ಅಡಿಕೆ ತೋಟ ಮಾಡಬೇಡಿ – ಸದ್ಯಕ್ಕೆ ಮುಂದೂಡಿ – ಪರಿಸ್ಥಿತಿ ಅನುಕೂಲಕರವಾಗಿ ಇಲ್ಲ.

by | Oct 20, 2022 | Disease Management (ರೋಗ ನಿರ್ವಹಣೆ), Arecanut (ಆಡಿಕೆ) | 0 comments

ಅಡಿಕೆ ಎಂದರೆ ಚಿನ್ನದ ಬೆಳೆ ಎಂದು ತೋಟ ಮಾಡುವವರು ಅಪರಿಮಿತ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದಾರೆ. ಆದರೆ ಕಳವಳದ ಸಂಗತಿ ಎಂದರೆ ಪ್ರಕೃತಿ ಅಡಿಕೆ ಬೆಳೆಗೆ ಸ್ವಲ್ಪ ಮಟ್ಟಿಗೆ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಆದ ಕಾರಣ ಸ್ವಲ್ಪ ಸಮಯದ ವರೆಗೆ ಅಡಿಕೆ ಬೆಳೆ ವಿಸ್ತರಣೆ, ಹೊಸ ತೋಟ ಮಾಡುವುದನ್ನು ನಿಲ್ಲಿಸಿ. ಇರುವ ತೋಟದ ಆರೈಕೆಯನ್ನು ಉತ್ತಮಪಡಿಸಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ಗಮನಹರಿಸಿ. ಅಡಿಕೆ ಬೆಳೆಗೆ ಅದರಲ್ಲೂ ಸಸಿಗಳಿಗೆ ವಿಪರೀತವಾಗಿ ಎಲೆ ಚುಕ್ಕೆ ರೋಗ  ಬಾಧಿಸುತ್ತಿದ್ದು, ಏನೇ ಸಾಹಸ ಮಾಡಿದರೂ ಇದರನ್ನು ಹದ್ದುಬಸ್ತಿಗೆ ತರಲು ಸಾಧ್ಯವಾಗುತ್ತಿಲ್ಲ. 

ಅಡಿಕೆ ಬೆಳೆ ಬೆಳೆಯುವುದು ಎಂದರೆ ಅದು ಭತ್ತ, ರಾಗಿ, ಮೆಣಸು, ಹತ್ತಿ, ಈರುಳ್ಳಿ ಇತ್ಯಾದಿ  ಅಲ್ಪಾವಧಿ ಬೆಳೆಗಳಂತೆ ಅಲ್ಲ. ನೆಟ್ಟರೆ ಅದು ಫಲ ಕೊಡಲು ಕನಿಷ್ಟ 4 ವರ್ಷ ಬೇಕು. ಇಷ್ಟು ವರ್ಷ ಅದನ್ನು ಜೋಪಾನವಾಗಿ ಸಾಕಬೇಕು. ಮೇಲಿನ ಋತುಮಾನದ ಬೆಳೆಗಳು ಹಾಳಾದರೆ ಮುಂದಿನ ಹಂಗಾಮಿನಲ್ಲಿ ಬೆಳೆ ಬೆಳೆದು ಸರಿಮಾಡುವ ಅವಾಕಾಶ ಇದೆ. ಅಡಿಕೆ ಹಾಗಲ್ಲ.  ಎಳವೆಯಲ್ಲಿ ಗಿಡ ಸೊರಗಿದರೆ ಅದು ಯಾವ ಕಾರಣಕ್ಕೂ ಉತ್ಪಾದಕ ತೋಟ ಆಗುವುದಿಲ್ಲ. ನೆಟ್ಟಾಗಿನಿಂದ ನಿರಂತರವಾಗಿ ಸಮರ್ಪಕ ಪೊಷಕಾಂಶ ನಿರ್ವಹಣೆ, ಕೀಟ ರೋಗ ನಿಯಂತ್ರಣ ಮತ್ತು ಬೇಸಾಯ ಕ್ರಮಗಳನ್ನು  ಚಾಚೂ ತಪ್ಪದೆ ಅನುಸರಿಸಿದರೆ ಮಾತ್ರ ಆಗುತ್ತದೆ. ಇಲ್ಲವಾದರೆ  ಇಂತಿಷ್ಟು ಸಂಖ್ಯೆಯ ಮರಗಳಿರುತ್ತವೆ ಅಷ್ಟೇ. ಈಗಿನ ಅಡಿಕೆ ಬೆಳೆಯ  ಪರಿಸ್ಥಿತಿಯಲ್ಲಿ ಹೊಸ ತೋಟ ಮಾಡುವುದು ಸೂಕ್ತವಲ್ಲ. ಎಲೆ ಚುಕ್ಕೆ ರೋಗ ಎಂಬ ಮಹಾಮಾರಿ ಈಗ ಅಪಾಯದ ಮಟ್ಟದಲ್ಲಿ  ಬಾಧಿಸುತ್ತಿರುವುದು ಎಳೆ ಸಸಿಗಳಿಗೆ. ಹರಡುವುದೂ ಮೊದಲಾಗಿ ಎಳೆ ಸಸಿಗಳಿಗೆ. ಹೆಚ್ಚಿನ ಪ್ರಮಾಣದಲ್ಲಿ ಸೊರಗುವುದೂ ಸಹ ಎಳೆ ಸಸಿಗಳೇ. ಹಾಗಿರುವಾಗ ಈಗ ಸಸಿ ನೆಡುವುದೂ ಬೇಡ. ಹೊಸ ತೋಟ ಮಾಡುವುದೂ ಬೇಡ. ಇರುವ ಬೆಳೆದ ಫಲ ಕೊಡುತ್ತಿರುವ ಮರಗಳಿಗೆ ಸಮತೋಲನ ಪ್ರಮಾಣದ ಗೊಬ್ಬರ, ಅಗತ್ಯ ಬೇಸಾಯ ಕ್ರಮಗಳನ್ನು ಅನುಸರಿಸಿ ಅವುಗಳನ್ನು ರೋಗ ಸೋಂಕು ತಗಲದಂತೆ ರಕ್ಷಿಸಿಕೊಳ್ಳಿ.

ಎಳೆ ಸಸಿಗಳು ಮತ್ತು ಎಲೆ ಚುಕ್ಕೆ ರೋಗ:

ಎಳೆ ಸಸಿಗಳಲ್ಲಿ  ಎಲೆ ಚುಕ್ಕೆ ರೋಗದ ಪ್ರಾರಂಭಿಕ ಹಂತ
ಎಳೆ ಸಸಿಗಳಲ್ಲಿ ಎಲೆ ಚುಕ್ಕೆ ರೋಗದ ಪ್ರಾರಂಭಿಕ ಹಂತ
  • ನಾವು ಹಲವಾರು ಕಡೆ ಕಂಡಂತೆ ಎಳೆ ಸಸಿಗಳಿಗೆ ಎಲೆ ಚುಕ್ಕೆ ರೋಗ ಬೇಗ ತಗಲುತ್ತದೆ.
  • ಎಲೆಗಳು ಹಳದಿಯಾಗಿರುತ್ತವೆ. ಎಲೆಗಳಲ್ಲಿ ಚುಕ್ಕೆ ಚುಕ್ಕೆ ಕಾಣಿಸುತ್ತದೆ.
  • ಹೊಸ ಸುಳಿ ಬರುವುದು ತಡವಾಗುತ್ತದೆ. ಹಳೆಯ ಎಲೆಗಳು ಬಲಿತು ಹಣ್ಣಾದ ನಂತರ  ಗಿಡದಿಂದ ಬೇರ್ಪಡುತ್ತವೆ.
  • ತತ್ಪರಿಣಾಮವಾಗಿ ಗಿಡದಲ್ಲಿ ಎಲೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಗಿಡ ಸೊರಗುತ್ತದೆ.
  • ಗಿಡಗಳು ಸೊರಗುವುದಕ್ಕೆ ಕಾರಣ ರೋಗಕ್ಕೆ ಕಾರಣವಾದ 3 ಬಗೆಯ ಶಿಲಿಂದ್ರಗಳು Colletotrichum(*), Phyllosticta (*1)Pestalotiopsis(*2)
  • ಇವು ಸಸ್ಯದ ಕೋಶಗಳ ಒಳಗೆ ಸೇರಿಕೊಂಡು ಅವುಗಳನ್ನು ಸೊರಗುವಂತೆ ಮಾಡುತ್ತದೆ.
  • (* ಇದು ಬಹುತೇಕ ಎಲ್ಲಾ ಬೆಳೆಗಳಿಗೂ ಎಲೆ, ಹಣ್ಣುಗಳಿಗೆ ಬಾಧಿಸುತ್ತದೆ) (*1 ಇದು ಕಾಯಿಗಳಿಗೆ , ಕಾಂಡಕ್ಕೆ ಬಾಧಿಸುತ್ತದೆ) (*2 ಇದು ಕಾಯಿ ಎಲೆ, ಎಲೆದಂಟುಗಳಿಗೆ ಬಾಧಿಸುತ್ತದೆ)
  • ಸಸ್ಯಗಳ  ಇಮ್ಮೂನ್ ಸಿಸ್ಟಮ್ ಗೆ(lupin disease) ಹಾನಿ ಮಾಡುವ ರೋಗಕಾರಕ ಇದಾಗಿದ್ದು, ಜಗತ್ತಿನಾದ್ಯಂತ ಬೇರೆ ಬೇರೆ ಬೆಳೆಗಳಿಗೆ ಇದು ದೊಡ್ಡ ಆತಂಕವಾಗಿರುತ್ತದೆ.
  • ನಮ್ಮ ದೇಶದಲ್ಲಿ ಇದು ಅಡಿಕೆ ಬೆಳೆಗೆ ಹಾನಿ ಮಾಡಿದ್ದು ನಮಗೆ ಈಗ ಗಮನಕ್ಕೆ ಬಂದಿದ್ದರೂ ಬೇರೆ ದೇಶಗಳಲ್ಲಿ ತೆಂಗು ಬೆಳೆಯೂ ಸೇರಿದಂತೆ ಬೇರೆ ಬೇರೆ ಬೆಳೆಗಳಿಗೆ ಬಾಧಿಸಿದ ವರದಿ ಇದೆ.
  • ಕರಿಮೆಣಸು, ಬಾಳೆ, ಕಾಫೀ ಬೆಳೆಗೂ ಇದು ಪ್ರಸಾರವಾಗುತ್ತದೆ.
  • ಇದು ಒಂದು ತರಹ ಅಂಗ ಮಾರಿ ರೋಗದಂತೆ.
  • ಬೀಜ, ಸಸಿ ಮೂಲಕ ಪ್ರಸಾರವಾಗುತ್ತದೆ.
  • ನೀರು ಗಾಳಿಯ ಮೂಲಕ ಪ್ರಸಾರದ ತೀವ್ರತೆ ಹೆಚ್ಚುತ್ತದೆ.
  • ಇದು ಹೊಸ ಶಿಲೀಂದ್ರ ಅಲ್ಲ. ಇದನ್ನು ಈ ಹಿಂದೆಯೇ ಪತ್ತೆ ಮಾಡಲಾಗಿದೆ.
  • ಇದನ್ನು ಸಾಮಾನ್ಯ ರೋಗಕಾರಕ ಎಂದು ಪರಿಗಣಿಸಲಾಗಿತ್ತು.
  • ವಾತಾವರಣದ ಏರು ಪೇರು ಈ ಶಿಲೀಂದ್ರ  ಅಪಾಯದ ಮಟ್ಟಕ್ಕೆ ತಲುಪಲು ಕಾರಣ.
ಇಂತಹ ಅಡಿಕೆ ಬೀಜಗಳನ್ನು ಆಯ್ಕೆ ಮಾಡಿದರೆ ರೋಗ ಬರುವ ಸಾಧ್ಯತೆ ಇದೆ.
ಇಂತಹ ಅಡಿಕೆ ಬೀಜಗಳನ್ನು ಆಯ್ಕೆ ಮಾಡಿದರೆ ರೋಗ ಬರುವ ಸಾಧ್ಯತೆ ಇದೆ.

ಎಳೆಯ ಸಸಿಗಳಿಗೆ ಹೇಗೆ ಬಂದಿರಬಹುದು?

  • ಅಡಿಕೆ ಬೀಜದ ಮೂಲಕ ಈ ರೋಗ ಸಸಿಗಳಿಗೆ ತಗಲಿರಬಹುದೇ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬರಲಾಗುವುದಿಲ್ಲ.
  • ಬಹಳಷ್ಟು ಅಡಿಕೆ ಸಸಿ ಮಾಡುವ ನರ್ಸರಿಗಳಲ್ಲಿ ಎಲೆಯ ಮೇಲೆ ಚುಕ್ಕೆಗಳು ಇರುವುದನ್ನು ಕಾಣಬಹುದು.
  • ಇದು ಈ ಹಿಂದೆಯೂ ಇರುತ್ತಿತ್ತು. ಈಗ ಅದು ಸ್ವಲ್ಪ ಹೆಚ್ಚಳವಾಗಿದೆ.
  • ಸಸಿಯಲ್ಲಿ ಒಂದು ಎರಡು ಸಣ್ಣ ಸಣ್ಣ ಕರಟಿದ ಚುಕ್ಕೆ ತರಹ ಇದ್ದರೆ ಅದು ಪ್ರಸಾರವಾಗಿ  ಹೆಚ್ಚಳವಾಗುವ ಸಾಧ್ಯತೆ ಇದೆ.
  • ಹಳೆಯ ಮರಗಳಿಗೆ ಆಗಲೇ ಎಲೆ ಚುಕ್ಕೆ ಅಲ್ಲಲ್ಲಿ ಗಮನಕ್ಕೆ ಬಾರದೆ ಇದ್ದಿರಲೂ ಬಹುದು.
  • ಅದು ಎಳೆಸಸಿಗಳಿಗೆ ಪ್ರಸಾರ ಬೇಗ ಆಗುತ್ತದೆ.
  • ಮಳೆಗಾಲ ಪ್ರಾರಂಭದಲ್ಲಿ ಎಲೆಗಳು ಹಚ್ಚ ಹಸುರಾಗಿ ಇತ್ತಾದರೂ ಮಳೆಗಾಲ ಮಧ್ಯಭಾಗದಲ್ಲಿ ಹಳದಿಯಾಗಲು ಪ್ರಾರಂಭವಾಗಿದೆ.
  • ಕಾರಣ ಆ ಸಮಯದಲ್ಲಿ ನೀರು ನಂಜು ಸಹ ಹೆಚ್ಚು. (ಒಂದೆರಡು ದಿನ ನೀರು ನಿಂತರೆ ಆ ನೀರು ಹಳಸಲು ಉಂಟಾಗಿ ನೀರಿನ ನಂಜು ಆಗುತ್ತದೆ. ಅಂತಹ ಗಿಡದ ಬುಡದಲ್ಲಿ ಮಣ್ಣು ಕೆನೆ ತರಹ ನಿಂತಿರುತ್ತದೆ.)
  • ನೀರು ನಂಜಾದರೆ ಬೇರಿಗೆ ಹಾನಿಯಾಗುತ್ತದೆ. ಸಸ್ಯ ಸೊರಗುತ್ತದೆ.
  • ಆಗ ರೋಗಕಾರಕ ಪ್ರವೇಶಕ್ಕೆ ಅನುಕೂಲವಾಗುತ್ತದೆ. ಅನುಕೂಲ ಪರಿಸ್ಥಿತಿ ಒದಗಿ ರೋಗ ಹೆಚ್ಚಾಗಿದೆ ಎಂದರೂ ತಪ್ಪಲ್ಲ.
ಎಲೆಗಳಲ್ಲಿ ಈ ರೀತಿ ಚುಕ್ಕೆಗಳು ಇದ್ದರೆ ರೋಗ ಹೆಚ್ಚಾಗುವ ಲಕ್ಷಣ
ಎಲೆಗಳಲ್ಲಿ ಈ ರೀತಿ ಚುಕ್ಕೆಗಳು ಇದ್ದರೆ ರೋಗ ಹೆಚ್ಚಾಗುವ ಲಕ್ಷಣ

ಯಾಕೆ ಹೊಸ ತೋಟ ಮಾಡಬೇಡಿ:

  • ಈಗಾಗಾಗಲೇ ರೋಗ ವೇಗವಾಗಿ ಹರಡುವ ಸ್ಥಿತಿಯಲ್ಲಿದೆ. ಒಮ್ಮೆ ಇದು ಉಚ್ಚ್ರಾಯ ಸ್ಥಿತಿಗೆ ತಲುಪಲೂಬಹುದು.
  • ಈ ಸಮಯದಲ್ಲಿ ನೀವೇ ಗಿಡ ತಯಾರು ಮಾಡಿದರೂ ಅದಕ್ಕೆ ಚುಕ್ಕೆಗಳು ಬೀಳುವ ಸಾಧ್ಯತೆ ಇದೆ.
  • ನರ್ಸರಿಗಳಲ್ಲೂ ಇರುವ ಸಾಧ್ಯತೆ ಇದೆ. ಕಣ್ಣಿಗೆ  ಕಾಣಿಸುವ ತರಹ ಚುಕ್ಕೆಗಳು ಇರಬಹುದು.
  • ಕಾಣಿಸದ ತರಹವೂ  ಇರಬಹುದು.ಇಂತಹ ಗಿಡಗಳನ್ನು ನಾಟಿ ಮಾಡಿದಾಗ ಅದು ಬೆಳೆಯುವಾಗ ಅನುಕೂಲ ಪರಿಸ್ಥಿತಿ ದೊರೆತಲ್ಲಿ ತೀವ್ರವಾಗಿ ಬಾಧಿಸಬಹುದು. 
  • ಎಳೆ ಗಿಡ ಒಂದು ವರ್ಷದ ಬೆಳೆವಣಿಗೆಯಲ್ಲಿ ಯಾವುದೇ ರೋಗಕಾರಕಗಳು ಬಾಧಿಸಿ ಸೊರಗಿದರೆ ಆ ಸಸಿಯ ಭವಿಷ್ಯವೇ  ಹಾಳಾಗುತ್ತದೆ.
  • ಆ ಕಾರಣದಿಂದ ಇಂತಹ ಸಂಧಿಗ್ಧ  ಕಾಲದದಲ್ಲಿ ಸುರಕ್ಷತೆ ದೃಷ್ಟಿಯಿಂದ ಹೊಸ ತೋಟ ಮಾಡದಿರುವುದು ಉತ್ತಮ.
  • ತಿಂಗಳ ಹಿಂದೆ ಒಂದಷ್ಟು ಜನ ನಮ್ಮಲ್ಲಿ ಈ ರೋಗ ಲಕ್ಷಣ ಇಲ್ಲ ಎನ್ನುತ್ತಿದ್ದವರು ಈಗ ಸ್ವಲ್ಪ ಸ್ವಲ್ಪ ಕಾಣಿಸಲಾರಂಭಿಸಿದೆ ಎನ್ನುತ್ತಿದ್ದಾರೆ.
  • ಹಾಗಾಗಿ ಬಹುಷಃ ಸರದಿ ಪ್ರಕಾರ  ಎಲ್ಲಕಡೆಯೂ ಬರಲೂಬಹುದು.
ಎಳೆ ಸಸಿಗಳಿಗೆ ಎಲೆ ಚುಕ್ಕೆ ರೋಗ ಬಾಧಿಸಿದ್ದರೆ ಎಲೆ ಹಳದಿಯಾಗುವಿಕೆ
ಎಳೆ ಸಸಿಗಳಿಗೆ ಎಲೆ ಚುಕ್ಕೆ ರೋಗ ಬಾಧಿಸಿದ್ದರೆ ಎಲೆ ಹಳದಿಯಾಗುವಿಕೆ

ಆತಂಕ ಪಡಬೇಕಾಗಿಲ್ಲ- ಇದು ನಿವಾರಣೆ ಆಗುತ್ತದೆ:

ಹೊಸತಾಗಿ ನೆಟ್ಟ ಸಸಿಗಳ ಅವಸ್ಥೆ ಹೀಗಿದೆ. 1 ವರ್ಷ ತುಂಬಿದ ಗಿಡಗಳು.
ಹೊಸತಾಗಿ ನೆಟ್ಟ ಸಸಿಗಳ ಅವಸ್ಥೆ ಹೀಗಿದೆ. 1 ವರ್ಷ ತುಂಬಿದ ಗಿಡಗಳು.
  • ಯಾವುದೇ ರೋಗ ಇರಲಿ, ಕೀಟ  ಇರಲಿ ಕೆಲವೊಮ್ಮೆ ಸೌಮ್ಯವಾಗಿ ಇರುತ್ತದೆ.
  • ಕೆಲವೊಮ್ಮೆ ಉಲ್ಬಣವಾಗುವುದೂ ಇರುತ್ತದೆ. ಉಲ್ಬಣವಾದರೆ ತನ್ನಷ್ಟಕ್ಕೆ ಕಡಿಮೆಯೂ ಆಗುತ್ತದೆ.
  • ಆಗ ಅದಕ್ಕೆ ಅನನುಕೂಲಕರ ಸನ್ನಿವೇಶವೂ ಸೃಷ್ಟಿಯಾಗಬಹುದು.
  • ಯಾವುದಾದರೂ ವೈರಿ ಜೀವಿ ಪ್ರಾಭಲ್ಯ ಹೊಂದಲೂ ಬಹುದು.
  • ಹಾಗಾಗಿ ರೋಗ ಹದ್ದುಬಸ್ತಿಗೆ ಬರುವ ತನಕ ಹೊಸ ತೋಟ ಮಾಡಬೇಡಿ.
  • ಈ ಬಗ್ಗೆ ತಜ್ಞರು ವಿಸ್ತೃತ ಅಧ್ಯಯನದಲ್ಲಿ ತೊಡಗಿರುವ ಕಾರಣ  ಸದ್ಯವೇ ಸಮರ್ಪಕ ಔಷದೋಪಚಾರವನ್ನೂ ಕಂಡುಹಿಡಿಯಲಿದ್ದಾರೆ.
  • ಹಳೆ ತೋಟಗಳಲ್ಲಿ ಅದರಲ್ಲಿ 25-30 ಅಡಿಗಿಂತ  ಹೆಚ್ಚು  ಬೆಳೆದ ಮರಗಳಲ್ಲಿ ಎಲೆ ಚುಕ್ಕೆ ರೋಗ ಅಲ್ಪ ಸ್ವಲ್ಪ ಬಾಧಿಸಿದ್ದರೂ ಇಳುವರಿಗೆ ಭಾರೀ  ಹಾನಿ ಉಂಟಾಗುವಷ್ಟು ತೊಂದರೆ ಉಂಟಾಗಿಲ್ಲ.
  • ಇಂತಹ ಮರಗಳಲ್ಲಿ ಎಲೆಗಳು ಹೆಚ್ಚು ಇರುತ್ತವೆ. ಬೇರುಗಳೂ ಹೆಚ್ಚು ಇರುತ್ತವೆ.
  • ಇದಕ್ಕೆ ಸಮ್ತೋಲನ ಪ್ರಮಾಣದ ಗೊಬ್ಬರ ಹಾಗೂ ದ್ವಿತೀಯ ಪೋಷಕಾಂಶಗಳನ್ನು ಕೊಟ್ಟು ಆರೋಗ್ಯ ಉತ್ತಮ ಪಡಿಸುವ ಮೂಲಕ ಅದರಿಂದ ಉತ್ತಮ ಇಳುವರಿ ಪಡೆಯಲು ಪ್ರಯತ್ನಿಸಿ.
  • ಸಾವಯವ+ ರಾಸಾಯನಿಕ ಎಂಬ ಗೊಂದಲಕ್ಕೆ ಒಳಗಾಗದೆ ನಮ್ಮ ದೇಹಕ್ಕೆ ಹೇಗೆ ಸಮತೋಲನ ಆಹಾರ (ದ್ರವ+ ಘನ+ ಪೌಷ್ಟಿಕ)  ಆಹಾರಗಳು ದೇಹದ ಶಕ್ತಿ ವರ್ಧನೆಗೆ ಬೇಕಾಗುತ್ತದೆಯೋ
  • ಹಾಗೆಯೇ ಸಸ್ಯಗಳಿಗೂ ಕೊಡುವುದನ್ನು ರೂಢಿ ಮಾಡಿಕೊಳ್ಳಿ.
  • ಟ್ರೈಕೋಡರ್ಮಾ, ಸುಡೋಮೋನಸ್ ಮುಂತಾದ ಜೈವಿಕ ಶಿಲೀಂದ್ರ ನಾಶಕಗಳು ಸಸ್ಯಕ್ಕೆ ರೋಗ ನಿರೋಧಕ ಶಕ್ತಿ ಕೊಡುವಲ್ಲಿ ಸಹಕಾರಿಯಾಗಿವೆ.
  • ಈ ಶಿಲೀಂದ್ರ ಸೋಂಕು ತಗಲಿದ ಬೇರೆ ಬೇರೆ ಬೆಳೆಗಳಲ್ಲಿ ಇವುಗಳನ್ನು ಬಳಕೆ ಮಾಡಿ ಫಲಿತಾಂಶ  ಕಂಡ ಬಗ್ಗೆ ವರದಿಗಳು ಇವೆ. ಹಾಗಾಗಿ ಇದನ್ನು ಬಳಸುವುದು ಹೆಚ್ಚು ಸೂಕ್ತ.
  • ಯಾವುದೇ ಔಷಧಿ ಸಿಂಪಡಿಸುವುದಿದ್ದರೂ ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚು ಔಷಧಿ ಸೇರಿಸಬೇಡಿ.
ಬೆಳವಣಿಗೆ ಆದ ಮರಗಳಲ್ಲಿ ಕೆಳಗಿನ ಎಲೆಗೆ ಹೆಚ್ಚಿನ ಹಾನಿ. ತುದಿ ಎಲೆ ಹೆಚ್ಚು ಬಾಧಿತವಾಗಿಲ್ಲ
ಬೆಳವಣಿಗೆ ಆದ ಮರಗಳಲ್ಲಿ ಕೆಳಗಿನ ಎಲೆಗೆ ಹೆಚ್ಚಿನ ಹಾನಿ. ತುದಿ ಎಲೆ ಹೆಚ್ಚು ಬಾಧಿತವಾಗಿಲ್ಲ

ರೈತರು ಹೀಗೆ ಹೇಳುತ್ತಾರೆ:

  • ಈಗ ಎಲೆ ಚುಕ್ಕೆ ಬಾಧಿಸಿ ಅದರಿಂದ ಹಾನಿಯಾದ ಶಿವಮೊಗ್ಗ ಜಿಲ್ಲೆಯ ಹೊಸನಗರ, ನಿಟ್ಟೂರು, ತೀರ್ಥಹಳ್ಳಿ ಭಾಗಗಳ ಕೆಲವು ರೈತರು ಹೆಕ್ಸಾ ಕೊನೆಝಾಲ್, ಕಾರ್ಬನ್ಡೈಜಿಮ್, ಮ್ಯಾಂಕೋಜೆಬ್, ಕಾಪರ್ ಆಕ್ಸೀ ಕ್ಲೋರೈಡ್ ಇತ್ಯಾದಿ ಸಿಂಪರಣೆ ಮಾಡಿ ನೊಡಿ ಅದರಲ್ಲಿ ಯಾವ ಫಲಿತಾಂಶವನ್ನೂ ಕಂಡಿಲ್ಲವಂತೆ.
  • ಯಾರದರೂ ಇದರಲ್ಲಿ ಫಲ ಕಂಡಿದ್ದರೆ ಅದರ ಬಗ್ಗೆ ತಿಳಿಸುವುದು  ಸೂಕ್ತ.
  • ಯಾವ ಔಷಧಿಯಾದರೂ ಸೋಂಕು ತಗಲಿದ ಭಾಗಗಳನ್ನು ತೆಗೆದು ಸುಟ್ಟು ವಿಲೇವಾರಿ ಮಾಡದೆ ಸಿಂಪಡಿಸಿದರೆ ಫಲ ಸಿಗುವುದು ಕಷ್ಟ.

ಹೊಸ ತೋಟ ಮಾಡಲು ಇನ್ನೂ ಒಂದೆರಡು ವರ್ಷ ಕಾಯಿರಿ. ಆಗ ಈ ರೋಗದ ಉಲ್ಬಣ ಸ್ಥಿತಿ ತಗ್ಗುವ ಸಾಧ್ಯತೆ ಇದೆ. ಇದು ನಿರಾಸೆಯ ಮಾತಲ್ಲ. ರೋಗ ಬಂದು ಹಾಳು ಮಾಡಿಕೊಳ್ಳುವುದಕ್ಕಿಂತ ಸ್ವಲ್ಪ ಕಾಯುವುದು ಉತ್ತಮ ಎಂಬುದಷ್ಟೇ. ನರ್ಸರಿಗಳು ಒಂದೆರಡು ವರ್ಷ ಅಡಿಕೆ ಸಸಿ ಮಾಡುವುದನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಯೋಗ್ಯವೇನೋ ಅನ್ನಿಸುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!