ಕಬ್ಬು ಬೆಳೆಯುವ ಪ್ರದೇಶದಲ್ಲಿ ಕಣ್ಣು ಸಸಿಯ ನರ್ಸರಿ ಮಾಡುವರೇ ಅವಕಾಶ ಹೇರಳವಾಗಿದ್ದು, ಇದು ಉತ್ತಮ ಆದಾಯವನ್ನೂ ಕೊಡಬಲ್ಲದು.
ತಂತ್ರಜ್ಞಾನ ಬಹಳ ಹಿಂದೆಯೇ ಬಂದಿದೆಯಾದರೂ ಇತ್ತೀಚಿನ ದಿನಗಳಲ್ಲಿ ರೈತರು ಇಂತಹ ಸಸಿಗಳನ್ನು ಹೆಚ್ಚು ಹೆಚ್ಚು ಬಳಸಲು ಪ್ರಾರಂಭಿಸಿದ್ದಾರೆ. ಸಸಿ ಮಾಡಿಕೊಡುವವರ ಕೊರತೆಯೂ ಇದೆ. ಆದ ಕಾರಣ ಇದು ಆಸಕ್ತರಿಗೆ ಆದಾಯದ ವೃತ್ತಿಯಾಗಬಹುದು.
ಕಬ್ಬು ನಾಟಿ ಮಾಡುವವರಿಗೆ ತಕ್ಷಣ ಉತ್ತಮ ಗುಣಮಟ್ಟದ ಸಸಿಯೇ ಲಭ್ಯವಾದರೆ ಅವರ ಖರ್ಚು ತುಂಬಾ ಉಳಿತಾಯವಾಗುತ್ತದೆ. ಬಿತ್ತನೆ ಕಡ್ಡಿಗೆ ಹುಡುಕಾಡುವ ಸಮಸ್ಯೆ ಇರುವುದಿಲ್ಲ. ಹೊಲದ ಸಿದ್ದತೆ ಮಾಡಿದ ತಕ್ಷಣ ನಾಟಿ ಕಾರ್ಯವನ್ನೂ ಮುಗಿಸಿ ಬಿಡಬಹುದು. ಕಬ್ಬು ಬೆಳೆಗಾರರಿರುವ ಪ್ರದೇಶದಲ್ಲಿ ಇಂತಹ ಸಸ್ಯೋತ್ಪಾದನಾ ನರ್ಸರಿಗಳನ್ನು ಕೆಲವರಾದರೂ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬಹುದು.
- ಈಗ ಕಬ್ಬು ಬೆಳೆಗಾರರು ನರ್ಸರಿ ಗಿಡವನ್ನೇ ಬಯಸುತ್ತಿದ್ದು, ಇದರಿಂದ ಸಮಯ, ಶ್ರಮ ಉಳಿಯುತ್ತದೆ.
- ಬಿತ್ತನೆ ಕಡ್ಡಿಗಿಂತ ಇದು ಲಾಭದಾಯಕವಾಗುತ್ತದೆ.
- ಬಹುತೇಕ ಕಬ್ಬು ಬೆಳೆಗಾರರು ಈಗ ಮೊಳಕೆ ಕಣ್ಣಿನ ಸಸಿಯನ್ನು ಬಯಸುತ್ತಿದ್ದಾರೆ.
- ಈ ವಿಧಾನದಲ್ಲಿ ತಯಾರಿಸಿದ ಕಬ್ಬಿನ ಸಸಿಗೆ ಬಡ್ ಚಿಪ್ ಪ್ಲಾಂಟ್ (bud-chip’ technique) ಎಂದು ಕರೆಯುತ್ತಾರೆ.
ಇದರ ಅನುಕೂಲಗಳು:
- ಹೊಸ ಹೊಸ ತಳಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಕೂಲ ಇದೆ.
- ಇದನ್ನು ಪಾಲಿ ಬ್ಯಾಗುಗಳಲ್ಲಿ ಅಥವಾ ಸೀಡ್ ಟ್ರೇ ಗಳಲ್ಲಿ ಸಸಿ ಮಾಡಿಕೊಂಡರೆ ಬೇಕಾದಲ್ಲಿ ನಾಟಿ ಮಾಡುವುದಕ್ಕೆ ಅನುಕೂಲ.
- ಇದನ್ನು ಯಂತ್ರಗಳ ಮೂಲಕವೂ ನಾಟಿ ಮಾಡಲಿಕ್ಕೆ ಆಗುತ್ತದೆ. ಉತ್ತಮ ಇಳುವರಿ ಬರುತ್ತದೆ.
- ಕಬ್ಬಿನ ದಂಟನ್ನು ನಾಟಿ ಮಾಡುವಾಗ ಕೆಲವು ಬೀಜ ಜನ್ಯ ರೋಗ ಕೀಟಗಳನ್ನು ದೂರ ಮಾಡುವುದು ಕಷ್ಟ.
- ಕಬ್ಬಿನ ದಂಟನ್ನು ನಾಟಿ ಮಾಡುವಾಗ ಮಧ್ಯಂತರದಲ್ಲಿ ಗ್ಯಾಪ್ ಉಳಿಯುವುದು, ನಾಟಿ ಮಾಡಿದ ನಂತರ ಸಾಯುವುದು ಮುಂತಾದ ಸಮಸ್ಯೆಗಳು ಇರುತ್ತವೆ.
- ಕಣ್ಣು ಸಸಿಯಲ್ಲಿ ಈ ಸಮಸ್ಯೆ ಇಲ್ಲ. ನಿರ್ದಿಷ್ಟ ಅಂತರದಲ್ಲಿ ನಾಟಿ ಮಾಡಿ ಉತ್ತಮ ಬೆಳವಣಿಗೆಯನ್ನು ಪಡೆಯಬಹುದು.
- ದಂಟು ನಾಟಿ ಮಾಡುವಾಗ ಮೊಳಕೆ ಬರುವ ತನಕ ನೀರಾವರಿ ಉತ್ತಮವಾಗಿ ಬೇಕು.
- ಒಮ್ಮೆಯಾದರೂ ಹೊಲವನ್ನು ಪೂರ್ತಿ ನೆನೆಯಿಸಬೇಕು. ಆಗ ಮಾತ್ರ ಉತ್ತಮವಾಗಿ ಮೊಳಕೆ ಬರುತ್ತದೆ.
- ಸಸಿಗಳನ್ನು ನಾಟಿ ಮಾಡುವಾಗ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡು ನೀರು ತೊಟ್ಟಿಕ್ಕುವ ಜಾಗದಲ್ಲಿ ಸಸಿಗಳನ್ನು ಅಂತರದಂತೆ ನಾಟಿ ಮಾಡಿದರೆ ಭಾರೀ ಪ್ರಮಾಣದಲ್ಲಿ ನೀರಿನ ಉಳಿತಾಯ ಮಾಡಬಹುದು.
ಅನನುಕೂಲಗಳು:
- ಕಬ್ಬಿನ ಸಸಿ ಮಾಡಲು ಕನಿಷ್ಟ 1 ತಿಂಗಳ ಕಾಲಾವಕಾಶ ಬೇಕಾಗುತ್ತದೆ.
- ನಾಟಿ ಸಮಯಕ್ಕೆ ಸರಿಯಾಗಿ ನರ್ಸರಿಗಳಲ್ಲಿ ಸಸಿಗಳು ಲಭ್ಯವಿರಬೇಕು.
- ನರ್ಸರಿಗಳಿಂದ ಖರೀದಿ ಮಾಡುವುದಾದರೆ ಅದಕ್ಕೆ ಪ್ರತೀ ಸಸಿಗೆ 2-3 ರೂ ತನಕ ಬೆಲೆ ಕೊಡಬೇಕಾಗುತ್ತದೆ.
- ಆದರೆ ಕೆಲಸ ಮತ್ತು ಲಾಭವನ್ನು ಪರಿಗಣಿಸಿದಾಗ ಇದು ಅಂತಹ ದೊಡ್ದ ಅನನುಕೂಲತೆ ಅಲ್ಲ.
ಚಿಪ್ ಬಡ್ ತೆಗೆಯುವುದು ಮತ್ತು ಸಯೋತ್ಪಾದನೆ:
- ಚಿಪ್ ಬಡ್ ತೆಗೆಯಲು ಒಂದು ಸಾಧನ ಇದೆ. ಅದರಲ್ಲಿ ಕಣ್ಣುಗಳನ್ನು ಬೇರ್ಪಡಿಸಬೇಕು.
- ಈ ಯಂತ್ರದಲ್ಲಿ ಕಣ್ಣು ತೆಗೆದ ನಂತರ ಅ ಕಬ್ಬನ್ನು ಮತ್ತೆ ಕಾರ್ಖಾನೆಗೆ ಅರೆಯಲು ಕೊಡಬಹುದು.
- ಬೆಳೆದ ಕಬ್ಬಿನ ದಂಟಿಗಿಂತ 6 ತಿಂಗಳು ಬೆಳೆದ ಕಬ್ಬಿನ ಕಣ್ಣು ಸಸ್ಯೋತ್ಪಾದನೆಗೆ ಉತ್ತಮ.
- ನರ್ಸರಿಗಾಗಿಯೇ ಕಬ್ಬು ಬೆಳೆದರೆ ಅದನ್ನು 6 ತಿಂಗಳು ಬೆಳೆಸಿದರೆ ಸಾಕಾಗುತ್ತದೆ.
- ಕಣ್ಣುಗಳನ್ನು ಮೆಲಾಥಿಯಾನ್ 2 ಗ್ರಾಂ ಮತ್ತು ಬಾವಿಸ್ಟಿನ್ 1 ಗ್ರಾಮ್ ಮಿಶ್ರಣ ಮಾಡಿದ ದ್ರಾವಣದಲ್ಲಿ 10 ನಿಮಿಷ ಕಾಲ ಅದ್ದಿ ನಂತರ ಕಣ್ಣುಗಳನ್ನು 2 ದಿನಗಳ ಕಾಲ ನೆರಳಿನಲ್ಲಿ ಇರಿಸಬೇಕು.
- ಕಾಂಪೋಸ್ಟು ಆದ ತೆಂಗಿನ ನಾರಿನ ಹುಡಿಯನ್ನು ಸೀಡ್ ಟ್ರೇ ಗಳಿಗೆ ಹಾಕಿ ಅದರಲ್ಲಿ ಮೊಳೆಕೆ ಬರಿಸಬೇಕು.
- ಸಸಿಯು ಸುಮಾರು ¾ ಅಡಿ ಎತ್ತರ ಬಂದ ತರುವಾಯ ನಾಟಿಗೆ ಬಳಕೆ ಮಾಡಬಹುದು.
- ತೆಂಗಿನ ನಾರಿನ ಹುಡಿಯಲ್ಲಿ ಮಾಡಿದ ಸಸಿ ಸಾಗಾಣಿಕೆಗೆ ಅನುಕೂಲ.
- ಹಗುರವಾಗಿದ್ದು. ಬೇರಿಗೆ ಹಾನಿಯಾಗದಂತೆ ನಾಟಿ ಮಾಡಬಹುದು.
ಕಬ್ಬಿನ ಬೇಸಾಯ ಮಾಡುವ ಪ್ರದೇಶಗಳಲ್ಲಿ ಕೆಲವರು ಈಗಾಗಲೇ ಇಂತಹ ನರ್ಸರಿ ವೃತ್ತಿಗೆ ಇಳಿದಿದ್ದಾರೆ. ಸಸ್ಯೋತ್ಪಾದಕರ ಕೊರತೆಯಿಂದ ಇನ್ನೂ ಬಹುಪಾಲು ಪ್ರದೇಶ ಕಡ್ಡಿಗಳನ್ನು ನಾಟಿ ಮಾಡುವ ವಿಧಾನದಲ್ಲೇ ಇದೆ. ಕ್ರಮೇಣ ನರ್ಸರಿಗಳು ಹೆಚ್ಚಾದಂತೆ ಎಲ್ಲರೂ ಈ ವಿಧಾನದತ್ತ ಬದಲಾಗುವ ಸಾಧ್ಯತೆ ಇದೆ. ಕಬ್ಬಿನ ಸಸಿಯೊಂದಿಗೆ ಇತರ ಸಸ್ಯೋತ್ಪಾದನೆಯನ್ನೂ ಮಾಡಿಕೊಂಡರೆ ವರ್ಷ ಪೂರ್ತಿ ವ್ಯವಹಾರ ನಡೆಸಬಹುದು.