ಗೇರು ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ ಫೆಬ್ರವರಿ – ಮಾರ್ಚ್ ತನಕ ಸ್ವಲ್ಪ ಆರೈಕೆ ಮಾಡಿದರೆ ಮರವೊಂದರ ಸರಾಸರಿ 1000 ರೂ. ಗಳಷ್ಟು ಆದಾಯ ತಂದು ಕೊಡಬಲ್ಲ ನಿರಾಯಾಸದ ಬೆಳೆ. ಈ ಬೆಳೆ ಈಗ ಕರಾವಳಿಯಲ್ಲಿ ಸ್ಥಳ ಇಲ್ಲದೆ ಮಲೆನಾಡು, ಅರೆಮಲೆನಾಡು, ಬಯಲು ಸೀಮೆಯ ತನಕ ವಿಸ್ತಾರವಾಗಿದೆ. ಇದು ಈಗಿನ ಜ್ವಲಂತ ಸಮಸ್ಯೆಯಾದ ನೀರಿನ ಕೊರೆತೆಯನ್ನು ತಡೆದುಕೊಂಡು ಬೆಳೆಯಬಲ್ಲ ಬೆಳೆ. ಮಳೆ ಕಳೆದು ಚಳಿ ಬಂದಾಕ್ಷಣ ಗೇರು ಮರ ಚಿಗುರಿ ಹೂ ಮೊಗ್ಗು ಬಿಡಲು ಸಜ್ಜಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಚಿಗುರು ಸಂರಕ್ಷಣೆ ಮಾಡಿದರೆ ಬೆಳೆ ಚೆನ್ನಾಗಿ ಬರುತ್ತದೆ.
ಗೇರಿಗೆ ಈಗ ಕೀಟ ಸಮಸ್ಯೆ ಹೆಚ್ಚು:
- ಗೇರು ಮರದಲ್ಲಿ ಉತ್ತಮ ಮತ್ತು ಸಧೃಢ ಚಿಗುರು ಬಂದರೆ ಫಸಲು ಬಂಪರ್.
- ಇದು ಬಹುತೇಕ ಜನ ರೈತರಿಗೆ ಗೊತ್ತೇ ಇಲ್ಲ.
- ಗೇರು ಮರ ಹೂವಾದ ನಂತರ ಹೂವಿನ ಸಂರಕ್ಷಣೆ ಮಾಡುವುದಕ್ಕಿಂತಲೂ ಅತೀ ಅಗತ್ಯವಾದುದು, ಚಿಗುರು ಬರುವ ಸಮಯದಲ್ಲಿ ಮಾಡುವ ಆರೈಕೆ.
- ಈಗ ಚಿಗುರನ್ನು ಉಳಿಸಬೇಕು. ಬರುವ ಚಿಗುರು ಮೊಗ್ಗು ಯಾವುದೇ ತೊಂದರೆ ಇಲ್ಲದೆ ಬೆಳೆಯಬೇಕು.
- ಇದಕ್ಕೆ ಕೀಟ ನಾಶಕ ಮತ್ತು ಪೋಷಕಾಂಶದ ಬಳಕೆ ಮಾಡಬೇಕು.

ಬೇಗ ಹೂ ಬಿಟ್ಟು ಕಾಯಿಯಾಗುವ ತಳಿಗಳು ನವೆಂಬರ್ ತಿಂಗಳಿಗೇ ಚಿಗುರಲು ಪ್ರಾರಂಭವಾಗುತ್ತದೆ. ಸ್ವಲ್ಪ ತಡ ಹೂ ಬಿಡುವ ತಳಿಗಳು ಡಿಸೆಂಬರ್ ತಿಂಗಳಿಂದ ಜನವರಿ ತನಕವೂ ಚಿಗುರಲಾರಂಭಿಸುತ್ತದೆ. ಚಿಗುರು ಬರುವ ಮುಂಚೆ ಮರ ತನ್ನೆಲ್ಲಾ ಎಲೆಗಳನ್ನು ಊದುರಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಪ್ರತೀ ಗೆಲ್ಲಿನ ತುದಿಯಲ್ಲೂ ಹೊಸ ಚಿಗುರಿನ ಮೊಗ್ಗು ಇರುತ್ತದೆ.
- ಮಳೆಗಾಲ ಕಳೆದು ಚಳಿಗಾಲ ಬರುವ ಸಮಯದಲ್ಲಿ ಕೀಟಗಳು ಹೆಚ್ಚು. ಅವುಗಳ ಸಂಖ್ಯಾಭಿವೃದ್ದಿ ಸಹ ಈ ಸಮಯದಲ್ಲಿ ಅಧಿಕ.
- ಮಳೆಗಾಲದಲ್ಲಿ ಹಾನಿಮಾಡಿ ಕೊನೆಗೆ ಪ್ಯೂಪೆ ಹಂತ ಮುಗಿಸಿ, ಮತ್ತೆ ಪತಂಗಗಳಾಗುವ ಸಮಯ ಇದು.
- ಅವು ಮತ್ತೆ ತಮ್ಮ ಸಂತಾನಾಭಿವೃದ್ದಿಗೆ ಆಸರೆ ಹುಡುಕುತ್ತಿರುತ್ತವೆ.
- ಗೇರು ಮರದ ಚಿಗುರು ಮತ್ತು ಹೂವಿಗೆ ತೊಂದರೆ ಮಾಡುವ ಟಿ ಸೊಲ್ಳೆ ಸಹ ಈ ಸಮಯದಲ್ಲಿ ಸಂತಾನಾಭಿವೃದ್ದಿಯಾಗುವುದು ಜಾಸ್ತಿ.
- ಇದು ಸಂತಾನಾಭಿವೃದ್ದಿಯಾದಷ್ಟು ಬೆಳೆಗಳಿಗೆ ಹಾನಿ ಹೆಚ್ಚಾಗುತ್ತದೆ.
- ಕಾಲ ಮಾನ ಸಹಜವಾಗಿ ಸಂಖ್ಯಾಭಿವೃದ್ದಿಯಾಗುವ ಟಿ ಸೊಳ್ಳೆಗೆ ತಕ್ಷಣದಲ್ಲಿ ಸಿಗುವ ಆಹಾರ ಚಿಗುರು ಮೊಗ್ಗು.
- ಆದ ಕಾರಣ ಚಿಗುರು ಮೊಗ್ಗು ಬರುವ ಸಮಯದಲ್ಲಿ ಟಿ ಸೊಳ್ಳೆ ತೊಂದರೆ ಮಾಡುವುದು ನಿಶ್ಚಿತ .
- ಬೆಳೆಗಾರರು ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲೇ ಬೇಕು.
ಮಳೆಗಾಲದ ಅವಧಿಯಲ್ಲಿ ಚಟುವಟಿಕೆಯಲ್ಲಿದ್ದ ಹೇನುಗಳು ಚಳಿಗಾಲದಲ್ಲಿ ಮೊದಲಾಗಿ ಚಿಗುರುವ ಗೇರಿನ ಎಲೆಗಳು ಮೊಗ್ಗಿಗೆ ಬಾಧಿಸುತ್ತವೆ. ಇದು ನಂತರ ಹೂವು ಮತ್ತು ಮಿಡಿ ತನಕವೂ ಮುಂದುವರಿದು ಬೆಳೆ ನಷ್ಟವನ್ನು ಉಂಟು ಮಾಡುತ್ತದೆ.
ಈಗ ಮಾಡಬೇಕಾದ ಕೆಲಸ :

- ಚಿಗುರು ಮೊಗ್ಗು ಮೂಡುವ ಸಮಯದಲ್ಲಿ ಒಂದು ಬಾರಿ ತಪ್ಪದೆ ಗೇರು ಮರಕ್ಕೆ ಕೀಟನಾಶಕ ಸಿಂಪರಣೆ ಮಾಡಬೇಕು.
- ಇದು ಕೀಟಗಳು ಚಿಗುರು ಮೊಗ್ಗಿಗೆ ತೊಂದರೆ ಮಾಡದಂತೆ ರಕ್ಷಣೆ ಒದಗಿಸುತ್ತದೆ.
- ಈಗ ಸಿಂಪರಣೆ ಮಾಡಿದರೆ ಗರಿಷ್ಟ ಪ್ರಮಾಣದಲ್ಲಿ ಚಿಗುರುಗಳು ಉಳಿಯುತ್ತದೆ.
- ಚಿಗುರಿನ ಬೆಳವಣಿಗೆಗೆ ಯಾವ ಅಡ್ಡಿಯೂ ಇಲ್ಲವಾದರೆ ಅದು ಹೆಚ್ಚು ಉದ್ದವಾಗಿ ಬೆಳೆಯುತ್ತದೆ.
- ಉದ್ದ ಬೆಳೆದಷ್ಟು ಹೂ ಗೊಂಚಲು ಸಹ ಉದ್ದವಾಗಿರುತ್ತದೆ.
- ಚಿಗುರು ಬರುವ ಈ ಸಮಯದಲ್ಲಿ ಕ್ವಿನಾಲ್ ಫೋಸ್ ಕೀಟನಾಶಕವನ್ನು 2.5 ಮಿಲಿ /1 ಲೀ. ನೀರು ಪ್ರಮಾಣದಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
- ಗಾಳಿ ಬೀಸುವ ದಿಕ್ಕನ್ನು ನೋಡಿ ಮೈಕೈಗೆ ಬೀಳದಂತೆ ಸಿಂಪರಣೆ ಮಾಡಬೇಕು.
- ಸಾವಯವ ಕೀಟ ನಾಶಕ ಲಭ್ಯವಿದ್ದರೆ ಅದನ್ನೇ ಬಳಕೆ ಮಾಡಬಹುದು.

ಬರೇ ಕೀಟನಾಶಕ ಒಂದೇ ಅಲ್ಲ. ಗೇರು ಬೆಳೆಗೆ ಅಧಿಕ ಫಸಲಿಗೆ ಪೋಷಕಾಂಶದ ತೃಷೆಯೂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದನ್ನು ಚಿಗುರುವ ಸಮಯದಲ್ಲಿ ಸಸ್ಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ಒದಗಿಸಿದರೂ ಅದರ ಫಲಿತಾಂಶ ಹೆಚ್ಚು ಇರುತ್ತದೆ.

- ಕೀಟನಾಶಕದ ಜೊತೆಗೆ ಪ್ರತೀ 100 ಲೀ. ನೀರಿಗೆ 1 ಕಿಲೋ ಯೂರಿಯ ಅಥವಾ 1 ಕಿಲೋ 19:19:19 ರಸ ಗೊಬ್ಬರವನ್ನು ಸೇರಿಸಿ ಸಿಂಪಡಿಸುವುದರಿಂದ ಚಿಗುರು ದೊಡ್ದದಾಗಿ ಬರುತ್ತದೆ.
- ಹೂವಿನಲ್ಲಿ ಹೆಣ್ಣು ಹೂವುಗಳು ಹೆಚ್ಚುತ್ತವೆ. ಇಳುವರಿ ಜಾಸ್ತಿಯಾಗುತ್ತದೆ.
- ಈಗ ಕೀಟಗಳನ್ನು ನಿಯಂತ್ರಿಸಿದರೆ ಮುಂದೆ ಹೂವು ಬರುವ ಸಮಯದಲ್ಲಿ ಕೀಟಗಳು ತುಂಬಾ ಕಡಿಮೆಯಾಗುತ್ತದೆ.
- ಮುಂದಿನ ಕೆಲಸ ಸುಲಭವಾಗಲು ಈಗ ಕೆಲಸ ಮಾಡಬೇಕು.
ಗೋಡಂಬಿ ಬೆಳೆಯಲ್ಲಿ ಬಹುತೇಕ ಬೆಳೆಗಾರರು ನಿರ್ಲಕ್ಷ್ಯವೇ ಮಾಡುವುದು. ಸರಿಯಾಗಿ ಸಸ್ಯ ಸಂರಕ್ಷಣೆ ಮಾಡದಿದ್ದರೆ ಈ ಬೆಳೆಯಲ್ಲಿ ಖಂಡಿತವಾಗಿಯೂ ಲಾಭವಿಲ್ಲ. ಆದ ಕಾರಣ ಬೆಳೆಗಾರರು ಸಾಧ್ಯವಾದಷ್ಟು ಬೆಳೆ ಸಂರಕ್ಷಣೆ ಮಾಡಲೇ ಬೇಕಾಗುತ್ತದೆ. ಅದು ಈಗ ಮಾಡಿದರೆ ಮುಂದಿನ ಸಿಂಪರಣೆ ಕಡಿಮೆ ಮಾಡಬಹುದು. ಹೂವಿಗೆ ಸಿಂಪರಣೆ ಮಾಡುವುದಕ್ಕಿಂತ ಮುಖ್ಯವಾದುದು ಚಿಗುರಿಗೆ ಸಿಂಪರಣೆ ಮಾಡುವುದಾಗಿರುತ್ತದೆ.