ಕೆಲವು ವಿದೇಶೀ ಹಣ್ಣಿನ ಬೆಳೆಗಳು ಬ್ರಿಟೀಷರ ಕಾಲದಲ್ಲಿ (ಪೋರ್ಚುಗೀಸರಿಂದ) ಕೇರಳದ ಪಟ್ಟಣಂತಿಟ್ಟ ಪ್ರದೇಶದಲ್ಲಿ ಪರಿಚಯಿಸಲ್ಪಟ್ಟಿತ್ತಂತೆ. ಅದನ್ನು ಕೆಲವು ಕೇರಳಿಗರು ಅಭಿವೃದ್ದಿಪಡಿಸಿದರು. ಮತ್ತೆ ಕೆಲವರು ಹೊರ ದೇಶಗಳಿಂದ ಸಸಿ ಮೂಲ ತರಿಸಿ, ಬೇರೆ ಬೇರೆ ತಳಿಗಳಾಗಿ ಹೆಸರು ಕೊಟ್ಟು , ಈಗ ಇದನ್ನು ವಾಣಿಜ್ಯಿಕವಾಗಿ ಬೆಳೆಸುತ್ತಿದ್ದಾರೆ. ಅವುಗಳಲ್ಲಿ ಒಂದು ರಾಂಬುಟಾನ್ ಎಂಬ ಹಣ್ಣು. ಈ ಹಣ್ಣಿಗೆ ಸರಾಸರಿ ಕೊಳ್ಳುವ ಬೆಲೆ ರೂ.100 ಇದೆ.
- ರಾಂಬುಟಾನ್ ಇದು ದಕ್ಷಿಣ ಏಶಿಯಾ ದೇಶಗಳಾದ ಮಲೇಶಿಯಾ, ಇಂಡೋನೇಶಿಯಾ, ಥೈಲಾಂಡ್ ಮೂಲದ ವಿದೇಶೀ ಹಣ್ಣು.
- ಇದನ್ನು ಈಗ ನಮ್ಮ ರಾಜ್ಯದಲ್ಲಿ ಕರಾವಳಿ, ಮಲೆನಾಡು, ನೆರೆಯ ಕೇರಳ, ತಮಿಳುನಾಡು, ಗೋವಾ ಮುಂತಾದ ಕಡೆಗಳಲ್ಲಿ ಕೆಲವು ರೈತರು ಬೆಳೆಸುತ್ತಿದ್ದಾರೆ.
- ಇದು ಒಂದು ಋತುಮಾನದ ಹಣ್ಣಾಗಿದ್ದು, ಬೇಸಿಗೆಯ ಎಪ್ರೀಲ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೋಬರ್ ತನಕವೂ ಇರುತ್ತದೆ.
- ಇದರಲ್ಲಿ ಹಲವಾರು ತಳಿಗಳಿದ್ದು, ಕೆಲವು ಮಾತ್ರ ವಾಣಿಜ್ಯಿಕ ಬೇಸಾಯಕ್ಕೆ ಸೂಕ್ತವಾಗಿದೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೇಸರ ಘಟ್ಟ ಬೆಂಗಳೂರು ಇಲ್ಲಿನ ಹಣ್ಣಿನ ಬೆಳೆಗಳ ಸಂಶೋಧನಾ ಸಂಸ್ಥೆ, ಮಡಿಕೇರಿಯ ಚೆಟ್ಟಳ್ಳಿಯಲ್ಲಿ ಈ ಹಣ್ಣಿನ ಬೆಳೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಹಲವಾರು ತಳಿ (ಸುಮಾರು 50) ಮೂಲಗಳನ್ನು ಇವರು ಹೊಂದಿದ್ದಾರೆ. ಅಲ್ಲದೆ ಕೆಲವು ಉತ್ತಮ ತಳಿಗಳನ್ನೂ ಸಹ ಬಿಡುಗಡೆ ಮಾಡಿದ್ದಾರೆ .
ಏನಿದು ರಾಂಬುಟಾನ್:
- ಚೆರಿ ಹಣ್ಣಿನ ತರಹವೇ ಇರುವ ಈ ಹಣ್ಣು ಹಳದಿ ಮತ್ತು ಕೆಂಪು ಬಣ್ಣದ ಸಿಪ್ಪೆಯಲ್ಲಿ ಒಳಗೆ ಜೆಲ್ಲಿ (jelly) ತರಹದ ತಿನ್ನುವ ಭಾಗವನ್ನು ಹೊಂದಿದೆ.
- ಒಳ ಭಾಗದಲ್ಲಿರುವ ತಿನ್ನುವ ತಿರುಳು ಪಾರದರ್ಶಕವಾಗಿರುತ್ತದೆ. ರುಚಿ ಸಿಹಿ ಯಾಗಿರುತ್ತದೆ.
- ಇದರ ವೈಜ್ಞಾನಿಕ ಹೆಸರು Nephelium lappaceum.
- ತಿನ್ನುವ ಭಾಗದ ಒಳಗೆ ಬೀಜ ಇದ್ದು, ಕೆಲವು ತಳಿಗಳ ತಿನ್ನುವ ಪಲ್ಪ್ ಬೀಜದಿಂದ ಪ್ರತ್ಯೇಕವಾಗುತ್ತದೆ.
- ಕೆಲವು ಅಂಟಿಕೊಂಡಿರುತ್ತದೆ. ಬೀಜದಿಂದ ತಿನ್ನುವ ಭಾಗ ಬೇರ್ಪಡುವ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.
- ಚಿಲ್ಲರೆ ಮಾರಾಟಗಾರರಲ್ಲಿ ಕಿಲೋ ಗೆ 200- 250 ತನಕವೂ ಇದೆ.
- ಆನ್ ಲೈನ್ ನಲ್ಲೂ ಇದರ ಹಣ್ಣುಗಳು ಮಾರಾಟಕ್ಕಿದ್ದು, 500 ರೂ. ತನಕವೂ ಮಾರಲ್ಪಡುತ್ತದೆ.
- ಬೆಳೆಗಾರರಿಗೆ ಮಾರಾಟಗಾರರ ಅಂಗಡಿಗೆ ಮಾರುವಾಗ ದೊರೆಯುವುದು 100-150 ರೂ. ಮಾತ್ರ.
- ಮರವಾಗಿ ಬೆಳೆಯುತ್ತದೆ. ಚಿಗುರು ತುದಿಯಲ್ಲಿ ಹೂವಾಗಿ ಕಾಯಿಯಾಗುತ್ತದೆ.
- ಬೆಳವಣಿಗೆಯನ್ನು ನಿಯಂತ್ರಿಸಿದರೆ ಸ್ವಲ್ಪ ಕುಬ್ಜವಾಗಿಯೂ ಬೆಳೆಸಬಹುದು.
- ಬೀಜದಿಂದ ಸಸ್ಯಾಭಿವೃದ್ದಿ ಮಾಡುವಾಗ ಗಂಡು- ಹೆಣ್ಣು ಆಗುವ ಸಾಧ್ಯತೆಗಳಿದ್ದು, ಗಂಡು ಬರೇ ಹೂ ಬಿಡುತ್ತದೆ. ಕಾಯಿ ಬಿಡಲಾರದು.
- ಹೆಣ್ಣು ದ್ವಿಲಿಂಗ ಹೂವುಗಳನ್ನು ಹೊಂದಿದ್ದು, ಹೂ ಬಿಟ್ಟು ಕಾಯಿಯಾಗುತ್ತದೆ.
- ಗಂಡು ಗಿಡ ನಿರುಪಯುಕ್ತ.
- ಇದು ಉಷ್ಟವಲಯದ ಹಣ್ಣಾಗಿದ್ದು, ತಾಪಮಾನ 20 ರಿಂದ 35 ಡಿಗ್ರಿ ವರೆಗೆ ಇರುವಲ್ಲಿ ಉತ್ತಮವಾಗಿ ಬೆಳೆಯುತ್ತದೆ.
- ಬಿಸಿಲು ಬೇಕು.ಆಂಶಿಕ (25% ) ನೆರಳಿನಲ್ಲೂ ಬರುತ್ತದೆ.
- ಕೇರಳಿಗರ ಪ್ರಚಾರದ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಬೆಂಬಲದಿಂದ ಇದು ಈಗ ಬಹಳ ಪ್ರಚಾರದಲ್ಲಿದೆ.
ತಳಿಗಳು:
- ರಾಂಬುಟಾನ್ ನಲ್ಲಿ ವಾಣಿಜ್ಯಿಕ ಬೇಸಾಯಕ್ಕೆ ಹೊಂದುವ ಕೆಲವು ತಳಿಗಳಿವೆ.
- ಇದನ್ನು ಮಾತ್ರ ಬೆಳೆಯುವುದು ಲಾಭದಾಯಕ.
- ರಾಂಬುಟಾನ್ ನ ಸಸ್ಯಗಳು ಎಲ್ಲವೂ ಏಕಪ್ರಕಾರ ಹೋಲಿಕೆ ಹೊಂದಿದೆ.
- ಕಸಿ ವಿಧಾನದಲ್ಲಿ ಸಾಮಿಪ್ಯಕಸಿ, ಗೂಟಿ ಕಸಿ ಹಾಗೆಯೇ ಕಣ್ಣು ಕಸಿಯ ಮೂಲಕ ಸಸ್ಯಾಭಿವೃದ್ದಿ ಮಾಡಲಾಗುತ್ತದೆ.
- ಹೆಚ್ಚಾಗಿ ಪ್ರಚಲಿತದಲ್ಲಿರುವುದು ಕಣ್ಣು ಕಸಿಯ ಸಸ್ಯಗಳು.
- ಎನ್ -18 ಎಂಬ ತಳಿ ಇದೆ. ಇದು ಗೊಂಚಲು ಗೊಂಚಲಾಗಿ ಕಾಯಿ ಬಿಡುತ್ತದೆ.
- ಹಣ್ಣು ಮರದಲ್ಲಿ ಹೆಚ್ಚು ಸಮಯದ ತನಕ ಉಳಿಯುತ್ತದೆ.
- ಇದೊಂದು ಆಯ್ಕೆ ತಳಿಯಾಗಿದೆ. ಇದು ಕೆಂಪು ಸಿಪ್ಪೆಯ ಆಕರ್ಷಕ ನೋಟ ಹೊಂದಿದ ಹಣ್ಣುಗಳನ್ನು ಕೊಡುತ್ತದೆ.
ಇದಲ್ಲದೆ HG Malwana, HG School boy, HG Balling, HG Rongrien, HG Jarum Emas E – 35, King ಮುಂತಾದ ತಳಿಗಳು ವಾಣಿಜ್ಯ ಬೇಸಾಯಕ್ಕೆ ಸೂಕ್ತ (HG =Homegrown nusary Kerala) E – 35 ಎಂಬುದು ಹಳದಿ ಸಿಪ್ಪೆಯ ಹಣ್ಣು.ಕಿಂಗ್ ಇದು ದೊಡ್ದ ಗಾತ್ರದ ಹಣ್ಣು ಸರಾಸರಿ ಒಂದು ಹಣ್ಣು 50 ಗ್ರಾಂ ತೂಗುತ್ತದೆ.
- ರಾಂಬುಟಾನ್ ಬೇಸಾಯ ಮತ್ತು ತಳಿ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡ ಮಡಿಕೇರಿಯ ಚೆಟ್ಟಳ್ಳಿ ಹಣ್ಣಿನ ಬೆಳೆಗಳ ಸಂಶೋಧನಾ ಸಂಸ್ಥೆಯು Arka Coorg Arun, Arka Coorg Pratib, Aril ಎಂಬ ಮೂರು ತಳಿಗಳನ್ನು ವಾಣಿಜ್ಯ ಬೇಸಾಯಕ್ಕೆ ಸೂಕ್ತವೆಂದು ಬಿಡುಗಡೆ ಮಾಡಿದೆ.
- ಆರ್ಕಾ ಕೂರ್ಗ್ ಅರುಣ್, ಇದು ಕೆಂಪು ಸಿಪ್ಪೆಯ ತಳಿ. ತೀರಾ ಎತ್ತರಕ್ಕೆ ಬೆಳೆಯದ ಬೇಗ ( ಮಾರ್ಚ್) ಹಣ್ಣುಗಳಾಗುವ ತಳಿ.
- ಒಂದು ಹಣ್ಣು 40-45 ಗ್ರಾಂ ತೂಗುತ್ತದೆ. ಇದಕ್ಕೆ ಬೀಜ ಇರುವುದಿಲ್ಲ.
- ಅರ್ಕಾ ಕೂರ್ಗ್ ಪ್ರತಿಬ್ ಇದು ಹಳದಿ ಸಿಪ್ಪೆಯ ಹಣ್ಣು ಆಗಿದ್ದು, ಅಧಿಕ ಇಳುವರಿ ಮತ್ತು ಹೆಚ್ಚು ಎತ್ತರಕ್ಕೆ ಬೆಳೆಯದೆ ವಿಶಾಲವಾಗಿ ಬೆಳೆಯುವ ತಳಿಯಾಗಿದೆ.
- ಫೆಬ್ರವರಿ ಮಾರ್ಚ್ ನಲ್ಲಿ ಹೂ ಬಿಟ್ಟು ಅಕ್ಟೋಬರ್ ಗೆ ಹಣ್ಣು ಆಗುತ್ತದೆ. ಮರಕ್ಕೆ 25-30 ಕಿಲೋ ಇಳುವರಿ.
- ಅರಿಲ್ ಎಂಬುದು ಬಿಳಿ ಬಣ್ಣದ ಸಿಪ್ಪೆಯನ್ನು ಹೊಂದಿದ್ದು, ತುಂಬಾ ಸಿಹಿ ಮತ್ತು ರಸವನ್ನು ಹೊಂದಿದೆ. ಮರಕ್ಕೆ 1200-1500 ಕಾಯಿ ಇಳುವರಿ.
ಹಣ್ಣಿನಲ್ಲಿ ಆರೋಗ್ಯ ಗುಣ:
- ಸುಮಾರು 10-15 ವರ್ಷಗಳ ಹಿಂದೆ ಹಣ್ಣು ಮಾರುವವರು ಈ ಹಣ್ಣು ಏನು ಎಂದು ಜನ ಕೇಳಿದಾಗ ಇದು ಹಾರ್ಟ್ ಗೆ ಒಳ್ಳೆಯದು ಕೊಂಡೋಗಿ ಎಂದು ಅಂಗಡಿಯವರು ಹೇಳುತ್ತಿದ್ದರು.
- ಈಗ ಸಂಶೋಧನಾ ಸಂಸ್ಥೆಗಳೂ ಇದನ್ನು ಹೇಳುತ್ತವೆ.
- ಇದನ್ನು ಜೀವ ಸತ್ವದ ಹಣ್ಣು ಎಂದೇ ಬಿಂಬಿಸಲಾಗಿದೆ.
- ವಿಟಮಿನ್ ಗಳು, ವಿಶೇಷವಾಗಿ(C Vitamin) ಹೇರಳವಾಗಿದೆ.
- ಇದಲ್ಲದೆ ಹಲವಾರು ಪೋಷಕಾಂಶಗಳು ಇದರಲ್ಲಿ ಇವೆ ಎನ್ನಲಾಗುತ್ತದೆ.
ಹೇಗೆ ಬೆಳೆಸುವುದು:
- ರಾಂಬುಟಾನ್ ಸಸಿಯನ್ನು ಬೀಜದಿಂದ ಸಸ್ಯಾಭಿವೃದ್ದಿ ಮಾಡುವುದು ಅತ್ಯಂತ ಸರಳವಾದರೂ ಇಲ್ಲಿರುವ ಏಕೈಕ ತೊಡಕು ಎಂದರೆ ಮಾತೃ ಗುಣ ಬಾರದೆ ಇರುವುದು.
- ಈ ಸಮಸ್ಯೆ ನಿವಾರಣೆಗಾಗಿ ಕಸಿ ತಾಂತ್ರಿಕತೆಯ ಮೂಲಕ ಸಸ್ಯಾಭಿವೃದ್ದಿ ಮಾಡಲಾಗುತ್ತಿದೆ.
- ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಆಗಬೇಕು.
- ಜೌಗು ಸ್ಥಳದಲ್ಲಿ ಅಗುವುದಿಲ್ಲ. ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಸಬಹುದು.
ರಾಂಬುಟಾನ್ ಬೆಳೆ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡಿನಲ್ಲಿ ಬೆಳೆಯುತ್ತಿದ್ದು, ವಾತಾವರಣದ ತಾಪಮಾನ ಕಡಿಮೆ ಇರುವ ಪ್ರದೇಶಗಳಲ್ಲೆಲ್ಲಾ ಬೆಳೆಸಬಹುದು.