ನೀರಾವರಿಯೊಂದಿಗೆ ಪೊಷಕಗಳನ್ನು ಕೊಡುವ ಕ್ರಮಕ್ಕೆ ರಸಾವರಿ ಎನ್ನುತ್ತಾರೆ. ಕರಾರುವಕ್ಕಾಗಿ ಇಷ್ಟು ಇಳುವರಿ ಪಡೆಯುತ್ತೇನೆ ಎಂಬವರಿಗೆ ಇದು ಕೈಹಿಡಿಯುತ್ತದೆ.
ಸಸ್ಯಗಳು ಯಾವುದೇ ಇರಲಿ. ಅವು ಪೊಷಕಗಳನ್ನು ಬಳಸಿಕೊಳ್ಳಬೇಕಾದರೆ ಜೊತೆಗೆ ನೀರು ಬೇಕು. ನೀರು ಮಣ್ಣನ್ನು ತೇವ ಮಾಡುತ್ತದೆ. ತೇವ ಇರುವ ಇರುವಲ್ಲಿ ಪೊಷಕಗಳು ಲಭ್ಯವಿದ್ದರೆ ಅದನ್ನು ಸಸ್ಯಗಳು ತಮ್ಮ ಬೇರಿನ ಮೂಲಕ ಬಳಸಿಕೊಳ್ಳುತ್ತವೆ. ತೇವಾಂಶ ಇಲ್ಲದಲ್ಲಿ ನಾವು ಎಷ್ಟೇ ಪೋಷಕಾಂಶ ಸುರಿದರೂ ಅದು ಪ್ರಯೋಜನಕ್ಕೆ ಬರಲಾರದು. ಇದರಿಂದಾಗಿ ನಾವು ಪೋಷಕಗಳನ್ನು ಹೆಚ್ಚು ಹೆಚ್ಚು ಬಳಸಿದರೂ ಅದರ ಫಲ ಚೆನ್ನಾಗಿ ಸಿಗುತ್ತಿಲ್ಲ. ಇದನ್ನು ಸರಿಪಡಿಸಲು ಇರುವ ವ್ಯವಸ್ಥೆ ಎಂದರೆ ರಸಾವರಿ.
- ನೀರಾವರಿಯ ಜೊತೆಗೇ ಗೊಬ್ಬರಗಳನ್ನು ಸೇರಿಸಿ ಕೊಡುವುದಾದರೆ ಅದು ನಷ್ಟ ಆಗುವುದಿಲ್ಲ.
- ಎಲ್ಲವೂ ಬಳಕೆಯಾಗುವ ಕಾರಣ ಸಸ್ಯ ಚೆನ್ನಾಗಿ ಬೆಳೆದು ಉತ್ತಮ ಇಳುವರಿಯನ್ನೂ ನೀಡುತ್ತದೆ.
ರಸಾವರಿಯ ಪ್ರಯೋಜನ:
- ಹನಿ ನೀರಾವರಿ ಮೂಲಕ ಪ್ರತೀ ಸಸ್ಯಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಕೊಡುವಾಗ ಆ ನೀರಿನ ಜೊತೆಗೆ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನೂ ಸೇರಿಸಿ ಕೊಟ್ಟಾಗ ಎಲ್ಲಾ ಸಸ್ಯಗಳಿಗೂ ಅದು ಏಕಪ್ರಕಾರ ಹಂಚಿಕೆಯಾಗುತ್ತದೆ.
- ಯಾವುದೇ ಗಿಡಕ್ಕೂ ಗೊಬ್ಬರದ ಕೊರತೆ ಉಂಟಾಗುವುದಿಲ್ಲ.
- ಏಕಪ್ರಕಾರ ಸಸ್ಯ ಬೆಳೆವಣಿಗೆ ಆಗುತ್ತದೆ. ಸಸ್ಯಗಳ ಬೇರು ಹೆಚ್ಚು ಇದ್ದಷ್ಟೂ , ಅದರಲ್ಲೂ ಚಟುವಟಿಕೆಯ ಬೇರು ಇದ್ದಷ್ಟೂ ಸಸ್ಯ ಆರೋಗ್ಯ ಉತ್ತಮವಾಗಿರುತ್ತದೆ.
- ಪ್ರತಿಫಲವೂ ಚೆನ್ನಾಗಿರುತ್ತದೆ.
- ರಸಾವರಿ ಮಾಡಿದಾಗ ಯಾವ ಭಾಗದಲ್ಲಿ ನೀರು ಮತ್ತು ಗೊಬ್ಬರ ಚೆಲ್ಲಲ್ಪಡುತ್ತದೆಯೋ ಅಲ್ಲಿ ಬೇರುಗಳು ಚೆನ್ನಾಗಿ ಬೆಳೆಯುತ್ತವೆ.
- ಅಲ್ಲೇ ಹೆಚ್ಚು ಬೇರುಗಳು ಕೇಂದ್ರೀಕೃತವಾಗಿರುತ್ತವೆ.
- ಕೇವಲ ನೀರು ಮಾತ್ರ ಬೇರುಗಳು ಹೆಚ್ಚು ಬೆಳೆಯಲಾರದು.
- ನೀರಿನ ಜೊತೆಗೆ ಪೋಷಕಗಳಿದ್ದರೆ ಅದರ ಪ್ರತಿಫಲವೇ ವಿಭಿನ್ನ.
- ಬೇರುಗಳು ಹೆಚ್ಚು ಹೆಚ್ಚು ಬೆಳೆಯುತ್ತದೆ.
- ಪ್ರತೀಯೊಬ್ಬ ಕೃಷಿಕನೂ ಗೊಬ್ಬರ ಖರೀದಿಗಾಗಿ ಮಾಡುವ ಖರ್ಚಿಗಿಂತ ಹೆಚ್ಚಿನ ಮೊತ್ತವನ್ನು ಗೊಬ್ಬರ ಹಾಕಲು ಖರ್ಚು ಮಾಡುತ್ತಾರೆ.
- ಈ ಖರ್ಚನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ರಸಾವರಿ ನೆರವಾಗುತ್ತದೆ.
- ಗೊಬ್ಬರದ ಖರ್ಚು ಉಳಿತಾಯವಾಗುತ್ತದೆ.
- ಅಧಿಕ ಫಸಲು ಕೊಡುತ್ತದೆ.
- ಸ್ವಲ್ಪ ಸ್ವಲ್ಪವೇ ಗೊಬ್ಬರ ಕೊಡುವ ಕಾರಣ ಒಮ್ಮೆಲೇ ಅಧಿಕ ಪ್ರಮಾಣದಲ್ಲಿ ಗೊಬ್ಬರ ಖರೀದಿಗೆ ಹಣ ಹೊಂದಾಣಿಕೆ ಮಾಡಬೇಕಾಗಿಲ್ಲ.
ಹೇಗೆ ರಸಾವರಿ ಮಾಡುವುದು:
- ಇದು ಅತೀ ಸರಳ ವಿಧಾನ.
- ಇದರಲ್ಲಿ ಬರೇ ರಾಸಾಯನಿಕ ಗೊಬ್ಬರ ಮಾತ್ರ ಕೊಡಲ್ಲು ಆಗುವುದು ಎಂಬ ಭಾವನೆ ತಪ್ಪು.
- ದ್ರವ ರೂಪದ ಅಥವಾ ದ್ರವೀಕರಿಸಬಹುದಾದ ಯಾವುದೇ ಗೊಬ್ಬರವನ್ನೂ ಇದರಲ್ಲಿ ಕೊಡಬಹುದು.
- ಪಂಪಿನ ಮೂಲಕ ಹೊರ ಹರಿಯುವ ನೀರಿಗೆ ರಸ ಗೊಬ್ಬರ ಅಥವಾ ದ್ರವ ರೂಪದ ಸಾವಯವ ಗೊಬ್ಬರ, ಜೈವಿಕ ಗೊಬ್ಬರವನ್ನು ಚುಚ್ಚುವುದು ಅಥವಾ ತಳ್ಳುವುದು (Injecting).
- ಇದಕ್ಕಾಗಿಯೇ ನೀರಾವರಿ ವ್ಯವಸ್ಥೆ ತಯಾರಕರಲ್ಲಿ ವೆಂಚುರಿ ಎಂಬ ವ್ಯವಸ್ಥೆ ಇದೆ.
ಕೆಲವರಿಗೆ ವೆಂಚುರಿಯ ವ್ಯವಸ್ಥೆಯಲ್ಲಿ ಒತ್ತಡ ನಷ್ಟ ಉಂಟಾಗುವ ಸಮಸ್ಯೆ ಇದ್ದರೆ , ಅಂತವರು ಪಂಪಿನ ಡೆಲಿವರಿ ಲೈನ್ ನ ಪಕ್ಕದಲ್ಲಿ ಯಾವುದಾದರೂ ಕ್ಲಪೆಟ್ ವಾಲ್ವ್ ಇದ್ದರೆ ಅದಕ್ಕೆ ½ ಅಥವಾ ¼ ಅಶ್ವ ಶಕ್ತಿಯ ಸಿಂಗಲ್ ಫೇಸ್ ಪಂಪಿನ ಮೂಲಕ ಉಣಿಸಬಹುದು.
- ನೀರು ಹೆಚ್ಚು ಒತ್ತಡದಲ್ಲಿ ಸರಬರಾಜು ಆಗುತ್ತಿದ್ದರೆ, ಸ್ವಲ್ಪ ಹೆಚ್ಚು ಹೆಡ್ ಉಳ್ಳ ಪಂಪ್ ಬೇಕಾಗಬಹುದು.
- ಇದಲ್ಲದಿದ್ದರೆ ಮೋನೋ ಬ್ಲಾಕ್ ಪಂಪಿನ ಸಕ್ಷನ್ ಭಾಗಕ್ಕೆ ಬ್ಯಾರಲ್ ನಲ್ಲಿ ಗೊಬ್ಬರವನ್ನು ಕರಗಿಸಿ, ಹನಿ ನೀರಾವರಿ ಕೊಳವೆಯ ಮೂಲಕ ನಿಯಂತ್ರಣ ವಾಲ್ವ್ ಹಾಕಿ ಕೊಡಬಹುದು.
- ಸಿಂಪರಣೆಗೆ ಬಳಸುವ ಪವರ್ ಸ್ಪ್ರೇಯರ್ ರಸಾವರಿ ಮಾಡಲು ಅತ್ಯುತ್ತಮ ಇಂಜೆಕ್ಟರ್ ಕೆಲಸ ಮಾಡುತ್ತದೆ.ಇದನ್ನು ಬಳಸಿ ಉತ್ತಮವಾಗಿ ರಸಾವರಿ ಮಾಡಬಹುದು.
- ತೀರಾ ಕಡಿಮೆ ವೆಚ್ಚದಲ್ಲಿ ಇರುವ ವ್ಯವಸ್ಥೆಯಲ್ಲೇ ಮಾಡಿಕೊಳ್ಳುವುದಿದ್ದರೆ, ಸಿಂಪರಣೆಗೆ ಬಳಸುವ ಬ್ಯಾಟರಿ ಸ್ಪ್ರೇಯರ್ ಮೂಲಕ ಕೊಡಬಹುದು.
- ಕೆಲವರಿಗೆ ನಿರ್ದಿಷ್ಟ ಬ್ಲಾಕ್ ಗಳಿಗೆ ಮಾತ್ರ ಗೊಬ್ಬರ ಉಣಿಸುವುದು ಇರುತ್ತದೆ.
- ಅಂತವರು ಇದೇ ಬ್ಯಾಟರಿ ಸ್ಪ್ರೇಯರ್ ಮೂಲಕ ಆ ಬ್ಲಾಕಿಗೆ ಹೋಗುವ ನೀರಿನ ಜೊತೆಗೆ ಗೊಬ್ಬರವನ್ನು ಕೊಡಬಹುದು.
- ಕೆಲವರು ಮೋನೋ ಬ್ಲಾಕ್ ಪಂಪಿನ ನೀರಾವರಿ ಮಾಡುವವರು ಪಂಪಿನ ಹೀರು ಭಾಗ ( Suction) ಭಾಗ ಕ್ಕೆ ಪಂಪಿನ ಬುಡದಲ್ಲಿ ಅಥವಾ ಫುಟ್ ವಾಲ್ವ್ ಭಾಗದಲ್ಲಿ ಗೊಬ್ಬರವನ್ನು ಕೊಡಬಹುದು.
- ಪುಟ್ ವಾಲ್ ನಲ್ಲಿರುವ ತೂತಿಗೆ 12/16 ಎಂ ಎಂ ನ ಲ್ಯಾಟರಲ್ ಪೈಪು ಸೇರಿಸಿ ಅದನ್ನು ಪಂಪಿನ ಸಮೀಪ ಬ್ಯಾರಲ್ ಗೆ ಸಂಪರ್ಕ ಕಲ್ಪಿಸಿ ಪಂಪಿನ ಮೂಲಕ ನೀರಾವರಿ ಮಾಡುವಾಗ ಇದನ್ನು ಬಿಟ್ಟು ರಸಾವರಿ ಮಾಡಬಹುದು.
- ವೆಂಚುರಿ ವ್ಯವಸ್ಥೆಯನ್ನು ಬಿಟ್ಟು ಉಳಿದ ವ್ಯವಸ್ಥೆಗಳಲ್ಲಿ ಗಾಳಿ ಎಳೆದುಕೊಳ್ಳುವ ಸಮಸ್ಯೆ ಇರುತ್ತದೆ ಸೂಕ್ತ ಗಾಳಿ ತೆಗೆಯುವ ವ್ಯವಸ್ಥೆ ಇಟ್ಟುಕೊಳ್ಳುವುದು ಅಗತ್ಯ.
ರಸಾವರಿಯನ್ನು ಮೈಕ್ರೋ ಸ್ಪ್ರಿಂಕ್ಲರ್ , ಮೈಕ್ರೋ ಜೆಟ್, ಮುಂತಾದ ಎಲ್ಲಾ ಮಿತವ್ಯಯದ ನೀರಾವರಿಯಲ್ಲೂ ಮಾಡಬಹುದು. ಸ್ಪ್ರಿಂಕ್ಲರ್ ನಿರಾವರಿಗೂ ಮಾಡಬಹುದು. ಆದರೆ ಗೊಬ್ಬರದ ನಷ್ಟ ಉಂಟಾಗುತ್ತದೆ.ರಸಾವರಿ ವ್ಯವಸ್ಥೆ ಇಂದು ಬಹುತೇಕ ಕೃಷಿಕರಿಗೆ ಕೆಲಸವನ್ನು ತುಂಬಾ ಕಡಿಮೆ ಮಾಡಿದೆ.
ಇಂದು ನಾವು ಹೇರಳ ತರಕಾರಿ, ಹಣ್ಣು ಹಂಪಲು ಬಳಕೆಕೆ ಮಾಡುತ್ತಿದ್ದರೆ ಅಷ್ಟೆಲ್ಲಾ ಉತ್ಪಾದನೆಗೆ ನೆರವಾದದ್ದು, ರಸಾವರಿ ವ್ಯವಸ್ಥೆ. ಇದು ಇನ್ನು ಎಲ್ಲಾ ಕೃಷಿಕರಿಗೂ ಅನಿವಾರ್ಯ ಕೂಡಾ. ಆದರೆ ಒಂದು ನೀರನ್ನು ಮಾತ್ರ ಲೆಕ್ಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಡಬಾರದು. ಇದರಿಂದ ನೀರು ತಳಕ್ಕೆ ಇಳಿದಂತೆ ಅದರ ಜೊತೆಗೆ ಗೊಬ್ಬರವೂ ಸಸ್ಯಕ್ಕೆ ದೊರೆಯದೆ ತಳಕ್ಕೆ ಇಳಿಯುತ್ತದೆ.