ಭಾರತ ಸರಕಾರ ರೈತರಿಗೆ ಸಹಾಯಧನದ ಮೂಲಕ ಒದಗಿಸುವ ಸರ್ಕಾರೀ ಗೊಬ್ಬರವನ್ನೇ ಬಳಸಿದರೆ ರೈತರ ಗೊಬ್ಬರದ ಖರ್ಚು 75% ಕ್ಕೂ ಹೆಚ್ಚು ಉಳಿತಾಯವಾಗುತ್ತದೆ. ಇತ್ತೀಚೆಗೆ ಅಡಿಕೆ ತೋಟಕ್ಕೂ ಸಾಲ್ಯುಬಲ್ ಗೊಬ್ಬರಗಳನ್ನು ಕೊಟ್ಟು ಬೆಳೆಸುವ ಕ್ರೇಜಿ ಪ್ರಾರಂಭವಾಗಿದೆ. ಇದಕ್ಕಾಗಿ ಸಾಕಷ್ಟು ಖರ್ಚುಗಳನ್ನೂ ಮಾಡಿ ದುಬಾರಿ ಬೆಲೆಯ ಸಾಲ್ಯುಬಲ್ ಗೊಬ್ಬರಗಳನ್ನು ಖರೀದಿಸಿ ತಂದು ಬಳಸಲಾರಂಭಿಸಿದ್ದಾರೆ. ಅಡಿಕೆಗೆ ಬೆಲೆ ಬಂದಿದೆ ಎಂದೋ ಕೈಯಲ್ಲಿ ದುಡ್ಡು ತುಳುಕುವ ಕಾರಣದಿಂದಲೋ ಜನ ಹೊಸ ಹೊಸತಕ್ಕೆ ಬೇಗ ಮರುಳಾಗುತ್ತಿದ್ದಾರೆ.ಧೀರ್ಘಾವಧಿ ಬೆಳೆಗಳಿಗೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಗೊಬ್ಬರ ಕೊಡಬೇಕಾದ ಅಗತ್ಯ ಇರುವುದಿಲ್ಲ. ಸಾಧ್ಯವಿದ್ದವರು ತಿಂಗಳಿಗೊಮ್ಮೆ ಕೊಟ್ಟರೆ ಸಾಕು. ಅದೂ ಭಾರತ ಸರಕಾರ ರೈತರಿಗಾಗಿ ಸಬ್ಸಿಡಿ ದರದಲ್ಲಿ ಕೊಡುವ ಗೊಬ್ಬರ (ಸರ್ಕಾರಿ ಗೊಬ್ಬರ) ಬಳಕೆ ಮಾಡಿದರೆ ಯಥೇಚ್ಚವಾಗಿ ಸಾಕು.
ಸಾಂಪ್ರದಾಯಿಕ ರಸಗೊಬ್ಬರಗಳು ನೀರಿನಲ್ಲಿ ಕರಗುವುದಿಲ್ಲ. ಅದನ್ನು ಹನಿ ನೀರಾವರಿಯ ಮೂಲಕ ಕೊಡಲಿಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ರೈತರು ಸಾಲ್ಯುಬಲ್ ಗೊಬ್ಬರಗಳನ್ನು ಬಳಸಲು ಮುಂದಾಗುತ್ತಿದ್ದಾರೆ. ಅದಕ್ಕೆ ಬೆಂಬಲವಾಗಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಡುವವರು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುತ್ತಾರೆ. ಅಡಿಕೆಗೆ ಬೆಲೆ ಇದೆ. ಹಾಗಾಗಿ ರೈತರಲ್ಲಿ ದುಡ್ಡು ಇದೆ. ಈ ದುಡ್ದನ್ನು ಅವರೊಬ್ಬರೇ ಅನುಭವಿಸುವ ಬದಲು ಹಂಚಿಕೊಳ್ಳಲು ಇದೆಲ್ಲಾ ಒಂದು ವ್ಯವಸ್ಥೆ ಎನ್ನಬಹುದು.ಹನಿ ನೀರಾವರಿಯಲ್ಲಿ ರಸ ಗೊಬ್ಬರಗಳನ್ನು ಕೊಡಬೇಕಾದರೆ ಅದು ಸಾಲ್ಯುಬಲ್ ಗೊಬ್ಬರಗಳೇ ಆಗಬೇಕಾಗಿಲ್ಲ. ನಮ್ಮ ಸಾಂಪ್ರದಾಯಿಕ ಗೊಬ್ಬರಗಳೂ ಸಹ ನೀರಿನಲ್ಲಿ ಕರಗುವಂತದ್ದು ಇದೆ. ಅದನ್ನು ಸೋಸಿ ಹನಿ ನೀರಾವರಿಯ ಮೂಲಕ ಕೊಡುವುದರಿಂದ ರೈತರಿಗೆ 75% ಕ್ಕೂ ಹೆಚ್ಚು ರಸಗೊಬ್ಬರದ ಖರ್ಚು ಉಳಿತಾಯವಾಗುತ್ತದೆ.
- ಎಲ್ಲಾ ಸಾಲ್ಯುಬಲ್ ಗೊಬ್ಬರಗಳೂ ವಿದೇಶದಿಂದ ಆಮದು ಆಗುವ ಗೊಬ್ಬರಗಳು. ಸ್ವಲ್ಪವೂ ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ.
- ಚೀನಾ, ನೆದರ್ಲ್ಯಾಂಡ್ ಆಸ್ಟ್ರೇಲಿಯಾ, ಇಸ್ರೇಲ್ ಅಮೆರಿಕಾ ಮುಂತಾದ ದೇಶಗಳಿಂದ ಆಮದು ಮಾಡಿಕೊಂಡು ಇಲ್ಲಿ ಬೇರೆ ಬೇರೆ ಮಾರುಕಟ್ಟೆಮಾಡುವವರು ತಮ್ಮ ಹೆಸರಿನ ಬ್ರಾಂಡ್ ಮಾಡಿ ರೈತರಿಗೆ ಒದಗಿಸುತ್ತಾರೆ.
- ಕಳೆದ ಒಂದು ವರ್ಷದಿಂದ ಈ ಸಾಲ್ಯುಬಲ್ ಗೊಬ್ಬರಗಳ ಬೆಲೆ 100% ಹೆಚ್ಚಳವಾಗಿರುವುದು ಇಲ್ಲಿ ಉಲ್ಲೇಖನೀಯ.
- ಸಾಲ್ಯುಬಲ್ ಗೊಬ್ಬರಗಳಂತೆ ಸರಕಾರಿ ಗೊಬ್ಬರದಲ್ಲೂ ಬೇರೆ ಬೇರೆ ಪ್ರಮಾಣದ ತಯಾರಿಕೆಗಳಿವೆ.
- ಬೇಡಿಕೆ ಇಲ್ಲದ ಕಡೆ ಪೂರೈಕೆ ಇಲ್ಲ ಅಷ್ಟೇ.
ಯಾವ ಯಾವ ಗೊಬ್ಬರಗಳು ನೀರಿನಲ್ಲಿ ಕರಗುತ್ತವೆ:
- ಪೊಟ್ಯಾಶಿಯಂ ಸತ್ವವನ್ನು ಒದಗಿಸಬಲ್ಲ ಮ್ಯುರೇಟ್ ಆಫ್ ಪೊಟ್ಯಾಶ್ (MOP) ಸಂಪೂರ್ಣವಾಗಿ ನೀರಿನಲ್ಲಿ ಕರಗುವ ಪೊಟ್ಯಾಶಿಯಂ ಆಗಿರುತ್ತದೆ.
- ಸಾಲ್ಯುಬಲ್ ಗೊಬ್ಬರಗಳಲ್ಲಿ ಇದಕ್ಕೆ ಬದಲಿಯಾಗಿ ಸಲ್ಫೇಟ್ ಆಫ್ ಪೊಟ್ಯಾಶ್ ಗೊಬ್ಬರ ಇರುತ್ತದೆ.
- ಮ್ಯುರೇಟ್ ಆಪ್ ಪೊಟ್ಯಾಶ್ ನಲ್ಲಿ 60% ಪೊಟ್ಯಾಶ್ ಇರುತ್ತದೆ. 40% ದಷ್ಟು ಕ್ಲೋರಿನ್ ಇರುತ್ತದೆ.
- ಇದರ ರಸಸಾರ ತಟಸ್ಥವಾಗಿ (7) ಇರುತ್ತದೆ.ಪೊಟ್ಯಾಶ್ ಯಾವಾಗಲೂ ಮಣ್ಣಿನ ರಸ ಸಾರವನ್ನು ಬದಲಿಸುವುದಿಲ್ಲ.
- ಕಬ್ಬು, ಆಲೂಗಡ್ಡೆ, ತಂಬಾಕು, ಲಿಂಬೆ ಮುಂತಾದ ಕೆಲವೇ ಕೆಲವು ಬೆಳೆಗಳನ್ನು ಹೊರತುಪಡಿಸಿ ಎಲ್ಲಾ ಬೆಳೆಗಳಿಗೂ ಇದನ್ನು ಬಳಸಿದರೆ ಯಾವ ಸಮಸ್ಯೆಯೂ ಇಲ್ಲ.
- ಇದರಲ್ಲಿ ಇರುವ ಕ್ಲೋರೈಡ್ ಬೆಳೆಗಳಿಗೆ ಸೂಕ್ಷ್ಮ ಪೋಷಕಾಂಶವೂ ಹೌದು. ಕೆಲವರು ಇದರಲ್ಲಿ ಕ್ಲೋರೈಡ್ ಅಂಶ ಇರುವ ಕಾರಣ ಇದು ಮಣ್ಣನ್ನು ಹಾಳು ಮಾಡುತ್ತದೆ ಎನ್ನುತ್ತಾರೆ.
- ಇದು ಸಮರ್ಪಕ ಅಧ್ಯಯನ ಮಾಡದೆ ಹೇಳುವಂತದ್ದು.
- ಅಧಿಕ ಮಳೆಯಾಗುವ ಕಡೆ, ಮತ್ತು ನೀರಾವರಿ ಇರುವ ಕಡೆ ಹೆಚ್ಚುವರಿ ಕ್ಲೋರೈಡ್ ಇಳಿದು ಹೋಗುತ್ತದೆ.
- ಸಲ್ಫೇಟ್ ಆಫ್ ಪೊಟ್ಯಾಶ್ (SOP) ನಲ್ಲಿ 50 % ಪೊಟ್ಯಾಶ್ ಇರುತ್ತದೆ ಜೊತೆಗೆ 17.55 % ಗಂಧಕ ಅಂಶ ಇದೆ.
- ಇದನ್ನು ತಯಾರು ಮಾಡುವುದು ಸಹ ಪೊಟ್ಯಾಶಿಯಂ ಕ್ಲೋರೈಡ್ ಖನಿಜದಿಂದಲೇ.
- ಇದನ್ನು ಬಿಸಿ ಮಾಡುವ ತಂತ್ರಜ್ಞಾನದ ಮೂಲಕ ಸಲ್ಫ್ಯೂರಿಕ್ ಆಮ್ಲದಿಂದ ಉಪಚರಿಸಿದಾಗ ಅದು ಸಲ್ಫೇಟ್ ಆಪ್ ಪೊಟ್ಯಾಶ್ ಆಗುತ್ತದೆ.
- ಇದು ಬೆಳೆಗಳ ಮೇಲೆ ಯಾವ ತೊಂದರೆಯನ್ನೂ ಮಾಡುವುದಿಲ್ಲವಾದರೂ ಇದಕ್ಕೆ ಇರುವ ಬೆಲೆ ರೈತರ ಜೇಬಿನ ಮೇಲೆ ತೊಂದರೆಯನ್ನು ಮಾಡುತ್ತದೆ.
ರಂಜಕ ಗೊಬ್ಬರವನ್ನು ನೀರಿನಲ್ಲಿ ಕರಗಿಸುವುದು ಹೇಗೆ?
- ರಂಜಕ ಗೊಬ್ಬರದ ಮೂಲವಾಗಿ ಬಳಕೆ ಮಾಡುವುದು DAP ಗೊಬ್ಬರ , ಅಥವಾ ಶಿಲಾ ರಂಜಕ ಮತ್ತು ಸಿಂಗಲ್ ಸೂಫರ್ ಫೋಸ್ಫೇಟ್.
- ಶಿಲಾರಂಜಕವನ್ನು ನೀರಿನಲ್ಲಿ ಕರಗಿಸಲು ಸಾಧ್ಯವಾಗುವುದಿಲ್ಲ. ಉಳಿದವು ಕರಗುತ್ತದೆ.
- ಮಣ್ಣಿಗೆ ಎರಚಿದರೂ ಅದು ನಿಧಾನವಾಗಿ ಮಣ್ಣಿಗೆ ಸೇರಿ ಧೀರ್ಘ ಕಾಲದ ತನಕ ತನ್ನ ಪರಿಣಾಮವನ್ನು ಕೊಡುತ್ತಾ ಇರುತ್ತದೆ.
- ಈ ಗೊಬ್ಬರಗಳು ಆವಿಯಾಗಿ ನಷ್ಟವಾಗುವುದಿಲ್ಲ. ಇಳಿದು ಹೋಗುವುದು ತುಂಬಾ ನಿಧಾನ.
- ಇದು ಚಲನೆ ಉಳ್ಳ ಗೊಬ್ಬರ ಸಂಯುಕ್ತ ಅಲ್ಲದ ಕಾರಣ ನಷ್ಟ ಉಂಟಾಗುವುದಿಲ್ಲ.
ಕಾಂಪ್ಲೆಕ್ಸ್ ಗೊಬ್ಬರಗಳಾದ DAP 10:26:26, 15:15:15,17:17:17, 20:20:0:13 ಈ ಎಲ್ಲಾ ಗೊಬ್ಬರಗಳೂ ನೀರಿನಲ್ಲಿ ನಿಯಮಿತ ಕಾಲದ ತನಕ ನೆನೆ ಹಾಕಿದರೆ ಕರಗುತ್ತದೆ. ತಳಭಾಗದಲ್ಲಿ ಸಂಗ್ರಹವಾಗುವ ದಪ್ಪ ಅಂಶದಲ್ಲಿ 5% ದಷ್ಟು ಉಳಿಕೆ ಇರುತ್ತದೆ. ಇದನ್ನು ಮತ್ತೊಮ್ಮೆ ನೀರು ಹಾಕಿ ದ್ರವೀಕರಿಸಿದಾಗ 1% ಕ್ಕೆ ಇಳಿಸಬಹುದು.
ಸಾರಜನಕ ಗೊಬ್ಬರದ ಕರಗುವಿಕೆ:
- ಸಾರಜನಕ ಮೂಲವಾಗಿ ನಾವು ಬಳಕೆ ಮಾಡುವ ಯೂರಿಯಾ 100% ನೀರಿನಲ್ಲಿ ಕರಗಬಲ್ಲ ವಸ್ತುವಾಗಿದ್ದು,
- ಇದನ್ನು ಹನಿ ನೀರಾವರಿಯ ಮೂಲಕ ಯಾವುದೇ ಆತಂಕ ಇಲ್ಲದೆ ಸಸ್ಯಗಳಿಗೆ ಉಣಿಸಬಹುದು.
- ಇದನ್ನು ಸಿಂಪರಣೆಗೂ ಬಳಕೆ ಮಾಡಬಹುದು.
ಸರಕಾರಿ ಗೊಬ್ಬರಗಳಿಗೂ ಸಾಲ್ಯುಬಲ್ ಗೊಬ್ಬರಗಳಿಗೂ ಬೆಲೆ ವ್ಯತ್ಯಾಸ:
- ಸರಕಾರಿ ಗೊಬ್ಬರಗಳು ಯೂರಿಯಾ ಹೊರತುಪಡಿಸಿ ಎಲ್ಲವೂ 50 ಕಿಲೋ ಚೀಲದಲ್ಲಿ ಸರಬರಾಜು ಆಗುತ್ತದೆ.
- ಸಾಲ್ಯುವಲ್ ಗೊಬ್ಬರಗಳೆಲ್ಲವೂ 25 ಕಿಲೋ ಚೀಲದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.
- ಸರಕಾರಿ ಗೊಬ್ಬರಗಳ ಒಟ್ಟಾರೆ ಕಿಲೋ ಮಾರಾಟ ಬೆಲೆ 35 ಕಿಲೋ ಗಿಂತ ಹೆಚ್ಚು ಇರುವುದಿಲ್ಲ.
- ಆಮದು ಮಾಡಲ್ಪಟ್ಟ ಯಾವುದೇ ಗೊಬ್ಬರಕ್ಕೂ ಕಿಲೋಗೆ 100 ರೂ. ಗಳಿಗಿಂತ ಕಡಿಮೆ ಇಲ್ಲ.
- ಈಗಿನ ರಸಗೊಬ್ಬರದ ದರದಲ್ಲಿ ಸರಕಾರಿ ಗೊಬ್ಬರಕ್ಕೂ ಖಾಸಗಿ ಗೊಬ್ಬರಕ್ಕೂ ಬೆಲೆ ವ್ಯತ್ಯಾಸ 100% ಜಾಸ್ತಿ ಇದೆ.
- ಹಾಗಿರುವಾಗ ಖಾಸಗಿ ಸಾಲ್ಯುಬಲ್ ಗೊಬ್ಬರಗಳನ್ನು ಬಳಕೆ ಮಾಡುವ ಬದಲು ಸರಕಾರಿ ಗೊಬ್ಬರಗಳನ್ನು ದುಪ್ಪಟ್ಟು ಬಳಕೆ ಮಾಡಿದರೂ ನಷ್ಟವಾಗದು.
ಸಾಲ್ಯುಬಲ್ ಗೊಬ್ಬರ ಮತ್ತು ಶುದ್ಧತೆ:
- ಸಾಲ್ಯುಬಲ್ ಗೊಬ್ಬರಗಳಲ್ಲಿ ನಾಲ್ಕು ಬಗೆಯ ಗೊಬ್ಬರಗಳು ಮಾತ್ರ ಇರುವುದು.
- ಅವುಗಳೆಂದರೆ ಪೊಟ್ಯಾಶಿಯಂ ನೈಟ್ರೇಟ್ 13:0:45, ಮೊನೋ ಅಮೋನಿಯಂ ಫೋಸ್ಫೇಟ್ (MAP) 12:61:0 ಮೊನೋ ಪೊಟ್ಯಾಶಿಯಂ ಫೋಸ್ಫೇಟ್ 0:52:34 (MKP) ಮತ್ತು ಸಲ್ಫೇಟ್ ಆಫ್ ಪೊಟ್ಯಾಶ್ (SOP) 0:0:50
- ಇದಲ್ಲದೆ ಹಲವಾರು ಬಗೆಯ ಖಾಸಗಿ ಗೊಬ್ಬರಗಳು ಲಭ್ಯವಿದೆ. ಇವುಗಳಿಗೆ ಯಾವುದಕ್ಕೂ ಬಣ್ಣ ಹಾಕಿರುವುದಿಲ್ಲ.
- ಎಲ್ಲವೂ ಬಿಳಿಯಾಗಿ ಇರುತ್ತವೆ. ಸಲ್ಫೇಟ್ ಆಫ್ ಪೊಟ್ಯಾಶ್ ಮಾತ್ರ ತೀರಾ ಸಣ್ಣ ಹುಡಿಯಾಗಿರುತ್ತದೆ.
- ಉಳಿದವು ಕ್ರಿಸ್ಟಲ್ ಹುಡಿಯಂತೆ ಇರುತ್ತವೆ.
- ಬಹುಬಗೆಯ ಸಾಲ್ಯುಬಲ್ ಗೊಬ್ಬರಗಳನ್ನು ಈ ನಾಲ್ಕು ಗೊಬ್ಬರಗಳನ್ನು ತರಿಸಿ ಅವುಗಳನ್ನು ಮಿಶ್ರಣ ಮಾಡಿ ತಯಾರಿಸುವುದಾಗಿರುತ್ತದೆ.
- ಇದನ್ನು ಟೈಲರ್ ಮೇಡ್ ಪ್ರಿಪರೇಷನ್ಸ್ ಎನ್ನುತ್ತಾರೆ.
- ಹೀಗೆ ತಯಾರಿಸುವಾಗ ಲಾಭಕ್ಕಾಗಿ ಯೂರಿಯಾ, ಬಿಳಿ ಪೊಟ್ಯಾಶ್ , ಮೆಗ್ನೀಶಿಯಂ ಸಲ್ಫೇಟ್ ಮುಂತಾದವುಗಳನ್ನು ಸೇರಿಸುವ ಸಾಧ್ಯತೆಯೂ ಇರುತ್ತದೆ.
ಅಡಿಕೆ ತೆಂಗು ಧೀರ್ಘಾವಧಿ ಬೆಳೆಗಳಿಗೆ ಸೂಕ್ತ ಗೊಬ್ಬರ:
- ಧೀರ್ಘಾವಧಿ ಬೆಳೆಗಳು ನಾವು ಕೊಡುವ ಪೊಷಕಾಂಶವನ್ನು ತಮ್ಮಜೀವಕೋಶಗಳಲ್ಲಿ ಹೆಚ್ಚು ಸಮಯದ ತನಕ ಸಂಗ್ರಹಿಸಿಟ್ಟುಕೊಂಡು ಸ್ವಲ್ಪ ಸ್ವಲ್ಪವೇ ಬಳಕೆ ಮಾಡುತ್ತವೆ.
- ಹಾಗಾಗಿ ಈ ಬೆಳೆಗಳಿಗೆ ದಿನಾ ಗೊಬ್ಬರದ ಬಳಕೆ ಮಾಡಬೇಕಾದ ಅಗತ್ಯ ಇರುವುದಿಲ್ಲ.
- ರಸಾವರಿ ಮೂಲಕ ಕಡಿಮೆ ಪ್ರಮಾಣದಲ್ಲಿ ಕೊಡುವ ಕಾರಣ 10 ದಿನಕ್ಕೊಮ್ಮೆ ಕೊಡಬಹುದು
- ಮಣ್ಣಿಗೆ ಹಾಕುವುದಿದ್ದರೆ ವರ್ಷಕ್ಕೆ 2-3 ಕಂತುಗಳ ಮೂಲಕ ಗೊಬ್ಬರವನ್ನು ಕೊಡಬೇಕು ಎನ್ನುತ್ತಾರೆ.
- ಇದಕ್ಕೂ ಮಿಕ್ಕಿ ಬೆಳೆಗಾರರು ಅನುಕೂಲ ನೊಡಿಕೊಂಡು ತಿಂಗಳಿಗೊಮ್ಮೆಯೋ ಕೊಡಬಹುದು.
- ಕೊಡುವಾಗ ಮಾತ್ರ NPK ಮೂರೂ ಪೋಷಕಗಳನ್ನು ಶಿಫಾರಸಿನ ಪ್ರಕಾರ ಕೊಡಬೇಕು.120:50:150 (ಗರಿಷ್ಟ)
- ಯಾವಾಗಲೂ ನಮ್ಮ ತೋಟಗಾರಿಕಾ ಬೆಳೆಗಳಿಗೆ ಅಧಿಕ ಪ್ರಮಾಣದಲ್ಲಿ ಪೊಟ್ಯಾಶ್ ಗೊಬ್ಬರ ನಂತರ 20-30% ದಷ್ಟು ಕಡಿಮೆ ಸಾರಜನಕ ಗೊಬ್ಬರ ಹಾಗೂ 50-60% ಕಡಿಮೆ ಪ್ರಮಾಣದಲ್ಲಿ ರಂಜಕ ಗೊಬ್ಬರವನ್ನು ಕೊಡಬೇಕಾದದ್ದು ಶಿಫಾರಸು.
- ಇದನ್ನು ತಪ್ಪದೆ ಪಾಲಿಸಬೇಕು. ಸರ್ಕಾರೀ ಗೊಬ್ಬರಗಳನ್ನು ನೇರವಾಗಿ ಬೇರು ವಲಯಕ್ಕೆ ಕೊಡಬಹುದು.
- ದುಬಾರಿ ಖಾಸಗಿ ಗೊಬ್ಬರವನ್ನು ಬಹಳ ಜಾಗರೂಕತೆಯಲ್ಲಿ ಕೊಡಬೇಕು.
- ತೆಂಗು ಅಡಿಕೆ ಮುಂತಾದ ಬೆಳೆಗಳಲ್ಲಿ ಸಾಂಪ್ರದಾಯಿಕ ಗೊಬ್ಬರಗಳು ಉತ್ತಮ ಇಳುವರಿ ಕೊಡಲು ಎಲ್ಲಿಯೂ ವಿಫಲವಾಗಿಲ್ಲ.
- ಎಲ್ಲಿ ಸಾವಯವ ವಸ್ತುಗಳು ಹೇರಳವಾಗಿ ಇದೆಯೋ ಅಲ್ಲಿ ಎರಡು ನಮೂನೆಯ ಗೊಬ್ಬರಗಳೂ ಕೆಲಸಮಾಡುತ್ತವೆ.
- ಕಡಿಮೆಯಾದಲ್ಲಿ ಕೆಲಸ ಮಾಡಲಾರವು. ಸಾಲ್ಯುಬಲ್ ಗೊಬ್ಬರಗಳು ಅಲ್ಪಾವಧಿ ಬೆಳೆಗಳಿಗೆ ಶೀಘ್ರ ಫಲಿತಾಂಶ ಬೇಕಾಗುತ್ತದೆ.
- ಅಂತಹ ಬೆಳೆಗಳಿಗಾಗಿಯೇ ಪರಿಚಯಿಸಲ್ಪಟ್ಟ ಗೊಬ್ಬರಗಳು ಅವು. ಇದನ್ನು ಧೀರ್ಘಾವಧಿ ತೋಟಗಾರಿಕಾ ಬೆಳೆಗಳಿಗೆ ಬಳಸಲು ಶಿಫಾರಸು ಸಹ ಇಲ್ಲ.
- ಖರ್ಚು ಸಹ ದುಬಾರಿ. ಈ ಗೊಬ್ಬರಗಳನ್ನು ತುಂಬಾ ವೈಜ್ಞಾನಿಕವಾಗಿ ಬಳಕೆ ಮಾಡಿದರೆ ಮಾತ್ರ ಫಲ ಪಡೆಯಲು ಸಾಧ್ಯ.
ಅಡಿಕೆಗೆ ಬೆಲೆ ಇದೆ ಎಂದು ಅನವಶ್ಯಕ ಖರ್ಚು ಮಾಡಬೇಡಿ:
- ಯಾವಾಗಲೂ ಉತ್ತುಂಗಕ್ಕೆ ಏರಿದ್ದು ,ಮತ್ತೆ ತಳಕ್ಕೆ ಇಳಿಯಲೇ ಬೇಕು. ಇದು ಭೂತಕಾಲದಲ್ಲೂ ಆಗಿದೆ.
- ಭವಿಷ್ಯದಲ್ಲೂ ಆಗುತ್ತದೆ. ಇದು ನಮಗೆಲ್ಲಾ ಗೊತ್ತಿದ್ದೂ ಕಡಿಮೆ ಬೆಲೆಗೆ ಸಿಗುವ ಗೊಬ್ಬರಗಳನ್ನು ಬಿಟ್ಟು ದುಬಾರಿ ಬೆಲೆಯ ಗೊಬ್ಬರಗಳನ್ನು ಬಳಸಿ ಹಣ ವ್ಯಯ ಮಾಡುವುದು ಸೂಕ್ತವಲ್ಲ.
- ಕೃಷಿಕರಾದವರಿಗೆ ನಿವೃತ್ತಿ ವೇತನ ಇಲ್ಲ. ಅನಾರೋಗ್ಯಕ್ಕೆ ಚಿಕಿತ್ಸಾ ಸೌಲಭ್ಯ ಇಲ್ಲ.
- ನಮ್ಮ ಕೈಯಲ್ಲಿ ಏನಾದರೂ ಇದ್ದರೆ ಅದುವೇ ನಮಗೆ ಆಸರೆ. ಹಾಗಾಗಿ ಗೊಬ್ಬರಕ್ಕಾಗಿ ಹೆಚ್ಚು ಹೆಚ್ಚು ಖರ್ಚು ಮಾಡಿ ಹಣ ವ್ಯಯ ಮಾಡುವುದರ ಬದಲು ಸ್ವಲ್ಪ ಉಳಿತಾಯದ ಕಡೆಗೆ ಗಮನಕೊಡಿ.
- ಗೊಬ್ಬರ ತಯಾರಿಸುವವ, ಮಾರಾಟ ಮಾಡುವವರನ್ನು ಸಾಕುವ ಜವಾಬ್ಧಾರಿ ಕೃಷಿಕರಿಗೆ ಬೇಡ.
ಸಾಲ್ಯುಬಲ್ ಗೊಬ್ಬರಗಳು ಕೆಟ್ಟದೆಂದು ಹೇಳಲಾಗದು. ಆದರೆ ಅದರ ದುಬಾರಿ ಬೆಲೆ ಮಾತ್ರ ಹೊರೆ ಅಷ್ಟೇ. ಕೆಲವು ತಕ್ಷಣದ ಪ್ರತಿಫಲಕ್ಕಾಗಿ ಸಿಂಪರಣೆ ಉದ್ದೇಶಕ್ಕೆ ಇವುಗಳನ್ನು ಬಳಕೆ ಮಾಡಬಹುದು. ಇದರ ಫಲಿತಾಂಶ ಉತ್ತಮವಾಗಿರುತ್ತದೆ. ಸರಕಾರಿ ಗೊಬ್ಬರಕ್ಕಿಂತ 25% ಕ್ಕಿಂತ ಹೆಚ್ಚು ಬೆಲೆಯಾದರೂ ಇದನ್ನು ಬಳಕೆ ಮಾಡಬಹುದು.