ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 50% ಜನರಿಗೆ ಸಕ್ಕರೆ ಖಾಯಿಲೆ (ಡಯಾಬಿಟಿಸ್) ಇದೆ ಎಂಬ ವರದಿ ಇದೆ. ಯಾಕೆ ಹೀಗಾಯಿತೋ ಗೊತ್ತಿಲ್ಲ. ಸಕ್ಕರೆ ಖಾಯಿಲೆ ಎಂಬುದು ಬೇರೆ ರೋಗಗಳ ಪ್ರವೇಶಕ್ಕೆ ತೆರೆದ ಹೆಬ್ಬಾಗಿಲು. ಇದರ ಉಪಶಮನಕ್ಕೆ ತಾತ್ಕಾಲಿಕವಾಗಿ ರಾಸಾಯನಿಕ ಔಷಧೋಪಚಾರಗಳಿವೆ. ಎಡೆ ತೊಂದರೆ ಇಲ್ಲದ ಔಷಧಿ ಎಂದರೆ ನೇರಳೆ ಹಣ್ಣು ಜಾವಾ ಪ್ಲಮ್ ಮತ್ತು ಮರದ ಭಾಗ.
- ಆಧುನಿಕ ಔಷಧೋಪಚಾರಗಳು ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಹದ್ದುಬಸ್ತಿನಲ್ಲಿಡುತ್ತದೆ.
- ನಮ್ಮ ಗುಡ್ದ ಬೆಟ್ಟಗಳ ಹಣ್ಣು ಹಂಪಲುಗಳು ಹಲವು ರೋಗ ರುಜಿನಗಳಿಗೆ ಔಷಧಿ.
- ನಿಧಾನವಾಗಿ ಮತ್ತೊಂದು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
- ಇದಕ್ಕೆಲ್ಲಾ ದಾರಿ ಮಾಡಿಕೊಡುವ ಬದಲಿಗೆ, ನಿಸರ್ಗದಲ್ಲಿರುವ ಸುರಕ್ಷಿತ ಪರಿಹಾರಗಳನ್ನು ಅನುಸರಿಸುವುದು ಉತ್ತಮ.
ನೇರಳೆ ಹಣ್ಣಿನ ಔಷಧಿ:
- ನೇರಳೆ ಹಣ್ಣು (Syzygium cumini) ಮತ್ತು ಬೀಜಗಳಲ್ಲಿ ಸಕ್ಕರೆ ಖಾಯಿಲೆಯನ್ನು ಕಡಿಮೆ ಮಾಡಿ ಗುಣ ಪಡಿಸುವ ಶಕ್ತಿ ಇದೆ ಎಂಬ ಮಾಹಿತಿ ಇದೆ.
- ನೇರಳೆ ಬೀಜದಿಂದ ತಯಾರಿಸಿದ ಜಂಬೂಳಾಸವ ( ಆಯುರ್ವೇದ ಔಷಧಿ) ಅತೀ ಹೆಚ್ಚು ಮಾರಾಟವಾಗುವ ಔಷಧಿಯಾಗಿದೆ.
- ಇದರಿಂದ ನೇರಳೆ ಬೀಜಕ್ಕೂ ಬೇಡಿಕೆ ಬಂದಿದೆ.
- ನೇರಳೆ ಹಣ್ಣು ಆಂಟೀ ಆಕ್ಸಿಡೆಂಟ್ ಗಳ ಆಗರ.
- ಇದರ ಹಣ್ಣನ್ನು ಸ್ಪ್ರೇ ಡ್ರೈಯರ್ ಮೂಲಕ ಹುಡಿ ಮಾಡಿ ಧೀರ್ಘ ಕಾಲದ ತನಕ ಸಂಗ್ರಹಿಸಿಡಲು ಸಾಧ್ಯವಾಗುತ್ತದೆ.
ನೇರಳೆ ಹಣ್ಣು ತಿನ್ನಲು ರುಚಿ. ಅದರ ಬಣ್ಣ ಬಲು ಆಕರ್ಷಕ. ಇದಕ್ಕೆ ಎಲ್ಲಾ ಕಡೆ ಗಿರಾಕಿಗಳಿದ್ದಾರೆ. ಮಹಾನಗರಗಳಲ್ಲಿ ಕಿಲೋ ಹಣ್ಣಿಗೆ 250-300 ರೂ ತನಕವೂ ಬೆಲೆ ಇರುತ್ತದೆ. ಎಲ್ಲಾ ಹಣ್ಣಿನಂಗಡಿಯಲ್ಲೂ ಕೊಳ್ಳುವವರಿದ್ದಾರೆ.
ನೇರಳೆ ಬೆಳೆಸುವುದು ಹೇಗೆ:
- ನಿಮ್ಮಲ್ಲಿ ನೇರಳೆ ಮರ ಇದೆಯೇ ಅದರಲ್ಲಿ ಕಾಯಿ ಆಗುತ್ತದೆಯೇ? ಕಾಯಿ ಹೇಗಿದೆ, ಬೀಜ ಸಣ್ಣದಾಗಿದ್ದರೆ ಅದು ಉತ್ತಮ ಗುಣದ ಸಸ್ಯ. ಒಂದು ವೇಳೆ ಗುಣಮಟ್ಟದ ಕಾಯಿ ಅಲ್ಲವೆಂದಾದರೆ ಆ ಮರವನ್ನೇ ಬೇರು ಮೂಲವಾಗಿ ಇಟ್ಟುಕೊಂಡು ಅದಕ್ಕೆ ಉತ್ತಮ ಕಾಯಿ ಕೊಡುವ ನೇರಳೆ ಗೆಲ್ಲನ್ನು ಕಸಿ ಮಾಡಿ.
- ಒಂದು ವೇಳೆ ನಿಮ್ಮಲ್ಲಿ ನೇರಳೆ ಸಸಿಯೇ ಇಲ್ಲವೆಂದಾದರೆ , ತೀರಾ ಚಿಕ್ಕ ಬೀಜದ ನೇರಳೆ ಸಸ್ಯ ಮೂಲವನ್ನು ಅರಸಿ ಸಸ್ಯಾಭಿವೃದ್ಧಿ ಮಾಡಿ ಮಾರಾಟ ಮಾಡುವ ನರ್ಸರಿಗಳಿವೆ. ಅಲ್ಲಿಂದ ಸಸಿ ತಂದು ಬೆಳೆಸಿ.
- ಬೀಜ ತಂದು ಸಸಿ ಮಾಡಿಕೊಂಡು ಅದರ ಕಾಂಡ ಕೈಯಷ್ಟು ದಪ್ಪ ಬೆಳೆದ ತರುವಾಯ ಅದಕ್ಕೆ ಟಾಪ್ ವರ್ಕಿಂಗ್ ಮಾಡಿ ಹೊಸ ಗೆಲ್ಲನ್ನು ಕಸಿಮಾಡಿ.
ಉತ್ತಮ ಹಣ್ಣು ಪಡೆಯುವುದು :
- ನೇರಳೆ ಸಾಮಾನ್ಯವಾಗಿ ಅಧಿಕ ಹೂ ಬಿಟ್ಟು ಹೆಚ್ಚು ಕಾಯಿಗಳನ್ನು ಬಿಡುತ್ತದೆ.
- ಎಲ್ಲಾ ಕಾಯಿಗಳನ್ನು ಉಳಿಸಿಕೊಂಡರೆ ಕಾಯಿಗಳೆಲ್ಲಾ ಸಣ್ಣದಾಗಿ ಉಪಯೋಗಕ್ಕೆ ಇಲ್ಲದಾಗುತ್ತದೆ.
- ಅದಕ್ಕೆ ಸ್ವಲ್ಪ ಕಾಯಿ ಗೊಂಚಲು ಇಲ್ಲವೇ ಗೊಂಚಲಿನಲ್ಲಿ ಸ್ವಲ್ಪ ಕಾಯಿಗಳನ್ನು ಆರಿಸಿ ಥಿನ್ನಿಂಗ್ ಮಾಡುವುದು ಸೂಕ್ತ.
- ಮರದಲ್ಲಿ ಹೂ ಬಿಡುವ ಸಮಯ ಮಾರ್ಚ್ ತಿಂಗಳು. ಈ ಸಮಯದಲ್ಲಿ ಸ್ವಲ್ಪ ತೇವಾಂಶದ ಕೊರತೆ ಇರುತ್ತದೆ.
- ಆಗ ಸ್ವಲ್ಪ ನೀರಾವರಿ ಮಾಡಿದರೆ ಕಾಯಿ ಪುಷ್ಟಿಯಾಗುತ್ತದೆ.
- ಅಧಿಕ ನೀರು ಬೇಕಾಗಿಲ್ಲ. ಮಳೆ ಬಂದರೆ ಸಹಜವಾಗಿ ಕಾಯಿ ಪುಷ್ಟಿಯಾಗುತ್ತದೆ.
ವರ್ಷ ವರ್ಷವೂ ವಿಭಾಗ ಮಾಡಿ ಗೆಲ್ಲುಗಳನ್ನು ಪ್ರೂನಿಂಗ್ ಮಾಡುತ್ತಿದ್ದರೆ ಹೊಸ ಚಿಗುರು ಬಂದು ಅದರಲ್ಲಿ ಬರುವ ಕಾಯಿಗಳು ಪುಷ್ಟಿಯಾಗಿರುತ್ತವೆ.
ನೇರಳೆಯಲ್ಲಿ ತಳಿಗಳು:
- ನೇರಳೆಯಲ್ಲಿ ಹೈಬ್ರೀಡ್ ತಳಿಗಳು ಹೆಚ್ಚು ಇಲ್ಲ.
- ಉತ್ತರ ಪ್ರದೇಶದ ಲಕ್ನೋ ದ ಸೆಂಟ್ರಲ್ ಇನ್ಟಿಟ್ಯೂಟ್ ಅಫ್ ಸಬ್ ಟ್ರೋಪಿಕಲ್ ಹಾರ್ಟಿಕಲ್ಚರ್ ಇವರು ಜಾಮೂನ್ CIHS J-42 ಮತ್ತು CIHS J-37 ಎಂಬ ಎರಡು ಆಯ್ಕೆ ತಳಿಗಳನ್ನು ಅಭಿವೃದ್ದಿ ಪಡಿಸಿದ್ದಾರೆ.
- ಮೊದಲ ತಳಿಯ ಹಣ್ಣು 8 ಗ್ರಾಂ ಹಾಗೂ ಉದ್ದ 2.57 ಸೆಂ ಮೀ. ದಪ್ಪ 2.18 ಸೆಂ ಮೀ ಇದೆ.
- ಎರಡನೆಯದ್ದು 22-24 ಗ್ರಾಂ ಹಾಗೂ ಉದ್ದ 3.90 ಸೆಂ ಮೀ. ದಪ್ಪ 3.30 ಸೆಂ ಮೀ ಇದೆ. ಎರಡೂ ಬೀಜ ರಹಿತ.
ಕೆಲವು ಇಂತಹ ತಳಿಗಳು ಅಪರೂಪದಲ್ಲಿ ಸ್ಥಳೀಯವಾಗಿಯೂ ಲಭ್ಯವಿರುತ್ತವೆ. ಇದನ್ನೂ ಆಯ್ಕೆ ಮಾಡಬಹುದು.
ನೇರಳೆ ಮರವು ಸಡಿಲ ಫಲವತ್ತಾದ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹೆಚ್ಚು ಫಸಲು ಕೊಡುತ್ತದೆ. ತಂಪು ವಾತಾವರಣ ಕಾಯಿ ಕಚ್ಚುವಿಕೆಗೆ ಸಹಾಯಕ.