ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ ಎಂಬ ಸುದ್ದಿ !

ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ

ಸಾಮಾನ್ಯವಾಗಿ ಮಳೆಗಾಲ ಪ್ರಾರಂಭದ ಒಂದೆರಡು ತಿಂಗಳು ಮಾರುಕಟ್ಟೆ ಸ್ವಲ್ಪ ಮಬ್ಬಾಗಿರುತ್ತದೆ. ಕೃಷಿಕರು ಅವರ ಹೊಲದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ.  ಜೊತೆಗೆ ಹವಾಮಾನವೂ ವ್ಯವಹಾರಕ್ಕೆ ಸ್ವಲ್ಪ ಅನುಕೂಲಕರವಾಗಿ ಇರುವುದಿಲ್ಲ. ಹಾಗಾಗಿ ಬಹುತೇಕ ಕೃಷಿ ಉತ್ಪನ್ನಗಳ ಬೆಲೆ ಸ್ವಲ್ಪ ಇಳಿಕೆಯೇ ಆಗುವುದು.  ಮಳೆಗಾಲ ಒಮ್ಮೆ ಸೆಟ್ ಆದ ಮೇಲೆ ಮತ್ತೆ ವ್ಯವಹಾರ ಚುರುಕಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತದ್ದು. ಈಗ ಮತ್ತೆ ಮಾರುಕಟ್ಟೆ ಚೇತರಿಕೆಯನ್ನು ಕಾಣುತ್ತಿದೆ. ಅಡಿಕೆ ದರ ಏರಿದೆ. ಇನ್ನೂ ಸ್ವಲ್ಪ ಸ್ವಲ್ಪವೇ ಏರಿಕೆ ಆಗಬಹುದು ಎನ್ನುವ ಸುದ್ದಿ ಇದೆ.

ಈ ಹಿಂದೆ ಅಡಿಕೆ ಆಮದು ಆಗಿ ದರ ಕುಸಿಯುತ್ತದೆ ಎಂಬ ಸುದ್ದಿ, ಮಾರುಕಟ್ಟೆಯ ಮೇಲೆ ದೊಡ್ದ ಹೊಡೆತವನ್ನು ನೀಡಿತ್ತು. ಸುಮಾರು ಒಂದು ತಿಂಗಳ ಕಾಲ ದರ ಸ್ವಲ್ಪ ಇಳಿಕೆಯಗತಿಯಲ್ಲೇ ಮುಂದುವರಿದಿತ್ತು. ಕೆಲವು ಸುದ್ದಿಗಳಿಂದ  ಮತ್ತೆ ಸ್ವಲ್ಪ ಏರಿಕೆ ಕಂಡಿತಾದರೂ ಪ್ರಕಟಣೆಯ ದರಕ್ಕೂ ಖರೀದಿ ದರಕ್ಕೂ ಭಾರೀ ವ್ಯತ್ಯಾಸವಿತ್ತು. ಈ ವರ್ಷದ ಧಾರಣೆಯ ವಿಶೇಷ ಎಂದರೆ ಹಳೆ ಅಡಿಕೆಗೆ ದರ ಏರಿಕೆಯಾಗಿರುವುದು. ಹೊಸತಕ್ಕೂ ಹಳೆಯದಕ್ಕೂ ಸುಮಾರು 130 ರೂ. ವ್ಯತ್ಯಾಸ. ಇದಕ್ಕೆ ಕೆಲವು ಸೂಕ್ಷ್ಮ ಕಾರಣಗಳೂ,ಮತ್ತೆ ಕೆಲವು ಸನ್ನಿವೇಶದ ಕಾರಣವೂ ಇದೆ.ಈ ವರ್ಷ ಹೊಸ ಅಡಿಕೆ 50% ಗುಣಮಟ್ಟ ರಹಿತವಾದದ್ದು. ಈಗಲೂ ಮಾರುಕಟ್ಟೆಗೆ ಬರುವ ಹೆಚ್ಚಿನವು ಮಳೆಗೆ ನೆನೆದ ಗುಣಮಟ್ಟ ರಹಿತ ಅಡಿಕೆಯಾಗಿರುತ್ತದೆ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕೊಯಿಲಿನದ್ದು ಬರುತ್ತದೆಯಾದರೂ ದೊಡ್ಡ ಬೆಳೆಗಾರರು ಇನ್ನೂ ಕೊಯಿಲಿನದ್ದನ್ನು ಮುಟ್ಟಿಲ್ಲ. ಹಾಗಾಗಿ ಹೊಸತರ ದರ ಏರಿಕೆ ಪ್ರಾರಂಭವಾಗಲು ಹಾಳಾದ ಅಡಿಕೆ ಮಾರುಕಟ್ಟೆಗೆ ಬಂದು ಮುಗಿಯಬೇಕಾಗಿದೆ.  ಉತ್ತಮ  ಗುಣಮಟ್ಟದ ಅಡಿಕೆ ಇದ್ದರೆ ಬೆಲೆ ಮತ್ತು ಬೇಡಿಕೆ ಇದ್ದು, ಅದಕ್ಕೆ ಕಾಲ ಕೂಡಿ ಬಂದಿಲ್ಲ.

ಇಂದು ಹಳೆ ಅಡಿಕೆ ದರ ರೂ. 10 ಹೆಚ್ಚಳ:

 • ಖಾಸಗಿ ವ್ಯಾಪಾರಿಗಳು ಎರಡು ವಾರದಿಂದಲೂ ಹಳೆಯದಕ್ಕೆ ರೂ 10. ಹೆಚ್ಚಿನ ಬೆಲೆಗೆ ಖರೀದಿ ಮಾಡಲು ಪ್ರಾರಂಭಿಸಿದ್ದಾರೆ.
 • ಆದರೆ ಮಾರುಕಟ್ಟೆಯ ದೈತ್ಯ ಎಂದೇ ಹೆಸರುವಾಸಿಯಾದ ಕ್ಯಾಂಪ್ಕೋ ಮಾತ್ರ ಖಾಸಗಿಯವರಿಗಿಂತ ಹಿಂದೆ ಇತ್ತು.
 • ಜುಲೈ 8  ಇಂದು ಅಲ್ಲಿಯೂ ರೂ. 10 ಏರಿಕೆಯಾಗಿದ್ದು, ಹಳೆ ಅಡಿಕೆಗೆ ಭಾರೀ ಬೇಡಿಕೆ ಎಂಬುದು ಸಾಬೀತಾಗಿದೆ.
 • ಹಳೆಯಡಿಕೆ ಮಾತ್ರ ಗುಣಮಟ್ಟ ಹೊಂದಿದೆ.
 • ಹಾಗಾಗಿ ಅದಕ್ಕೇ ಉತ್ತರ ಭಾರತದಿಂದ ಬೇಡಿಕೆ ಎಂಬುದಾಗಿ ಪುತ್ತೂರಿನ ಓರ್ವ ವ್ಯಾಪಾರಿಗಳು ತಿಳಿಸುತ್ತಾರೆ.
 • ಇದು ಹಳತಕ್ಕೆ ಕ್ವಿಂಟಾಲಿಗೆ ರೂ. 54500 ಯಿಂದ ಕ್ವಿಂಟಾಲಿಗೆ 55000 ಕ್ಕೆ ಏರಿಕೆಯಾಗಿದೆ.
 • ಖಾಸಗಿಯವರಲ್ಲಿ ಇನ್ನೂ ರೂ.500 ಹೆಚ್ಚು ಇದ್ದು, ಇದು ಭಾರೀ ಬೇಡಿಕೆಯನ್ನು ಸೂಚಿಸುತ್ತದೆ.
 • ಹಳೆಯಡಿಕೆ ಮಾರುಕಟ್ಟೆಗೆ ಬರುವ ಪ್ರಮಾಣ ತುಂಬಾ ಕಡಿಮೆ  ಇದೆ.
 • ಇರುವ ಎಲ್ಲಾ ಅಡಿಕೆ ಮುಗಿಯುವ ತನಕ ದರ ಏರಿಸುವ ಸಾಧ್ಯತೆ ಇದೆ. 
 • ಕೆಲವು ಖಾಸಗಿ ವ್ಯಾಪಾರಿಗಳ ಪ್ರಕಾರ ದಿನಕ್ಕೆ ಒಂದು ಚೀಲ ಹಳೆ ಅಡಿಕೆ ಒಟ್ಟು ಹಾಕುವುದೂ ಕಷ್ಟವಂತೆ.
 • ಕೆಲವು ಆರ್ಡರ್ ಗಳಿಗೆ ಭರ್ತಿ ಮಾಡಿ ಕಳುಹಿಸಲು ವ್ಯಾಪಾರಿಗಳಲ್ಲಿ ಕೊರತೆ ಇದೆಯಂತೆ.
 • ಅದಕ್ಕಾಗಿ ಈ ರೀತಿ  ದರ ಹೆಚ್ಚಿಸುತ್ತಾ ಕೆಲವೇ ಕೆಲವು ಬೆಳೆಗಾರರು ದಾಸ್ತಾನು ಇಟ್ಟಕೊಂಡದ್ದನ್ನು ಬಾಚಿಕೊಳ್ಳುವ ತಂತ್ರ ಇದು ಎನ್ನುತ್ತಾರೆ.  
ಮಾರುಕಟ್ಟೆಗೆ ಬರುವ ಹೆಚ್ಚಿನ ಅಡಿಕೆ
ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವ ಗುಣಮಟ್ಟ ರಹಿತ ಅಡಿಕೆ

ಸಧ್ಯವೇ ಹೊಸತರ ಸರದಿ ಇದೆ:

 • ಒಬ್ಬರು ಮಂಗಳೂರಿನ ಅಡಿಕೆ ವ್ಯಾಪಾರಿಗಳ ಪ್ರಕಾರ ಇನ್ನೇನು ಒಂದು ತಿಂಗಳ ಒಳಗೆ ಹಳೆಯಡಿಕೆ ಮುಗಿಯುತ್ತದೆ.
 • ಬೆಳೆಗಾರರ ನಿರೀಕ್ಷೆಯ ದರ ಬಂದಾಗಿದೆ. ಇಲ್ಲಿ ಕೆಲವರಲ್ಲಿ  ಹಳೆಯದು ಇದೆ.
 • ಆದರೆ ಉತ್ತರ ಭಾರತಕ್ಕೆ  ಕಳುಹಿಸುವಷ್ಟು ಪ್ರಮಾಣ ಇಲ್ಲ.
 • ಅದನ್ನು ಒಟ್ಟು ಹಾಕಲಿಕ್ಕಾಗಿಯೇ ಈಗ ದರ ಏರಿದೆ ಎಂಬ ಮಾಹಿತಿಯನ್ನು ಕೊಡುತ್ತಾರೆ.ಈ ಸಂಗತಿಯನ್ನು ಅಲ್ಲಗಳೆಯುವಂತಿಲ್ಲ.
 • ಹಳೆಯ ಅಡಿಕೆ ಈಗಾಗಲೇ ಮುಗಿದಿದೆ. ಕೆಲವೇ ಕೆಲವು ಬೆರಳೆಣಿಕೆಯ ಬೆಳೆಗಾರರು ದರ ಏನೇ ಆಗಲಿ ಡಬ್ಬಲ್ ಚೋಲ್ ಮಾಡಿಯೇ ಮಾರುವವರು ಇದ್ದಾರೆ.
 • ಅವರು ಆ ಸಮಯದಲ್ಲೇ ಮಾರಾಟ ಮಾಡುವುದು. 
 • ಸುಮಾರು 20-25 % ದಷ್ಟು ಮಳೆಗೆ ಒದ್ದೆಯಾದ ಅಡಿಕೆ ಮಾರುಕಟ್ಟೆಗೆ ಈಗಾಗಲೇ  ಬಂದಿದೆ.
 • ಹಾಳಾದದ್ದು ಮುಗಿಯಲೇ ಬೇಕು. ಆಗ ಮಾರುಕಟ್ಟೆಗೆ ಅಡಿಕೆಯ ಅಗತ್ಯ ಬೀಳುತ್ತದೆ.
 • ಆ ನಂತರ ಹೊಸತರ ಸರದಿ.
 • ಹಳೆಯಡಿಕೆ ಈ ದರ ಇರುವಾಗ ಇನ್ನು ಚೌತಿ ಸಮಯಕ್ಕೆ ಒಂದೋ ಹಳೆಯದಕ್ಕೆ ದರ ಕಡಿಮೆಯಾಗಬೇಕು, ಇಲ್ಲವೇ ಹೊಸತು ಏರಿಕೆಯಾಗಬೇಕು.
 • ಹಳೆಯದು ಇಳಿಕೆ ಆಗುವ ಸಾಧ್ಯತೆ ಇಲ್ಲ.
 • ಹೊಸತು ಅದಕ್ಕೆ ಸರಿ ಸಮನಾಗಿ ಹೊಂದಾಣಿಕೆ ಆಗಲಿಕ್ಕಿದೆ.
 • ಹೊಸ ಬೆಳೆಯದ್ದು ಒಣಗಿ ಮಾರುಕಟ್ಟೆಗೆ ಬರುವ ಸಮಯಕ್ಕೆ ಈಗಿನ ಅಡಿಕೆಗೆ 50,000 ದಾಟಬಹುದು.
 • ಅಲ್ಲಿ ತನಕ ಖಾಸಗಿಯವರು ಮತ್ತು ಸಹಕಾರಿಗಳು ಸ್ಪರ್ಧೆಯಲ್ಲಿ 5-10 ರೂ ಏರಿಕೆ ಇಳಿಕೆ ಮಾಡುತ್ತಾ ಆಟ ಆಡಲಿದ್ದಾರೆ.
ಕೆಂಪಡಿಕೆ ದರ ನಿನ್ನೆಯಿಂದ ಚೇತರಿಕೆ ಕಾಣಲಾರಂಭಿಸಿದೆ.

ಕೆಂಪಡಿಕೆ ಮಾರುಕಟ್ಟೆ:

 • ಹಳೆ ಚಾಲಿಯ ದರ ಏರಿಕೆ ಆದರೆ ಕೆಂಪಡಿಕೆಯ ಮಾರುಕಟ್ಟೆಯ ಮೇಲೆ ಯಾವ ಪರಿಣಾಮವೂ ಉಂಟಾಗಲಾರದು.
 • ಹೊಸತರ ದರ ಎರಿಕೆ ಅಥವಾ ಇಳಿಕೆ ಆದಾಗ ಕೆಂಪಡಿಕೆಯೂ ಸಾಥ್ ನೀಡಲಿದೆ.
 • ಸದ್ಯಕ್ಕೆ ಹೊಸ ಚಾಲಿ ದರ ದೊಡ್ಡ ಏರಿಕೆ ಕಂಡಿಲ್ಲ. ಆದರೆ ಏರಿಕೆಯ ಸೂಚನೆ ಇದೆ.
 • ಖಾಸಗಿಯವರು ಸಹಕಾರಿಗಳಿಗಿಂತ ಮುಂದೆ ಇದ್ದಾರೆ.
 • ಕೆಲವರು ದರ ಏರಿಕೆಯ ನಿಖರ ಮಾಹಿತಿಯಿಂದ ದಾಸ್ತಾನು ಇಟ್ಟುಕೊಳ್ಳಲಾರಂಭಿಸಿದ್ದಾರೆ. 
 • ಕೆಂಪಡಿಕೆ ದರ ನಿನ್ನೆಯಿಂದ ಚೇತರಿಕೆ ಕಾಣಲಾರಂಭಿಸಿದೆ.
 • ಚೆನ್ನಗಿರಿ ಮಾರುಕಟ್ಟೆಯಲ್ಲಿ  49,000 ದ ಆಸುಪಾಸಿನಲ್ಲಿದ್ದ ಗರಿಷ್ಟ ಧಾರಣೆ 50,200 ಕ್ಕೆ ಏರಿದೆ.
 • ಶಿವಮೊಗ್ಗದಲ್ಲಿ 50,000 ಸಮೀಪಕ್ಕೆ ಬಂದಿದೆ.
 • ಹೊಸನಗರ 50,000 ದಾಟಿದೆ. ಯಲ್ಲಾಪುರ 52,500 ತನಕ ಹೋಗಿದೆ.
 • ಶಿರಸಿಯಲ್ಲಿ 49,000 ದಿಂದ ಮೇಲೆ ಇದೆ. ಸಾಗರದಲ್ಲಿ 50,000 ಸಮೀಪ ಇದೆ. 
 • ತೀರ್ಥಹಳ್ಳಿ ಭದ್ರಾವತಿ ಸುಮಾರಾಗಿ ಏಕಪ್ರಕಾರವಾಗಿ 49,800ಇದೆ. 
 • ಚಿತ್ರದುರ್ಗದಲ್ಲಿ 48,900 ತನಕ ಇದೆ. 

ಮಾರಾಟಕ್ಕೆ ಬರುವುದು ಕಡಿಮೆಯಾಗಿದೆ:

 • ಹೊಸನಗರದಲ್ಲಿ ಗರಿಷ್ಟ (1595 ಚೀಲ) ಮಾರುಕಟ್ಟೆಗೆ ಬಂದಿದೆ.
 • ಶಿವಮೊಗ್ಗ ಕೇವಲ 174 ಚೀಲ,
 • ಚೆನ್ನಗಿರಿಯಲ್ಲಿ 547 ಚೀಲ,
 • ಭದ್ರಾವತಿಯಲ್ಲಿ 520 ಚೀಲ,
 • ಸಾಗರದಲ್ಲಿ 74 ಚೀಲ, ಸಿದ್ದಾಪುರ 21 ಚೀಲ,
 • ಶಿರಸಿ 21 ಚೀಲ, ಯಲ್ಲಾಪುರದಲ್ಲಿ 41 ಚೀಲದಂತೆ ಮಾರಾಟವಾಗಿದೆ.
 • ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ  ಸಮಯದಲ್ಲಿ ಮಾರುಕಟ್ಟೆಗೆ ಬರುವ ಪ್ರಮಾಣ ತುಂಬಾ ಕಡಿಮೆ.
 • ಹಾಗೆಂದು ಬೆಳೆಗಾರರಲ್ಲಿ ಮಾಲು ಇದೆ. ಬೆಲೆಗಾಗಿ ಕಾಯುತ್ತಿದ್ದಾರೆ.
 • ಈ ವರ್ಷದ ಹೊಸ ಕೊಯಿಲು ಪ್ರಾರಂಭವಾಗಿದ್ದು, ಹಸಿ ಅಡಿಕೆ ಕ್ವಿಂಟಾಲಿಗೆ ರೂ. 6800 ಖರೀದಿ ನಡೆಯುತ್ತಿದೆ.
 • ಈ ಕಾರಣದಿಂದ ಕೆಂಪಡಿಕೆ ದರ ಏರಿಕೆಯ ಮೇಲೆ ಭರವಸೆ ಇದೆ.

ಆಗಸ್ಟ್ ತಿಂಗಳ ತರುವಾಯ ಅಧಿಕ ಪ್ರಮಾಣದಲ್ಲಿ ಹಸಿ ಅಡಿಕೆ ಕೊಯಿಲು ಪ್ರಾರಂಭವಾಗಲಿದ್ದು, ಆ ಸಮಯದ ಒಳಗೆ ದರ ಸ್ವಲ್ಪ ಏರಿಕೆ ಆಗಬಹುದು.

ಈ ವರ್ಷ ಚಾಲಿ ಬೆಳೆಯುವ ಪ್ರದೇಶದಲ್ಲಿ ಅಡಿಕೆಯ ಉತ್ಪಾದನೆ ಕಡಿಮೆ ಇದೆ. ಇನ್ನೂ ಮಿಡಿ ಉದುರುವಿಕೆ ಆಗುತ್ತಲೇ ಇದೆ. ಉಳಿದ ಮಲೆನಾಡು ಅರೆಮಲೆನಾಡು ಮತ್ತು ಅಡಿಕೆ ಬೆಳೆಯುವ ಬಯಲು ಸೀಮೆಗಳಲ್ಲೂ ಮಿಡಿ ಉದುರುವ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ 20-25 % ಫಸಲು ಕಡಿಮೆಯಾಗುವ ಸಾಧ್ಯತೆ ಇದೆ.

ಬೆಳೆಗಾರರು ಹಳೆ ಅಡಿಕೆಯನ್ನು ತುರ್ತು ಅಗತ್ಯಗಳಿಗೆ ಮಾರಾಟ ಮಾಡಿ. ಹೊಸತನ್ನು ಮಾರಾಟ ಮಾಡುವುದಕ್ಕೆ ಸ್ವಲ್ಪ ಕಾಯುವುದು ಸೂಕ್ತ. ಇನ್ನು ಹೊಸತು ಹಳೆಯದಾಗಲು ಗರಿಷ್ಟ 3-4 ತಿಂಗಳು ಸಾಕು. ಈ ವರ್ಷ ಸಂಸ್ಕರಣೆಗೆ (ಒಣಗಿಸಲು) ಅನನುಕೂಲ ಆಗುವ ಸಾಧ್ಯತೆ ಕಡಿಮೆ ಇದೆ. ಎಲ್ಲರೂ ವ್ಯವಸ್ಥಿತ ಒಣಗು ಮನೆಗಳನ್ನು ಮಾಡಿಕೊಂಡು ಗುಣಮಟ್ಟದ ಅಡಿಕೆ ಉತ್ಪಾದನೆಗೆ ಸಾಜ್ಜಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!