ನೀರಾವರಿಯಲ್ಲಿ ಅಮೂಲ್ಯವಾದ ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹನಿ ನೀರಾವರಿ ಸಾಮಾಗ್ರಿಗಳನ್ನು ತಯಾರಿಸಿ ಪೂರೈಕೆ ಮಾಡುವವರ ಸಂಖ್ಯೆಯೂ ತುಂಬಾ ಹೆಚ್ಚಾಗುತ್ತಿದೆ. ಹೀಗಿರುವಾಗ ನೀವು ಅಳವಡಿಸಿಕೊಂಡ ಬ್ರಾಂಡ್ ನಲ್ಲಿ ನೀವೆಷ್ಟು ತೃಪ್ತರು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡುವ ಕಿರು ಪ್ರಯತ್ನ ಇದು. ಹನಿ ನೀರಾವರಿ ಅಳವಡಿಸಿಕೊಂಡ ಪ್ರತೀಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ ಹೊಸಬರಿಗೆ ಯಾವ ಬ್ರಾಂಡ್ ಒಳ್ಳೆಯದು ಎಂಬುದನ್ನು ತೀರ್ಮಾನಿಸುವುದಕ್ಕೆ ಅನುಕೂಲವಾಗುತ್ತದೆ. ಈ ಉದ್ದೇಶಕ್ಕಾಗಿಯೇ ಈ ಬರಹ.
ಸಾಮಾನ್ಯವಾಗಿ ನಾವು ಒಂದು ವಸ್ತು ಖರೀದಿ ಮಾಡುವಾಗ ಅದಕ್ಕೆ ಒಂದು ರೇಟಿಂಗ್ ಕೊಡಿ ಎಂದು ಎಲ್ಲಾ ತಯಾರಕರೂ ನಮ್ಮಲ್ಲಿ ದುಂಬಾಲು ಬೀಳುತ್ತಾರೆ. ಆನ್ ಲೈನ್ ನಲ್ಲಿ ಯಾವುದಾದರೂ ವಸ್ತು ಖರೀದಿ ಮಾಡುವಾಗ ನಾವು ನೋಡುವುದು ಅದಕ್ಕೆ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ ಎಂಬುದನ್ನು. ಇದರ ಮೇಲೆ ನಾವು ಖರೀದಿ ಮಾಡುವುದೋ ಬೇಡವೋ ಎಂದು ತೀರ್ಮಾನಿಸಲಿಕ್ಕೆ ಬರುತ್ತದೆ. ಜನ ಒಂದು ವಸ್ತು ಖರೀದಿ ಮಾಡಿ ಅದಕ್ಕೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದು ಅಗತ್ಯ. ಇದು ಬಳಕೆದಾರನ ಕರ್ತವ್ಯವೂ ಸಹ. ಆದರೆ ನಮ್ಮಲ್ಲಿ ಅದರಲ್ಲೂ ಕೃಷಿ ಒಳಸುರಿ ಖರೀದಿಸುವಾಗ ಇದು ತೀರಾ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಒಬ್ಬ ಡೀಲರ್ ಚೆನ್ನಾಗಿ ಬ್ರೈನ್ ವಾಶ್ ಮಾಡಿದರೆ ನಾವು ಅವನ ಬಲೆಗೆ ಬೀಳುತ್ತೇವೆ. ಒಬ್ಬ ಕಡಿಮೆ ಬೆಲೆಗೆ ಕೊಡುತ್ತಾನೆ ಎಂದರೆ ಅವನ ಹಿಂದೆ ಬೀಳುತ್ತೇವೆ. ಕೊನೆಗೆ ನಮಗೆ ಅದು ನುಂಗಲಾರದ ತುತ್ತಾಗುತ್ತದೆ. ಬಹಳಷ್ಟು ಜನ ರೈತರು ಇದನ್ನು ಕಹಿ ಅನುಭವ ಎಂದು ಮರೆತು ಬಿಡುತ್ತಾರೆ. ಹಾಗಾಗಬಾರದು, ಒಬ್ಬ ಕಹಿ ಅನುಭವವನ್ನು ಅನುಭವಿಸಿದರೆ ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬೇಕು. ಆಗ ಅದು ಸರಿಯಾಗಲೂ ಬಹುದು. ತಯಾರಕರು ಇದನ್ನು ಮುಂದೆ ಸರಿಪಡಿಸಲೂಬಹುದು. ಪ್ರತೀಯೊಬ್ಬರೂ ಕೊಳ್ಳುವ ಮುಂಚೆ ಜಾಗರೂಕತೆ ವಹಿಸಲು ಇದು ತುಂಬಾ ಸಹಕಾರಿಯಾಗಬಲ್ಲದು. ಅದಕ್ಕಾಗಿ ಒಂದು ವೇದಿಕೆ ಇದು.
ಹನಿ ನೀರಾವರಿ ವ್ಯವಸ್ಥೆಯಲ್ಲಿ ಸಾಮಾನ್ಯ ಸಮಸ್ಯೆಗಳು:
- ನೀರಾವರಿ ಒಳಸುರಿ (Irrigation inputs) ತಯಾರಕರಲ್ಲಿ ಹತ್ತು ಹಲವು ತಯಾರಕರ ಉತ್ಪನ್ನಗಳಿವೆ.
- ಅವುಗಳಲ್ಲಿ ಒಂದೊಂದರಲ್ಲಿ ಒಂದೊಂದು ಶ್ರೇಷ್ಟತೆಯನ್ನು ಹಾಗೆಯೇ ಸಮಸ್ಯೆಯನ್ನು ನಾವು ಗಮನಿಸಿರುತ್ತೇವೆ.
- ಅದೆಲ್ಲವೂ ಅನುಭವಿಸಿದವರಿಗೇ ಗೊತ್ತು.
- ಇತ್ತೀಚೆಗೆ ಒಬ್ಬರು ಹನಿ ನೀರಾವರಿ ಅಳವಡಿಸಿಕೊಡ ರೈತರು ಹೇಳುತ್ತಾರೆ, ಕೇವಲ 6 ತಿಂಗಳಲ್ಲಿ 50% ಗ್ರೋಮೆಟ್ ಗೆದ್ದಲು/ ಇರುವೆ ತಿಂದು ಹಾಳಾಗಿದೆ.
- ಪಂಪು ಆನ್ ಮಾಡಿದ ನಂತರ ಎಲ್ಲೆಲ್ಲಾ ಗ್ರೋಮೆಟ್ ಇದೆಯೋ ಅಲ್ಲೆಲ್ಲಾ ಒಮ್ಮೆ ಓಡಾಡಿ ನೋಡಿಕೊಂಡು ಬರುವುದೇ ಕೆಲಸ.
- ಇಲ್ಲವಾದರೆ ಪ್ರೆಷರ್ ಡ್ರಾಪ್ ಆಗುತ್ತದೆ ಎಂದು. ಹಾಗೆಯೇ ಕೆಲವರು ನಾವು ಹಾಕಿದ LLDP ಪೈಪು ಒಂದು ವರ್ಷ ದಲ್ಲಿ ಅಲ್ಲಲ್ಲಿ ಇರುವೆ ತಿಂದಿದೆ ಎನ್ನುತ್ತಾರೆ.
- ಹಾಗೆಯೇ ಕೆಲವರು ಡ್ರಿಪ್ಪರ್ ಇರುವೆ ತಿನ್ನುತ್ತದೆ, ಒಳಗಡೆಯ ಡಯಪ್ರಾಂ ಹಾಳಾಗುತ್ತದೆ ಎನ್ನುವವರಿದ್ದಾರೆ.
- ಕೆಲವರ ಪೈಪುಗಳು ಬಿಸಿಲಿಗೆ ಹಾಳಾಗುವುದೂ ಇದೆ.
- ಕೆಲವು ತಯಾರಕರು ಹಿಂದೆ ಕೊಟ್ಟ ಉತ್ಪನ್ನದ ಕೆಲವು ಬಿಡಿ ಭಾಗಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸಿದ ಕಾರಣ ಬೇರೆಯೇ ಹಾಕಬೇಕಾಗುವಂತದ್ದು ಇವೆಲ್ಲಾ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು.
- ಇನ್ನೂ ಕೆಲವು ಅವರವರ ಅನುಭವದ ಸಮಸ್ಯೆಗಳಿರಬಹುದು.
- ಪೈಪುಗಳು ಮಾತ್ರವಲ್ಲ, ಕೆಲವು ಪಿಟ್ಟಿಂಗ್ ಗಳೂ ಸಹ ಪೈಪಿಗೆ ಹೊಂದಾಣಿಕೆ ಆಗುವುದಿಲ್ಲ.
- ಹಾಕಿದ್ದನ್ನು ಗೆದ್ದಳು , ಇರುವೆ ತಿನ್ನುತ್ತದೆ. ತುಂಡಾಗುತ್ತದೆ ಎನ್ನುವವರೂ ಇದ್ದಾರೆ.
- ನಿಮ್ಮ ಅಳವಡಿಕೆಯಲ್ಲಿ ಇಂತಹ ಸಮಸ್ಯೆ ಉಂಟಾಗಿದೆಯೇ? ಆಗಿದ್ದರೆ ಯಾವುದು? ಯಾವ ತಯಾರಿಕೆ?
ಹೇಗೆ ತಮ್ಮ ಅಭಿಪ್ರಾಯ ತಿಳಿಸಬಹುದು?
- ತಮ್ಮ ಅನುಭವವನ್ನು ಅದು ಸಂತೃಪ್ತಿಯದ್ದೇ ಆಗಿರಲಿ, ಅತೃಪ್ತಿಯದ್ದೇ ಆಗಿರಲಿ, ಕಮೆಂಟ್ ನಲ್ಲಿ ಅದನ್ನು ತಾವು ಅಳವಡಿಸಿದ ಬ್ರಾಂಡ್ ಹೆಸರನ್ನು ನಮೂದಿಸಿ ಪೋಸ್ಟ್ ಮಾಡಬೇಕು.
- ಎರಡು ಮೂರು ವರ್ಷಕ್ಕೆ ಹಿಂದೆ ಅಳವಡಿಸಿ, ಆ ತನಕ ತೃಪ್ತಿಕರವಾಗಿ ಕೆಲಸ ಮಾಡಿದ್ದರೆ ಅಂತವರು ಯಾವುದೇ ಕಮೆಂಟ್ ಮಾಡಬೇಕಾಗಿಲ್ಲ.
- ತಮ್ಮದೇ ತಪ್ಪುಗಳಿಂದ ಆದ ಸಮಸ್ಯೆಗಳನ್ನು ಇಲ್ಲಿ ತಿಳಿಸಬೇಕಾಗಿಲ್ಲ.
- ಯಾವುದೇ ಸಮಸ್ಯೆಗಳಿಲ್ಲದೆ ತೃಪ್ತಿಕರವಾಗ ತಯಾರಿಕೆ ಬಗ್ಗೆಯೂ ಹೇಳಬಹುದು.
- ಈ ಪ್ರಯತ್ನ ಪ್ರತೀಯೊಬ್ಬರಿಗೂ ಉತ್ತಮ, ಮಧ್ಯಮ ಮತ್ತು ಕಳೆಪೆ ಯಾವುದು ಎಂಬುದರ ಬಗ್ಗೆ ತಿಳಿಯಪಡಿಸುವುದೇ ಹೊರತು ಮತ್ತೇನಿಲ್ಲ.
ಕೃಷಿ ಒಳಸುರಿಗಳ ಬಗ್ಗೆ ರೇಟಿಂಗ್ ಅಗತ್ಯ:
- ಕೃಷಿಕರು ಇಂದು ಒಳಸುರಿ ತಯಾರಕರಿಗೆ (input manufacturers) ಅತೀ ದೊಡ್ಡ ಗ್ರಾಹಕರು.
- ಹೊಸ ಹೊಸತನ್ನು ಮಾರುಕಟ್ಟೆಗೆ ಬಿಡುವ ಮೂಲಕ ಕೃಷಿಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.
- ಬರೇ ಕೃಷಿ ನೀರಾವರಿ ಮಾತ್ರವಲ್ಲ. ಇನ್ನಿತರ ಬಹಳಷ್ಟು ಕೃಷಿ ಉತ್ಪನ್ನಗಳ ಕಥೆಯೂ ಇದೇ ಆಗಿದೆ.
- ಅದೆಷ್ಟು ಬ್ರಾಂಡುಗಳ ಪಿವಿಸಿ (PVC) ಪೈಪುಗಳು, ಪಂಪುಗಳು, ಬಾಲ್ವ್ ಗಳು, ಗೊಬ್ಬರಗಳು ಎಲ್ಲರಿಗೂ ಈಗ ಅವಕಾಶಗಳು ಹೆಚ್ಚಾಗುತ್ತಾ ಇವೆ.
- ಕೃಷಿ ಕ್ಷೇತ್ರದಿಂದ ಒಳಸುರಿ ತಯಾರಿಕಾ ಕ್ಷೇತ್ರಕ್ಕೆ ಭಾರೀ ಹಣ ಹರಿದು ಬರುತ್ತಿದೆ. ಸಂತೋಷ.
ಕೃಷಿಕನು ಬೆಳೆದ ಉತ್ಪನ್ನಕ್ಕೆ ಗುಣಮಟ್ಟ ಇದ್ದರೆ ಮಾತ್ರ ಅದಕ್ಕೆ ಯೋಗ್ಯ ಬೆಲೆ. ಇಲ್ಲವಾದರೆ ಅವರು ಕೊಟ್ಟ ಬೆಲೆ. ಹಾಗಿರುವಾಗ ತಯಾರಕರು – ಅಥವಾ ಮಾರಾಟಗಾರರು ಸರಬರಾಜು ಮಾಡುವ ಉತ್ಪನ್ನಕ್ಕೂ ಇದು ಬೇಕಲ್ಲವೇ? ಇದನ್ನು ಯಾರು ನಿರ್ಧರಿಸಬೇಕು. ಗ್ರಾಹಕರಾದ ನಾವಲ್ಲವೇ? ಇದನ್ನೇ ರೇಟಿಂಗ್ ಎನ್ನುವುದು. ಉತ್ತಮ ತಯಾರಿಕೆಗೆ ಉತ್ತಮ ಸೇವೆಗೆ ಉತ್ತಮ ರೇಟಿಂಗ್ ಕೊಡುವುದು ಅಗತ್ಯ. ಕಳಪೆಗೆ ಅದರ ಯೋಗ್ಯತೆಗನುಗುಣವಾಗಿ ರೇಟಿಮ್ಗ್ ಕೊಡಬೇಕು. ಆಗ ಮಾತ್ರ ಉತ್ತಮ ತಯಾರಕರಿಗೆ ಬೆಲೆ.