ದೇಸೀ ಹಸುವೊಂದಿದ್ದರೆ ನೀವು ಯಾವ ಗೊಬ್ಬರದಂಗಡಿಯವನನ್ನೂ ಸಾಕಬೇಕಾಗಿಲ್ಲ. ಹಸುವಿನ ಸಗಣಿ, ಅದರ ಮೂತ್ರ, ಮಜ್ಜಿಗೆ, ಹಾಲು, ಶುಂಠಿ ರಸ, ಬ್ರಹ್ಮಾಸ್ತ್ರ, ಅಗ್ನ್ಯಾಸ್ತ್ರ, ನೀಮಾಸ್ತ್ರ ಮುಂತಾದ ಸ್ಥಳೀಯವಾಗಿ ದೊರೆಯುವ ಮೂಲ ವಸ್ತುಗಳಿಂದ ಬೆಳೆಯ ಸರ್ವಾಂಗೀಣ ಅವಶ್ಯಕತೆಯನ್ನೂ ಪೂರೈಸಬಹುದು.
ಎಲ್ಲವೂ ಬದಲಾಗಲಿದೆ :
- ಕೆಲವೇ ವರ್ಷಗಳಲ್ಲಿ ಈ ದೇಶದಲ್ಲಿರುವ ಸರಕಾರೀ ಸ್ವಾಮ್ಯದ ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಬಾಗಿಲು ಹಾಕಲಿವೆ.
- ಲಕ್ಷಾಂತರ ಜನ ನಿರುದ್ಯೋಗಿಗಳಾಗಲಿದ್ದಾರೆ.
- ಕೊಟ್ಯಾಂತರ ರೂಪಾಯಿ ವ್ಯವಹಾರದ ರಸಗೊಬ್ಬರ, ಕೀಟ ನಾಶಕ, ರೋಗನಾಶಕ ಹಾಗೂ ಇನ್ನಿತರ ಬೆಳೆ ಸಂರಕ್ಷಕ ತಯಾರಕರು ಬೀದಿಗೆ ಬರಲಿದ್ದಾರೆ.
- ಇದೆಲ್ಲವೂ ಆಗುವ ಕಾಲ ಸನ್ನಿಹಿತವಾಗಿದೆ. ಬಹುಷಃ ಎಲ್ಲವೂ ಗ್ರಹಿಸಿದಂತೆ ನಡೆದರೆ 2022ಕ್ಕೆ ಈ ಒಂದು ಘಟನೆಯನ್ನು ನಾವು ಕಣ್ಣಾರೆ ನೋಡಬಹುದೇನೋ?
- ಭಾರತ ಸರಕಾರ 2018-19 ನೇ ಸಾಲಿನಲ್ಲಿ ರಾಸಾಯನಿಕ ರಹಿತವಾಗಿ ಪರಂಪರಾಗತ ಕೃಷಿಯನ್ನು ಮಾಡಲು ಪರಂಪರಾಗತ್ ಕೃಷಿ ವಿಕಾಸ ಯೋಜನೆಗೆ 4050 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
- ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ.
- ZBNF ಎಂಬ ಆಕರ್ಷಕ ಹೆಸರನ್ನೂ ನೀಡಲಾಗಿದೆ.
- ಕೃಷಿ ವಿಜ್ಞಾನ ಅಧ್ಯಯನ ಮಾಡಿದ ಹಲವಾರು ಘಟಾನು ಘಟಿಗಳು ಈ ಯೋಜನೆಯನ್ನು ರೈತರ ಬಳಿಗೆ ತಲುಪಿಸಿ ಅವರನ್ನು ಉದ್ಧರಿಸಲು ಸಿದ್ದರಾಗಿದ್ದಾರೆ.
ಶೂನ್ಯ ಬಂಡವಾಳದ ಕೃಷಿ:
- ಶೂನ್ಯ ಬಂಡವಾಳದಲ್ಲಿ ಹಸುವಿಕ ಸಗಣಿ ಮತ್ತು ಕೆಲವು ಬೆಳೆಗಳ ಸಹಾಯದಲ್ಲಿ ಕೃಷಿಯನ್ನು ಹೊರಗಡೆಯ ಒಳಸುರಿಗಳಿಲ್ಲದೆ ಮಾಡಬಹುದಾದರೆ ನಾವು ಈ ತನಕ ಮೂರ್ಖರಾದುದೇ
- ನಮ್ಮನ್ನು ಈ ತನಕ ಮೂರ್ಖರನ್ನಾಗಿ ಮಾಡಿದ್ಡೇ ಎಂದು ಎಷ್ಟು ಯೋಚಿಸಿದರೂ ತಿಳಿಯದಾಗಿದೆ.
- ನಮ್ಮ ರಾಜ್ಯದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯ ಉಸ್ತುವಾರಿಗೆ ಸರಕಾರ ನಿಯೋಜಿಸಲ್ಪಟ್ಟ ಅಧಿಕಾರಿಯೊಬ್ಬರು ಇದರ ಬಗ್ಗೆ ಹೇಳುವಾಗ ಕಿವಿ ನೆಟ್ಟಗಾಯಿತು.
- ಕೃಷಿ ವಿಶ್ವ ವಿಧ್ಯಾನಿಲಯವೊಂದರಲ್ಲಿ ಅಧ್ಯಯನ ನಡೆಸಿ, ವಿಧ್ಯಾರ್ಥಿಗಳಿಗೆ ಪಾಠವನ್ನೂ ಹೇಳಿ ಕೊನೆಗೆ ತಮ್ಮ ಅಧ್ಯಯನವನ್ನು ಬಿಟ್ಟು ಹೊಸ ಸಿದ್ದಾಂತ ಹೇಳುತ್ತಿದ್ದಾರೆ.
- ವಿಧ್ಯಾರ್ಥಿಗಳಿಗೆ ಹೇಳಿದ್ದ ಆ ಅಧ್ಯಾಯಗಳೇ ಈಗ ತಲೆಕೆಳಗಾಗಿದೆ.
ಇದು ಮಾತ್ರವಲ್ಲ ಈಗ ಬೆಂಗಳೂರಿನ ಕೃಷಿ ವಿಶ್ವ ವಿಧ್ಯಾನಿಲಯದಲ್ಲೂ ಈ ಕೃಷಿ ವಿಧಾನವನ್ನು ಒತ್ತು ಕೊಟ್ಟು ರೈತಾಪಿ ವರ್ಗಕ್ಕೆ ತಿಳಿಸಲಾಗುತ್ತಿದೆ. ಎಚ್ ಎಫ್ ,ಜರ್ಸಿ, ಮಿಶ್ರ ತಳಿ ದನ ಆಗುವುದಿಲ್ಲ. ಶುದ್ಧ ನಾಟೀ ದನವೇ ಆಗಬೇಕು.ನಾಟಿ ದನದ ಹಸುವಿನ ಗಂಜಳದಲ್ಲಿ, ಸಗಣಿಯಲ್ಲಿ ಅದೆಷ್ಟೋ ಕೋಟಿ ಲೆಕ್ಕದ ಜೀವಾಣಿಗಳು ಇವೆ. ಅದು ಮಣ್ಣನ್ನು ಸುಧಾರಿಸುತ್ತದೆ, ಏನೂ ಖರ್ಚು ಇಲ್ಲದೆ ಬೆಳೆ ಚೆನ್ನಾಗಿಯೇ ಬರುತ್ತದೆ ಎನ್ನುತ್ತಾರೆ.
ಎಲ್ಲಿಗೆ ಬಂತು ಕೃಷಿ ವಿಜ್ಞಾನ:
- ಕೃಷಿ ವಿಜ್ಞಾನ ಎಷ್ಟೊಂದು ಜಟಿಲ ಅಲ್ಲವೇ. ಕಲಿಯುವುದೇ ಒಂದು ನಂತರ ತಿಳಿಸುವುದೇ ಇನ್ನೊಂದು.
- ಇದು ಈಗ ನಮ್ಮ ಕೃಷಿ ವಿಜ್ಞಾನಿಗಳ ಗತಿ.
- ಯಾರೋ ಒಬ್ಬ ರೈತರು ಈ ವಿಧಾನವನ್ನು ಮೊದಲಾಗಿ ತಿಳಿಸಿದ್ದಾರಂತೆ.
- ಅವರನ್ನು ಈ ವಿಜ್ಞಾನ ಅಧ್ಯಯನ ಮಾಡಿದವರು ಮಾದರಿಯಾಗಿ ಸ್ವೀ ಕರಿಸುವ ಕಾಲ ಬರುತ್ತದೆ ಎಂದಾದರೆ ಇವರ ವರ್ಷಾನು ವರ್ಷದ ಅಧ್ಯಯನ ಮತ್ತು ಸಂಶೋಧನೆ ಬರೇ ‘ಶೂನ್ಯ’ದಲ್ಲಿ ಅಂತ್ಯವಾಯಿತಲ್ಲಾ ಎಂದೆನಿಸುತ್ತದೆ.
ಶೂನ್ಯ ಬಂಡವಾಳದಲ್ಲಿ ಕೃಷಿ ಆಗುವುದಿದ್ದರೆ ಸಂತೋಷ. ಅದನ್ನು ನಾವೆಲ್ಲಾ ಮಾಡಲು ಉತ್ಸುಕರೇ. ಆದರೆ ಇಳುವರಿ ಬರಲಿಲ್ಲವೆಂದಾದರೆ ಅದಕ್ಕೆ ಯಾರು ಹೊಣೆಗಾರರು. ಇದರಲ್ಲಿ ಅಗುವ ನಷ್ಟವನ್ನು ಭರಿಸುವವರು ಯಾರು ಎಂಬುದು ಇನ್ನೂ ಬಗೆಹರಿಯದ ಸಂಗತಿ. ಬಹುಷಃ ಈ ವಿಚಾರ ಕೇಂದ್ರ ಸರಕಾರದ ಗಮನಕ್ಕೆ ಬಂದಿರಲೂ ಬಹುದು. ಮುಂದಿನ ಬಜೆಟ್ ನಲ್ಲಿ ಈ ಕೃಷಿ ಮಾಡಿ ಸೋತರೆ ಅದಕ್ಕೂ ಬೆಳೆ ವಿಮೆಯನ್ನು ವಿಸ್ತರಿಸಲೂಬಹುದು.
- ಏನೇ ಆಗಲಿ ತುಂಬಾ ತಡವಾಗಿಯಾದರೂ ನಾಟೀ ಹಸುಗಳ ನೆನಪು ಆಯಿತಲ್ಲಾ ಎಂಬುದು ಇಲ್ಲಿ ಪ್ರಾಮುಖ್ಯ.
- ಸತ್ತ ಜೀವಕ್ಕೆ ಕಂಬನಿ ಮಿಡಿದರೆ ಆ ಜೀವಕ್ಕೆ ಎಲ್ಲಿ ಗೊತ್ತಾಗುತ್ತದೆಯೋ ?
- ನಾಟಿ ಹಸುಗಳ ಅವನತಿ ಆಗಿದೆ.
- ನಾಟಿ ವಿಧಾನದ ಹಸು ಸಾಕಾಣಿಕೆಗೂ ಅವಕಾಶ ಇಲ್ಲದಾಗಿದೆ.
- ಕಸಾಯಿ ಖಾನೆಗೆ ಸೇರಿದ ನಾಟೀ ಹಸುಗಳ ಗುಣಗಾನ ಈಗ ನಡೆಯುತ್ತಿದೆ.
ಸಲಹೆ ಕೊಡುವ ವೃತ್ತಿಗೂ ವೇಶ್ಯಾವಾಟಿಕೆ ನಡೆಸುವ ವೃತ್ತಿಗೂ ಎಲ್ಲಿಯೂ ಏನೂ ಬದ್ಧತೆ ಇಲ್ಲವಂತೆ . ಹಾಗಾಗದಿರಲಿ ಇದೂ ಸಹ ಎಂಬ ಆಶಯ.