ಅಂತರ್ಜಲ ಎಂಬ ಕರೆನ್ಸಿ ಅತಿಯಾಗಿ ಬಳಕೆ ಮಾಡಿ ಮುಗಿಯುತ್ತಿದೆ.ಅದಕ್ಕೆ ಮತ್ತೆ ರೀ ಚಾರ್ಜ್ ಮಾಡಬಹುದು ಎನ್ನುತ್ತಾರೆ ಸ್ವಘೋಷಿತ ತಜ್ಞರು. ಇದನ್ನು ಹಲವಾರು ಜನ ಮಾಡಿದ್ದಾರೆ. ಕೆಲವರು ಒಳ್ಳೆಯದಾಗಿದೆ ಎನ್ನುತ್ತಾರೆ ಕೆಲವರು ನಿರಾಶರಾದದ್ದೂ ಇದೆ. ಒಟ್ಟಿನಲ್ಲಿ ನಿಮ್ಮ ಕೊಳವೆ ಬಾವಿ ಮಳೆಗಾಲದಲ್ಲಿ ನೀರನ್ನು ಕುಡಿಯುವ ಸ್ಥಿತಿಯಲ್ಲಿದ್ದರೆ ಅದಕ್ಕೆ ಸೋಸು ವ್ಯವಸ್ಥೆಗಳ ಮೂಲಕ ನೀರನ್ನು ಮರು ಪೂರಣ ಮಾಡುವುದರಲ್ಲಿ ತಪ್ಪಿಲ್ಲ.
ಅಂತರ್ಜಲಕ್ಕೆ ಮರು ಪೂರಣ ಸಾಧ್ಯವೇ:
- ಭೂಮಿಯ ಒಳಗೆ ಶಿಲಾ ಪದರಗಳ ಕೆಲವು ಬಿರುಕುಗಳಲ್ಲಿ ನೀರು ಇರುತ್ತದೆ.
- ಇನ್ನು ಕೆಲವು ಬಿರುಕುಗಳಲ್ಲಿ ನೀರು ಇರುವುದಿಲ್ಲ.
- ಯಾವ ಬಿರುಕಿನಲ್ಲಿ ನೀರು ಹೊರ ಬರುವುದಿಲ್ಲವೋ ಆ ಬಿರುಕುಗಳ ಮೂಲಕ ನೀರು ಮತ್ತೆ ಶಿಲಾ ಪದರದಲ್ಲಿ ಸೇರಿಕೊಳ್ಳಲು ಸಾಧ್ಯವಿದೆ ಎಂಬುದು ಈಗಿನ ತರ್ಕ.
- ಕೊಳವೆ ಬಾವಿಗಳ ಡ್ರೈ ಗ್ಯಾಪ್ ಗಳಲ್ಲಿ ಅದರ ಸೆರೆಗಳ ಮೂಲಕ ನೀರು ಮತ್ತೆ ಒಳ ಸೇರುವ ಸಾಧ್ಯತೆ ಇದೆ.
- ಬತ್ತಿ ಹೋದ ಕೊಳವೆ ಬಾವಿಗಳ ಒಳಗೆ ನೀರನ್ನು ಬಿಟ್ಟರೆ ಅದರ ಬತ್ತಿದ ಶಿಲಾ ಪದರದ ಒಳಗೆ ನೀರು ಹೋಗುತ್ತದೆ ಎನ್ನುತ್ತಾರೆ.
ಜೀವಂತ ಇರುವ ನೀರು ಚೆನ್ನಾಗಿ ಬರುವ , ಮಳೆಗಾಲದಲ್ಲಿ ನೀರಿನ ಮಟ್ಟ ಮೇಲೆ ಬರುವ ಅಥವಾ ಓವರ್ ಪ್ಲೋ ಆಗುವ ಬಾವಿಗಳಿಗೆ ನೀರನ್ನು ಮರು ಪೂರಣ ಮಾಡುವುದು ಸಾಧ್ಯವಿಲ್ಲ.
ಬೋರ್ ವೆಲ್ ಒಳಗೆ ನೀರುಣಿಸುವ ವಿಧಾನ:
- ಮಳೆಯ ಮೂಲಕ ನೆಲಕ್ಕೆ ಬೀಳುವ ನೀರನ್ನು ಸೋಸಿಯೇ ಅಂತರ ಜಲಕ್ಕೆ ಹಾಯಿಸಬೇಕು.
- ಅದು ನೈಸರ್ಗಿಕವಾಗಿ ಹೇಗೆ ಸೋಸಲ್ಪಟ್ಟು ಶಿಲಾ ಪದರಕ್ಕೆ ಸೇರುತ್ತದೆಯೋ ಅದೇ ರೀತಿ ಸೇರಬೇಕು.
- ಹಾಗೇ ಉಣಿಸಿದರೆ ಇಡೀ ಅಂತರ್ಜಲ ಸಂಪರ್ಕಗಳು ಕಲುಷಿತ ಗೊಳ್ಳಬಹುದು.
- ಕೊಳವೆ ಬಾವಿಗೆ ನೇರವಾಗಿ ಮನೆ ಚಾವಣಿಯ ನೀರನ್ನು ಹರಿಸುವುದು ಸೂಕ್ತ ವಿಧಾನವಲ್ಲ.
- ವಾತಾವರಣದ ನೀರಾದರೂ ಅದರಲ್ಲಿ ಕೆಲವು ಕಶ್ಮಲಗಳು ಇದ್ದೇ ಇರುತ್ತವೆ.
- ಇದು ಶಿಲಾ ಪದರದ ಒಳಗೆ ಸೇರಬಹುದು.
- ಇದರಿಂದ ಯಾವ ರೀತಿಯ ಹಾನಿ ಉಂಟಾಗಬಹುದು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ.
- ಅದು ಇನ್ನು ಕೆಲವು ವರ್ಷಗಳ ತರುವಾಯ ತಿಳಿಯಬಹುದು.
ನಿಮ್ಮ ಬಾವಿ ನೀರು ಕುಡಿಯುತ್ತದೆಯೇ?
- ಯಾವಾಗಲೂ ಮಾಡುವ ಮೊದಲು ಒಂದೆರಡು ಬಾರಿಯಾದರೂ ಯೋಚಿಸಿ. ನಂತರ ನಿರ್ಧಾರ ತೆಗೆದುಕೊಳ್ಳಿ.
- ನೀರು ಇಂಗಿಸುವುದು , ಬೋರ್ ವೆಲ್ ರೀ ಚಾರ್ಜ್ ಎಂಬುದು ಎಲ್ಲಾ ಕಡೆಗೂ ಹೊಂದಿಕೆಯಾಗುವುದಿಲ್ಲ.
- ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ನೀರು ಎತ್ತರದಲ್ಲಿ ಇಂಗಿಸಿದರೆ ಅದು ತಗ್ಗಿನ ಕಣಿವೆಗಳಲ್ಲಿಒರತೆಯ ಮೂಲಕ ಹೊರ ಹರಿದು ಹೋಗುತ್ತದೆ.
- ಕಡಿಮೆ ಮಳೆಯಾಗುವ ಕಡೆ ಅದು ಭೂಮಿಗೆ ಇಂಗುವುದು ನಿಜ.
- ಅಲ್ಲೆಲ್ಲಾ ವರ್ಷದಲ್ಲಿ ಒಂದಷ್ಟು ಮಳೆಯಾದರೆ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗುತ್ತದೆ.
ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಧಾರಾಕಾರ 4 ತಿಂಗಳ ತನಕ ಮಳೆ ಬಂದರೂ ಹಳ್ಳ, ಹೊಳೆ, ತೋಡುಗಳಲ್ಲಿ , ತೆರೆದ ಬಾವಿಗಳಲ್ಲಿ ನೀರು ಉಕ್ಕಿ ಹರಿದರೂ ಬೋರ್ವೆಲ್ ಗಳಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತದೆ.
- ಮಳೆಗಾಲ ಬಂದರೆ 100 ಅಡಿ ಆಳದಲಿದ್ದ ಕೊಳವೆ ಬಾವಿಯ ನೀರು ಕೆಲವು ಕಡೆ ಓವರ್ ಪ್ಲೋ, ಕೆಲವು ಕಡೆ ನೀರು ಕೈಗೆಟಕುವ ಮಟ್ಟಕ್ಕೂ ಬರುತ್ತದೆ.
- ನೆಲಮಟ್ಟದಲ್ಲಿ ಜಲಮಟ್ಟ ಇರುವ ತನಕ ನೀರು ಮೇಲೆ ಬರುವ ಬಾವಿಗೆ ಹೇಗೆ ನೀರನ್ನು ಕುಡಿಸುವುದು ಎಂಬುದು ಒಂದು ಕೌತುಕದ ವಿಚಾರ.
ನೀರು ಕುಡಿಸುವ ಮುನ್ನ ಇದನ್ನು ಮಾಡಿ ನೊಡಿ.
- ಬೇಸಿಗೆಯಲ್ಲಿ ನಿಮ್ಮ ಬೋರ್ ನಲ್ಲಿ ನೀರು ಎಷ್ಟು ಆಳದಲ್ಲಿತ್ತು ಎಂಬುದನ್ನು ಲೆಕ್ಕಾಚಾರ ಇಟ್ಟುಕೊಳ್ಳಿ.
- ಒಂದು ಬೋಲ್ಟ್ ಅನ್ನು ಹಗ್ಗಕ್ಕೆ ಕಟ್ಟಿ ಇಳಿಸಿದರ ಅಳತೆ ಮಾಡಿದಾಗ ಗೊತ್ತಾಗುತ್ತದೆ.
- ಮಳೆಗಾಲದಲ್ಲಿ ನಿಮ್ಮ ಸ್ಥಳದಲ್ಲಿ ನೀರು ಒರತೆ ರೂಪದಲ್ಲಿ ಬರುವ ಸಮಯದಲ್ಲಿ ಒಮ್ಮೆ ನೀರಿನ ಮಟ್ಟವನ್ನು ಪರೀಕ್ಷಿಸಿ.
- ಈ ಮಟ್ಟ ವ್ಯತ್ಯಾಸವಾಗಿದ್ದರೆ ಆ ಬಾವಿಯಲ್ಲಿ ಸ್ವಯಂ ಆಗಿ ನೀರು ಇಂಗಲ್ಪಡುತ್ತದೆ.
- ಇದಕ್ಕೆ ನೀವು ಹರ ಸಾಹಸ ಮಾಡೀ ನೀರು ಕುಡಿಸಬೇಕಾಗಿಲ್ಲ.
ನಿಮ್ಮ ಕೊಳವೆ ಬಾವಿಗೆ ಪೈಪಿನಲ್ಲಿ ನೀರು ಬಿಟ್ಟರೆ ಎಷ್ಟು ಬಿಟ್ಟರೂ ಒಳಗೆ ಸೇರುತ್ತದೆ ಎಂದಾದರೆ ಮಾತ್ರ ಅದರ ಸುತ್ತ ಕಟ್ಟು ನಿಟ್ಟಾಗಿ ತಜ್ಞರ ಮಾರ್ಗದರ್ಶನದಂತೆ ನೀರು ಸೋಸಿ ಹೋಗುವ ವ್ಯವಸ್ಥೆ ಮಾಡಿಕೊಂಡು ನೀರನ್ನು ಮರುಪೂರಣ ಮಾಡಿ.
- ನೇರವಾಗಿ ಮೇಲ್ಚಾವಣಿಯ ನೀರನ್ನು ಕೊಳವೆ ಬಾವಿಗೆ ತುಂಬಿಸಬೇಡಿ.
- ಇದು ಈಗ ಒಳ್ಳೆಯದು ಎಂದು ಕಂಡರೂ ಇದು ಕುಡಿಯುವ ನೀರಿನ ಉದ್ದೇಶದ ಬಾವಿಗಳಿಗೆ ಸಂಪರ್ಕ ವಾಗಿ ನೀರು ಕಲುಷಿತವಾಗಬಹುದು.
- ಮುಂದೆ ಏನಾದರೂ ಇದರಿಂದ ತೊಂದರೆ ಆದರೂ ಆಗಬಹುದು.
- ಕುಡಿಯುವ ನೀರಿನಿಂದ ಇನ್ನೊಂದು ಸಾಂಕ್ರಾಮಿಕ ರೋಗ ಬಂದರೂ ಬರಬಹುದು.
ನೀವು ನೀರು ಕುಡಿಸಿ ಇಲ್ಲವೇ ಬಿಡಿ. ಪ್ರಾಕೃತಿಕವಾಗಿ ಮಳೆ ನೀರು ಮಣ್ಣನ್ನು ಒದ್ದೆ ಮಾಡಿ ಅದರ ಕೆಳ ಪದರದ ಶಿಲೆಗಳ ಮೂಲಕ ತಳಕ್ಕೆ ನೀರನ್ನು ಇಳಿಸುತ್ತದೆ. ಹೀಗೇ ಮಿಲಿಯಾಂತರ ವರ್ಷಗಳಿಂದ ಇಂಗಿದ ಪರಿಣಾಮದಿಂದಲೇ ನಾವು ಇಂದು ಅಂತರ್ಜಲದ ಬಳಕೆ ಮಾಡುತ್ತಿದ್ದೇವೆ.
- ಭೂಮಿಯ ಅಡಿಯ ಶಿಲಾ ಪದರದಲ್ಲಿ ಹರಿಯುವ ನದಿಗಳಿಲ್ಲ.
- ಅಲ್ಲಿ ಮಳೆಗೆ ಶಿಲಾ ಪದರದ ಮೂಲಕ ಇಳಿಯಲ್ಪಟ್ಟ ನೀರು ಮಾತ್ರ ಇರುವುದು.
- ಸಾರ್ವಜನಿಕ ( ಸರಕಾರೀ) ವ್ಯವಸ್ಥೆಗಳಲ್ಲಿ ಯಾರದ್ದೋ ಹಣ ಆದ ಕಾರಣ ಅವರು ಖರ್ಚು ಮಾಡುತ್ತಾರೆ.
- ಅದರ ಫಲಿತಾಂಶ ಅವರಿಗೆ ಬಿದ್ದು ಹೋಗಿಲ್ಲ. ವೈಯಕ್ತಿಕವಾಗಿ ಹೀಗೆ ಆಗುವುದಿಲ್ಲ.
ಬೋರ್ ವೆಲ್ ರೀಚಾರ್ಜ್ ಅಥವಾ ಮಳೆ ನೀರನ್ನು ಅಂತರ್ಜಲಕ್ಕೆ ಉಣಿಸುವುದು ಇದೆಲ್ಲಾ ಒಂದು ರೀತಿಯಲ್ಲಿ ಇರುವಾಗ ಹಬ್ಬಮಾಡಿ ಇಲ್ಲದಾಗ ಈ ರೀತಿ ಮಾಡುವುದಾಗಿರುತ್ತದೆ. ಆದಷ್ಟು ಮಿತವ್ಯಯ ಮಾಡಿ ಅಂತರ್ ಜಲವನ್ನು ಆಪತ್ಕಾಲದ ಮೂಲವಾಗಿಯೇ ಬಳಸಿದರೆ ಎಲ್ಲರಿಗೂ ಕ್ಷೇಮ.