ಜಾನುವಾರುಗಳ ಚರ್ಮದಲ್ಲಿ ಅಲ್ಲಲ್ಲಿ ಗಂಟುಗಳಂತೆ ಅಥವಾ ಗುಳ್ಳೆಗಳಂತೆ ಎದ್ದು ಉಂಟಾಗುವ ಅಸ್ವಾಸ್ಥ್ಯ ಔಷಧಿ ಇಲ್ಲದೆ ಇತ್ತೀಚೆಗೆ ಕೆಲವು ಕಡೆ ತೀವ್ರ ಸ್ವರೂಪ ಪಡೆಯುತ್ತಿದೆ. ಇದನ್ನು Lumpy skin disease (LSD) ಎಂದು ಕರೆಯುತ್ತಾರೆ. ಇದರ ಔಷದೋಪಚಾರಕ್ಕೆ ಹೈನುಗಾರರು ಸಿಕ್ಕ ಸಿಕ್ಕ ವೈದ್ಯರ, ಮೆಡಿಕಲ್ ಶಾಪ್ ಗಳ ಮೊರೆ ಹೋಗುತ್ತಿದ್ದಾರೆ, ಈ ತನಕ ಇದಕ್ಕೆಂದೇ ಔಷಧಿ ಬಿಡುಗಡೆ ಆಗಿಲ್ಲ. ಹಾಗಾಗಿ ಔಷದೋಪಚಾರದಿಂದ ಈ ರೋಗ ವಾಸಿಯಾಗಿಲ್ಲ. ರೋಗಕ್ಕೆ ಕಾರಣ ಒಂದು ವೈರಸ್ ( ನಂಜಾಣು ) ಆಗಿರುತ್ತದೆ. ಹಿಂದೆ ಇದು ಅಲ್ಲಲ್ಲಿ ಇತ್ತಾದರೂ ಈಗ ಬಹುತೇಕ ಹೆಚ್ಚಿನ ಕಡೆ ಕಾಣಿಸುತ್ತಿದೆ. ಇದಕ್ಕೆ ಲಸಿಕೆಯೇ ಪರಿಹಾರ ಎಂದು ಕಂಡುಕೊಳ್ಳಲಾಗಿದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಸಹಯೋಗದೊಂದಿಗೆ ಸಂಶೋಧಕರು ಈ ರೋಗಕ್ಕೆ ಲಸಿಕೆಯನ್ನು ಕಂಡು ಹುಡುಕಿದ್ದಾರೆ.
ಜಾನುವಾರುಗಳಿಗೆ ಬರುವ ಚರ್ಮ ರೋಗಗಳು ತೀವ್ರವಾದರೆ ಶರೀರವನ್ನು ಸೊರಗುವಂತೆ ಮಾಡುತ್ತದೆ. ಚರ್ಮ ರೋಗ ಏನೇ ಬಂದರೂ ಹಸು ಸ್ವಲ್ಪ ಬಡಕಲಾಗುತ್ತಾ ಬರುತ್ತದೆ. ಸಾಮಾನ್ಯವಾಗಿ ಪರಾವಲಂಬಿಯಾಗಿ ಬದುಕುವ ಶಿಲೀಂದ್ರಗಳು, ಬ್ಯಾಕ್ಟೀರಿಯಾ, ನಂಜಾಣುಗಳು ಕೆಲವೊಮ್ಮೆ ದೇಹಕ್ಕೆ ತೊಂದರೆ ಮಾಡುತ್ತದೆ. ಚರ್ಮ ಗಂಟು ರೋಗ ಎಂಬುದು ಮಾರಣಾಂತಿಕ ಖಾಯಿಲೆ ಅಲ್ಲದಿದ್ದರೂ ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಅದಕ್ಕೆ ಚಿನ್ಹೆಯಾಧಾರಿತ Symptomatic treatment) ಔಷದೋಪಚಾರ ಮಾಡಿದರೆ ಬೇಗನೆ ವಾಸಿಯಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಸ್ವಲ್ಪ ಜೋರಾಗುತ್ತದೆ.ಇದು ಗಾಳಿಯ ಮೂಲಕ, ಸಂಪರ್ಕದ ಮೂಲಕ, ಕಲುಶಿತ ನೀರು, ಆಹಾರ, ಜಾನುವಾರು ಸಾಗಾಟ, ಕೃತಕ ಗರ್ಭದಾರಣೆ ಅಥವಾ ಇನ್ನಿತರ ಅಸ್ವಾಸ್ಥ್ಯಗಳಿಗೆ ಕೊಡಮಾಡಲ್ಪಡುವ ಇಂಜೆಕ್ಷನ್ ಸಿರಿಂಜ್ ( ಮರುಬಳಕೆ ಮಾಡಿದಾಗ) ಇದು ಪ್ರಸಾರವಾಗುತ್ತದೆ. ಇದು ಆಮದು ಆದ ರೋಗವಾಗಿದ್ದುಉ, ಮೂಲತಃ ಇದು ಆಪ್ರಿಕಾ ದೇಶದ್ದು. ಅಲೋಪತಿ ಔಷದೋಪಚಾರ ಹಾಗೂ ಹೋಮಿಯೋಪತಿ ಔಷಧಿಗಳು ಇವೆ.
ರೋಗ ಮತ್ತು ನಿಯಂತ್ರಣ:
- ಈ ರೋಗ ಪ್ರಾರಂಭವಾಗಿ ಸುಮಾರು 3 ವರ್ಷಗಳಾಗಿರಬಹುದು. ದೇಶದಾದ್ಯಂತ ಇದೆ.
- ನಮ್ಮ ಕರ್ನಾಟಕದಲ್ಲೂ ಇದೆ. ರಾಜಸ್ಥಾನ, ಗುಜರಾತ್ ಪಂಜಾಬ್, ಹರ್ಯಾಣ ಹಿಮಾಚಲ ಪ್ರದೇಶ, ಉತ್ತರಾಖಂಡ ಮುಂತಾದ ಆರು ರಾಜ್ಯಗಳಲ್ಲಿ ಕೆಲವು ಹಸುಗಳು ಈ ರೋಗದ ತೀವ್ರತೆಯಿಂದ ಸಾವಿರಾರು ಹಸುಗಳು ಸತ್ತು ಹೋದ ಸುದ್ದಿಯೂ ಇದೆ.
- ಇದಕ್ಕೆ ಈ ತನಕ ಔಷದೋಪಚಾರ ಇಲ್ಲದಿದ್ದರೂ ಇದಕ್ಕೆ ನೋವು ತಡೆಯಲು, ಅಲರ್ಜಿ ಕಡಿಮೆಯಾಗಲು, ಬಾವು ಕಡಿಮೆಯಾಗಲು ಆಂಟಿಬಯೋಟಿಕ್ಸ್, ಟಾನಿಕ್ ಮತ್ತು ಮಿನರಲ್ ಮಿಕ್ಷರ್ ಗಳನ್ನು ನೀಡಿ ಪ್ರಾರಂಭಿಕ ಹಂತದಲ್ಲಿ ಗುಣಮಾಡಲಾಗುತ್ತಿತ್ತು.
- ಒಂದು ಹಟ್ಟಿಯಲ್ಲಿ ಎಲ್ಲದಕ್ಕೂ ಈ ರೋಗ ಬರುತ್ತಿರಲಿಲ್ಲ.
- ಬಂದವುಗಳಿಗೆ ಔಷದೋಪಚಾರ ಮಾಡಿದಾಗ ಅದರದ್ದು ಗುಣವಾಗುತ್ತಿತ್ತು.
- ಉಳಿದವುಗಳಿಗೆ ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡು ರೋಗದಿಂದ ಮುಕ್ತವಾಗುತ್ತಿದ್ದವು.
- ರೋಗ ತೀವ್ರವಾದಾಗ ಗುಳ್ಳೆಗಳು ದೊಡ್ಡದಾಗಿ, ಉಬ್ಬಿಕೊಳ್ಳುತ್ತದೆ.
- ಗಂಟುಗಳು ಒಂದಕ್ಕೊಂದು ತಾಗಿಕೊಂಡು ಆ ಭಾಗದ ಜೀವ ಕೋಶಗಳು ಸತ್ತು ಹೋಗಿ ಅಲ್ಲಿನ ಚರ್ಮ ಸತ್ತು ಉದುರಿ ಹೋಗುತ್ತಿತ್ತು.
- ಕ್ರಮೇಣ ಒಂದೆರಡು ತಿಂಗಳಲ್ಲಿ ಅಲ್ಲಿ ಮತ್ತೆ ಹೊಸ ಚರ್ಮ ಬೆಳೆದು ಹಿಂದಿನಂತೆ ಆಗುತ್ತಿತ್ತು.
- ಜಾನುವಾರುಗಳಿಗೆ ಜ್ವರ ಬರುವುದು ಸಾಮಾನ್ಯವಾಗಿರುತ್ತದೆ.
- ಹಾಲು ಕಡಿಮೆಯಾಗುತ್ತದೆ. ಕೆಚ್ಚಲಿನಲ್ಲಿ ಗುಳ್ಳೆ ಬಂದರೆ ಕೆಚ್ಚಲು ಬಾವು ಸಹ ಆಗಬಹುದು.
- ಕಣ್ಣಿನ ಸಮೀಪ ಗುಳ್ಳೆಗಳು ಕಾಣಿಸಿಕೊಂಡರೆ ಕಣ್ಣು ದೋಷ ಉಂಟಾಗಬಹುದು.
- ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ಈ ರೋಗ ಇದೆ.ನಾಟಿ ಹಸುಗಳಿಗೂ ಬಂದಿದೆ.
- ಜರ್ಸಿ ಇತ್ಯಾದಿ ಅಧಿಕ ಹಾಲೂಡುವ ಹಸುಗಳಿಗೂ ಬಂದಿದೆ.
ರೋಗ ತಡೆಗೆ ಏನು ಮಾಡಬೇಕು?
- ಈ ರೋಗ ಸಮೀಪದಲ್ಲಿದ್ದರೆ ಗಾಳಿ, ನೀರಿನ ಮೂಲಕ ಹರಡಬಹುದು.
- ದೂರದ ಊರಿನಲ್ಲಿದ್ದರೆ ಮನುಷ್ಯರ ಬಟ್ಟೆ ಇತ್ಯಾದಿಗಳ ಮೂಲಕ ಪ್ರಸಾರವಾಗುವ ಸಾಧ್ಯತೆ ಇರುತ್ತದೆ.
- ಹಾಗಾಗಿ ಈ ಕುರಿತು ಜಾಗರೂಕತೆ ವಹಿಸಬೇಕು. ಒಂದು ಊರಿನಿಂದ ಮತ್ತೊಂದು ಊರಿಗೆ ಪಶುಗಳನ್ನು ಸಾಗಾಣಿಕೆ ಮಾಡಬಾರದು.
- ಕಚ್ಚುವ ನೊಣ, ಸೊಳ್ಳೆಗಳು, ಉಣ್ಣಿಗಳ ಮೂಲಕ ಹರಡುವ ಕಾರಣ ಅದರ ಹಾವಳಿಯನ್ನು ನಿಯಂತ್ರಿಸಬೇಕು.
- ಹಟ್ಟಿಯನ್ನು ಸ್ವಚ್ಚವಾಗಿಡುವುದು, ಕೊಟ್ಟಿಗೆಯ ಸಮೀಪ ಗೊಬ್ಬರ ರಾಶಿ ಹಾಕದಿರುವುದು, ಮಾಡಿ ಸೊಳ್ಳೆ ನಿಯಂತ್ರಣ ಮಾಡಬೇಕು.
- ಗೊಬ್ಬರದ ನೀರು ಸಂಗ್ರಹವಾಗುವ ಕಡೆಯಲ್ಲಿ ಕೀಟನಾಶಕ ಅಥವಾ ಕೆರೋಸಿನ್ ಹಾಕಿ ಮೊಟ್ಟೆ ಲಾರ್ವಾ ಬೆಳೆಯದಂತೆ ನೋಡಿಕೊಳ್ಳಬೇಕು.
ಕೆಲವು ಅಸ್ವಾಸ್ಥ್ಯಗಳಾದ ಕೊರೋನಾ, ಚಿಕನ್ ಗುನ್ಯಾ, ಡೆಂಗ್ಯೂ , ಚಿಕನ್ ಪೋಕ್ಸ್ ಇತ್ಯಾದಿಗಳಿಗೆ ಔಷದೋಪಚಾರಕ್ಕಿಂತ ಕಾಣಿಸುವ ಅಸ್ವಾಸ್ಥ್ಯಗಳಾದ ಜ್ವರ, ನೋವು ಇತ್ಯಾದಿಗಳಿಗೆ ಔಷದೋಪಚಾರ ಮಾಡಿದಂತೆ ಇದಕ್ಕೂ ಮಾಡಬೇಕು. ಪಶು ವೈದ್ಯರ ಸಲಹೆ ಪಡೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚುವಂತಹ ಆಹಾರಗಳನ್ನು ಕೊಡಬೇಕು. ಇದರಿಂದ ಹಾಲು ಕುಡಿಯುವವರಿಗೆ ತೊಂದರೆ ಇಲ್ಲ. ಆದರೂ ಹಾಲನ್ನು ಕಾಯಿಸಿ ಕುಡಿಯಬೇಕು. ಕರುಗಳು ಮತ್ತು ಪ್ರಾಯದ ಜಾನುವಾರುಗಳಿಗೆ ಬಂದಾಗ ಬಹಳ ಜಾಗರೂಕತೆವಹಿಸಬೇಕು.
ಈಗ ಬಂದಿದೆ ಲಸಿಕೆ:
ಈ ರೋಗಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ICAR, ರಾಷ್ಟ್ರೀಯ ಕುದುರೆ ಸಂಶೋಧಾನ ಕೇಂದ್ರ NRCE, ಭಾರತೀಯ ಪಶುವೈದ್ಯಕೀಯ ಸಂಶೊಧನಾ ಸಂಸ್ಥೆ IVRI, ಇವರು ಸೇರಿ, Lumpi-ProVacInd" ಎಂಬ ಲಸಿಕೆಯನ್ನು ಕಂಡುಹುಡುಕಿದ್ದಾರೆ. 2019 ರಿಂದಲೂ ಈ ರೋಗಕ್ಕೆ ಔಷಧಿ ಹುಡುಕುತ್ತಾ ಬರಲಾಗಿತ್ತು. ಈಗ ಇದು ಸಾಕಾರಗೊಂಡಿದೆ. ಇದನ್ನು ಭಾರತ ಸರಕಾರ ವಾಣಿಜ್ಯೀಕರಣ ಮಾಡಿ ಎಲ್ಲಾ ಪಶುಪಾಲಕರಿಗೆ ಲಭ್ಯವಾಗುವಂತೆ ಮಾಡುವ ಭರವಸೆಯನ್ನು ನೀಡಿದೆ.
ಬಹಳಷ್ಟು ಹಸು ಸಾಕುವವರ ಕೊಟ್ಟಿಗೆಯ ದನಗಳಿಗೆ ಈ ಚರ್ಮ ರೋಗ ಬಂದದ್ದಿದೆ. ಮಾಹಿತಿಯ ಕೊರೆತೆಯಿಂದ ಇದಕ್ಕೆ ಔಶದೋಪಚಾರ ಮಾಡದವರೂ ತುಂಬಾ ಜನ. ಗುರುತಿಸಿ ತಜ್ಞ ಪಶುವೈದ್ಯರಲ್ಲಿ ಔಷದೋಪಾರ ಮಾಡಿದರೆ ರೋಗ ತೀವ್ರವಾಗದೆ ಅಲ್ಲಿಗೆ ವಾಸಿಯಾಗುತ್ತದೆ. ಇದು ಇತರ ಸಾಕು ಪ್ರಾಣಿಗಳಾದ ಆಡು, ನಾಯಿಗಳಿಗೆ ಹರಡಿದ ಉದಾಹರಣೆ ಇಲ್ಲ.