ಎಲ್ಲರೂ ಕೆಂಪಡಿಕೆಗೆ ಹೊಂದುವ ತಳಿಗಳನ್ನೇ ಬೆಳೆಸಿದರೆ ಒಂದಿಲ್ಲೊಂದು ದಿನ ಕೆಂಪಡಿಕೆ ಮಾರುಕಟ್ಟೆ ಏನಾಗಬಹುದು ಯೋಚಿಸಿ? ಅಂತಹ ಕಷ್ಟದ ದಿನ ಬಂದರೆ ರೈತರಿಗೆ ಚಾಲಿ ನೆರವಿಗೆ ಬರಲೂಬಹುದು. ಎಲ್ಲಾ ಅಡಿಕೆ ಚಾಲಿಗೆ ಹೊಂದುವುದಿಲ್ಲ. ಇದಕ್ಕೆ ಕರಾವಳಿಯ ತಳಿಗಳೇ ಸೂಕ್ತ.
ಕಳೆದ ವರ್ಷ ಅಡಿಕೆ ಗಿಡಗಳಿಗೆ ಬಂದ ಬೇಡಿಕೆಯನ್ನು ನೋಡಿ ಈ ವರ್ಷ ನರ್ಸರಿಗಳು ಮಾಡಿದ ಸಸಿ ಅಷ್ಟಿಷ್ಟಲ್ಲ. ಆದರೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ವರ್ಷ ಅಡಿಕೆ ಗಿಡ ಕೇಳುವವರಿಲ್ಲ. ಹಾಗೆಂದು ಮಲೆನಾಡು, ಅರೆಮಲೆನಾಡು ಮುಂತಾದ ಕಡೆಯ ನರ್ಸರಿಗಳಲ್ಲಿ ಗಿಡ ಖಾಲಿ. ಅಂದರೆ ಕೆಂಪಡಿಕೆಗೆ ಹೊಂದುವ ತಳಿ ನೆಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
- ಕೆಂಪಡಿಕೆ ಉತ್ಪಾದನೆ ಹೆಚ್ಚಳವಾಗುತ್ತಿದೆ. ಹಿಂದೆ ಅಡಿಕೆಯನ್ನು ಕೊಂಡು ಬಳಸುತ್ತಿದ್ದ ನಮ್ಮ ರಾಜ್ಯದ ಜಿಲ್ಲೆಗಳಲ್ಲೆಲ್ಲಾ ಈಗ ಅಡಿಕೆ ಬೆಳೆಯಲಾಗುತ್ತಿದೆ.
- ಹಿಂದಿನಿಂದಲೂ ಅಡಿಕೆ ಬೆಳೆಯ ಹುಚ್ಚು ಮಿತಿ ಮೀರುತ್ತಿದೆ ಎಂಬುದಾಗಿ ಹೇಳುತ್ತಿದ್ದರಾದರೂ ಏನೂ ತೊಂದರೆ ಆಗಿರಲಿಲ್ಲ.
- ಆದರೆ ಈಗ ಆಗುತ್ತಿರುವ ಬೆಳವಣಿಗೆ ಪರಿಣಾಮ ಊಹಿಸಲು ಅಸಾಧ್ಯವೆಂಬ ಪರಿಸ್ಥಿತಿಯಲ್ಲಿದೆ.
ಕರಾವಳಿಯ ನರ್ಸರಿಗಳ ಕಥೆ ವ್ಯಥೆಯಾಗಿದೆ:
- ಅಡಿಕೆಗೆ ಬೆಲೆ ಏರಿದೆ. ಜನ ಈಗ ದೂರದ ಊರಿನ ಉದ್ಯೋಗ ಬಿಟ್ಟು ಕೃಷಿಗೆ ಬರಲಾರಂಭಿಸಿದ್ದಾರೆ.
- ಹಾಗಾಗಿ ಸಾಧ್ಯವಾದಷ್ಟು ಅಡಿಕೆ ಗಿಡ ಮಾಡುವ.
- ಸಂಪಾದನೆ ಆಗುತ್ತದೆ ಎಂದು ಎಲ್ಲರೂ ನರ್ಸರಿ ಮಾಡಿದ್ದೇ ಮಾಡಿದ್ದು.
- ಕೆಲವು ಲೆಕ್ಕಾಚಾರ ಪ್ರಾಕಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬೇರೆ ಬೇರೆ ಪ್ರದೇಶಗಳಲ್ಲಿ ಸುಮಾರು 3000 ಕ್ಕೂ ಹೆಚ್ಚು 50,000 ಕ್ಕೂ ಮಿಕ್ಕಿ ಅಡಿಕೆ ಸಸಿ ಮಾಡಿದ ನರ್ಸರಿಗಳಿವೆಯಂತೆ.
- 5000, 10,000 ಹೀಗೆಲ್ಲಾ ಸಸಿ ಮಾಡಿದವರು ಅಷ್ಟೇ ಪ್ರಮಾಣದಲ್ಲಿದ್ದಾರೆ.
- ಆದರೆ ಎಲ್ಲಾ ಕಡೆಯಲ್ಲೂ 75% ದಷ್ಟು ಗಿಡಗಳು ಮಾರಾಟ ಆಗದೆ ಉಳಿದಿದೆ.
ಮಲೆನಾಡಿನಲ್ಲಿ ಅಡಿಕೆ ನರ್ಸರಿಗಳು:
- ಮಲೆನಾಡಿನ ಚಿಕ್ಕಮಗಳೂರು, ಜಿಲ್ಲೆ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ತುಮಕೂರು ಚಿತ್ರದುರ್ಗಗಳಲ್ಲೆಲ್ಲಾ ಅಡಿಕೆ ಸಸಿ ಮಾಡುವ ನರ್ಸರಿಗಳಿದ್ದು,
- ಇಲ್ಲಿ ಕರಾವಳಿಯ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚು ಸಸಿಗಳನ್ನು ಮಾಡಲಾಗಿದೆ.
- ಅದಕ್ಕನುಗುಣವಾಗಿ ಈಗ ಹುಬ್ಬಳ್ಳಿ, ಹಾವೇರಿ, ದಾರವಾಡ, ಬಳ್ಳಾರಿ, ಬೆಳಗಾವಿ, ಗದಗ ಕಡೆಗೂ ಅಡಿಕೆ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿದ್ದು,
- ಆ ಸಸಿಗಳು ಖಾಲಿಯಾಗುತ್ತಿವೆ.
- ಆದರೆ ಕರಾವಳಿಯ ಅಡಿಕೆ ಮಾತ್ರ ಸೀಮಿತ ಪ್ರದೇಶ ವಾಪ್ತಿಯದ್ದಾದುದರಿಂದ ಬೇಡಿಕೆ ಇಲ್ಲದೆ ಉಳಿಯಲಾರಂಭಿಸಿದೆ.
ಯಾವ ಕಾರಣಕ್ಕೆ ಸಸಿ ಮಾರಾಟವಾಗುತ್ತಿಲ್ಲ?
- ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳಲ್ಲಿ ಇರುವ ಒಟ್ಟಾರೆ 3582 +4559 ಚದರ ಕಿಲೋ ಮೀಟರ್. (1 ಚದರ ಕಿಲೋ ಮೀಟರ್ ಅಂದರೆ 100 ಹೆಕ್ಟೇರ್).
- ಇದು ಹೆಚ್ಚಾಗುವುದೇ ಇಲ್ಲ. ಇದರಲ್ಲಿ ಕೃಷಿ ಭೂಮಿ ಬರೇ 70 % ಮಾತ್ರ.
- ಇದರಲ್ಲಿ ಭತ್ತ ಬೆಳೆಯುವ ಭೂಮಿ ಶೇ. 5, ಅಡಿಕೆ ಬೆಳೆಯುವ ಭೂಮಿ ಶೇ.30 ರಬ್ಬರ್ ಬೆಳೆಯುವ ಪ್ರದೇಶ ಸುಮಾರು 10% ಹಾಗೆಯೇ 5 % ತೆಂಗು ಉಳಿದ ಭಾಗ ಅರಣ್ಯ ಪ್ರದೇಶ.
- ಇಲ್ಲಿ ಖಾಲಿ ಪ್ರದೇಶ ಬಹಳ ಕಡಿಮೆ ಇದ್ದು ಹೆಚ್ಚೆಂದರೆ ಅದು 5% ಮಾತ್ರ ಎಂಬುದಾಗಿ ಕೆಲವು ಮೂಲಗಳು ತಿಳಿಸುತ್ತವೆ.
- ಈ ವರ್ಷ ಮಾಡಲಾದ ಸುಮಾರು ಕೋಟಿಗೂ ಹೆಚ್ಚಿನ ಅಡಿಕೆ ಸಸಿಗಳು ನಾಟಿಯಾಗಬೇಕಾದರೆ ಸ್ವಲ್ಪವಾದರೂ ರಬ್ಬರ್ ಕಡಿಯಲೇ ಬೇಕು.
- ಆದರೆ ರಬ್ಬರ್ ಬೆಲೆ ಸ್ವಲ್ಪ ಏರಿಕೆಯಾಗಿದೆ.
- ಹಾಗಾಗಿ ಹೆಚ್ಚಿನವರು ರಬ್ಬರ್ ಕಡಿಯುವುದನ್ನು ಮುಂದೆ ಹಾಕಿದ್ದಾರೆ.
ಹಳೆ ಅಡಿಕೆ ತೋಟಗಳನ್ನು ಕಡಿದು ಹೊಸತಾಗಿ ನಾಟಿ ಮಾಡುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ .ಕಾರಣ ಅಡಿಕೆಗೆ ಬೆಲೆ ಚೆನ್ನಾಗಿದೆ. ಹೊಸ ಭೂಮಿಯಲ್ಲಿ ಅಡಿಕೆ ಕೃಷಿ ಮಾಡುವ ಯೋಜನೆ ಹಾಕಿದವರಲ್ಲಿ ಹೆಚ್ಚಿನವರು ಸ್ವಂತ ಅಡಿಕೆ ಗಿಡ ಮಾಡಿದ್ದು, ಬೇಡಿಕೆ ಕಡಿಮೆಯಾಗಿದೆ.
ಹೊಸ ಮಾರುಕಟ್ಟೆ ಹುಡುಕಬೇಕಿದೆ:
- ಈಗಾಗಲೇ ಪುತ್ತೂರು, ಸುಳ್ಯಗಳಲ್ಲಿ ಕೆಲವು ಮಧ್ಯವರ್ತಿಗಳು ತಮಿಳುನಾಡು, ಗುಜರಾತ್, ಆಂದ್ರ ಪ್ರದೇಶಗಳಿಗೆ ಅಡಿಕೆ ಸಸಿ ಮಾರಾಟದ ವ್ಯವಹಾರ ಮಾಡುತ್ತಿದ್ದಾರೆ.
- ಅವರು ಮಲೆನಾಡಿನ ಅಡಿಕೆ ಗಿಡವನ್ನು ಸಾಗಾಟ ಮಾಡುತ್ತಿರುವ ವರದಿ ಇದೆ.
- ಈ ಪ್ರದೇಶಗಳ ಹವಾಮಾನಕ್ಕೆ ಹೊಂದುವ ಅಡಿಕೆ ತಳಿ ಯಾವುದು ಎಂಬುದನ್ನು ತಿಳಿದು ಅವರಿಗೆ ಸೂಕ್ತವಾಗಿದ್ದರೆ ಇಲ್ಲಿನ ಗಿಡವನ್ನು ಮಾರಾಟ ಮಾಡಬಹುದು.
ಕರಾವಳಿ ಅಡಿಕೆಗೆ ಮಾರುಕಟ್ಟೆ ಇತಿಮಿತಿ:
- ಇಲ್ಲಿನ ಅಡಿಕೆ ಚಾಲಿ ಮಾಡಲು ಸೂಕ್ತವಾದ ತಳಿಗಳು.
- ಹಿಂದೆ 20-25 ವರ್ಷಗಳ ಹಿಂದೆ ಕರಾವಳಿಯ ನರ್ಸರಿಗಳ ಜನ ಮಲೆನಾಡು ಬಯಲು ಸೀಮೆ ತನಕವೂ ಅಡಿಕೆ ಗಿಡ ಮಾರಿದರು.
- ಈಗ ಆ ಪರಿಸ್ಥಿತಿ ಇಲ್ಲ.
- ಅಲ್ಲಿನ ರೈತರು ಈಗ ಕೆಂಪಡಿಕೆಗೆ ಸೂಕ್ತವಾದ ತಳಿಯನ್ನೇ ಆಯ್ಕೆ ಮಾಡುತ್ತಿದ್ದಾರೆ.
- ಹಾಗಾಗಿ ಕರಾವಳಿಯ ಅಡಿಕೆ ತಳಿಗಳಿಗೆ ಸೀಮಿತ ಮಾರುಕಟ್ಟೆ ಅವಕಾಶ ಉಂಟಾಗಿದೆ.
ತಳಿ ಬದಲಾವಣೆ ಅಗತ್ಯ:
- ಇತ್ತೀಚಿನ ಮೂರು ವರ್ಷಗಳಿಂದ ಮಲೆನಾಡಿನಾದ್ಯಂತ ಮಾರಾಟವಾದ ಅಡಿಕೆ ಸಸಿಗಳು ಕಳೆದ 25 ವರ್ಷಗಳ ಇತಿಹಾಸದಲ್ಲೇ ಇಲ್ಲ ಎನ್ನುತ್ತಾರೆ ಹಿರಿಯ ನರ್ಸರಿ ನಡೆಸುವವರೊಬ್ಬರು.
- ಬಹುಶಃ ಇವೆಲ್ಲಾ ಸಸಿಗಳು ಫಲ ಕೊಟ್ಟಿತೆಂದಾದರೆ ಅಡಿಕೆ ಉತ್ಪಾದನೆ ಹೆಚ್ಚಾಗಿ ಬೆಲೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ.
- ಎಲ್ಲರೂ ಕೆಂಪು ಅಡಿಕೆ ತಳಿಗಳನ್ನೇ ಬೆಳೆಸಿದರೆ ಚಾಲಿ ಅಡಿಕೆ ಉತ್ಪಾದನೆ ಸ್ಥಿರವಾಗಿ, ಕೆಂಪು ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
- ಆದ ಕಾರಣ ಎಲ್ಲಾಅಡಿಕೆ ಬೆಳೆಯುವ ಆಸಕ್ತರೂ ಅಲ್ಪ ಸ್ವಲ್ಪ ಪರೀಕ್ಷಾರ್ಥವಾಗಿಯಾದರೂ ಚಾಲಿ ಅಡಿಕೆಗೆ ಆಗುವ ತಳಿಗಳನ್ನು ಬೆಳೆಸುವುದರಿಂದ ಸಮತೋಲನ ಆಗಲು ಸಾಧ್ಯವಿದೆ.
- ಬಯಲು ಸೀಮೆ ಹಾಗೂ ಅರೆ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಚಾಲಿ ಅಡಿಕೆ ತಳಿಗಳು ಹೊಂದಾಣಿಕೆ ಆಗುತ್ತದೆ ಎಂಬ ಮಾಹಿತಿ ಇದೆ.
- ಇಲ್ಲಿ ಚಾಲಿ ಅಡಿಕೆ ಮಾಡಿದರೆ ಬಿಸಿಲು ಚೆನ್ನಾಗಿರುವ ಕಾರಣ ಅತ್ಯುತ್ತಮ ಗುಣಮಟ್ಟದ ಅಡಿಕೆ ಉತ್ಪಾದನೆ ಮಾಡಬಹುದು.
- ಈಗಲೂ ಕೆಲವು ರೈತರು (ತುಮಕೂರು ಮಂಡ್ಯ) ಕೆಂಪಡಿಕೆಯ ತಳಿಗಳಿಂದ ಚಾಲಿ ಉತ್ಪಾದಿಸುತ್ತಿದ್ದಾರೆ.
- ಆದರೆ ಗಾತ್ರ ಸಣ್ಣದಾದ ಕಾರಣ ಅವರು ಕರಾವಳಿಯ ಅಡಿಕೆಗಿಂತ ಕಿಲೊ ಮೇಲೆ ರೂ.100 ಕಡಿಮೆ ಪಡೆಯುತ್ತಿದ್ದಾರೆ.
ಉತ್ತಮ ಗಾತ್ರದ ಉತ್ತಮ ಗುಣಮಟ್ಟದ ಚಾಲಿ ಅಡಿಕೆ ಉತ್ಪಾದನೆ ಮಾಡುವರೇ ಕರಾವಳಿಗಿಂತ ಬಯಲು ಸೀಮೆ, ಅರೆಮಲೆನಾಡಿನ ರೈತರಿಗೆ ಹೆಚ್ಚಿನ ಅನುಕೂಲ ಇದೆ. ಇಲ್ಲಿ, ಬಿಸಿಲು ಚೆನ್ನಾಗಿದ್ದು, ಮಳೆ ಕಡಿಮೆ. ಕೊಳೆ ರೋಗ ಬರುವ ಸಾಧ್ಯತೆ ಕಡಿಮೆ. ಉತ್ಪಾದನಾ ಖರ್ಚು ಕಡಿಮೆಯಾಗಲಿದೆ. ಅದೇ ರೀತಿ ಮಣ್ಣು ಫಲವತ್ತಾಗಿರುವ ಕಾರಣ ಇಳುವರಿಯೂ ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ. ಕರಾವಳಿಯಲ್ಲಿ ಈ ವರ್ಷ ಗುಣಮಟ್ಟದ ಅಡಿಕೆ ಗಿಡಗಳು ಕಡಿಮೆ ದರದಲ್ಲಿ ಸಿಗುವ ಸಾಧ್ಯತೆಯೂ ಇದೆ.
All crops are having their own requirements if that is not met will result in quality problems.Likewise arecanut grown in planes are containing more alkaloids like arecoline which are having vasoconstriction and psychoactive properties.The areca grown in traditionally identified areas are most suited for human consumption. Central government has not come out in support of this product which is in the Supreme Court.Any time cultivation of this crop get in to problem,if people don’t understand this may complicate further.
Sir, I agree with your statement. Thanks.