ಭಾರತ ಸರಕಾರದ ಡಿಜಿಟಲೀಕರಣ ದೇಶದಲ್ಲಿಹೊಸ ಆಯಾಮವನ್ನು ಸೃಷ್ಟಿಸಿದೆ. ನಮ್ಮ ಜನ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ನಮ್ಮೂರಿನ ಜನ ತರಕಾರಿ ಅಂಗಡಿಗೆ ಹೋದರೂ ಈಗ ಕೇಳುತ್ತಾರೆ, ಪೆಟಿಯಂ ಇದೆಯಾ,ಎಂದು.ಅಂಗಡಿಯವನಿಗೂ ಇದು ಒಂದು ಘನತೆಯ ವಿಷಯವಾಗಿದೆ.ಪಾನ್ ಬೀಡಾ ಅಂಗಡಿಯಲ್ಲೂ ಆನ್ ಲೈನ್ ಪೇಮೆಂಟ್. ಒಂದಲ್ಲ ಎರಡು ಮೂರು ಕಡೆ QR ಕೋಡ್ ಹಾಳೆ ನೇತಾಡಿಸಿರುತ್ತಾರೆ. ಅಂಗಡಿಯವರು ಹೇಳುತ್ತಾರೆ, ಹಿಂದೆ ನಾಳೆ ಕೊಡುತ್ತೇನೆ ಎಂದು ಸಾಲ ಕೊಂಡೋಗುವ ಪ್ರಶ್ಣೆ ಇಲ್ಲ. ಫೋನ್ ಹಿಡಿದು ತಟ್ಟನೆ ಹಣ ಹಾಕುತ್ತಾರೆ.
ನಿಜ ಹಿಂದೆ ನಾವೆಲ್ಲಾ ಅಂಗಡಿಯಿಂದ ಏನೇ ಖರೀದಿ ಮಾಡಿದರೂ ನಗದು ಕೊಡುತ್ತಿದ್ದೆವು. ನಗದು ಎಷ್ಟು ಮುಗಿಯಿತು ಎಂಬ ಲೆಕ್ಕಾಚಾರ ನಮ್ಮಲ್ಲೂ ಇಲ್ಲ. ಖರ್ಚಾಗುವುದಕ್ಕೂ ಮಿತಿ ಇರಲಿಲ್ಲ. ಈಗ ಹಾಗಿಲ್ಲ.ಹಣ ಖಾತೆಯಲ್ಲಿ ಇದ್ದಷ್ಟು ಮಾತ್ರ ಖರೀದಿ. ಯಾರಿಗೆ ಎಷ್ಟು ಹಣ ಕೊಟ್ಟಿದ್ದೇವೆ ಎಂಬುದರ ಲೆಕ್ಕಾಚಾರ ಯಾವಾಗಬೇಕಾದರೂ ಸಿಗುವಂತಾಗಿದೆ. ಜನಸಾಮಾನ್ಯರೂ ಸಹ ಜಮಾ ಖರ್ಚಿನ ಖಾತೆ ಹೊಂದುವಂತಾಗಿದೆ. ಅಂಗಡಿಯವನಿಗೂ ಈಗ ತಕ್ಷಣ ಲೆಕ್ಕ ಬರೆದಿಡುವ ಕೆಲಸ ಇಲ್ಲ. ಯಾರಿಂದ ಯಾವುದಕ್ಕೆ ದುಡ್ಡು ಬಂದಿದೆ ಎಂಬುದರ ಲೆಕ್ಕಾಚಾರ ಅದರಷ್ಟಕ್ಕೆ ಆಗುತ್ತಲೇ ಇರುತ್ತದೆ. ಇದರಿಂದ ಅವರಿಗೂ ಸಹ ಜಮೆ ಮತ್ತು ಖರ್ಚಿನ ಚಿತ್ರಣ ಸಿಕ್ಕಂತಾಗಿ ಉಳಿತಾಯಕ್ಕೂ ಅವಕಾಶವಾಗಿದೆ. ಮೊನ್ನೆತಾನೇ ಬೆಂಗಳೂರಿನಲ್ಲಿ BMTC ಬಸ್ ಪ್ರಯಾಣಿಸುವಾಗ ಹಣಕೊಡಬೇಕಾದರೆ ಎಷ್ಟು ಸುಲಭ ಎಂಬುದು ಮನವರಿಕೆಯಾಯಿತು. ಚಿಲ್ಲರೆ ಇಲ್ಲವಾ, ಟಿಕೇಟ್ ಹಿಂದೆ ಬರೆದುಕೊಡುವ ಪ್ರಮೇಯವೇ ಇಲ್ಲ. ಸ್ಕಾನ್ ಮಾಡಿ, ಎಷ್ಟು ಬೇಕೋ ಅಷ್ಟನ್ನೇ ಕೊಟ್ಟರೆ ಇಬ್ಬರಿಗೂ ಕ್ಷೇಮ. ಎಲ್ಲಿ ತನಕ ತಲುಪಿತು ನಮ್ಮ ಡಿಜಿಟಲೀಕರಣ!
- ಸುಮಾರು -5-6 ವರ್ಷಕ್ಕೆ ಹಿಂದೆ ನಾವೆಲ್ಲಾ ಯಾವಾಗ ಮಳೆ ಸೂಚನೆ ಇದೆ ಎಂಬ ಮಾಹಿತಿಗಾಗಿ ಹವಾಮಾನ ಇಲಾಖೆಯವರ ಪ್ರಕಟಣೆಗೆ ಕಾಯುವ ಸ್ಥಿತಿ ಇತ್ತು.
- ಈಗ ಹಳ್ಳಿಯ ರೈತರು ಹವಾಮಾನ ಇಲಾಖೆಯವರ ಹೇಳಿಕೆಗೆ ಮುಂಚೆ ಮಾಹಿತಿ ತಿಳಿಯುವಂತಾಗಿದೆ.
- ಗ್ರಾಮೀಣ ರೈತರ ಜ್ಞಾನ ಬತ್ತಳಿಕೆಯಲ್ಲಿ ವಾರ- ತಿಂಗಳ ಕಾಲದ ಹವಾಮಾನ ಮುನ್ಸೂಚೆನೆಯ ಮಾಹಿತಿ ಇರುತ್ತದೆ.
- ತಾವು ಬೆಳೆಯುವ ಕೃಷಿ ಉತ್ಪನ್ನಕ್ಕೆ ಎಲ್ಲೆಲ್ಲಿ ಬೆಲೆ ಹೇಗೆ ಇದೆ, ಎಂಬ ಮಾಹಿತಿ ಹಿಂದೆ ಇರಲಿಲ್ಲ.
- ಈಗ ಇದೆ. ರೈತರು ನೂರಾರು ಕಿಲೋಮೀಟರು ದೂರದ ಮಾರುಕಟ್ಟೆಯಲ್ಲಿ ಇಂದು ಯಾವ ವ್ಯಾಪಾರಿ ಅಧಿಕ ಬೆಲೆಗೆ ಖರೀದಿ ಮಾಡಿದ್ದಾನೆ ಎಂಬುದು ಕ್ಷಣದಲ್ಲಿ ತಿಳಿಯುವುದು ಸಾಧ್ಯವಾಗಿದೆ.
- ಹೆಚ್ಚೇಕೆ ಗ್ರಾಮೀಣ ಜನ ಈಗ ಮನೆಗೆ ಬೇಕಾಗುವ ದಿನಬಳಕೆಯ ಸಾಮಾನುಗಳನ್ನೂ ಸಹ ಆನ್ ಲೈನ್ ನಲ್ಲಿ ಎಲ್ಲಿ ಯಾವ ಬೆಲೆ ಇದೆ, ಯಾವಾಗ ಆಫರ್ ಇದೆ, ಎಂದು ತಿಳಿದುಕೊಂಡು ಮನೆಬಾಗಿಲಿಗೇ ತರಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
- ಎಲ್ಲಿ ಹಣವನ್ನು ಆನ್ ಲೈನ್ ಮೂಲಕ ಪಾವತಿಸಲು ಸಾಧ್ಯವಿದೆಯೋ ಅಲ್ಲಿ ವ್ಯವಹಾರ ಹೆಚ್ಚಾಗುತ್ತಿದೆ.
- ನಡೆದು ಹೋಗಲು ಕಷ್ಟವಾಗುವ ವಯೋ ವೃದ್ಧರು ಇರುವ ಕಡೆ ಊಟ ತಿಂಡಿಗಳನ್ನೂ ಆರ್ಡರ್ ಮಾಡುವ ವರೆಗೂ ಡಿಜಿಟಲೀಕರಣ ಬೆಳೆದಿದೆ.
- ಪೇಟೆ ಪಟ್ಟಣಗಳಲ್ಲಿ ಸಂಚರಿಸಲು ಕ್ಯಾಬ್, ಅಟೋಗಳನ್ನೂ ನಮ್ಮ ಕಾಲಬುಡಕ್ಕೇ ತರಿಸಿಕೊಳ್ಳಬಹುದಾದ ಅನುಕೂಲ ಆಗಿದೆ.
- ಎಲ್ಲೇ ಹೋಗಬೇಕಾದರೂ ಯಾರಲ್ಲೂ ದಾರಿ ಕೇಳದೆ ಬರೇ ಸ್ಮಾರ್ಟ್ ಫೋನ್ ಮೂಲಕ ಮ್ಯಾಪ್ ಹಾಕಿ ಹೋಗಬಹುದು.
- ನಿಮ್ಮ ಮನೆಗೆ ಬರುವ ದಾರಿಗೂ ಡಿಜಿಟಲ್ ಮಾರ್ಗ ಇದೆ.
ಕೃಷಿಕರಿಗೆ ಅನುಕೂಲವಾದ ಡಿಜಿಟಲೀಕರಣ:
- ನಮ್ಮೂರಿನಲ್ಲೊಬ್ಬರು ಕೃಷಿ ಪೂರಕ ಉದ್ದಿಮೆಯೊಂದನ್ನು ಪ್ರಾರಂಭಿಸಿದರು.
- ಮೊದಲು ಇದನ್ನು ಸಾಂಪ್ರದಾಯಿಕ ಯಂತ್ರೋಪಕರಣ, ಮಾನವ ಶ್ರಮದ ಕೆಲಸಗಳಿಂದ ನಡೆಸುತ್ತಾ, ಬಿಡುವಿದ್ದಾಗ ಯುಟ್ಯೂಬ್ ಇತ್ಯಾದಿಗಳಲ್ಲಿ ಹೆಚ್ಚಿನ ಮಾಹಿತಿ ಹುಡುಕುತ್ತಾ ಅಮೂಲಾಗ್ರವಾಗಿ ತಮ್ಮ ಉದ್ದಿಮೆಯನ್ನು ಮೇಲ್ದರ್ಜೆಗೇರಿಸುತ್ತಾ ಬಂದರು.
- ಮೊದಲು ಉದ್ದಿಮೆ ವಿಷಯದಲ್ಲಿ ಹೆಚ್ಚು ಅನುಭವಿಗಳಾಗಿರಲಿಲ್ಲ.
- ಈಗ ಹಾಗಿಲ್ಲ, ತಜ್ಞತೆಯನ್ನು ಸಂಪಾದಿಸಿಕೊಂಡಿದ್ದಾರೆ, ಇದೆಲ್ಲಾ ಸಾಧ್ಯವಾದುದು ಡಿಜೀಟಲೀಕರಣದ ಕಾರಣದಿಂದ ಎನ್ನುತ್ತಾರೆ.
ಗ್ರಾಮೀಣ ಕೃಷಿ ವೃತ್ತಿ ನಿರತರು ಈಗ ಮಾಹಿತಿಗಾಗಿ ಪುಸ್ತಕ ಹುಡುಕಾಡುವುದು, ತಜ್ಞರ ಜೊತೆ ಕೇಳುವುದು ಮಾಡುವುದನ್ನು ಬಿಟ್ಟಿದ್ದಾರೆ. ತಮಗೇನು ಮಾಹಿತಿ ಬೇಕು ಅದನ್ನು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಕೇಳಿದರೆ ಅದು ಭರಪೂರ ಮಾಹಿತಿಯನ್ನು ತೆರೆದು ತೋರಿಸುತ್ತದೆ.
ಬಹಳಷ್ಟು ಜನ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ವ್ಯವಹಾರ ಕುದುರಿಸಿಕೊಂಡವರಿದ್ದಾರೆ. ಆನ್ ಲೈನ್ ಮೂಲಕವೇ ಮಾರಾಟ ಮಾಡುತ್ತೇನೆ ಎಂಬ ಧೈರ್ಯದಲ್ಲಿ ವ್ಯವಹಾರ ಪ್ರಾರಂಭಿಸಿದ್ದಾರೆ. ಹಳ್ಳಿಯಲ್ಲಿ ಕೆಲಸದವರೂ ಸಹ ಸ್ವಲ್ಪ ಗೂಗುಲ್ ಪೇ ಮೂಲಕ ಎಕೌಂಟ್ ಗೆ ಹಾಕಿ ಎಂದು ಹೇಳಲಾರಂಭಿಸಿದ್ದಾರೆ.
ಕೃಷಿ ಮಾಹಿತಿ ಮತ್ತು ಡಿಜಿಟಲೀಕರಣ:
- ಹಿಂದೆ ಬಹುತೇಕ ಎಲ್ಲಾ ಮಾಹಿತಿಗಳೂ ಪುಸ್ತಕಗಳ ಮೂಲಕ ಸಿಗುತ್ತಿತ್ತು.
- ಸುದ್ದಿ ಪತ್ರಿಕೆಗಳು, ಟಿವಿ ಮಾಧ್ಯಮಗಳ ಮೂಲಕ ಸಿಗುತ್ತಿದ್ದುದು ನಮಗೆಲ್ಲಾ ಗೊತ್ತಿರುವಂತದ್ದು.
- ಈಗ ಕಾಲ ಸಂಪೂರ್ಣ ಬದಲಾಗಿದೆ. ಜನ ಮಾಹಿತಿಗಾಗಿ ಪತ್ರಿಕೆ ಓದುವುದನ್ನು ಕಡಿಮೆ ಮಾಡಿದ್ದಾರೆ.
- ಪತ್ರಿಕೆ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಸುದ್ದಿ ತಲುಪುವ ಮುನ್ನ ಅಂಗೈಯಲ್ಲಿರುವ ಸ್ಮಾರ್ಟ್ ಫೋನ್ ಆ ಸುದ್ದಿಯನ್ನು ತಲುಪಿಸಿ ಆಗಿರುತ್ತದೆ.
- ಅದನ್ನು ತಕ್ಷಣ ಜನ ಓದುತ್ತಾರೆ. ಇದರಿಂದಾಗಿ ಎಲ್ಲರಿಗೂ ಉಪಕಾರವಾಗಿದೆ.
- ಸತ್ಯವಾಗಿ ಹೇಳಬೇಕೆಂದರೆ ಕೃಷಿಕರು ಈಗ ಹಿಂದಿಗಿಂತ ಬುದ್ದಿವಂತಾಗಿದ್ದರೆ ಅದರ ಹಿಂದೆ ಈ ಡಿಜಿಟಲೀಕರಣದ ಕೊಡುಗೆ ಅಪಾರ ಇದೆ.
ಪ್ರಾರಂಭದಲ್ಲಿ ಈ ಡಿಜಿಟಲೀಕರಣವನ್ನು ಏನೋ ಎಂದು ತಿಳಿದಿದ್ದ ಜನ ಇಂದು ಅಚ್ಚರಿಪಡುವ ರೀತಿಯಲ್ಲಿ ಜನತೆಯಿಂದ ಸ್ವೀಕರಿಸಲ್ಪಟ್ಟಿದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಸ್ಮಾರ್ಟ್ ಫೋನ್ ಬಳಸಿ ಮಾಹಿತಿ ಪಡೆಯುತ್ತಾರೆ. ಜನ ವೃಥಾ ಪೇಟೆಯಲ್ಲಿ ತಿರುಗುವುದಿಲ್ಲ. ನೆಂಟರಿಷ್ಟರ ಮನೆಗೆ ಹೋಗಿ ಕಾಲ ಹರಣ ಮಾಡುವುದಿಲ್ಲ. ಬಿಡುವಿನ ವೇಳೆಯಲ್ಲಿ ತಮ್ಮ ತಮ್ಮ ವೃತ್ತಿಗೆ ಬೇಕಾಗುವ ಮಾಹಿತಿಯನ್ನು ಸ್ಮಾರ್ಟ್ ಫೋನ್ ಮೂಖಾಂತರ ಪಡೆದು ಅದರಲ್ಲಿ ಹೊಸತನ್ನು ಹುಡುಕುತ್ತಿದ್ದಾರೆ.
ಕೆಲವು ಅಂಕಿ ಅಂಶಗಳು:
- ಭಾರತ ದೇಶದಲ್ಲಿ ಸುಮಾರು 30 ಮಿಲಿಯ ರೈತರು ಸ್ಮಾರ್ಟ್ ಫೋನ್ ಬಳಸಿ,ಕೃಷಿ ಮಾಹಿತಿಯನ್ನು ಪಡೆಯುತ್ತಾರೆ ಎಂಬ ಅಧ್ಯಯನ ವರದಿ ಇದೆ.
- ಅದಕ್ಕೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸೌಕರ್ಯ ಎಂಬುದು ದಿನದಿಂದ ದಿನಕ್ಕೆ ಮೇಲ್ದರ್ಜೆಗೇರುತ್ತಿದೆ.
- ಟೋಮಾಟೋ ಬೆಳೆಯುವ ರೈತ ಯಾವಾಗ ಬೆಲೆ ಹೆಚ್ಚು ಸಿಗುತ್ತದೆ ಎಂಬುದನ್ನು ಮಾರುಕಟ್ಟೆ ಮೂಲವನ್ನು ಸ್ಮಾರ್ಟ್ ಫೋನ್ ಮೂಲಕ ತಿಳಿದು ಅದಕ್ಕನುಗುಣವಾಗಿ ಬೆಳೆಯುತ್ತಾನೆ.
- ಹಾಗೆಯೇ ಇನ್ನಿತರ ಬೆಳೆಗಾರರೂ ಸಹ. ಮಾರುಕಟ್ಟೆ ಮಾತ್ರವಲ್ಲ, ಬೆಳೆ ಹೆಚ್ಚು ಪಡೆಯಲು ಬೇಕಾಗುವ ಗೊಬ್ಬರ ಯಾವುದು ಬಳಸಬೇಕು, ಎಂಬುದನ್ನೂ ತಿಳಿಯಲು ಪ್ರಾರಂಭಿಸಿದ್ದಾನೆ.
- ಸ್ವಲ್ಪ ಬುದ್ದಿವಂತ ಕೃಷಿಕರು ತಮ್ಮ ಬೆಳೆಯಲ್ಲಿ ಏನಾದರೂ ಸಮಸ್ಯೆ ( ರೋಗ ಕೀಟ ಬಾಧೆ) ಉಂಟಾದಾಗ ಅದನ್ನು ನಿರ್ದಿಷ್ಟ ಆಪ್ ಮೂಲಕ ಸ್ಕಾನ್ ಮಾಡಿ ಅದು ಯಾವ ರೋಗ ಯಾವ ಔಷಧಿ ಸಿಂಪಡಿಸಬೇಕು ಎಂಬುದನ್ನು ತಿಳಿಯುವ ಸ್ಥಿತಿ ಉಂಟಾಗಿದೆ.
- ಮಣ್ಣು ತರಾವಳಿಯ ಗುಣ, ತಳಿಗಳು, ಬಿತ್ತನೆ ಸಮಯ, ಕೊಯಿಲಿನ ಸಮಯ, ನೀರಾವರಿ ಎಲ್ಲವನ್ನೂ ಸ್ಮಾರ್ಟ್ ಫೋನ್ ಮೂಲಕ ತಿಳಿಯಲು ಸಾಧ್ಯವಾಗುತ್ತದೆ.
- ತಜ್ಞರ ಜೊತೆಗೆ ಸಂಪರ್ಕವೂ ಸಾಧ್ಯವಾಗುತ್ತದೆ. ಯಾವುದಾದರೂ ಬೆಳೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಆ ವಿಚಾರ ಬೇರೆ ರೈತರಿಗೂ ತಲುಪುತ್ತದೆ.
- ಅವರು ಅದನ್ನು ಬೆಳೆಸಿ ನಷ್ಟ ಮಾಡಿಕೊಳ್ಳುವುದೂ ತಪ್ಪುತ್ತದೆ.
- ಸ್ಮಾರ್ಟ್ ಫೋನ್ ಮತ್ತು ಈ ಡಿಜಿಟಲೀಕರಣದ ಕೃಪೆಯಿಂದಾಗಿ ಕೃಷಿ ಉತ್ಪಾದನೆಯಲ್ಲಿ 15-25 % ದಷ್ಟು ಇಳುವರಿಯೂ ಹೆಚ್ಚಳವಾಗಿದೆ ಎಂಬ ಲೆಕ್ಕಾಚಾರ ಸಿಗುತ್ತದೆ.
- ಇನ್ನೂ 3-4 ವರ್ಷದಲ್ಲಿ ಇದು ದುಪ್ಪಟ್ಟಾಗಬಹುದು ಎಂಬ ಲೆಕ್ಕಾಚಾರ ಇದೆ.
- ಡಿಜಿಟಲೀಕರಣದ ದಿಸೆಯಿಂದ ಉತ್ಪಾದನಾ ವೆಚ್ಚ ಸಹ ಕಡಿಮೆಯಾಗಿದೆ ಎಂಬ ವರದಿ ಇದೆ.( ಕೃಷಿ ಒಳಸುರಿಗಳಾದ ಬೀಜ, ಗೊಬ್ಬರ, ಯಂತ್ರ ಇತ್ಯಾದಿಗಳನ್ನು ಬೇಕಾದಲ್ಲಿಂದ ಕಡಿಮೆ ಬೆಲೆಗೆ ಆಯ್ಕೆಮಾಡುವ ಅನುಕೂಲ)
- ಜನತೆ ತಮ್ಮ ಜೀವನೋಪಾಯವನ್ನು ಸುಧಾರಿಸಲು ಡಿಜಿಟಲೀಕರಣ ಸಹಾಯ ಮಾಡಿದೆ.
- ಭಾರತದಂತಹ ಸಣ್ಣ, ಮಧ್ಯಮ ಸ್ಥರದ ಕೃಷಿಕರಿರುವ ರಾಷ್ಟ್ರಕ್ಕೆ ಡಿಜಿಟಲೀಕರಣ ಹೊಸ ಬೆಳಕನ್ನು ಕೊಡಬಲ್ಲುದು ಎಂಬುದರಲ್ಲಿ ಅನುಮಾನ ಇಲ್ಲ.
ರೈತರು ಮುಂದೆ ಬರುತ್ತಿದ್ದಾರೆ. ಅದರ ಜೊತೆಗೆ ಮುಂದೆ ಬರಬೇಕಾದವರು ಓಟ ಪ್ರಾರಂಭಿಸಬೇಕಾಗಿದೆ. ಹಳೆ ಕಾಲದ ಕೃಷಿ ತಾಂತ್ರಿಕತೆಯನ್ನು ಬದಲಾಯಿಸಿ ಅಪ್ಡೇಟೆಡ್ ಮಾಹಿತಿಕೊಡಬಲ್ಲ ವಿಶ್ವ ದರ್ಜೆಯ ಜ್ಞಾನ ಉಳ್ಳ ಕೃಷಿ ವಿಜ್ಞಾನಿಗಳು ಸೃಷ್ಟಿಯಾಗಬೇಕಿದೆ.ಖಾಸಗಿ ವಲಯದಲ್ಲಿ ಓಟ ಪ್ರಾರಂಭವಾಗಿದೆ. ಈ ಮಾಹಿತಿ ನಮ್ಮ ಸರಕಾರದ ಕೃಷಿ ಸಂಶೊಧನಾ ಕ್ಷೇತ್ರಕ್ಕೆ ತಿಳಿಯಬೇಕಾಗಿದೆ. ಇಲ್ಲವಾದರೆ ಮುಂದೊಂದು ದಿನ ಸರಕಾರೀ ವ್ಯವಸ್ಥೆ, ನಾಂಬಿಕಾರ್ಹತೆಯನ್ನು ಕಳೆದುಕೊಳ್ಳಲೂ ಬಹುದು.ತುಕ್ಕು ಹಿಡಿದ ಮೆದುಳುಗಳು ಉಪಯೋಗಕ್ಕಿಲ್ಲದ ಸರಂಜಾಮುಗಳಾಗಲಿ, ಜ್ಞಾನದ ಸಂಪತ್ತು ಉಳ್ಳವರು ಮುಂದೆ ಬರಲಿ, ಆಗ ಈ ಡಿಜಿಟಲೀಕಾರಣ ಭಾರೀ ಫಲ ನೀಡಲಿದೆ.
ಸರಕಾರ ಜನತೆಗೆ ಡಿಜಿಟಲೀಕರಣದ ರುಚಿಯನ್ನು ತೋರಿಸಿಕೊಟ್ಟಿದೆ. ಅದಕ್ಕೆ ಜನ ಅಭಾರಿಗಳು. ಆದರೆ ಅದರ ಜೊತೆಗೆ ಸರಕಾರಕ್ಕೂ ಜವಾಬ್ಧಾರಿ ಇದೆ. ಮುಂದೆ ಈ ಡಿಜಿಟಲೀಕರಣವನ್ನು ಮುಂದುವರಿಸಲು ಇದಕ್ಕೆ ಯಾವುದೇ ಅಂಕುಶಗಳನ್ನು ಹಾಕದಿರಲಿ. ಒಂದು ವೇಳೆ ಡಿಜೀಟಲ್ ವ್ಯವಹಾರವನ್ನು ಯಾವುದಾದರೂ ತೆರಿಗೆಯ ವ್ಯಾಪ್ತಿಗೆ ತಂದರೆ ಮತ್ತೆ ಜನ ಹಿಂದಿನ ದಾರಿ ಹಿಡಿಯುವಂತಾಗಲೂ ಬಹುದು. ಜನತೆಯ ಜ್ಞಾನ ವೃದ್ದಿಗೆ ಅನುಕೂಲವಾಗುವ ಈ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಲಿ ಎಂದು ಆಶಿಸೋಣ.