ಕಬ್ಬಿನ ಬೆಳೆ ಉಳಿದೆಲ್ಲಾ ವಾಣಿಜ್ಯ ಬೆಳೆಗಳಿಗಿಂತ ಸುಲಭದ ಬೆಳೆ.ಆದಾಗ್ಯೂ ಇದಕ್ಕೆ ಕೆಲವು ಕೀಟ ರೋಗ ಸಮಸ್ಯೆಗಳು ಇಲ್ಲದಿಲ್ಲ. ಬೇರು ಹುಳದಂತ ಸಮಸ್ಯೆ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಯಲೇ ಸಾಧ್ಯವಿಲ್ಲ ಎಂಬ ಮಟ್ಟಕ್ಕೆ ಬಂದರೆ, ಗಂಟು ಕೊರೆಯುವ ಹುಳವೂ (Internode borer) ಬಹುತೇಕ ಎಲ್ಲಾ ಕಡೆ ಇದೆ. ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ.
- ಕರ್ನಾಟಕದ ಬಹುತೇಕ ಕಬ್ಬು ಬೆಳೆಯುವ ಭಾಗಗಳಲ್ಲಿ ಈ ಕೀಟದ ತೊಂದರೆ ಹೆಚ್ಚಾಗಿದ್ದು, ಗಂಟುಗಳು ಹತ್ತಿರವಾಗಿ(ಕಿರಿದಾಗಿ), ಗುಣಮಟ್ಟ ಕುಂಠಿತವಾಗಿ ಕಬ್ಬಿನ ರಿಕವರಿ ನಷ್ಟ ಉಂಟಾಗುತ್ತದೆ.
ಯಾವಾಗ ಸಮಸ್ಯೆ ಹೆಚ್ಚು:
- ಮಳೆಗಾಲ ಪ್ರಾರಂಭವಾಗುವ ಮೇ ತಿಂಗಳಿನಿಂದ ಅಕ್ಟೋಬರ್ – ನವೆಂಬರ್ ತನಕ ಕಬ್ಬು ಬೆಳೆಯುವರಿಗೆ ಗಿಣ್ಣು ಕೊರೆಯುವ ಹುಳದ ಕಾಟ ಹೆಚ್ಚು.
- ಕಬ್ಬಿನ ಸಸ್ಯದಲ್ಲಿ ಗಂಟು ಬೆಳೆಯಲು ಪ್ರಾರಂಭವಾದ ಸಮಯದಲ್ಲಿ ಇದು ಪ್ರವೇಶವಾಗಿ ಕಠಾವು ಆಗುವ ತನಕವೂ ಮುಂದುವರಿಯುತ್ತದೆ.
- ಈ ಸಮಯದಲ್ಲಿ ಕಬ್ಬಿನ ಬೆಳೆವಣಿಗೆಯೂ ತೀವ್ರಗತಿಯಲ್ಲಿ ಇರುತ್ತದೆ.
- ಜೊತೆಗೆ ಇದರ ಉಪಟಳ ಹೆಚ್ಚಾಗಿರುತ್ತದೆ.
- ಕಬ್ಬಿನ ಸಸ್ಯ ಬೆಳವಣಿಗೆಲ್ಲಿ ಇರುವ ಕಾರಣ ನಿಯಂತ್ರಣ ಕಷ್ಟವಾಗುತ್ತದೆ.
- ಕಬ್ಬು ಹೂ ಬಿಡುವ ಹಂತಕ್ಕೆ ಬಂದಾಗ ಇದು ಕಡಿಮೆಯಾಗುತ್ತದೆ.
ಯಾವ ಕೀಟ:
- ಒಂದು ರೀತಿಯ ಬಿಳಿ ಪತಂಗವು ಕಬ್ಬಿನ ಎಲೆಯ ಭಾಗದಲ್ಲಿ ಮೊಟ್ಟೆ ಇಡುತ್ತದೆ.
- ಇದರ ಹುಳ(Larve) ಹಂತದಲ್ಲಿ ಅದು ಗಂಟಿನ ಭಾಗದಲ್ಲಿ ಕೊರೆದು ಹಾನಿ ಮಾಡುತ್ತದೆ.
- ಹುಳವು ಅಲ್ಲೇ ಪ್ಯೂಪೆ ಹಂತವನ್ನು ಮುಗಿಸಿ ಮತ್ತೆ ಪತಂಗವಾಗಿ ಪುನಹ ಮೊಟ್ಟೆ ಇಡುತ್ತದೆ.
- ಸಾಮಾನ್ಯವಾಗಿ ಮೊಟ್ಟೆ ಇಡುವ ಸಮಯ ಜೂನ್, ಜುಲೈ ತಿಂಗಳು. ಹುಳ ತೊಂದರೆ ಮಾಡಿದ ಕಬ್ಬು ನಂತರ ಬೆಳೆವಣಿಗೆ ಹೊಂದುವುದಿಲ್ಲ.
ಹತೋಟಿ ವಿಧಾನ:
- ಇದನ್ನು ಮೋನೋಕ್ರೋಟೋಫೋಸ್ ಕೀಟನಾಶಕ ಸಿಂಪರಣೆ ಮಾಡಿ ನಿಯಂತ್ರಣ ಮಾಡಬಹುದು.
- ಅದರೆ ಕಬ್ಬಿನ ಸಸ್ಯ ಬೆಳವಣಿಗೆಯ ಹಂತದಲ್ಲಿ ಇದು ತುಂಬಾ ತ್ರಾಸದ ಕೆಲಸವಾಗಿರುತ್ತದೆ.
- ಕಬ್ಬು ಬೆಳೆಯುವ ಹಂತದಲ್ಲಿ ಒಣ ಗರಿಗಳನ್ನು ತೆಗೆದು ಸ್ವಚ್ಚ ಮಾಡುತ್ತಿರಬೇಕು.
- ಒಂದು ಎರಡು ಗಂಟು ಬೆಳೆದ ತರುವಾಯ ಕೀಟನಾಶಕವನ್ನು ಹೊಲದ ಒಳಗೆ ಹೋಗಿ ಎಲೆ ಅಡಿ ಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡಿ,
- ಪ್ರಾರಂಭಿಕ ಹಂತದಲ್ಲೇ ನಿಯಂತ್ರಣ ಮಾಡಬೇಕು. ಈ ಸಮಯದಲ್ಲಿ ಕೀಟನಾಶಕದ ಸಿಂಪರಣೆ ಅನಿವಾರ್ಯವೂ ಆಗಿರುತ್ತದೆ.’
ಕಬ್ಬಿನ ಹೊಲದ ಪಕ್ಕದಲ್ಲಿ ಜೋಳ, ಸಜ್ಜೆ ಗೋವಿನ ಜೋಳ, ಮುಂತಾದ ಬೆಳೆಗಳಿದ್ದರೆ ಅದರಲ್ಲಿ ಈ ಕೀಟ ಆಶ್ರಯ ಪಡೆದಿರುತ್ತದೆ. ಕಬ್ಬು ಗಂಟು ಕೂಡುವ ಹಂತದಲ್ಲಿ ಈ ಬೆಳೆಗಳನ್ನು ಸುತ್ತ ಬೆಳೆಸಿ ಅಲ್ಲಿಗೆ ಬರುವ ಕೀಟಗಳನ್ನು ಕೀಟನಾಶಕ ಸಿಂಪರಣೆ ಮಾಡಿ ಮೊಟ್ಟೆ ಹಂತದಲ್ಲೇ ನಾಶ ಮಾಡುವುದು ಸಾಧ್ಯ.
ಜೈವಿಕ ನಿಯಂತ್ರಣ:
- ಜೈವಿಕವಾಗಿ ಕೆಲವು ಪರತಂತ್ರ ಜೀವಿಗಳನ್ನು ಬಿಟ್ಟು ಇದನ್ನು ಹತೋಟಿ ಮಾಡಬಹುದು.
- ಟ್ರೈಕೋಗ್ರಾಮಾ ಪರತಂತ್ರ ಜೀವಿಯನ್ನು ಎಕ್ರೆಗೆ 1cc ಯಂತೆ, ಸಸ್ಯಕ್ಕೆ 4 ತಿಂಗಳ ವಯಸ್ಸು ಆದ ತರುವಾಯ ಬೆಳೆ ಕಟಾವಿನ ತನಕ 6 ಬಾರಿ ಬಿಡಬೇಕು.
- ಇದು ಸಮೀಪದ ಕೃಷಿ ಇಲಾಖೆಯಲ್ಲಿ ಲಭ್ಯ. ಇದಲ್ಲದೆ ಗಂಡು ಪತಂಗಗಳನ್ನು ಆಕರ್ಷಿಸಲು ಫೆರಮೋನು ಟ್ರಾಪುಗಳನ್ನು ಹಾಕಿದರೂ ಪ್ರಯೋಜನವಾಗುತ್ತದೆ.
ಮುನ್ನೆಚ್ಚರಿಕೆ:
- ಕಬ್ಬಿನ ದಂಟು ಅಡ್ದ ಬೀಳದಂತೆ ನೋಡಿಕೊಂಡರೆ ಬಹಳಷ್ಟು ಕೀಟ ಸಮಸ್ಯೆ ಕಡಿಮೆಯಾಗುತ್ತದೆ.
- ನೀರು ನಿಲ್ಲುವ ಜಾಗದಲ್ಲಿ ಕಬ್ಬು ಬೆಳೆಯುವಾಗ ನೀರು ಚೆನ್ನಾಗಿ ಬಸಿಯುವಂತೆ ವ್ಯವಸ್ಥೆ ಮಾಡಬೇಕು.
- ನೀರು ನಿಲ್ಲುವಲ್ಲಿ ಕೀಟದ ಸಮಸ್ಯೆ ಹೆಚ್ಚು. ಕಬ್ಬಿನ ಬೀಜದ ಕಡ್ಡಿಗಳನ್ನು ಆಯ್ಕೆ ಮಾಡುವಾಗ ಈ ಕೀಟದ ತೊಂದರೆ ಇಲ್ಲದ್ದನ್ನು ಆಯ್ಕೆ ಮಾಡಬೇಕು.
- 7-8-9 ತಿಂಗಳ ತನಕವೂ ಕಬ್ಬಿನ ರವದಿಯನ್ನು ತೆಗೆದು ಸ್ವಚ್ಚ ಮಾಡುತ್ತಿರಬೇಕು.
- ಸಾರಜನಕ ಗೊಬ್ಬರವನ್ನು ( ಯೂರಿಯಾ) ಹೆಚ್ಚು ಕೊಡಬಾರದು.
- ಬೆಳೆಗೆ 4-5 ತಿಂಗಳು ಆದ ನಂತರ ಹೆಚ್ಚು ಪೊಟ್ಯಾಶ್, ಕಡಿಮೆ ಸಾರಜನಕ ಕೊಡಬೇಕು.
- ಪೊಟ್ಯಾಶಿಯಂ ನೈಟ್ರೇಟ್ ಉತ್ತಮ. ಕೆಲವು ಕಬ್ಬು ದಂಟುಗಳು ದಪ್ಪವಾಗಿ ಬೆಳೆದು ಒಡೆದಿದ್ದರೆ ಅದನ್ನು 7-8 ತಿಂಗಳಲ್ಲಿ ತೆಗೆಯಬೇಕು.
- ಕಬ್ಬು ನಾಟಿ ಮಾಡುವ ಮುಂಚೆ ಹೊಲವನ್ನು ಚೆನ್ನಾಗಿ ಉಳುಮೆ ಮಾಡಿ, ವಾರದ ತನಕ ಬಿಸಿಲಿಗೆ ಒಣಗಲು ಬಿಡಬೇಕು.
- ಕಾಂಡ ಕೊರೆಯುವ ಹುಳಕ್ಕೆ ಬಳಕೆ ಮಾಡುವ ಬ್ಯಾಸಿಲಸ್ ತುರೆಂಜೆನ್ಸಿಸ್ ಜೈವಿಕ ಕೀಟನಾಶಕವನ್ನು ಕಬ್ಬು 4-5 ತಿಂಗಳು ಬೆಳೆಯುತ್ತಿರುವಾಗ, ತಂಪು ವಾತಾವರಣ ಇರುವ ಸಮಯದಲ್ಲಿ ಸಿಂಪರಣೆ ಮಾಡಬಹುದು.
- ಹುಡಿ ರೂಪದ ಜೈವಿಕ ಕೀಟ ನಿಯಂತ್ರಕವನ್ನು ನೆಲೆ ತೇವವಾಗಿದ್ದಾಗ ಮಣ್ಣಿಗೆ ಸೇರಿಸಿದರೆ ಹುಳಗಳನ್ನು ನಿಯಂತ್ರಣ ಮಾಡಬಹುದು.
ಕಬ್ಬಿನ ದಂಟು ಉತ್ತಮವಾಗಿದ್ದರೆ, ಕಬ್ಬಿನ ಇಳುವರಿ ಹೆಚ್ಚು. ದಂಟು ಯವುದೇ ಕೀಟ , ರ್‍ಒಗ ಮುಕ್ತವಾಗಿದ್ದರೆ ಕಾರ್ಖಾನೆಯಲ್ಲಿ ಉತ್ತಮ ಬೆಲೆಯೂ ಲಭ್ಯವಾಗುತ್ತದೆ. ಆದ ಕಾರಣ ಕಬ್ಬು ಬೆಳೆಗಾರರು ನಿರ್ಲಕ್ಷ್ಯ ಮಾಡದೆ ದಂಟು ಕೊರಕ ಹುಳವನ್ನು ನಿಯಂತ್ರಣ ಮಾಡಬೇಕು.
end of the article:——————————————————————
search words:sugarcane crop# Inter node borer of sugarcane# Sugarcane pest# Sugarcane pest management # pheromone traps for sugarcane #Insecticide for sugarcane# sugarcane yield#