ನಾವು ಕೃಷಿಕರು ಬಡವರು. ನಮಗೆ ಏನೂ ಇಲ್ಲ ಎಂದು ಯಾವತ್ತೂ ಹೇಳಬೇಡಿ. ಕೃಷಿರಾದವರೇ ಸಮಾಜದಲ್ಲಿ ತೃಪಿಯ ಜೀವನ ನಡೆಸು ಹೃದಯ ಶ್ರೀಮಂತರು. ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಬಡವನಾದವನೇ ಮುಂದೆ ಶ್ರೀಮಂತನಾಗುವುದು. ಸಿರಿವಂತನಾದವನೇ ನಂತರ ಬಡವನಾಗುವುದು. ಇದೊಂದು ಚಕ್ರ. ಕೃಷಿಕರ ಜೀವನ ಕ್ರಮ ಎಂಬುದು ಸಮಾಜದಲ್ಲಿ ಯಾರೂ ಗಳಿಸದ ಸುಖೀ ಬದುಕನ್ನು ಅನುಭವಸಲಿಕ್ಕಾಗಿಯೇ ಇರುವುದು.
ಸ್ವಾವಲಂಭಿ ಬದುಕು ಎಂಬುದು ಇದ್ದರೆ ಅದು ಕೃಷಿ ವೃತ್ತಿಯಲ್ಲಿ ಮಾತ್ರ. ಇಲ್ಲಿ ನಮಗೆ ನಾವೇ ಮಾಲಕರು. ಹೊಟ್ಟೆಗೆ ತಿನ್ನುವುದಕ್ಕೇನೂ ಕಡಿಮೆ ಇಲ್ಲ. ತಿಂದು ಉಂಡು ಉಳಿದದನ್ನು ಮಾರಾಟ ಮಾಡಿ ಅದು ಎಷ್ಟೇ ಇರಲಿ. ಅದನ್ನು ಸಂತೃಪ್ತಿಯಿಂದ ಸ್ವೀಕರಿಸುವ ಏಕೈಕ ನಾಗರೀಕರು ಎಂದರೆ ಕೃಷಿಕರು. ಅದಕ್ಕೇ ಹಿರಿಯರು ಗಾದೆ ಮಾಡಿದ್ದು, ನಮ್ಮ ತೋಟದಲ್ಲಿ ನಾವು ಕೈಬೀಸಿದರೆ ಕೇಳುವವರು ಯಾರು ಎಂದು.
ಒಬ್ಬ ಸರಕಾರಿ ನೌಕರರನ್ನು ಮಾತಾಡಿಸಿರಿ. ಅವನ ಎಲ್ಲಾ ಮಾತುಗಳಲ್ಲಿ ನಮಗೆ ಏನೂ ಇಲ್ಲ, ಸಂಬಳ ಸಾಕಾಗುವುದಿಲ್ಲ, ಎಂಬುದೇ ಕೇಳಿ ಬರುತ್ತದೆ. ಎರಡು ಜನ ಸರಕಾರಿ ನೌಕರರು ಸೇರಿದಲ್ಲಿ ಅವರು ಮಾತಾಡುವ ವಿಚಾರವನ್ನು ಸ್ವಲ್ಪ ಕದ್ದು ಕೇಳಿ. ಸರಕಾರ ನಮಗೆ ಕೊಟ್ಟದ್ದು ಸಾಲದು. ಇನ್ಕ್ರಿಮೆಂಟ್ ಕಡಿಮೆಯಾಯಿತು. ಡಿ ಎ ಕಡಿಮೆಯಾಯಿತು ಇದೇ ಸುದ್ದಿ ಬಿಟ್ಟರೆ ಬೇರೆ ಏನೂ ಇಲ್ಲ. ಮಾತು ಮಾತಿಗೂ ಇಲ್ಲ. ಇಲ್ಲ. ಇಲ್ಲ. ಇವರ ದೃಷ್ಟಿಯಲ್ಲಿ ಬೇರೆಯವರೆಲ್ಲಾ ಸಾಕಷ್ಟು ಇರುವವರೇ. ( ಕೆಲವು ಬೆರಳೆಣಿಕೆಯ ಮಂದಿ ಇದಕ್ಕೆ ಅಪವಾದವಾಗಿ ಇರಬಹುದು) ಇಂತಹ ಯಾವ ಮಾತುಗಳನ್ನು ಆಡದವರು ಇದ್ದರೆ ಅದು ಕೃಷಿಕರು ಮಾತ್ರ. ನಾಲ್ಕು ಜನ ಸೇರಿದಾಗ ಬೆಳೆ ಬಗ್ಗೆ, ಫಸಲಿನ ಬಗ್ಗೆ ಚರ್ಚಿಸುತ್ತಾರೆ. ಸಾಮಾಜದ ಒಳಿತಿನ ಬಗ್ಗೆಯೂ ಮಾತಾಡುತ್ತಾರೆ. ಅದು ಮಾರಿ ಇಷ್ಟು ಬಂತು. ಮಾರಾಟ ಮಾಡಿದ ಮೇಲೆ ದರ ಏರಿಕೆ ಆದಾಗ ಸ್ವಲ್ಪ ನಷ್ಟವಾಯಿತು. ಮುಂದಿನ ಬೆಳೆ ಇದೆಯಲ್ಲವೇ ಎಂದು ಅದರಲ್ಲೇ ತೃಪ್ತನಾಗಿರುತ್ತಾನೆ.
ಕೃಷಿಕರಿಗೂ ಉಳಿದವರಿಗೂ ವ್ಯತ್ಯಾಸ:
ಈ ವರ್ಷ ಮಳೆ ಹೆಚ್ಚಾಗಿ ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಒಣಗಿಸಲಿಕ್ಕೆ ಕಷ್ಟವಾಗಿ ಎಲ್ಲರೂ ಪ್ಲಾಸ್ಟಿಕ್ ಹೊದಿಸಿದ ಒಣಗು ಮನೆ ಮಾಡುತ್ತಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ವಿನ್ಯಾಸ. ಇದನ್ನು ನೋಡಲು ಎಲ್ಲಿಂದೆಲ್ಲಿಂದಲೋ ಜನ ಬರುವುದು. ಮಾಲಕರು ಅವರನ್ನೆಲ್ಲಾ ಸಂತೋಷದಿಂದ ಬರಮಾಡಿಕೊಂಡು ಅವರಿಗೆ ಚಹ, ಕಾಫೀ ಕೊಟ್ಟು ತಮ್ಮ ಒಂದಷ್ಟು ಸಮಯವನ್ನು ಯಾವ ಬೇಸರವೂ ಇಲ್ಲದೆ ಅವರೊಂದಿಗೆ ಕಳೆಯುತ್ತಾರೆ. ಇಂತಹ ಮನೋಸ್ಥಿತಿ ಸಮಾಜದಲ್ಲಿ ಬೇರೆ ಯಾವ ವರ್ಗಕ್ಕೆ ಇದೆ ಹೇಳಿ?
ಕೃಷಿಕರಾಗಿದ್ದವರು ತನ್ನ ಮನೆಗೆ ಏನಾದರೂ ತಿನ್ನುವ ವಸ್ತು, ಅಹಾರ ಸಾಮಾಗ್ರಿ ಒಯ್ಯುವುದಿದ್ದರೆ, ಮನೆಯವರೆಲ್ಲರೂ ಬೇಕಾದಷ್ಟು ತಿನ್ನುವಷ್ಟೂ, ನಾಳೆ ನಾಡಿದ್ದಿನ ತನಕ ಉಳಿಯುವಷ್ಟು ಒಯ್ಯುತ್ತಾನೆ. ಅದೇ ಒಬ್ಬ ಸರಕಾರಿ ನೌಕರ, ಅಥವಾ ವ್ಯಾವಹಾರಿಕತೆಯನ್ನೇ ಕಂಡವರು, ಅಂದಿನ ದಿನಕ್ಕೆ ಬೇಕಾದಷ್ಟೇ ಒಯ್ಯುವ ಮನೋಭಾವದವರು. ತಾನು ಏನಾದರೂ ಕೊಳ್ಳುವುದಿದ್ದರೆ ಅದಕ್ಕೆಲ್ಲಾ ಭಾರೀ ಲೆಕ್ಕಾಚಾರ ಹಾಕಿ ಕೊಳ್ಳುವವರು. ಚರ್ಚೆ, ಜಿಪುಣತನಕ್ಕೆ ಯಾವತ್ತೂ ನಾಚಿಕೆಪಟ್ಟವರಲ್ಲ. ಕೃಷಿಕ ಹಾಗಲ್ಲ. ತನ್ನ ಮನೆಗೆ ಸಾಮಾಗ್ರಿ ಒಯ್ಯುವಾಗ ಉಳಿದರೆ ನಾಳೆಗೂ ಆಗುತ್ತದೆ ಎಂಬ ಮನೋಭಾವನೆಯಲ್ಲಿ ಕೊಳ್ಳುವವರು. ತಾನು ಖರೀದಿಸಿದ ಯಾವುದೇ ವಸ್ತು ಸ್ವಲ್ಪ ಹಾಳಾಗಿದ್ದರೆ ಅದರಲ್ಲಿ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವನೆ ಇದ್ದರೆ ಅದು ಕೃಷಿಕನಿಗೆ ಮಾತ್ರ. ಅದೇ ಬೇರೆಯವರು ಹಾಳಾದದ್ದನ್ನು ವಾಪಾಸು ಕೊಟ್ಟು ಬೇರೆ ಪಡೆಯುವ ಮನೋಸ್ಥಿತಿಯವರು.
ಮನೆಗೆ ಯಾರೇ ಒಬ್ಬ ಬಂದರೂ ಅವನನ್ನು ಕುಳ್ಳಿರಿಸಿ ಮಾತಾಡಿಸುವ ಗುಣ ಕೃಷಿಕರದ್ದು. ಬಾಗಿಲು ತೆಗೆದು ನಿಂತಲ್ಲೇ ಯಾರು? ಏನು? ನಮಗೆ ಗೊತ್ತಿಲ್ಲ. ನಮಗೆ ಬೇಡ. ಎಂದು ಸರಾಸಗಾಟಗಿ ಅವರನ್ನು ದೂರಮಾಡುವವರಿದ್ದರೆ ಅವರು ಕೃಷಿಕಲ್ಲದವರು ಮಾತ್ರ. ಇದರಲ್ಲೇ ವ್ಯಕ್ತಿಯೊಬ್ಬ ಯಾರು, ಕೃಷಿಕನೇ ಎಂಬುದನ್ನು ಅವನ ಗುಣ ನಡತೆಯಲ್ಲೇ ತಿಳಿಯಹುದು. ಗುಣ ನಡತೆಯಲ್ಲಿ ಸಜ್ಜನಿಕೆ ಇರುವುದು ಕೃಷಿಕನಿಗೆ ಮಾತ್ರ. ಮಧ್ಯಾಹ್ನದ ಹೊತ್ತಿಗೆ ಯಾರೇ ಬಂದರೂ ಊಟ ಆಗಿದೆಯೇ? ಮಾಡುತ್ತೀರಾ? ಎಂದು ಕೇಳುವ ಉನ್ನತ ಮನೋಸ್ಥಿತಿಯವರು.
ಮೊನ್ನೆ ನಮ್ಮೂರಿನ ಓರ್ವ ಹಿರಿಯ ವ್ಯಾಪಾರಿಗಳು ಹೀಗೆ ಹೇಳಿದ್ದರು. “ ಕೃಷಿಕರ ಜೊತೆಗೆ ವ್ಯವಹಾರ ಕಷ್ಟ ಇಲ್ಲ. ಯಾಕೆಂದರೆ ಆವರಿಗೆ ಹೇಳಿದ್ದು ಅರ್ಥವಾಗುತ್ತದೆ. ಎಲ್ಲವನ್ನೂ ಪಕ್ಕಾ ವ್ಯಾವಹಾರಿಕವಾಗಿ ನೋಡುವ ಜನರೂ ಆಲ್ಲ. ಉಳಿದವರು 50 ಗ್ರಾಂ, ಕಲ್ಲುಸಕ್ಕರೆ ಕೊಳ್ಳುವಾಗ ಕೃಷಿಕರು 500 ಗ್ರಾಂ ಗಿರಾಕಿಗಳು. ನೀವು ಕೃಷಿಕರಾಗಿ ಬೆಳೆದು ಬಂದ ಕಾರಣ ನಿಮಗೆ ಮನೆಗೆ ವಸ್ತು ಕೊಳ್ಳುವಾಗ ಜಿಪುಣತನ ಇರುವುದಿಲ್ಲ. ನಾವು ಸಂಪಾದಿಸುವುದು , ನಮ್ಮ ಸುಖಕ್ಕಾಗಿ. ಅದನ್ನು ಅನುಭವಿಸಿ ಬದುಕುವುದೇ ಜೀವನ ಎಂದು ತಿಳಿದವರು ಕೃಷಿಕರು” ಎಂಬ ಮಾತನ್ನು ಹೇಳಿದರು. ಒಮ್ಮೆ ಈ ಮಾತನ್ನು ಕೇಳಿ ಉಬ್ಬಿದ್ದಷ್ಟೇ ಅಲ್ಲದೆ ಸೂಕ್ಷ್ಮವಾಗಿ ಗಮನಿಸಿದಾಗ ಇದು ಸತ್ಯವೆಂದೆಣಿಸಿತು. ಸ್ವಲ್ಪ ಬುದ್ದಿವಂತರು, ವ್ಯಾಪಾರಿಗಳು ಜನರನ್ನು ಹೇಗೆ ಅಳತೆ ಮಾಡುತ್ತಾರೆ ಎಂಬುದಕ್ಕೆ ಅವರ ಮಾತು ಒಂದು ಉದಾಹರಣೆ.
ಕೃಷಿಕರ ಔದಾರ್ಯತೆಗೆ ಸಿಕ್ಕ ಫಲ:
ಕೃಷಿಕರು ಸಮಾಜಕ್ಕೆ ನೀಡಿದ ಉದಾರತೆ, ಸಜ್ಜನಿಕೆ, ಅವರ ತಲೆಮಾರನ್ನು ಮೇಲಕ್ಕೆ ಎತ್ತಿದೆ. ಅದೆಷ್ಟೋ ಕೃಷಿಕರ ಮಕ್ಕಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ನಮಗೆಲ್ಲಾ ಗೊತ್ತಿದೆ. ಬಡ ಕುಟುಂಬದಲ್ಲಿ ಕೂಲಿ ಮಾಡಿ ಬೆಳೆದವರೂ ಸಹ ತನ್ನ ಮಕ್ಕಳ ಕಾರಣದಿಂದ ಮೇಲೆ ಬಂದದ್ದಿದೆ. ನಮ್ಮ ಕೃಷಿಕರಲ್ಲಿ ಕೆಲವರು ದೇಶ ವಿದೇಶ ಕಂಡದ್ದು ಇದ್ದರೆ ಅದು ಅವರ ಮಕ್ಕಳ ಕಾರಣದಿಂದ. ಪ್ರತೀಯೊಂದಕ್ಕೂ ಒಂದು ಪುಣ್ಯ ಫಲ ಎಂಬುದಿದೆ. ಅದು ಇದ್ದಾಗ ಮಾತ್ರ ಜೀವನದಲ್ಲಿ ಮೇಲೆ ಬರಲು ಸಾಧ್ಯ.ನೀವೇ ಗಮನಿಸಿ, ಯಾರಾದರೂ ಲಂಚ, ಅನ್ಯಾಯಗಳ ಮೂಲಕ ಧನ ಸಂಪಾದನೆ ಮಾಡಿದವನ ತಲೆಮಾರು ಏನಾಗಿದೆ ಎಂಬುದು!
ಇಲ್ಲಿ ಯಾಕೆ ಈ ಪ್ರಸ್ತಾಪ:
ಸಮಾಜದಲ್ಲಿ ಕೃಷಿ ವೃತ್ತಿಗೆ ಒಂದು ಗೌರವ ಇದೆ. ಕೃಷಿಕರಿಗಿಂತ ನೂರು ಪಟ್ಟು ಹೆಚ್ಚು ಹಣ ಉಳ್ಳ ವೃತ್ತಿಗಳು ಬೇರೆ ಇರಬಹುದು. ಅದರೆ ಮಾನಸಿಕ ನೆಮ್ಮದಿ ಎಂಬುದು ಇರುವುದು ಕೃಷಿ ವೃತ್ತಿಯಲ್ಲಿ ಮಾತ್ರ. ಇದು ಗತ ವೈಭವವಾಗಬಾರದು. ಅದು ಚಿರವಾಗಿ ಉಳಿಯಬೇಕು. ಆಗಲೇ ಕೃಷಿ ಉಳಿಯುತ್ತದೆ. ಕೃಷಿಕ ಉಳಿದ ಸಮಾಜ ಜೀವಿಗಳಂತೆ ಇರುವ ಬದಲಿಗೆ ಭಿನ್ನವಾಗಿ ಎಲ್ಲರೂ ಗೌರವಿಸುವ ತರಹ ಇದ್ದರೆ ಬಹಳ ಚಂದ.
ಕೃಷಿಕ ಎಲ್ಲರಿಗಿಂತ ಉತ್ತಮ ಜ್ಞಾನಿ. ಅವರು ಒಬ್ಬ ಮಣ್ಣು ಹಿಚುಕುವ ವ್ಯಕ್ತಿ ಮಾತ್ರವಲ್ಲ. ಓರ್ವ ಅಧ್ಯಯನಕಾರನೂ ಹೌದು. ಇವರು ತಮ್ಮ ವೃತ್ತಿ ಜೀವನದುದ್ದಕ್ಕೂ ಕಲಿಯುತ್ತಲೇ ಇರುತ್ತಾರೆ.ಮೇಲೆ ಹೇಳಿದ ಎಲ್ಲಾ ಗುಣಗಳು ಕೃಷಿಕರಾದವರ ಹುಟ್ಟು ಸಹಜ ಗುಣ. ಇದನ್ನು ಬದಲಾಯಿಸಲು ಅಗುವುದಿಲ್ಲ. ಆದರೂ ಈಗೀಗ ಕೆಲವು ಕೃಷಿಕರು ಭಾರೀ ವ್ಯಾವಹಾರಿಕ ತನಕ್ಕೆ ಇಳಿಯುತ್ತಿದ್ದಾರೆ. ಹಣ ಆಗಬೇಕು ನಿಜ ಆದರೆ ಹಣ ನ್ಯಾಯ ಮಾರ್ಗದಲ್ಲಿ ಅಗಬೇಕು. ಹೆಚ್ಚು ಹಣ ಸಂಪಾದನೆಯ ಅಗತ್ಯ ಇಲ್ಲ. ನಾವು ಅನುಭವಿಸುವಂತಹ ಹಣ ಸಂಪಾದನೆ ಮಾತ್ರ ಸಾಕು. ಮಕ್ಕಳಿಗಾಗಿ ಧನ ಕೂಡಿ ಹಾಕುವ ನಾವು ಜೀವಂತವಿದ್ದಾಗ ಹೊಟ್ಟೆಗೆ ಬಟ್ಟೆಗೆ ಸಹ ಸರಿಯಾಗಿ ತಮ್ಮ ಸಂಪಾದನೆಯನ್ನು ವ್ಯಯಿಸದೆ ತಮ್ಮ ಅಂತ್ಯ ಕಾಲದಲ್ಲಿ ಮಹಾಧಾನಿಗಳಾಗುವುದು ಬೇಡ. ಕೃಷಿಕರಿಗೆ ಮಕ್ಕಳಿಗೆ ಕೊಡಲು ತಾವು ಮಾಡಿಟ್ಟ ಆಸ್ತಿ ಇರುತ್ತದೆ. ತಮ್ಮ ಮಕ್ಕಳಿಗೆ ಉತ್ತಮ ವಿಧ್ಯಾಬ್ಯಾಸ ಕೊಡಿಸಿ. ಎಲ್ಲಾ ಮಕ್ಕಳನ್ನೆಲ್ಲಾ ಕೃಷಿಯಲ್ಲೇ ಉಳಿಸಿಕೊಳ್ಳುವ ಯೋಚನೆಯನ್ನು ಮಾಡಬೇಡಿ. ಒಂದು ಮಗು ಕೃಷಿಗೆ ಇರಲಿ. ಅವನು ಇರುವ ಭೂಮಿಯಲ್ಲಿ ಹಾಯಾಗಿರಲಿ. ಉಳಿದವರಿಗೆ ಬೇರೆ ವೃತ್ತಿ ಅಥವಾ ಬೇರೆ ಆಸ್ತಿ ಮಾಡಿ ಕೊಡಿ.
ಕರಾವಳಿಯ ಭಾಗಗಳಲ್ಲಿ ಹವ್ಯಕ ಬ್ರಾಹ್ಮಣರು ಎಂಬ ಒಂದು ಪಂಗಡ ಇದ್ದಾರೆ. ಇವರ ಒಂದು ಮಾದರಿ ಜೀವನ ಪ್ರತೀಯೊಬ್ಬ ಕೃಷಿಕನಿಗೂ ಒಂದು ಪಾಠ. ಇವರು ಮಕ್ಕಳಿಗೆ ಇರುವ ಹೊಲವನ್ನು ಹರಿದು ಹಂಚುವುದಿಲ್ಲ. ಮಕ್ಕಳಿಗೆ ಪ್ರತ್ಯೇಕ ಹೊಲ ಖರೀದಿ ಮಾಡಿ ಮನೆ ಉಳಿಸುತ್ತಾರೆ. ಸಂಬಂಧಗಳನ್ನು ಉಳಿಸುತ್ತಾರೆ.
ಸಮಾಜದಲ್ಲಿ ಇಂದು ಕೂಡು ಕುಟುಂಬ, ಒಗ್ಗಟ್ಟು ಕಡಿಮೆಯಾಗುತ್ತಿದೆ. ಇದು ಆಗಬಾರದು. ಈಗ ಆಗುತ್ತಿರುವ ಬದಲಾವಣೆಗಳಿಂದ ನಮ್ಮ ನಂತರದ ತಲೆಮಾರಿಗೆ ದೊಡ್ಡ ಹೊಡೆತ ಬೀಳುತ್ತದೆ. ಒಗ್ಗಟ್ಟಿನ ಬದುಕು, ಒಟ್ಟು ಸೇರುವ ಮನಸ್ಸು, ತಂದೆ ತಾಯಿ, ಗುರು ಹಿರಿಯರು, ಕುಟುಂಬ ಎಲ್ಲರನ್ನೂ ಗುರುತಿಸಿ ಗೌರವದಿಂದ ಕಾಣುವ ನಮ್ಮ ಕೃಷಿ ಸಂಸ್ಕೃತಿ ಅಳಿಯಬಾರದು. ಉಳಿಯ ಬೇಕು. ಇದುವೇ ನಿಜವಾದ ಸುಖೀ ಜೀವನ.