ಒಮ್ಮೆಲೇ ತಿನ್ನುವುದಕ್ಕಿಂತ ಹಸಿವಾದಾಗ ತಿಂದರೆ ಅದು ದೇಹಕ್ಕೆ ಸಮರ್ಪಕವಾಗಿ ಬಳಕೆಯಾಗುತ್ತದೆ. ಈ ಸಿದ್ದಾಂತ ಸಸ್ಯಗಳಿಗೂ ಅನ್ವಯ. ಈ ಸಿದ್ದಾಂತದ ಮೇರೆಗೆ ಬೆಳೆಗಳಿಗೆ ಬೇರಿನ ಸನಿಹಕ್ಕೆ, ಕ್ರಿಯಾತ್ಮಕ ಬೇರುಗಳು ಇರುವಲ್ಲಿಗೆ, ಬೇಕಾದಾಗ ಬೇಕಾಗುವುದನ್ನೇ, ಬೇಕಾದಷ್ಟೇ ಪ್ರಮಾಣದಲ್ಲಿ ಕೊಡುವ ಪದ್ದತಿಯನ್ನು ಪ್ರಚಲಿತಕ್ಕೆ ತರಲಾಗಿದೆ. ಇದಕ್ಕೆ ನೀರಿನ ಜೊತೆಗೆ ಗೊಬ್ಬರ ಕೊಡುವುದು ಅಥವಾ ರಸಾವರಿ ಎಂಬ ಹೆಸರನ್ನು ಕೊಡಲಾಗಿದೆ.
ದುಪ್ಪಟ್ಟು ಇಳುವರಿ:
- ತರಕಾರಿ ಮುಂತಾದ ಅಲ್ಪಾವಧಿ ಬೆಳೆಗಳಿಗೆ ತಕ್ಷಣ ಪೋಷಕಾಂಶಗಳು ದೊರೆತು, ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಪ್ರಾರಂಭವಾಯಿತು.
- ಇದರ ಪರಿಣಾಮವಾಗಿಯೇ ಇಂದು ನಮ್ಮ ಬಳಕೆಗೆ ಬೇಕಾದಷ್ಟು ತರಕಾರಿ ದೊರೆಯುವಂತಾಗಿದೆ.
- ಅಷ್ಟೇ ಅಲ್ಲದೆ ತರಕಾರಿ ಬೆಳೆಸಿ ರೈತರು ಆದಾಯ ಕಂಡಿದ್ದಾರೆಂದರೆ ಅದು ವ್ಯವಸ್ಥೆಯಿಂದ ಎಂದರೆ ತಪ್ಪಾಗಲಾರದು.
- ಈಗ ಅದು ಬಹುತೇಕ ಬೆಳೆಗಳಿಗೆ ಹೊಂದಿಕೆಯಾಗುವಂತೆ ಮಾರ್ಪಾಡು ಮಾಡಿಕೊಳ್ಳಲಾಗಿದೆ.
ನಮ್ಮ ದೇಶದಲ್ಲಿ , ಹಾಗೆಯೇ ಕೃಷಿಯಲ್ಲಿ ಅಸಾಧಾರಣ ಇಳುವರಿ ಪಡೆಯುತ್ತಿರುವ ಎಲ್ಲಾ ದೇಶಗಳಲ್ಲೂ ಈ ರೀತಿ ಪೋಷಕಗಳನ್ನು ಒದಗಿಸಿಯೇ ಬೆಳೆ ಪಡೆಯಲಾಗುತ್ತದೆ.
- ಸುಮಾರು 25 ವರ್ಷಕ್ಕೆ ಹಿಂದೆ ಟೊಮಾಟೋ ಬೆಳೆಯಲ್ಲಿ ಹೆಕ್ಟೇರಿಗೆ 10-15 ಟನ್ ಇಳುವರಿ ದೊರೆಯುತ್ತಿತ್ತು.
- ಆ ನಂತರ ಅಧಿಕ ಇಳುವರಿಯ ತಳಿಗಳ ಜೊತೆಗೆ ರಸಾವರಿಯ ಮೂಲಕ ಪೋಷಕಾಂಶ ಕೊಡುವ ಪದ್ಧತಿ ಬಂದ ನಂತರ ಇದು 80 ಟನ್ ಗೆ ಏರಿಕೆಯಾಯಿತು.
- ಹಾಗೆಯೇ ದ್ರಾಕ್ಷಿ , ದಾಳಿಂಬೆ, ಕಲ್ಲಂಗಡಿ, ಕರಬೂಜ ಎಲ್ಲದರ ಇಳುವರಿ 2-3 ಪಟ್ಟು ಹೆಚ್ಚಳವಾಗಲು ಈ ವಿಧಾನದ ಪೋಷಕಾಂಶ ನಿರ್ವಹಣೆ ನೆರವಾಗಿದೆ.
ಅಡಿಕೆ, ತೆಂಗು, ಬಾಳೆ ಮುಂತಾದ ಬೆಳೆಗಳಲ್ಲಿ ಈ ವಿಧಾನವನ್ನು ಅನುಸರಿಸಿ ದುಪ್ಪಟ್ಟು ಇಳುವರಿ ಪಡೆಯುವ ಹಲವಾರು ರೈತರು ಇದ್ದಾರೆ.
ರಸಾವರಿಯ ಅನುಕೂಲಗಳು:
- ಯಾವುದೇ ಪೋಷಕಾಂಶ ಇದ್ದರೂ ಅದು ತೇವಾಂಶ ಇದ್ದಲ್ಲಿ ಮಾತ್ರ ಸಸ್ಯಗಳು ಸ್ವೀಕರಿಸುವ ಸ್ಥಿತಿಯಲ್ಲಿರುತ್ತದೆ.
- ರಸಾವರಿ ಎಂಬ ವ್ಯವಸ್ಥೆಯಲ್ಲಿ ನೀರಿನ ಜೊತೆಗೆ ಪೋಷಕಗಳನ್ನು ಕೊಡುವ ಕಾರಣ ಅದರ ಲಭ್ಯತೆ ಸರಿ ಸುಮಾರು 99% ಇರುತ್ತದೆ.
- ರಸಾವರಿಯ ಮೂಲಕ ಪೋಷಕಾಂಶಗಳನ್ನು ಕೊಡುವಾಗ ಅದು ಇನ್ಸ್ಟಂಟ್ ಆಹಾರದ ತರಹ ಕೆಲಸ ಮಾಡುತ್ತದೆ.
- ಇದು ಪೋಷಕದ ಗುಣದಿಂದ ಮತ್ತು ಬಳಕೆ ವಿಧಾನದಿಂದ ಆಗುವುದು.
- ಸಸ್ಯಗಳಲ್ಲಿ ಬೇರು ಸಮೂಹ ಇರುವಲ್ಲಿಗೆ ಟಾರ್ಗೆಟ್ ಮೂಲಕ ಗೊಬ್ಬರ ಕೊಟ್ಟಾಗ ಅದು ಯಾವುದೇ ನಷ್ಟಕ್ಕೊಳಗಾಗದೇ ಲಭ್ಯವಾಗುತ್ತದೆ.
- ಅಗೆತ ಇತ್ಯಾದಿಗಳಿಂದ ಬೇರುಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ..
- ನಾವು ಸಾಂಪ್ರದಾಯಿಕ ವಿಧಾನದಲ್ಲಿ ಕೊಡುವ ಪೋಷಕಗಳಲ್ಲಿ ಹೆಚ್ಚಿನ ಪ್ರಮಾಣವು ಇಳಿದು ಹೋಗಿ, ಆವೀಕರಣಕ್ಕೊಳಗಾಗಿ ನಷ್ಟವಾಗುತ್ತದೆ.
- ಈ ನಷ್ಟವನ್ನು ತಡೆಯಲು ನೀರಿನೊಂದಿಗೆ ಬೇರು ವಲಯಕ್ಕೇ ಗೊಬ್ಬರ ಕೊಡುವುದು ಸೂಕ್ತ.
- ಸಸ್ಯಗಳಿಗೆ ಬೆಳವಣಿಗೆ ಹಂತದಲ್ಲಿ, ಹೂ ಬಿಡುವ ಹಂತದಲ್ಲಿ , ಕಾಯಿ ಕಚ್ಚುವ ಹಂತದಲ್ಲಿ, ಫಸಲು ಬೆಳೆಯುವ ಹಂತದಲ್ಲಿ, ಫಲ ಮಾಗುವ ಹಂತದಲ್ಲಿ ಬೇರೆ ಬೇರೆ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ.
- ಹೀಗೆ ಕೊಟ್ಟಾಗ ಫಲದ ಗುಣಮಟ್ಟ ಉತ್ತಮವಾಗುತ್ತದೆ.
- ಅದನ್ನು ಅಧ್ಯಯನಗಳ ಪ್ರಕಾರ ಬೇಕಾದಂತೆ ಕೊಡಲು ಈ ಪದ್ದತಿ ಅನುಕೂಲಕರ.
- ಸಾಂಪ್ರದಾಯಿಕ ಗೊಬ್ಬರ ಕೊಡುವ ವಿಧಾನದಲ್ಲಿ ನಮ್ಮ ನಿರೀಕ್ಷೆಯಂತೆ ಇಳುವರಿ ಬರುವುದಿಲ್ಲ.
- ಇದರಲ್ಲಿ ನಾವು ಗುರಿ ಇಟ್ಟುಕೊಂಡು ಇಳುವರಿ ಪಡೆಯಬಹುದು.
- 50% ಕ್ಕೂ ಹೆಚ್ಚು ಕೆಲಸ ಉಳಿತಾಯವಾಗುತ್ತದೆ. ಒಮ್ಮೆಲೆ ಮಾಡುವ ಖರ್ಚುನ್ನು ಸ್ವಲ್ಪ ಸ್ವಲ್ಪವೇ ಮಾಡುವ ಕಾರಣ ಕಷ್ಟವಾಗುವುದಿಲ್ಲ.
- ರಾಸಾಯನಿಕ ಗೊಬ್ಬರ ಅಲ್ಲದೆ ದ್ರವರೂಪಕ್ಕೆ ಪರಿವರ್ತಿಸಿದ ಎಲ್ಲಾ ಸಾವಯವ ಪೋಷಕಗಳ ಸಾರವನ್ನೂ ಈ ರೀತಿ ನೀರಾವರಿಯೊಂದಿಗೆ ಕೊಡಬಹುದು.
ಕೃಷಿಯಲ್ಲಿ ಬದಲಾವಣೆಗಳು ನಿರಂತರವಾಗಿ ಆಗುತ್ತಲೇ ಇರುತ್ತದೆ. ಸಂಶೋಧನೆ ಎಂದುದು ಹರಿಯುವ ನೀರಿನಂತೆ. ಯಾವಾಗಲೂ ಬದಲಾವಣೆ ಆಗುತ್ತಲೇ ಇರುತ್ತದೆ. ಸಾಂಪ್ರದಾಯಿಕ ಪೊಷಕ ಕೊಡುವ ವಿಧಾನದಲ್ಲಿ ಇದು ಮಿತವ್ಯಯದ ಬೆಳೆವಣಿಗೆ.