆ್ಯಾಗುವ ಮುನ್ಸೂಚನೆ ಎಂಬ ಮಾತು ಇದೆ.
ಶಿರಸಿ, ಯಲ್ಲಾಪುರ, ಸಾಗರ, ಸಿದ್ದಾಪುರದಲ್ಲಿ ಚಾಲಿಗೆ ಬೇಡಿಕೆ ಹೆಚ್ಚಾದರೆ ಕರಾವಳಿಯಲ್ಲಿ ದರ ಏರಿಕೆಯಾಗುತ್ತದೆ. ಇಲ್ಲಿ ಅಂತಹ ಏರಿಕೆ ಇಲ್ಲ. ಹೆಚ್ಚಿನ ವ್ಯಾಪಾರಿಗಳು ಈಗ ಕೆಂಪಡಿಕೆಯತ್ತ ತಮ್ಮ ದೃಷಿ ಹರಿಸಿದಂತಿದೆ. ಆದ ಕಾರನ ಹಣಕಾಸಿನ ತುರ್ತು ಇರುವವರು ಸ್ವಲ್ಪ ಅಡಿಕೆ ಮಾರಾಟ ಮಾಡುವುದು ಉತ್ತಮ. ಸಧ್ಯವೇ ಚಾಲಿ ಸ್ವಲ್ಪ ಇಳಿಕೆ ಕಾಣಲಿದೆ. ಕೆಂಪು ಮೇಲೆ ಹೋಗಲಿದೆ.