ಜಾನುವಾರುಗಳಿಗೆ ಅಡಿಕೆ ಹಾಳೆ ಉತ್ತಮ ಮೇವು ಯಾಕೆ?.

Areca leaf for cow fodder

ಜಾನುವಾರುಗಳ ಹೊಟ್ಟೆ ತುಂಬಿಸಲು ಗಟ್ಟಿ ಮೇವು ಬೇಕು. ಅದಕ್ಕೆ ಅಡಿಕೆ ಮರದ ಹಸಿ ಹಾಳೆ ಉತ್ಯುತ್ತಮ.

ಜಾನುವಾರು ಸಾಕುವವರು ಪಶುಗಳಿಗೆ ಹಸಿ ಹುಲ್ಲು ಹಾಕುತ್ತೇವೆ. ಆದರೆ ಈ ಹಸಿ ಹುಲ್ಲಿನಲ್ಲಿ  ನಾರಿನ ಅಂಶ (Fiber) ಮತ್ತು ಘನ ಅಂಶ(Solids) ಕಡಿಮೆ. ಆದರೆ ಅಡಿಕೆ ಹಾಳೆಯಂತಹ ಕೃಷಿ ತ್ಯಾಜ್ಯಗಳಲ್ಲಿ ಈ ಅಂಶ ಉತ್ತಮವಾಗಿದೆ. ಇದನ್ನು ಹಸಿ ಹುಲ್ಲಿಗಿಂತ ಕಡಿಮೆ ಪ್ರಮಾಣದಲ್ಲಿ ಕೊಟ್ಟರೂ ಹೊಟ್ಟೆ ತುಂಬುತ್ತದೆ. ದೇಹದ ಚಯಾಪಚಯ ಕ್ರಿಯೆಗೂ ಇದು ಸಹಕಾರಿಯಾಗುತ್ತದೆ.

 • ಮಲೆನಾಡು, ಅರೆಮಲೆನಾಡು, ಹಾಗೂ ಕರಾವಳಿ ಪ್ರದೇಶದಲ್ಲಿ ಅಡಿಕೆ ಒಂದು ಮುಖ್ಯ ಬೆಳೆ.
 • ಬಹುತೇಕ ಅಡಿಕೆ ಬೆಳೆಗಾರರು ಹಸು, ಎಮ್ಮೆ ಸಾಕುವವರು.
 • ಹಸು ಎಮ್ಮೆಗಳಿಗೆ ಅಡಿಕೆ ತೋಟದಲ್ಲಿ ಸಿಗುವ ಹುಲ್ಲಿನ ಹೊರತಾಗಿ ಅಲ್ಲಿ ಸಿಗುವ ಹಾಳೆ (areca leaf) ಹಾಗೂ ಹಸಿಯಾದ ಗರಿ(ಸೋಗೆ) ಮತ್ತು ಹೊಂಬಾಳೆ( ಹೂ ಗೊಂಚಲಿನ ರಕ್ಷಾ ಕವಚ) ಹಾಕಿ ಹೊಟ್ಟೆ ತುಂಬಿಸಬಹುದು.
cattle feeding areca leaf - ಅಡಿಕೆ ಹಾಳೆ ತಿನ್ನುವ ಜಾನುವಾರು

ಜಾನುವಾರುಗಳಿಗೆ ಅಡಿಕೆ ಹಾಳೆ ಹೇಗೆ ಬಳಸಬಹುದು:

 • ಅಡಿಕೆ ಮರದಿಂದ ತನ್ನಿಂತಾನೇ ಉದುರುವ ಎಲೆಯು ಹಾಳೆ ಮತ್ತು ಸೋಗೆ ಎಂಬ ಎರಡು ಭಾಗಗಳನ್ನು ಹೊಂದಿರುತ್ತದೆ.
 • ಇದರಲ್ಲಿ ಹಸಿ ಅಡಿಕೆ ಹಾಳೆಯನ್ನು ಪ್ಲಾಸ್ಟಿಕ್ ನಂತಿರುವ ಅದರ ಮೇಲ್ಪದರ ತೆಗೆದು ಜಾನುವಾರು ಆಹಾರವಾಗಿ ಕೆಲವು ರೈತರು ಬಹಳ ವರ್ಷಗಳಿಂದ ಬಳಸುತ್ತಿದ್ದಾರೆ.
 • ಒಣ ಅಡಿಕೆ ಹಾಳೆ ಹಾಗೂ ಗರಿಗಳನ್ನೂ ಸಹ ಬಳಸಬಹುದು ಎನ್ನುವುದು ಇದಕ್ಕೆ ಹೊಸ ಸೇರ್ಪಡೆ.
 • ಹಸಿ ಅಡಿಕೆ ಹಾಳೆ ಅಥವಾ ಹಸಿ ಸೋಗೆ ಎಲೆಗಳಿಗಿಂತ ಅಡಿಕೆ ಹಾಳೆಗಳನ್ನು ಒಣಗಿಸಿ ತುಂಡಾಗಿ ಕತ್ತರಿಸಿ ಕೊಡುವುದು ಹಾಗೂ
 • ಸೋಗೆಯನ್ನು ಅದರ ಮಧ್ಯದ ದಿಂಡಿನಿಂದ ಬೇರ್ಪಡಿಸಿ ಹಸಿರು ಹಳದಿ ಬಣ್ಣವಿರುವ ಎಲೆಗಳನ್ನು ಮೇವಾಗಿ ಬಳಸುವುದು ಸೂಕ್ತ.
 • ಇತ್ತೀಚೆಗೆ ಕೆಲವರು ಒಣಗಿಸಿದ ಹಾಳೆಯನ್ನು ಹುಡಿ ಮಾಡಿ ಪಶು ಮೇವಾಗಿ ಒದಗಿಸುವವರೂ ಇದ್ದಾರೆ.
 • ಒಟ್ಟಿನಲ್ಲಿ ತಾಜಾ ಹಾಳೆ ಉತ್ತಮ. ಒಣ ಹಾಳೆ ಆದರೆ ಅದರಲ್ಲಿ ಯಾವುದೇ ರೀತಿ ಶಿಲೀಂದ್ರ ಬೆಳೆಯದಂತೆ ಜಾಗರೂಕತೆ ವಹಿಸಬೇಕು. 
 • ಅಡ್ಡಕ್ಕೆ ತುಂಡು ಮಾಡಿ ಹಾಕುವುದರಿಂದ ಹಾಳೆಯ ಹೊರ ಮೈಯಲ್ಲಿರುವ ಪರೆ ತುಂಡಾಗುತ್ತದೆ.
 • ಅದನ್ನು ತೆಗೆಯಬೇಕು ಎಂಬ ಪ್ರಮೇಯ ಬರುವುದಿಲ್ಲ.

ಏನು ಸತ್ವ ಇದೆ?

fodder for cattle - ಜಾನುವಾರು ಮೇವಿಗಾಗಿ ಅಡಿಕೆ ಹಾಳೆ
 • ಅಡಿಕೆ ಹಾಳೆ ಹಾಗೂ ಸೋಗೆಯಲ್ಲಿ ಶೇ. 25-30ರಷ್ಟು ನಾರಿನ ಅಂಶ ಶೇ. 3-4ರಷ್ಟು ಪ್ರೊಟೀನ್ ಹಾಗೂ ಅಧಿಕ ಪ್ರಮಾಣದ ಸುಣ್ಣ, ಗಂಧಕ ಹಾಗೂ ತಾಮ್ರದ ಅಂಶಗಳು ಇರುತ್ತವೆ.
 • ಭತ್ತದ ಹುಲ್ಲಿಗೆ ಹೋಲಿಸಿದರೆ ಅಧಿಕವಾಗಿದೆ.
 • ಅಲ್ಲದೇ ಭತ್ತದ ಹುಲ್ಲಿಗಿಂತ ಕಡಿಮೆ ಪ್ರಮಾಣದಲ್ಲಿರುವುದು ಅಡಿಕೆ ಹಾಳೆ ಹಾಗೂ ಸೋಗೆಗಳು ಭತ್ತದ ಹುಲ್ಲಿಗಿಂತ ಉತ್ತಮ ಆಹಾರ ಎನ್ನುವುದನ್ನು ಸಾಬೀತುಪಡಿಸುತ್ತದೆ.
 • ಜೊತೆಗೆ ಭತ್ತದ ಹುಲ್ಲಿನಲ್ಲಿರುವ ಅನಪೇಕ್ಷಣೀಯ ಅಂಶವಾದ ಅಕ್ಸಾಲಿಕ್ ಆಮ್ಲವು ಇವುಗಳಲ್ಲಿರುವುದಿಲ್ಲ.
 • ಅಡಿಕೆ ಹಾಳೆ ಹಾಗೂ ಸೋಗೆಯು ಯಾವುದೇ ಖರ್ಚಿಲ್ಲದೆಯೇ ದೊರೆಯುವ ಮೇವಾಗಿದೆ.
 • ಅಡಿಕೆ ಹಾಳೆಯನ್ನು 4-5 ದಿನ  ಬಿಸಿಲಿನಲ್ಲಿ ಒಣಗಿಸಿ ಚೂರು ಚೂರು ಮಾಡಿ ಅಥವಾ ಪುಡಿ ಮಾಡಿ ಒಣ ಮೇವಿನಂತೆ ಅಥವಾ ಪಶು ಆಹಾರದ ಜೊತೆಗೆ ಸೇರಿಸಿ ಕೂಡ ಕೊಡಬಹುದು.
 • ಗಾಳಿಯಾಡದಂತೆ ಪ್ಯಾಕ್ ಮಾಡಿಟ್ಟರೆ ದಾಸ್ತಾನು ಇಡಬಹುದು.
 • ಇದಕ್ಕಾಗಿಯೇ  ಈಗ ಹಾಳೆ ಪುಡಿ ಮಾಡುವ ಯಂತ್ರಗಳು ಲಭ್ಯವಿದೆ. 
 • ಅದೇ ರೀತಿ ಸೋಗೆಯನ್ನು ನಡುವಿನ ದಿಂಡಿನಿಂದ ಬೇರ್ಪಡಿಸಿ ಹಸಿರು ಹಳದಿ ಬಣ್ಣವಿರುವಾಗ ತುಂಡುಗಳಾಗಿ ಕತ್ತರಿಸಿ ನೀಡಬಹುದು.
 • ಅಲ್ಲದೇ ಇವೆರಡರ ತುಂಡುಗಳಿಗೆ ಶೇ 2ರ ಯೂರಿಯಾ ಸಂಸ್ಕರಣೆ ಕೂಡ ಮಾಡಿ ಉಪಯೋಗಿಸಬಹುದು.
 • ಅಡಿಕೆ ಹಾಳೆ ಪುಡಿಯನ್ನು ಗಾಳಿಯಾಡದ ಚೀಲಗಳಲ್ಲಿ ಸಂಗ್ರಹಿಸಿದರೆ 2 ತಿಂಗಳ ವರೆಗೆ ಕೆಡದಂತೆ ಇಡಬಹುದು
 • ಇದನ್ನು ದಿನಕ್ಕೆ 5-10 ಕಿ.ಗ್ರಾಂ. ವರೆಗೆ ನೀಡಬಹುದು.

ಹಾಳೆ ಹಾಕುವಾಗ ಅಡಿಕೆ ಮರಗಳಿಗೆ ಕೀಟ ನಾಶಕ ಸಿಂಪಡಿಸಿರಬಾರದು. ಸಿಂಪಡಿಸಿದ್ದರೆ ಅದರ ವಾಯಿದೆ ಕಳೆದ ನಂತರ ಹಾಕಬೇಕು.

cows happy with this fodder- ಅಡಿಕೆ ಹಾಳೆ ಮೆಲುಕು ಹಾಕುತ್ತಿರುವ ಜಾನುವಾರುಗಳು

ಅಸಂಪ್ರದಾಯಿಕ ಮೇವಿನ ಮೂಲಗಳು :

 • ಲಭ್ಯತೆಯ ಮೇರೆಗೆ ಬಾಳೆ ಎಲೆ, ಬಾಳೆ ದಿಂಡು, ಹೊಂಬಾಳೆ, ಅಡಿಕೆ ಹಾಳೆ ಇತ್ಯಾದಿಗಳನ್ನು ಚಿಕ್ಕದಾಗಿ ಕತ್ತರಿಸಿ ದಿನನ್ಕೆ 4-5 ಕೆ.ಜಿ.ವರೆಗೆ ರಾಸುಗಳಿಗೆ ಮೇವಾಗಿ ನೀಡಬಹುದು.
 • ಹುಣಸೆ ಬೀಜ ಕೂಡ ಒಂದು ಉತ್ತಮ ಪಶು ಆಹಾರ.
 • ಇದನ್ನು ನೀರಿನಲ್ಲಿ ನೆನೆಸಿ ನಂತರ ಚೆನ್ನಾಗಿ ಒಣಗಿಸಿ ಕೆಂಪು ಬಣ್ಣದ ಸಿಪ್ಪೆ ತೆಗೆದು ಪುಡಿ ಮಾಡಿ ಉಪಯೋಗಿಸಬೇಕು.
 • ಹೀಗೆ ಮಾಡುವುದರಿಂದ ಬೀಜದಲ್ಲಿರುವ ಟ್ಯಾನಿನ್ ಎಂಬ ವಿಷಾಂಶವು ಕಡಿಮೆಯಾಗುತ್ತದೆ.
 • ಪಶು ಆಹಾರದ ಶೇ 20ರ ವರರೆಗೆ ಇದನ್ನು ಉಪಯೋಗಿಸಬಹುದು.

ಬೆಳೆ ತ್ಯಾಜ್ಯಗಳನ್ನು ಪಶುಗಳಿಗೆ ಆಹಾರವಾಗಿ ಬಳಕೆ ಮಾಡಿದಾಗ ಅದು ತ್ವರಿತವಾಗಿ ಸಣ್ಣ ಪ್ರಮಾಣಕ್ಕೆ ಬರುತ್ತದೆ. ಒಂದೇ ದಿನದಲ್ಲಿ ಗೊಬ್ಬರ ಆಗುವ ವ್ಯವಸ್ಥೆ ಇದು. ಇದೇ ಗೊಬ್ಬ ರವನ್ನು ಮತ್ತೆ ಬೆಳೆಗಳಿಗೆ ಬಳಕೆ ಮಾಡುವುದರಿಂದ ಬೆಳೆ ಇಳುವರಿಯೂ ಹೆಚ್ಚುತ್ತದೆ.

Leave a Reply

Your email address will not be published. Required fields are marked *

error: Content is protected !!