ಅಡಿಕೆ ಧಾರಣೆ ಕುಸಿಯುತ್ತಿದೆ – ಏನು ಕಾರಣ ಇರಬಹುದು? ಯಾವಾಗ ಏರಬಹುದು?

ಕಳೆದ ಒಂದು ತಿಂಗಳಿಂದ ಕೆಂಪಡಿಕೆ ಧಾರಣೆ ಶೇ.40 ರಷ್ಟು ಕಡಿಮೆಯಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಹಸಿ ಅಡಿಕೆ ಕ್ವಿಂಟಾಲಿಗೆ 7200 ತನಕ ಇದ್ದುದು, ಇಳಿಕೆಯಾಗುತ್ತಾ ಸಪ್ಟೆಂಬರ್ ಕೊನೆಗೆ 6600 ಕ್ಕೆ ಕುಸಿಯಿತು. ಹಾಗೆಯೇ ಕಡಿಮೆಯಾಗುತ್ತಾ  ಈಗ 5200-5000 ಕ್ಕೆ ಇಳಿದಿದೆ.ವರ್ತಮಾನ ಪರಿಸ್ಥಿತಿಯಲ್ಲಿ ಇನ್ನೂ ಇಳಿಕೆಯ ಸಾದ್ಯತೆಗಳು ಕಾಣಿಸುತ್ತಿದೆ. ಹಾಗೆಯೇ ಧಾರಣೆ 55,000 ಕ್ಕೆ ಏರಿದ್ದು, ಈಗ ಸರಾಸರಿ-40,000 ದ ಸಮೀಪಕ್ಕೆ ಬಂದಿದೆ. ಎಲ್ಲಾ ಅಡಿಕೆ ಬೆಳೆಗಾರರ ಕುತೂಹಲ ಧಾರಣೆ ಯಾವಾಗ ಏರಬಹುದು ಎಂಬುದು ಒಂದೇ.
ಅಡಿಕೆ ಚೇಣಿ ವಹಿಸಿಕೊಳ್ಳುವವರು ನೂರಾರು ಜನ ಇದ್ದಾರೆ. ಇವರೆಲ್ಲಾ ಈಗ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ಗುತ್ತಿಗೆ ವಹಿಸಿಕೊಂಡವರ ಪಾಡಂತೂ ಹೇಳತೀರದಾಗಿದೆ.ತೋಟದ ಮಾಲಿಕರಿಗೆ ಹಣ ಕೊಡಬೇಕು. ವಹಿಸಿಕೊಂಡ ಬೆಲೆ ಮತ್ತು ಈಗ ಇರುವ ಬೆಲೆ ನೋಡಿದರೆ ನಷ್ಟ ಬಹಳ ಆಗುತ್ತದೆ. ಇನ್ನೆಷ್ಟು ದಿನ ಕಾಯಬೇಕೋ ತೋಚದಾಗಿದೆ ಎನ್ನುತ್ತಿದ್ದಾರೆ. ಅಡಿಕೆ ಮಾರುವಂತಿಲ್ಲ. ತೋಟದವರಿಗೆ ಮುಖ ತೋರಿಸುವಂತಿಲ್ಲ. ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಯಾವ ಕಾರಣ ಎಂಬುದು ಯಾರಿಗೂ ಗೊತ್ತಿಲ್ಲ. ತೋರಿಕೆಗೆ ಗುಜರಾತ್ ಚುನಾವಣೆ ಕಾರಣ ಹವಾಲಾ ಹಣ ಬಾರದೆ ಹೀಗಾಗುತ್ತಿದೆ ಎನ್ನಲಾಗುತ್ತಿದೆ.ಇದೂ ಪೂರ್ತಿ ನಂಬತಕ್ಕ ವಿಚಾರ ಅಲ್ಲ. ಗುಜರಾತ್ ಚುನಾವಣೆ ಅಥವಾ ಬೇರೆ ರಾಜ್ಯದ ಚುನಾವಣೆ  ಆಗುವುದು ಅಚಾನಕ್ ಅಲ್ಲ. ಅದು ನಿಗದಿತ ಸಮಯಕ್ಕೆ ಸರಿಯಾಗಿ ಆಗುತ್ತದೆ. ಅದಕ್ಕೆ ಬೇಕಾದಂತೆ ಮುಂಚಿತವಾಗಿಯೇ ಸಿದ್ದತೆಗಳನ್ನು ವ್ಯಾಪಾರಿಗಳು ಮಾಡಿಕೊಂಡಿರುತ್ತಾರೆ. 
ಅತ್ತ ಸ್ಥಳೀಯ ವರ್ತಕರು ಉತ್ತರ ಭಾರತದ ವ್ಯಾಪಾರಿಗಳ ಜೊತೆಗೆ ಮಾಡಿಕೊಂಡ ಸರಬರಾಜು ಒಪ್ಪಂದಗಳೂ ರದ್ದಾಗಿದೆ. ಅಡಿಕೆ ಕಳಿಸಬೇಡಿ. ಸದ್ಯ ಬೇಡಿಕೆ ಇಲ್ಲ ಎಂಬ ಸಂದೇಶ ಸ್ಥಳೀಯ ವ್ಯಾಪಾರಿಗಳಿಗೆ ಬಂದಿದೆ ಎಂಬ ಸುದ್ದಿ. ಹಾಗಾಗಿ ದರ ಪಟ್ಟಿಯಲ್ಲಿ 41,000 ಗರಿಷ್ಟ ದರ ಎಂದು ಇದ್ದರೂ ಸಹ ಖರೀದಿ 38,000-37,000 ದಲ್ಲೇ ನಡೆಯುತ್ತಿದೆ.
ಆಡಿಕೆ, ಕೊಬ್ಬರಿ ಹೀಗೆ ಬಹಳಷ್ಟು ಕೃಷಿ ಉತ್ಪನ್ನಗಳು ಸಟ್ಟಾ ವ್ಯವವಹಾರವಾಗಿಯೇ (Speculative trade) ನಡೆಯುವುದು. ಸಟ್ಟಾ ವ್ಯಾಪಾರ ಮಾಡದಿದ್ದರೆ ವ್ಯಾಪಾರಿಗಳಿಗಳಿಗೂ ಹೆಚ್ಚು ಲಾಭ ಸಿಗುವುದಿಲ್ಲ. ಒಂದು ದೃಷ್ಟಿಯಲ್ಲಿ ಈ ವ್ಯಾಪಾರ ಬೆಳೆಗಾರರಿಗೆ ಲಾಭದಾಯಕ. ಹಾಗೆಯೇ ಭಾರೀ ನಷ್ಟದ್ದೂ ಸಹ. ಬೆಲೆ ಒಮ್ಮೆ ಏರುತ್ತದೆ, ಮತ್ತೊಮ್ಮೆ ಇಳಿಯುತ್ತದೆ. ಇಲ್ಲಿ ಅನುಕೂಲ ಹೇಗೆಂದರೆ ಏರಿಕೆ ಆಗುವಾಗ ಅದೃಷ್ಟ ವಷಾತ್ ಮಾರಾಟಕ್ಕೆ ಮಾಲು ಉಳಿದಿದ್ದರೆ ಆ ಸಮಯದಲ್ಲಿ  ಮಾಡುವ ಮನಸ್ಸು ಬಂದರೆ ಅದು ಲಾಭದಾಯಕ.  ಅನನುಕೂಲ ಏನೆಂದರೆ ಬೆಲೆ ಏರಿಕೆಯ ತುದಿ ಯಾವುದು ಎಂದು ತಿಳಿಯದೆ ಹೆಚ್ಚಿನ ಬೆಲೆ ಬರಬೇಕು ಎಂದು ಕಾಯುತ್ತಾ ಮಾರಾಟ ಮುಂದೂಡುವವರಿಗೆ ನಷ್ಟ. ಪ್ರತೀಯೊಬ್ಬನ ಮನೋಸ್ಥಿತಿಯೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕು ಎಂಬ ಹಂಬಲ. ಹಾಗಾಗಿ ಏರಿಕೆ ಪ್ರಾರಂಭವಾಗುವಾಗ ಮಾರಾಟ ಮುಂದೂಡಿಯೇ ತೀರುತ್ತಾರೆ!

ಯಾಕೆ ದರ ಇಳಿಕೆಯಾಗಿದೆ?

ಯಾಕೆ ದರ ಇಳಿಕೆಯಾಗಿದೆ
ಸಾಮಾನ್ಯವಾಗಿ ಸೆಂಟಿಮೆಂಟ್ ಮೇಲೆ ದರ ಕುಸಿತವಾಗುವುದು ವಾಡಿಕೆ. ಶೇರು ಮಾರುಕಟ್ಟೆ ಕುಸಿತವಾಗಬೇಕಾದರೆ  ಏನಾದರೂ ಸುದ್ದಿಗಳು ಹರಿದಾದಬೇಕು. ನೆರೆ ದೇಶಗಳ ಜೊತೆ ಸಂಬಂಧ ಹಳಸುವಿಕೆ, ಯುದ್ದ, ಬ್ಯಾಂಕುಗಳ ಸಾಲ ವಾಸೂಲಾತಿ ಹಿನ್ನಡೆ,ಕಚ್ಚಾ ವಸ್ತುಗಳ ಪೂರೈಕೆ ಕುಸಿತ, ಮೋಸ, ವಂಚನೆ ಇತ್ಯಾದಿ ಸುದ್ದಿಗಳ ಮೇಲೆ ಶೇರು ಮಾರುಕಟ್ಟೆ ಕುಸಿತವಾಗುವುದು ನಮಗೆಲ್ಲಾ ಗೊತ್ತಿರುವ ವಿಚಾರ. ಆ ತನಕ ಅಡಿಕೆ ಮಾರುಕಟ್ಟೆ ಕುಸಿತ ಆಗಲೂ ಇಂತದ್ದೇ ಕಾರಣಗಳು ನೆರವಾಗುತ್ತಿದ್ದವು. ಗುಟ್ಕಾ ನಿಶೇಧ, ಅಡಿಕೆ ಬ್ಯಾನ್ ಆಡಿಕೆ ಆಮದು, ಇತ್ಯಾದಿಗಳು ಕುಸಿತಕ್ಕೆ ಕಾರಣ ಆಗುತ್ತಿದ್ದವು. ಈಗ ಕುಸಿತವಾದುದಕ್ಕೆ ಇಂತಹ ಯಾವ ಸುದ್ದಿಗಳೂ ಬೆಂಬಲ ನೀಡಿಲ್ಲ. ಆದರೂ ಕುಸಿತವಾಗಿದೆ. 
ಒಂದನೆಯದಾಗಿ ಗಡಿ ಭಾಗದಲ್ಲಿ ಸದ್ದಿಲ್ಲದೆ ಆಮದು ನಡೆಯುತ್ತಿರಬೇಕು. ಇನ್ನೇನು  ಒಂದು ವರ್ಷದಲ್ಲಿ ಚುನಾವಣೆಯೂ ಬರಲಿಕ್ಕಿದೆ. ರಾಜಕೀಯ ಪಕ್ಷಗಳಿಗೆ ಹಣದ ಅವಶ್ಯಕತೆ ಇದೆ. ಬೆಳೆಗಾರರಿಂದ ರಾಜಕೀಯ ಪಕ್ಷಗಳಿಗೆ ಚುನಾವಣಾ ಖರ್ಚಿಗೆ ಹಣ ಸಂಗ್ರಹ ಆಗುವುದಿಲ್ಲ. ಆಗುವುದಿದ್ದರೆ ದೊಡ್ಡ ದೊಡ್ಡ ವ್ಯಾಪಾರರಸ್ಥರು, ಉದ್ದಿಮೆದಾರರಿಂದ ಮಾತ್ರ. ಅವರಿಗೆ ಅನುಕೂಲ ಮಾಡಿಕೊಟ್ಟರೆ ಅವರು ಅದಕ್ಕೆ  ಪ್ರತಿಫಲ  ಕೊಡಬಲ್ಲರು. ಹಾಗಾಗಿ ಆಮದು ಮಾಡಲು ಸದ್ದಿಲ್ಲದೆ ಗಡಿ ಸಡಿಲಿಕೆ ಮಾಡಿರುವ ಸಾಧ್ಯತೆ ಇದೆ.
ಎರಡನೆಯದಾಗಿ ವ್ಯಾಪಾರಕ್ಕೆ ಇಳಿದವರು ಭಾರೀ ಮೊತ್ತದ ಹಣ ಹೂಡಿಕೆ ಮಾಡಿ ಮಾರುಕಟ್ಟೆಯಲ್ಲಿ  ಈ ಪರಿಸ್ಥಿತಿ  ತರುವ ಸಾಧ್ಯತೆಯೂ ಇದೆ. ವ್ಯಾಪಾರ ಎಂದರೆ ಹಾಗೆಯೇ. ಏನಾದರೂ ಗೇಮ್ ಆಡಿ, ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ನಡೆಯುತ್ತಿದ್ದರೆ ಅದು ಲಾಭದಾಯಕ.
ಯಾವುದೇ ಬಂಡವಾಳ ಇಲ್ಲದೆ ದರ ಏರಿಕೆ- ಇಳಿಕೆ ಮಾಡಲೂ ಬಹುದು. ಅದು ಹೇಗೆಂದರೆ ಸ್ಥಳೀಯ ವ್ಯಾಪಾರಿಗಳಿಂದ ಖರೀದಿ ಒಪ್ಪಂದ ಮಾಡಿಕೊಂಡು ಅದನ್ನು ರದ್ದು ಮಾಡುವುದು ಅಥವಾ ಮುಂದೂಡುವುದು. ಆಗ ಸ್ಥಳೀಯ ಖರೀದಿದಾರ ಹಣ ಇಲ್ಲದೆ ಪರದಾಡುವ ಸ್ಥಿತಿ ಉಂಟಾಗುತ್ತದೆ. ಅವನು ಸೋಲುವ ತನಕ ಮುಖ್ಯ  ಖರೀದಿದಾರ ಅಡಿಕೆ ಖರೀದಿ ಮಾಡದಿದ್ದರೆ,  ದರ ಬಾರೀ ಬೀಳುತ್ತದೆ. ಎಷ್ಟೇ ದರವಾದರೂ ಮಾರಾಟದ ಅನಿವಾರ್ಯತೆ ಸ್ಥಳೀಯ ವ್ಯಾಪಾರಿಗಳಿಗೆ ಬರುತ್ತದೆ. ಆಗ ಕೆಲವೇ ಸಮಯದ ಬಂಡವಾಳದೊಂದಿಗೆ ಅಥವಾ ಕೈಯಿಂದ ಕೈಗೆ ವರ್ಗಾವಣೆ ಮೂಲಕ ಬಂಡವಾಳ ಇಲ್ಲದೆಯೂ ವ್ಯಾಪಾರ ಮಾಡುವವರು ಇರುತ್ತಾರೆ. ಬಹುಷಃ ಈಗ ಅಡಿಕೆ ಮಾರುಕಟ್ಟೆಯಲ್ಲಿ ಇದು ನಡೆದಿರುವ ಸಾಧ್ಯತೆ ಇರಬಹುದು.
 ಜಗತ್ತಿನಾದ್ಯಂತ ಸಟ್ಟಾ ವ್ಯಾಪಾರ ಎಂಬುದು ನಡೆಯುವಂತದ್ದೇ.  ಹಾಗಾಗಿ ನಮ್ಮ ದೇಶಕ್ಕೆ  ಹೊಸತಲ್ಲ. ಹೆಚ್ಚಿನ ಬೆಲೆಯಲ್ಲೂ ಖರೀದಿಸಿ, ಕಡಿಮೆ ಬೆಲೆಗೂ ಖರೀದಿಸಿ, ಸರಾಸರಿ  ಮಾಡಿ ಲಾಭವಾಗುವಂತೆ ಮಾರಾಟ ಮಾಡುವುದೇ ವ್ಯಾಪಾರೀ ತಂತ್ರ. ಅದನ್ನು ಯಾವಾಗ ಬೇಕಾದರೂ ಮಾಡಬಹುದು. ದೊಡ್ಡ ದೊಡ್ಡ ವ್ಯಾಪಾರಿಗಳು ಆಗಾಗ ಒಂದೊಂದು ಕಮೋಡಿಟಿಗಳಲ್ಲಿ ಇಂತಹ ಆಟವನ್ನು ಆಡುತ್ತಲೇ ಇರುತ್ತಾರೆ.

ಯಾವಾಗ ದರ ಏರಬಹುದು?

ಕೆಂಪಡಿಕೆ ದರ ಇಳಿಕೆ
ಅಡಿಕೆ ವ್ಯಾಪಾರದಲ್ಲಿ ಸ್ಥಳಿಯ ವ್ಯಾಪಾರಿಗಳು ಬೆಳೆಗಾರರ ಎದುರಿರಿರುವ ವ್ಯಾಪಾರಿಗಳು.ಆದರೆ ಮುಖ್ಯ  ಖರೀದಿದಾರರು ಬೇರೆಯೇ ಇರುತ್ತಾರೆ. ಇವರನ್ನು ಉತ್ತರ ಭಾರತದ ಖರೀದಿದಾರರು ಎನ್ನುತ್ತಾರೆ. ಸ್ಥಳೀಯ ವ್ಯಾಪಾರಿಗಳು  ಬರೇ ಕಮಿಶನ್ ಏಜೆಂಟರು ಅಷ್ಟೇ. ಉತ್ತರ ಭಾರತದ ಖರೀದಿದಾರರಿಂದ ಹಣ ಬರುತ್ತಿದ್ದರೆ, ಇವರು ಒಳ್ಳೆ ದರಕ್ಕೆ ಖರೀದಿ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಉತ್ತರ ಭಾರತದವರು ಅಡಿಕೆ ಬೇಕು ಬೇಕು ಎಂದು ಹೇಳುತ್ತಾರೆ. ಆಗ ಸ್ಥಳೀಯ ವ್ಯಾಪಾರಿಗಳು ಬೇಡಿಕೆ ಇದೆ ಎಂದು ಸ್ವಲ್ಪ ಸ್ವಲ್ಪ ಕಳಿಸುತ್ತಾರೆ.  ಕೆಲವೊಮ್ಮೆ ಅಡಿಕೆ ಕಳಿಸಬೇಡಿ. ಬೇಡಿಕೆ ಇಲ್ಲ ಎಂತಲೂ ಹೇಳುತ್ತಾರೆ. ಆಗ ಸ್ಥಳೀಯ ವ್ಯಾಪಾರಿಗಳು ಒತ್ತಾಯದಲ್ಲಿ ಮತ್ತೆ ಹಣ ಕೊಡಿ ಎಂದು ಸಹ ಮಾಲು ಕಳಿಸಬೇಕಾಗುತ್ತದೆ. ಹಣ ಬಾರದೆ ಇದ್ದರೆ ಆಗ ದರ ಇಳಿಸಲೇಬೇಕಾಗುತ್ತದೆ.
ದರ ಏರಿಕೆ ಆಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎಂಬುದನ್ನು  ಲೆಕ್ಕಾಚಾರ ಹಾಕುವುದು ಬಹಳ ಕಷ್ಟ. ಇಳಿಕೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದ್ದರೆ  ಹಿಂದೆ ಏರಿಕೆ ಆದ ಪ್ರಮಾಣಕ್ಕೆ ಮತ್ತೆ ಏರಿಕೆ ಆಗುವ ಸಾದ್ಯತೆ ಇದೆ. ಬೆಳೆಗಾರರು ಇನ್ನೂ ದರ ಏರುವುದೇ ಇಲ್ಲ ಎಂಬ ಮಟ್ಟಕ್ಕೆ ದರ ಇಳಿಕೆ ಆಗಿ ಎಲ್ಲಾ ಮಾರಾಟ ಮಾಡುವ ಮನಸ್ಸು ಮಾಡಿದಾಗ ದರ ಮತ್ತೆ ಚೇತರಿಸಿಕೊಳ್ಳುತ್ತದೆ. ಸುಮಾರು 50% ದಷ್ಟು ಸರಾಸರಿ ಇಳಿಕೆ ಆದರೆ ಅದು ಮತ್ತೆ 2-3 ತಿಂಗಳ ನಂತರ ಮತ್ತೆ ಅಷ್ಟೇ  ಏರಿಕೆ ಆಗಬಹುದು. ತುಂಬಾ ನಿಧಾನವಾಗಿ 1-2-3 % ಈ ರೀತಿಯಲ್ಲಿ ಇಳಿಕೆಯಾದರೆ ಅದು ಮತ್ತೆ ಹಿಂದಿನ ಮಟ್ಟಕ್ಕೆ ಬೇಗ ಏರಿಕೆ ಆಗುತ್ತದೆ ಎಂದರ್ಥ. ಇದರ ಪ್ರಕಾರ ಚಾಲಿ ಅಡಿಕೆ ದರ ಮತ್ತೆ ಕೆಲವು ಸಮಯದಲ್ಲಿ ಹಿಂದಿನ ಸ್ಥಿತಿಗೆ ಏರಿಕೆ ಆಗುವ ಸಾಧ್ಯತೆ ಇದೆ.
ಕೆಂಪಡಿಕೆ ದರ ಇಳಿಕೆ ಗತಿ ನೋಡಿದಾಗ ದರ  ಬೇಗ ಹಿಂದಿನ ಮಟ್ಟಕ್ಕೆ ಏರಿಕೆ ಆಗುವ ಸಾಧ್ಯತೆ ಕಾಣಿಸುತ್ತಿಲ್ಲ. ಸ್ಥಳೀಯ ವ್ಯಾಪಾರಿಗಳು ಸೋತು ಹೋದಾಗ ಅತೀ ಕಡಿಮೆ ಬೆಲೆಗೆ ಖರೀದಿ ನಡೆದು ಬಹುತೇಕ ಮಾಲು ಅವರ ಕೈಗೆ ಬಂದ ನಂತರ ದರ ಏರಿಕೆಯಾಗುತ್ತದೆ. ಈ ಸಮಯ ಎರಡು ಮೂರು ತಿಂಗಳಲ್ಲಿ  ಬರಬಹುದು ಎನ್ನಿಸುತ್ತದೆ.

ಬೆಳೆಗಾರರು ಯಾವ ರೀತಿ ಮಾರಾಟ ಮಾಡಬೇಕು?

ದರ ಕುಸಿತವಾಗುತ್ತಿದೆ ಎಂದು ಯಾವ ಬೆಳೆಗಾರರೂ ಹತಾಷೆಯಲ್ಲಿ  ಮಾರಾಟ ಮಾಡಬಾರದು. ಬೆಲೆ ಕುಸಿತ ಎಂಬುದು ಮತ್ತೆ ಏರಿಕೆ ಆಗುವ ಮುನ್ಸೂಚನೆ. ಹಾಗಾಗಿ ನಿರಾಶೆ ಆಗಬೇಕಾಗಿಲ್ಲ. ದರ ಎಷ್ಟು ಏರಿಕೆ ಆಗಬಹುದು ಎಂಬುದು ಮಾತ್ರ ಯಾರಿಂದಲೂ ಅಂದಾಜು ಮಾಡುವುದು ಅಸಾಧ್ಯ. ಏರಿಕೆ ಪ್ರಾರಂಭವಾಗುವಾಗ ದಿನದಿಂದ ದಿನಕ್ಕೆ ಕ್ವಿಂಟಾಲಿಗೆ  500-1000  ರೂ. ನಂತೆ ಏರಿಕೆ ಆಗಲಾರಂಭಿಸುತ್ತದೆ. ಈ ಸಮಯದಲ್ಲಿ ಬೆಳೆಗಾರರು ಇನ್ನೂ ಏರಲಿ ಎಂದು ಕಾಯುವುದಲ್ಲ.  ತಮ್ಮಲ್ಲಿರುವ ಉತ್ಪನ್ನವನ್ನು ಸ್ವಲ್ಪ ಸ್ವಲ್ಪವೇ ಈ ದರಗಳಲ್ಲಿ ಮಾರಾಟ  ಮಾಡುತ್ತಾ ಇರಬೇಕು. ಯಾವಾಗಲೂ ಪೂರ್ತಿಯಾಗಿ ಎಲ್ಲವನ್ನೂ ಮಾರಾಟ ಮಾಡಬಾರದು. ಮುಂದಿನ ಬೆಳೆ ಬರುವ ತನಕ ಹಿಂದಿನ ಬೆಳೆಯನ್ನು ಸ್ವಲ್ಪವಾದರೂ ಉಳಿಸಿಕೊಳ್ಳಬೇಕು. ಈ ಸಮಯದಲ್ಲಿ ಏರಿಕೆಯಾಗುವ ಬೆಲೆಯಲ್ಲಿ ಮಾಲನ್ನು ಮಾರಾಟ ಮಾಡುತ್ತಾ ಇರಬೇಕು.ಯಾವ ಬೆಳೆಗಾರನಿಗೂ ಗರಿಷ್ಟ ಬೆಲೆ ಸಿಗುವುದಿಲ್ಲ. ಎಲ್ಲಾ ವ್ಯಾಪಾರಿಗಳಿಗೂ ಭಾರೀ ಲಾಭ ಆಗುವುದಿಲ್ಲ. ಬೆಳೆಗಾರರು ಸರಾಸರಿ ಉತ್ತಮ ಬೆಲೆಯಲ್ಲಿ ಮಾರಾಟ ಮಾಡಬಹುದು. ಇದು ಜಾಣ್ಮೆಯಲ್ಲಿ ಮಾತ್ರ ಸಾದ್ಯ. 

10 thoughts on “ಅಡಿಕೆ ಧಾರಣೆ ಕುಸಿಯುತ್ತಿದೆ – ಏನು ಕಾರಣ ಇರಬಹುದು? ಯಾವಾಗ ಏರಬಹುದು?

  1. ಇದು ಎಂದಿಗೂ ನಡೆಯುವ ಘಟನೆ ಆಗಿದ್ದು ಬೆಳೆಗಾರ ಮಾಲನ್ನು ಮಾರಿದನಂತರ ಬೆಲೆ ಏರುತ್ತದೆ

Leave a Reply

Your email address will not be published. Required fields are marked *

error: Content is protected !!