ಗೋಬರ್ ಗ್ಯಾಸ್ ಸ್ಲರಿಯಲ್ಲಿ ಸತ್ವ ಇದೆ.

ಗೋಬರ್ ಗ್ಯಾಸ್ ಸ್ಥಾವರ

ಸಗಣಿಯನ್ನು ಹಾಗೆಯೇ ಬೆಳೆಗಳಿಗೆ ಹಾಕುವುದಕ್ಕಿಂತ ಅದನ್ನು ದ್ರವೀಕರಿಸಿ ಕೊಡುವುದರಿಂದ ಅದರ ಪೂರ್ಣ ಸತ್ವಗಳು  ಬೆಳೆಗಳಿಗೆ  ದೊರೆಯುತ್ತದೆ. ಅನಿಲ ಉತ್ಪಾದನೆ ಅಗುವಾಗ ಸಗಣಿಯ ಸಾರ ಕಡಿಮೆಯಾಗುತ್ತದೆ ಎಂಬುದು ನಿಜವಲ್ಲ. ಅನಿಲ ಉತ್ಪಾದನೆಗೆ ಬೇಕಾಗುವ ಅಂಶವೇ ಬೇರೆ. ಬೆಳೆಗಳಿಗೆ ಬೇಕಾಗುವುವಂತದ್ದು ಅದರಲ್ಲೇ ಉಳಿಯುತ್ತದೆ.ಪ್ರತೀಯೊಬ್ಬ ಗೋಬರ್ ಗ್ಯಾಸ್ ಸ್ಲರಿ ಬಳಕೆದಾರ ತಿಳಿಯಬೇಕಾದ  ಮಾಹಿತಿ ಇಲ್ಲಿದೆ.

 • ಹಳ್ಳಿಯಲ್ಲಿ ಕೃಷಿಕರ ಮನೆಯಲ್ಲಿ ಬಯೋಗ್ಯಾಸ್ ಅಥವಾ ಗೋಬರ್ ಗ್ಯಾಸ್ ಇದ್ದರೆ ಸಿದ್ದ ಗೊಬ್ಬರ ಇದ್ದಂತೆ.
 • ಒಂದೆರಡು ದನ ಇದ್ದವರೂ ಗೋಬರ್ ಗ್ಯಾಸ್ ಮಾಡಿಕೊಳ್ಳಬಹುದು.
 • ಹೆಚ್ಚು ದನ -ಎಮ್ಮೆ ಸಾಕುವವರೂ ದೊಡ್ಡ ಪ್ರಮಾಣದ ಸ್ಥಾವರವನ್ನು ಅಳವಡಿಸಿಕೊಳ್ಳಬಹುದು.
 • ಇದು ಒಂದು ಬಹು ಉಪಯೋಗಿ ವ್ಯವಸ್ಥೆ.  ಸ್ವಚ್ಚ , ಅಪಾಯ ರಹಿತ ಇಂಧನದ ಜೊತೆಗೆ  ಸಗಣಿಯಲ್ಲಿನ ಪೋಷಕಗಳನ್ನು ಸ್ವಲ್ಪವೂ ನಷ್ಟವಾಗದಂತೆ  ಕೃಷಿಗೆ  ಬಳಕೆ  ಮಾಡಬಹುದು.

ಗೋಬರ್ ಗ್ಯಾಸ್ ಸ್ಲರಿ ಉತ್ತಮ ಪೋಷಕಾಂಶ:

 • ಗಟ್ಟಿ ಸಗಣಿಯನ್ನು ದ್ರವೀಕರಿಸಿ ಅದನ್ನು ಒಂದು ವ್ಯವಸ್ಥೆಯೊಳಗೆ ಹಾಕಿ ಅಲ್ಲಿ ಅದು ಹುಳಿ ಬಂದಾಗ ಅದರಲ್ಲಿ  ಮಿಥೆನೋಜೆನಿಕ್ ಬ್ಯಾಕ್ಟೀರಿಯಾಗಳು ಮಿಥೇನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಉತ್ಪಾದಿಸುತ್ತವೆ.
 • ಅತೀ ಕಡಿಮೆ ಪ್ರಮಾಣದಲ್ಲಿ ಹೈಡ್ರೋಜನ್ ಸಲ್ಫೈಡ್, ಮತ್ತು ಹೈಡ್ರೋಜನ ಸಹ ಇರುತ್ತದೆ.
 • 55-70 % ಮಿಥೇನ್, 45-30%  ಇಂಗಾಲದ ಡೈ ಆಕ್ಸೈಡ್,ಇರುತ್ತದೆ.
 • ಇದು ಉರಿಯಬಲ್ಲ ಅನಿಲ ಆದ ಕಾರಣ ಅದನ್ನು ಉರಿಸಿ ಅಡುಗೆ ಇತ್ಯಾದಿ ಮಾಡಬಹುದು.
 • ಇಲ್ಲಿ ಬ್ಯಾಕ್ಟೀರಿಯಾಗಳು  ಆಮ್ಲಜನಕ ರಹಿತವಾಗಿ (Anaerobic fermentation) ಕೆಲಸ ಮಾಡುತ್ತವೆ.
 • ಇದು ಮೂರು ಹಂತದ ಪ್ರಕ್ರಿಯೆ.
 • ಸಗಣಿಯನ್ನು ದ್ರವೀಕರಿಸಿದ ತರುವಾಯ ಅದು ಸೂಕ್ಷ್ಮಾಣು ಜೀವಿಗಳ ಸಹಯೋಗದಲ್ಲಿ ಪರಿವರ್ತನೆ ಹೊಂದುತ್ತದೆ.
 • ಕೆಲವು ಕರಗದ ವಸ್ತುಗಳು ಕರಗುತ್ತವೆ.
 • ಜಠಿಲ ಆಣ್ವಿಕ ಸಂಯುಕ್ತಗಳು ( High molecular compounds)  ಸರಳ, ಮತ್ತು ಸಣ್ಣ ಸಂಯುಕ್ತಗಳಾಗುತ್ತವೆ.
 • ಪಾಲಿ ಸಾಚರೈಡ್ ಗಳು, ದ್ರವೀಕರಣಗೊಳ್ಳುತ್ತವೆ.
 • ಪ್ರೋಟೀನುಗಳು ಪೆಪ್ಟೈಡ್ ಹಾಗೂ ಅಮೈನೋ ಅಸಿಡ್ ಗಳಾಗಿ ಫ್ಯಾಟ್ ಗಳು ಗ್ಲಿಸರಾಲ್ ಮತ್ತು ಫ್ಯಾಟೀ ಅಸಿಡ್ ಗಳಾಗುತ್ತವೆ.
 • ಇದರಲ್ಲಿ ನಾವು ಒಲೆ ಉರಿಸುವಾಗ ಪಡೆಯುವುದು ಬರೇ ಅನಿಲ ರೂಪದ ಮಿಥೇನ್+ ಕಾರ್ಬನ್ ಡೈ ಆಕ್ಸೈಡ್,  ಮತ್ತು ಅತೀ ಅಲ್ಪ ಪ್ರಮಾಣದ ಕೆಲವು ಅನಿಲಗಳು ಮಾತ್ರ.
 • ಉಳಿದವು ದ್ರವದಲ್ಲೇ ಉಳಿಯುತ್ತವೆ. ಇವು ಬೆಳೆಗಳಿಗೆ ಲಭ್ಯವಾಗುತ್ತವೆ  ನಮ್ಮ ದೇಶವಲ್ಲದೆ ಚೀನಾ, ಬ್ರೆಝಿಲ್ ಮುಂತಾದ ದೇಶಗಳಲ್ಲೂ ಗೋಬರ್ ಗ್ಯಾಸ್ ಪದ್ದತಿ ಇದೆ.
 • ಬೇರೆ ದೇಶಗಳಲ್ಲಿ ಸಗಣಿಯ  ಜೊತೆಗೆ ಕೆಲವು ಕೃಷಿ ತ್ಯಾಜ್ಯಗಳನ್ನೂ ಇದಕ್ಕೆ ಸೇರಿಸುತ್ತಾರೆ.
 • ನಮ್ಮಲ್ಲಿ ಹೆಚ್ಚಾಗಿ ದನ- ಎಮ್ಮೆ ಸಗಣಿ ಮೂತ್ರವನ್ನು ಮಾತ್ರವೇ ಬಳಕೆ  ಮಾಡುತ್ತಾರೆ.
 • ಗೋಬರ್ ಗ್ಯಾಸ್ ಗೆ ಕರಗಬಲ್ಲ  ಉಪಯೋಗಿಸಲು ಆಗದ ತರಕಾರಿ ಹಣ್ಣು ಹಂಪಲನ್ನೂ ಹಾಕಬಹುದು.
 • ಬೆಂಗಳೂರಿನ ದೊಡ್ಡ ಬಳ್ಳಾಪುರದಲ್ಲಿ  ಒಂದು ಗೋಬರ್ ಗ್ಯಾಸ್ ಪ್ಲಾಂಟ್ ನಲ್ಲಿ  1 ಟ್ರಾಕ್ಟರ್ ಲೋಡು ಸಗಣಿ,2 ಟ್ರಾಕ್ಟರ್ ಲೋಡು  ಕೋಳಿ ಹಿಕ್ಕೆ, ಹಾಳಾದ ದ್ರಾಕ್ಷಿ ಇತ್ಯಾದಿ ಬಳಕೆ  ಮಾಡುತ್ತಾರೆ.
 • ಸಣ್ಣ ಸಣ್ಣ ಕೋಳಿ ಸಾಕಾಣಿಕೆದಾರರು ಅದರ ತ್ಯಾಜ್ಯವನ್ನು ಬಳಕೆ  ಮಾಡಬಹುದು.  ಕೊಳೆಯುವ ಎಲೆ, ಗೇರು ಹಣ್ಣು ಎಲ್ಲವನ್ನೂ ಗೋಬರ್ ಗ್ಯಾಸ್ ಗೆ ಬಳಕೆ  ಮಾಡಲು ಶಿಫಾರಸು ಇದೆ.
ಗೋಬರ್ ಗ್ಯಾಸ್ ಸ್ಲರಿಯಲ್ಲಿ ಮಿಥೇನ್ ಅನಿಲ ಉತ್ಪಾದನೆ. ಈ ಗುಳ್ಳೆಗಳು ಒಡೆದಾಗ ಹೊರ ಬರುವ ಗಾಳಿಯೇ ಇಂಧನ ರೂಪದ ಅನಿಲ.
ಗೋಬರ್ ಗ್ಯಾಸ್ ಸ್ಲರಿಯಲ್ಲಿ ಮಿಥೇನ್ ಅನಿಲ ಉತ್ಪಾದನೆ. ಈ ಗುಳ್ಳೆಗಳು ಒಡೆದಾಗ ಹೊರ ಬರುವ ಗಾಳಿಯೇ ಇಂಧನ ರೂಪದ ಅನಿಲ.

ಹಾಕುವ ಸಾಮಾಗ್ರಿಯ ಮೇಲೆ  ಫಲ:

 • ಗೋಬರ್ ಗ್ಯಾಸ್ ಉತ್ಪಾದನೆಯಾಗುವಾಗ ಸಗಣಿಯಲ್ಲಿನ ಅಲ್ಪ ಪ್ರಮಾಣದ ಸರಜನಕ ಹೊರತಾಗಿ ಬೇರೆ ಯಾವುದೂ ನಷ್ಟ ಆಗದೆ ಅದರಲ್ಲಿ ಉಳಿಯುತ್ತದೆ.
 • ಸಾರಜನಕವು ಆಮೋನಿಯಾ ರೂಪಕ್ಕೆ ಪರಿವರ್ತನೆ ಆಗುವ ಹಂತಕ್ಕೆ  ಬಂದಿರುತ್ತದೆ.
 • ಸ್ಲರಿಯನ್ನು ಸ್ಥಾವರದಿಂದ ಹೊರ ಬಂದ ಸ್ಥಿತಿಯಲ್ಲೇ ಹೊಲಕ್ಕೆ ಹಾಕುವುದರಿಂದ ಸ್ಲರಿಯಲ್ಲಿರುವ ಎಲ್ಲಾ ಪೋಷಕಗಳೂ ನಷ್ಟವಾಗದೆ ಮಣ್ಣಿಗೆ  ದೊರೆಯುತ್ತದೆ.
 • ನೀರಿನ ಜೊತೆಗೆ ಮಿಶ್ರಣ ಮಾಡಿ( ಹೆಚ್ಚು ದ್ರವೀಕರಿಸಿ ಕೊಟ್ಟರೂ ಸಹ ಯಾವುದೇ ನಷ್ಟ ಉಂಟಾಗುವುದಿಲ್ಲ.
 • ಇದನ್ನು ತೇವಾಂಶ ಆರುವಂತೆ  ನೆಲದಲ್ಲಿ ಹರಿಯಲು ಬಿಟ್ಟು ಒಣಗಿದ ನಂತರ ಅದನ್ನು ಹೊಲಕ್ಕೆ ಹಾಕಿದಾಗ ಸಾರಜನಕ ಅಂಶ  ಬಹಳಷ್ಟು ನಷ್ಟವಾಗುತ್ತದೆ.
 • ನೆಲದಲ್ಲಿ ದಪ್ಪಕ್ಕೆ ಬಿಟ್ಟು ಅದು ಅಲ್ಲಿ  ಒಣಗುತ್ತಾ 2 ದಿನ ಉಳಿದರೆ  ಅದರಲ್ಲಿ 20-25 % ಸಾರಜನಕ ನಷ್ಟವಾಗುತ್ತದೆ.
 • ಸ್ಲರಿ ದ್ರಾವಣವನ್ನು ಟಾಂಕಿಗೆ  ಹಾಕಿ 15-30 ದಿನಗಳ ಕಾಲ ಇಟ್ಟು ಬಳಸಿದರೆ ಸಾರಜನಕ  ಆವಿಯಾಗಿ ಅಧಿಕ  ನಷ್ಟವಾಗುತ್ತದೆ.

ಸಾಧ್ಯವಾದಷ್ಟು ಬಗ್ಗಡವನ್ನು ಬೇಗ ಬೇಗ ಬಳಕೆ  ಮಾಡುವುದು, ನೀರಿನ ಜೊತೆಗೆ ಹೆಚ್ಚು ದ್ರವೀಕರಿಸಿ ಕೊಡುವುದು ಉತ್ತಮ.
ಸಗಣಿಯ ಸತ್ವ ಮತ್ತು ಗೋಬರ್ ಸ್ಲರಿಯ ಸತ್ವ ಒಂದಕ್ಕೊಂದು ಪೂರಕ.
ಸಗಣಿಯಲ್ಲಿ ನಾವು ಹಸುಗಳಿಗೆ  ಕೊಡುವ ಆಹಾರದ  ಮತ್ತು ಅದು ತನ್ನ ಚಟುವಟಿಕೆಗೆ ಬಳಕೆ ಮಾಡಿ ಹೆಚ್ಚುವರಿಯಾದದ್ದು ಮಾತ್ರ ಇರುತ್ತದೆ.
ಸಗಣಿಯಲ್ಲಿ ಹೆಚ್ಚು ಇರುವುದು ಸಾರಜನಕ ಮಾತ್ರ. ಉಳಿದ ಪೋಷಕಗಳು ಅತೀ ಕನಿಷ್ಟ ಪ್ರಮಾಣದಲ್ಲಿರುತ್ತವೆ.(0.5 N, 0.2 P2O5 0.05 K2O) ಇದರಲ್ಲಿ ಸೂಕ್ಷ್ಮಾಣು ಜೀವಿಗಳಿಗೆ  ಬೇಕಾಗುವ ಶಕ್ತಿ  ಇರುತ್ತದೆ.

ಬರೇ ಸಗಣಿಯಲ್ಲಿ ಸತ್ವ ಹೆಚ್ಚು ಇದೆಯೇ:

 • ಇಲ್ಲ. ಅಂಥಹ ಸಾರಾಂಶಗಳ ವ್ಯತ್ಯಾಸ ಇಲ್ಲ.
 • ನೇರವಾಗಿ ಸಗಣಿಯನ್ನು ಬೆಳೆಗಳ ಬುಡಕ್ಕೆ ಹಾಕುವುದು ಅಷ್ಟು  ಉತ್ತಮ ವಿಧಾನವೂ ಅಲ್ಲ
 • ಇದರಲ್ಲಿ ತೇವಾಂಶ ಆರುವಾಗ ಸಾರಜನಕ ಅಂಶ ಆವಿಯಾಗಿ ಹೋಗುತ್ತದೆ.

ಬೆಳೆಗಳ ಬುಡಕ್ಕೆ ಸಗಣಿ ಅಥವಾ ಹೆಚ್ಚು ಸಗಣಿ ಉಳ್ಳ ಘನ ಗೊಬ್ಬರಗಳನ್ನು ಹಾಕಿದಾಗ ಅದರಲ್ಲಿ ಕುರುವಾಯಿ ಕೀಟ ಹಾಗೂ ಇನ್ನಿತರ ಕೊಳೆ ತಿನಿಗಳಲ್ಲಿ ಸಂತಾನಾಭಿವೃದ್ದಿಯಾಗುವ ಕೀಟಗಳು ಹೆಚ್ಚುತ್ತವೆ. 

 • ಸ್ಲರಿಯನ್ನು ಕಾಂಪೋಸ್ಟು ಗುಂಡಿಗೆ ಹಾಕಿ ಗೊಬ್ಬರ ಮಾಡುವುದರಿಂದ ಹೆಚ್ಚು ಪ್ರಯೋಜನ ಇಲ್ಲ .
 • ನೆಲಮಟ್ಟದಿಂದ ಮೇಲೆ  ಇರುವಂತೆ ಕಾಂಪೋಸ್ಟು ಮಾಡಿದರೆ ಸ್ವಲ್ಪವಾದರೂ ಪ್ರಯೋಜನ ಇದೆ. ನೇರವಾಗಿ ಬಳಕೆ ಮಾಡಿದಾಗ ಹೊಲದಲ್ಲಿ ಎರೆಹುಳು ಹೆಚ್ಚುತ್ತದೆ.

ಈ ದ್ರಾವಣಕ್ಕೆ ಸೂಕ್ಷ್ಮಾಣು ಜೀವಿಗಳನ್ನೂ ಸೇರಿಸಬಹುದು. ಬಂದಷ್ಟು ಇಳುವರಿ ಸಾಕು ಎಂದಿದ್ದರೆ ಬರೇ ಸ್ಲರಿ ನೀರಿನಲ್ಲಿ ಕೃಷಿ ಮಾಡಬಹುದು.

ಅಧಿಕ  ಇಳುವರಿಗೆ  ಬೇರೆ ಗೊಬ್ಬರ ಕೊಡಬೇಕು. ಸ್ಲರಿ ನೀರಿನ ಜೊತೆಗೆ ಪಾತ್ರೆ ಇತ್ಯಾದಿ ತೊಳೆದ ನೀರನ್ನೂ ಮಿಶ್ರಣ ಮಾಡಿ ಪಂಪಿನ ಮೂಲಕ ಹೊಲಕ್ಕೆ  ಕೊಡುವುದು ನೀರಿನ ಸದ್ಭಳಕೆಗೆ ಒಳ್ಳೆಯದು.

Leave a Reply

Your email address will not be published. Required fields are marked *

error: Content is protected !!