ಕಬ್ಬಿನ ಬೇಸಾಯದಲ್ಲಿ ಇಳುವರಿ ಹೆಚ್ಚಬೇಕಾದರೆ ಬೇರುಗಳು ಅಧಿಕ ಪ್ರಮಾಣದಲ್ಲಿ ಇರಬೇಕು. ಸಸ್ಯಗಳಿಗೆ ಬೇರೇ ಆಧಾರ. ಹೆಚ್ಚು ಹೆಚ್ಚು ಬೇರುಗಳಿದ್ದರೆ ಆಹಾರ ಸಂಗ್ರಹಣೆ ಹೆಚ್ಚಿ ಬೆಳೆ ಆರೋಗ್ಯವಾಗಿರುತ್ತದೆ. ಬೇರಿನ ಬೆಳೆವಣಿಗೆ ಮತ್ತು ಕಾಂಡದ ಬೆಳೆವಣಿಗೆಗೆ ರಂಜಕ ಗೊಬ್ಬರ ಅವಶ್ಯಕ.
- ಕಬ್ಬು ಸಸ್ಯದ ಬೇರು ಸಮರ್ಪಕವಾಗಿ ಬೆಳೆಯದಿದ್ದರೆ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ.
- ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಜಕಾಂಶ ಇಲ್ಲದಿದ್ದರೆ , ದ್ಯುತಿ ಸಂಶ್ಲೇಷಣ ಕ್ರಿಯೆ ಸರಿಯಾಗಿ ನಡೆಯದು.
- ಬೇರಿನ ಭಾಗದಲ್ಲಿ ಉಷ್ಣತಾಮಾನವು 16- 22 ಡಿಗ್ರಿ ತನಕ ಇದ್ದಾಗ ಬೇರುಗಳು ಹೆಚ್ಚಿನ ಪ್ರಮಾಣದಲ್ಲಿ ರಂಜಕವನ್ನು ಬಳಸಿಕೊಳ್ಳುತ್ತದೆ.
ಯಾವಾಗ ರಂಜಕ ಕೊಡಬೇಕು:
- ಸಾಮಾನ್ಯವಾಗಿ ಹೆಚ್ಚಿನೆಲ್ಲಾ ಅಲ್ಪಾವಧಿ ಬೆಳೆಗಳು ತಮ್ಮ ಪ್ರಾರಂಭಿಕ ಬೆಳೆವಣಿಗೆಯ ಸಮಯದಲ್ಲಿ ಅರ್ಧ ಪಾಲಿಗೂ ಹೆಚ್ಚು ರಂಜಕವನ್ನು ಬಯಸುತ್ತವೆ.
- ನಾಟಿ ಮಾಡುವಾಗಲೇ ಮೇಲು ಗೊಬ್ಬರವಾಗಿ ಕೊಡುವುದು ಮತ್ತು ಬೆಳವಣಿಗೆಯ ಲಕ್ಷಣಕ್ಕನುಗುಣವಾಗಿ ಮತ್ತೆ 3 ನೇ ತಿಂಗಳು ಮತ್ತು ಬಹುತೇಕ ರಂಜಕ ಗೊಬ್ಬರದ ಪೂರೈಕೆಯನ್ನು 6 ತಿಂಗಳ ಒಳಗೆ ಕೊಡುವುದು ಸೂಕ್ತ.
- ರಂಜಕ ಗೊಬ್ಬರವನ್ನು ನಾಟಿ ಮಾಡುವುದಕ್ಕೆ ಮುಂಚೆ ಅಥವಾ ನಾಟಿ ಮಾಡುವಾಗಲೇ ಗರಿಷ್ಟ ಪ್ರಮಾಣದಲ್ಲಿ ಕೊಡಬೇಕು.
- ಕಬ್ಬಿನ ಸಸ್ಯದಲ್ಲಿ ಎಲೆಯಲ್ಲಿ 8 ತಿಂಗಳ ಸಮಯಕ್ಕಾಗುವಾಗ ರಂಜಕದ ಅಂಶ ಕಡಿಮೆಯಾಗುತ್ತಾ ಬರುತ್ತದೆ.
- ಉಷ್ಣ ವಲಯದ ನಮ್ಮ ಪ್ರದೇಶದಲ್ಲಿ ರಂಜಕ ಗೊಬ್ಬರ ಒದಗಿಸಿ ಅದು ಸಸ್ಯಗಳಿಂದ ಬಳಕೆ ಆಗದೇ ಉಳಿದರೂ ಮದು ಮಣ್ಣಿನಲ್ಲಿ ಉಳಿಯುವ ಕಾರಣ ಸ್ವಲ್ಪ ಹೆಚ್ಚು ರಂಜಕ ಗೊಬ್ಬರವನ್ನು ಕೊಡಬಹುದು.
- ಬೆಳೆಗೆ ಸಾರಜನಕ ಗೊಬ್ಬರ ಕೊಡುವಾಗ ಅದು ಸಸ್ಯದ ಹಸುರು ಭಾಗದ ಬೆಳೆವಣಿಗೆಯನ್ನುಉತ್ತೇಜಿಸುತ್ತದೆ.
- ಆಗ ಸಹಜವಾಗಿ ಇದ್ದ ರಂಜಕವೆಲ್ಲಾ ಬರಿದಾಗುತ್ತದೆ.
- ಆದ ಕಾರಣ ಸಾರಜನಕ ಗೊಬ್ಬರ ಕೊಡುವಾಗ ರಂಜಕ ಗೊಬ್ಬರವನ್ನು ಕೊಡಬೇಕು.
ರಂಜಕವು ಕಬ್ಬು ಮಾಗುವುದರ ಮೇಲೆ ಅಪ್ರತ್ಯಕ್ಷವಾಗಿ ಪರಿಣಾಮ ಉಂಟು ಮಾಡುತ್ತದೆ.
- ರಂಜಕವು ಕಡಿಮೆಯಾದರೆ ಸಾರಜನಕ
- ಮಾತ್ರ ಹೆಚ್ಚಾಗಿ ಕಬ್ಬು ಮಾಗುವುದು ತಡವಾಗುತ್ತದೆ.
- ಒಂದು ವೇಳೆ ಅಂತಹ ಸೂಚನೆಗಳು ಕಬ್ಬು ಬೆಳೆಯುವಾಗ ಗೊತ್ತಾದರೆ ತಕ್ಷಣ ರಂಜಕ ಗೊಬ್ಬರವನ್ನು ಪೂರೈಸಿದಾಗ ಅದನ್ನು ಸರಿಮಾಡಬಹುದು.
ರಂಜಕ ಕೊರತೆಯ ಲಕ್ಷಣ:
- ರಂಜಕ ಕಡಿಮೆಯಾದಾಗ ಕಬ್ಬಿನ ದಂಟು ಉದ್ದ ಕಡಿಮೆಯಾಗುತ್ತದೆ.
- ದಪ್ಪ ಕಡಿಮೆಯಾಗುತ್ತದೆ. ಗಿಣ್ಣುಗಳ ಉದ್ದ ಮತ್ತು ಸಂಖ್ಯೆ ಕಡಿಮೆಯಾಗುತ್ತದೆ.
- ಮೊಳಕೆಗಳೂ ಕಡಿಮೆಯಾಗುತ್ತದೆ. ಕಳೆಗಳ ಹಾವಳಿ ಹೆಚ್ಚಾಗುತ್ತದೆ.
- ಬೇರುಗಳು ವಿಸ್ತಾರವಾಗಿ ಹಬ್ಬದೆ ಪೋಷಕಾಂಶ ಹೀರುವಿಕೆಗೆ ಅಡ್ಡಿಯಾಗುತ್ತದೆ.
- ಕಬ್ಬು ಅಡ್ಡ ಬೀಳುವುದಕ್ಕೂ ಕಾರಣ ಕಡಿಮೆ ಮತ್ತು ವೈಶಾಲ್ಯತೆ ಇಲ್ಲದ ಬೇರುಗಳು.
- ರಂಜಕ ಕೊರತೆ ಇರುವ ಬೆಳೆಯಲ್ಲಿ ಎಲೆಗಳು ಹಸುರು ಬಣ್ಣದ ಜೊತೆಗೆ ನೀಲಿ ಬಣ್ಣವನ್ನೂ ಹೊಂದಿ ವಯಸ್ಸಾದಂತೆ ಕಾಣುತ್ತದೆ.
- ತುದಿ ಒಣಗುತ್ತದೆ. ಎಲೆಗಳ ಉದ್ದ ಕಡಿಮೆಯಾಗುತ್ತದೆ.
- ರಂಜಕ ಕೊರತೆಯಾದಾಗ ಸಸಿಗಳ ಬೇರುಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಪೊಟ್ಯಾಶಿಯಂ ಲಭ್ಯತೆ ಕಡಿಮೆಯಾಗುತ್ತದೆ.
ಎಷ್ಟು ರಂಜಕ ಬೇಕು:
- ಸಾರಜನಕಕ್ಕೆ ಹೋಲಿಸಿದಾಗ ರಂಜಕದ ಪ್ರಮಾಣ ಅರ್ಧದಷ್ಟು ಸಾಕಾಗುತ್ತದೆ.
- ರಂಜಕವು ಮಣ್ಣಿನಲ್ಲಿ ಆಚೀಚೆ ಚಲಿಸುವುದಿಲ್ಲ ಅದು ಎಲ್ಲಿ ಹಾಕಲಾಗಿದೆಯೋ ಅಲ್ಲೇ ಇರುತ್ತದೆ.
- ರಂಜಕವನ್ನು ಬೇರುಗಳು ಇರುವಲ್ಲಿ ಹಾಕಬೇಕು
- . ನಮ್ಮಲ್ಲಿ ಕೂಳೆ ಬೆಳೆಯ ಕಬ್ಬು ಚೆನ್ನಾಗಿ ಬರುತ್ತದೆ ಎಂಬವರಿದ್ದಾರೆ.
- ಅದ ಕಾರಣ ಆಗ ಮಣ್ಣಿನಲ್ಲಿ ಸಂಗ್ರಹವಾದ ರಂಜಕವು ಸಸಿಗಳಿಗೆ ಬೇಗ ಲಭ್ಯವಾಗುವುದು.
ಯಾವ ಮೂಲದ ರಂಜಕ :
- ಅಮೋನಿಯಂ ಫೋಸ್ಫೇಟ್ ಇದು ನೀರಿನಲ್ಲಿ ಕರಗುವ ಗೊಬ್ಬರವಾಗಿದ್ದು, ಸಸ್ಯಗಳಿಗೆ ಬೇಗ ಲಭ್ಯವಾಗುವುದು.
- ಪೊಟ್ಯಾಶಿಯಂ ಫೋಸ್ಫೇಟ್ ಇದು ನೀರಿನಲ್ಲಿ ಕರಗುವ ಗೊಬ್ಬರ. ಇದನ್ನು ಸಸಿಗಳು ಬೇಗ ಬಳಸಿಕೊಳ್ಳುತ್ತವೆ.
- ಸೂಪರ್ ಫೋಸ್ಪೇಟ್ ಇದು ನೀರಿನಲ್ಲಿ ಆಂಶಿಕವಾಗಿ ಕರಗುತ್ತದೆ. ಅದನ್ನು ನಾಟಿ ಮಾಡುವ ಸಮಯದಲ್ಲಿ ಅರ್ಧ ಪಾಲು ಹಾಕಬೇಕು.
- ಡೈ ಅಮೋನಿಯಂ ಫೋಸ್ಫೇಟ್ ಇದನ್ನು ಸಸ್ಯಗಳು ಬೇಗ ಹೀರಿಕೊಳ್ಳುತ್ತವೆ.
- ನೀರಿನಲ್ಲಿ ಭಾಗಶಹ ಕರಗುತ್ತದೆ. ಮೇಲು ಗೊಬ್ಬರವಾಗಿ ಬಳಕೆ ಮಾಡಬೇಕು.
- ಎಲುಬಿನ ಗೊಬ್ಬರ ಇದು ಕರಗುವುದಿಲ್ಲ. ತಕ್ಷಣ ಲಭ್ಯವಾಗುವುದಿಲ್ಲ. ಧೀರ್ಘ ಕಾಲಿಕ ಪರಿಣಾಮ.
- ಶಿಲಾ ರಂಜಕ: ಇದು ತಕ್ಷಣ ಲಭ್ಯವಾಗುವುದಿಲ್ಲ. ನಾಟಿಗೆ ಮುಂಚೆ ಮಣ್ಣಿಗೆ ಸೇರಿಸಬೇಕು. ಕ್ಷಾರ ಮಣ್ಣಿಗೆ ಮತ್ತು ತಟಸ್ಥ ಮಣ್ಣಿಗೆ ನೀರಿನಲ್ಲಿ ಕರಗುವ ಗೊಬ್ಬರ ಕೊಡಬೇಕು.
- ಹುಳಿ ಮಣ್ಣಿಗೆ ಶಿಲಾ ರಂಜಕ ಮತ್ತು ಎಲುಬಿನ ಪುಡಿ ಉತ್ತಮ.
ಎಷ್ಟು ಪ್ರಮಾಣ:
- ಒಂದು ಎಕ್ರೆ ಕಬ್ಬಿನ ಹೊಲಕ್ಕೆ 40 -50 ಕಿಲೋ ತನಕ ರಂಜಕ ಬಳಕೆ ಮಾಡಬಹುದು.
- ಆಳವಾದ ಕಪ್ಪು ಮಣ್ಣು ಇರುವ ಪ್ರದೇಶಗಳಿಗೆ 30 ಕಿಲೋ ತನಕ ಸಾಕು.
- ಕರಾವಳಿಯ ಮಣ್ಣಿಗೆ ಎಕ್ರೆಗೆ -50-60 ಕಿಲೋ ಬಳಕೆ ಮಾಡಿದರೆ ಸಾಕು.
ರಂಜಕ ಸರಿಯಾಗಿ ಉಪಯೋಗವಾಗಲು ರಂಜಕ ಗೊಬ್ಬರವನ್ನು ಕಾಂಪೋಸ್ಟು ಜೊತೆ ಮಿಶ್ರ ಮಾಡಿ ಕೊಡಬೇಕು. ಅರ್ಧ ಪಾಲನ್ನು ಮೇಲು ಗೊಬ್ಬರವಾಗಿ ಕೊಟ್ಟು ಉಳಿದ ಗೊಬ್ಬರವನ್ನು ನೀರಾವರಿಯ ಮೂಲಕ ಕೊಡುವುದು ಉತ್ತಮ.
ರಂಜಕದ ಸಮರ್ಪಕ ಉಪಯೋಗಕ್ಕೆ ಅನುಕೂಲವಾಗುವಂತೆ ರಂಜಕ ಕರಗಿಸುವ ಜೈವಿಕ ಗೊಬ್ಬರವನ್ನು ಕೊಡುವುದು ಹೆಚ್ಚು ಫಲಕಾರಿ.