ಹೂವು ರಹಿತ ಜೇನು ಉತ್ಪಾದನೆ- “ಜೇನು” ಹೆಸರಿಗೆ ಕಳಂಕ.

by | Jan 9, 2020 | Beekeeping (ಜೇನು ವ್ಯವಸಾಯ) | 0 comments

ಜೇನು ವ್ಯವಸಾಯ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಜೇನು ಕುಟುಂಬಗಳೂ ಕಡಿಮೆಯಾಗುತ್ತಿವೆ. ಆದರೆ ಜೇನಿನ  ವ್ಯವಹಾರ ಬೆಳೆಯುತ್ತಿದೆ. ಜೇನು ಉತ್ಪಾದನೆ ಹೆಚ್ಚುತ್ತಿದೆ. ಬಹುತೇಕ ಜೇನು ಕೃತಕ ಜೇನಾಗಿದ್ದು, ಹೂವು ಇಲ್ಲದೆ ಜೇನು ಉತ್ಪಾದಿಸಲಾಗುತ್ತದೆ. ಸಕ್ಕರೆ , ಬೆಲ್ಲದ ಪಾಕವನ್ನು ಜೇನು ನೊಣಗಳಿಗೆ ತಿನ್ನಿಸಿ ಜೇನು ಉತ್ಪಾದನೆ ಮಾಡಲಾಗುತ್ತಿದೆ. ಗ್ರಾಹಕರೇ ಎಚ್ಚರ!

 

ಕಾಡುಗಳು ಕಡಿಮೆಯಾಗುತ್ತಿವೆ, ಕಾಡಿನಲ್ಲಿ ಹೂವು ಬಿಡುವ ಮರಮಟ್ಟುಗಳೂ  ಕಡಿಮೆಯಾಗುತ್ತಿವೆ. ಕಾಡು ಹೊರತಾಗಿ ನಾಡಿನಲ್ಲೂ ನೈಸರ್ಗಿಕ ಹೂ ಬಿಡುವ ಮರ ಮಟ್ಟುಗಳಿಲ್ಲ. ಬರೇ  ರಬ್ಬರ್, ಅಡಿಕೆ, ತೆಂಗು ಬಿಟ್ಟರೆ ಬೇರೆ ಇಲ್ಲ. ಆದರೆ ಹಿಂದಿಗಿಂತ ಈಗ ಜೇನಿನ ಉತ್ಪಾದನೆ  ಮಾತ್ರ ತುಂಬಾ ಹೆಚ್ಚಾಗಿದೆ .  ನಾವು ಸಣ್ಣ ಪ್ರಾಯದಲ್ಲೇ ಜೇನು, ಜೇನು ಪೆಟ್ಟಿಗೆ ಕಂಡವರು. ಯಾವ ಸಮಯದಲ್ಲಿ ಯಾವ ಕಾಡು ಮರ ಹೂ ಬಿಡುತ್ತದೆ, ಅದರಲ್ಲಿ  ಜೇನು ಆಗುವುದು ಹೇಗೆ ಎಂಬುದೆಲ್ಲಾ ನಮ್ಮ ಹಿರಿಯರು ಹೇಳಿದ್ದನ್ನು ಕೇಳಿ ತಿಳಿದಿದ್ದೇವೆ. ಆದರೆ ಈಗ ವಸ್ತು ಸ್ಥಿತಿಯೇ ಬೇರೆಯಾಗಿದೆ. ಹೂವೇ ಬೇಡ ಜೇನಿನ ಉತ್ಪಾದನೆಗೆ.. ಮಾಡಬಹುದು!

 

ಜೇನು – ಅಂದು –ಇಂದು:

 •  ಸಾಮಾನ್ಯವಾಗಿ  ಹಿಂದೆ ಜೇನು ತುಂಬಾ ಕಡಿಮೆ ಇತ್ತು. ಕಾಡಿನಲ್ಲಿ ಜೇನು  ಕುಟುಂಬಗಳು ಹೆಚ್ಚು ಇರುತ್ತಿದ್ದವೋ ಏನೋ, ಆದರೆ ಜನರಿಗೆ ಬಳಕೆ ಮಾಡಲು ಜೇನಿನ ಲಭ್ಯತೆ ತುಂಬಾ ಕಡಿಮೆ ಇತ್ತು.
 • ಕೆಲವೇ ಕೆಲವರು ಜೇನು ಸಾಕುವವರಿದ್ದರು. ಕೆಲವೇ ಕೆಲವರು ಕಾಡಿನಲ್ಲಿ ಮರದ ಪೊಟರೆ, ಹುತ್ತಗಳನ್ನು  ಕೆರೆದು ಹೊಗೆ ಹಾಕಿ ಜೇನು ಕುಟುಂಬ ಓಡಿಸಿ ಜೇನು ಸಂಗ್ರಹಿಸುತ್ತಿದ್ದರು.
 • ಅದೆಲ್ಲಾ ಆಪತ್ಕಾಲದ  ಮದ್ದಿಗಾಗಿ. ಜೇನನ್ನು ದಿನಾ ತಿನ್ನುವುದು, ಆರೋಗ್ಯ, ಹೀಗೆಲ್ಲಾ ಇರಲಿಲ್ಲ. ಅಗತ್ಯ ಬಿದ್ದಾಗ ಸ್ವಲ್ಪ ನಾಲಿಗೆಗೆ ಜೇನು ತುಪ್ಪ ನೆಕ್ಕಿಸುವುದು ಬಿಟ್ಟರೆ  ಬೇರೆ ದೊಡ್ಡ ಬಳಕೆ ಇರಲಿಲ್ಲ.
 • ಈಗ ಹಾಗಿಲ್ಲ. ಜೇನು ಎಲ್ಲಾ ಕಡೆಯ ಅಂಗಡಿಯಲ್ಲೂ ಇದೆ. ಹಳ್ಳಿಗಳ ಅಂಗಡಿಗಳಿಗೆ  ಬ್ಯಾರಲ್ ಬ್ಯಾರಲ್ ಜೇನು ಬರುತ್ತದೆ.
 • ಅಂಗಡಿ, ಸೊಸೈಟಿಗಳಲ್ಲಿ ರೂ. 275 ರಿಂದ ಪ್ರಾರಂಭವಾಗಿ 500  ರೂ ತನಕ ಕಿಲೋ ಜೇನು ಮಾರಾಟವಾಗುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ  ಜೇನು ನೀವು ದಿನಾ ಒಂದು ಗ್ಲಾಸ್ ಕುಡಿಯುತ್ತೀರಾ, ಕೊಳ್ಳಲು ಹಣ ಇದ್ದರೆ ಜೇನು ಕೊರತೆ ಆಗದು. ಈಗ ಅಷ್ಟು ಜೇನು ಉತ್ಪಾದನೆ ಇದೆ.!

ಜೇನು ನೊಣಗಳಿಗೆ ತಿನ್ನಿಸಲು ಆಹಾರದ ಸಾಗಾಟ

 

ಹೇಗೆ ಹೆಚ್ಚಾಗಿರಬಹುದು:

 • ಜೇನು ಪಟ್ಟಿಗೆಗಳನ್ನು ಸರಕಾರ ಇಲಾಖೆಗಳ ಮೂಲಕ ಹಂಚುವುದನ್ನು ಪ್ರಾರಂಭಿಸಿದ ಕಾರಣದಿಂದ ಜೇನು ಉತ್ಪಾದನೆ ಹೆಚ್ಚಾಗಿರಬಹುದು.
 •  ಜೇನು ಸಾಕಣಿಕೆ ತರಬೇತಿ  ಪಡೆದವರು ಹೆಚ್ಚಾದ ಕಾರಣದಿಂದಲೂ ಜೇನು ಉತ್ಪಾದನೆ ಹೆಚ್ಚಾಗಿರಬಹುದು.
 • ರಬ್ಬರ್ ತೋಟಗಳು ಹೆಚ್ಚಾದ ಕಾರಣ ರಬ್ಬರ್ ಎಲೆಗಳ ಹನೀ ಡ್ಯೂ ನಿಂದಲೂ ಜೇನಿನ ಉತ್ಪಾದನೆ ಹೆಚ್ಚಾಗಿರಬಹುದು.
 • ಅಡಿಕೆ, ತೆಂಗು ತೋಟಗಳು ಹೆಚ್ಚಿದ ಕಾರಣದಿಂದಲೂ ಜೇನಿನ ಉತ್ಪಾದನೆ  ಹೆಚ್ಚಾಗಿರಬಹುದು.

 

ಕೃತಕ ಜೇನು:

 • ಜೇನು ಸಾಕಾಣಿಕೆ ಮಾಡುವ ಕೆಲವು ವೃತ್ತಿಪರರು ಅಲ್ಲಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಸಾಕಾಣಿಕೆ ಪ್ರಾರಂಭಿಸಿದ್ದಾರೆ.
 •  ಇವರು ವಾರಕ್ಕೊಮ್ಮೆ  ಜೇನು ಪೆಟ್ಟಿಗೆಗಳಿಗೆ ಸಕ್ಕರೆ ನೀರನ್ನು ಕೊಟ್ಟು ಅದನ್ನು ಸಾಕುತ್ತಾರೆ.
 • ಬಹುಷಃ ಸಕ್ಕರೆ ದ್ರಾವಣದ ಆಹಾರದಿಂದಲೂ ಜೇನಿನ ಉತ್ಪಾದನೆ ಹೆಚ್ಚಳವಾಗಿದ್ದಿರಬಹುದು.

 

ಅಸ್ವಾಭಾವಿಕ ಜೇನು ಸಾಕಣೆ:

 • ಭಾರತ ದೇಶದ ಮೂಲದ ಎಪಿಸ್ ಇಂಡಿಕಾ ಜೇನು ಕುಟುಂಬಗಳನ್ನು  ಕನಿಷ್ಟ 100 ಅಡಿ ಅಂತರದಲ್ಲಿ ಪೆಟ್ಟಿಗೆಗಳನ್ನಿಟ್ಟು ಸಾಕಿದಾಗ ಅವುಗಳು ಕ್ಷೇಮವಾಗಿ ಜೇನು ಉತ್ಪಾದನೆ ಮಾಡುತ್ತಿರುತ್ತವೆ.
 • ಅಂತರ ಹತ್ತಿರವಾದರೆ ಅವು ಪರಸ್ಪರ ಕಚ್ಚಾಡಿಕೊಳ್ಳುತ್ತವೆ ಎಂಬುದು ಜೇನು ವ್ಯವಸಾಯ ತಜ್ಞರು ಹೇಳುವ ವಿಚಾರ.
 • ಎಪಿಸ್ ಮೆಲ್ಲಿಫೆರಾ ವಿದೇಶೀ ಜಾತಿಯ ಜೇನು ನೊಣಗಳು ಹತ್ತಿರ ಹತ್ತಿರ ಇದ್ದಾಗಲೂ  ಕೆಲಸ ಮಾಡುತ್ತವೆ ಎನ್ನುತ್ತಾರೆ. ಆದರೆ ಭಾರತದಲ್ಲಿ ಮೆಲ್ಲಿಫೆರಾ ಜೇನು ನೊಣದ ಸಾಕಾಣಿಕೆ ಹೆಚ್ಚು ಇಲ್ಲ.

 

ಪೆಟ್ಟಿಗೆ ಎಷ್ಟು ಹತ್ತಿರ ಇಟ್ಟರೂ ಜೇನು ಆಗುತ್ತದೆ!

 • ಈಗ ದೊಡ್ಡ ಪ್ರಮಾಣದಲ್ಲಿ ಜೇನು ಸಾಕಾಣಿಕೆ   ಮಾಡುತ್ತಿರುವ ವೃತ್ತಿ ನಿರತರು ಪೆಟ್ಟಿಗೆಗಳನ್ನು ತುಂಬಾ ಹತ್ತಿರದಲ್ಲಿಟ್ಟು  15 ದಿನಕ್ಕೊಮ್ಮೆ ಜೇನನ್ನು ಹಿಂಡುತ್ತಾರೆ.
 • ಬಾಳೆ ತೋಟದ ಮಧ್ಯೆಯೂ ಇಲ್ಲಿ ಜೇನಿನ ಉತ್ಪಾದನೆ ಆಗುತ್ತದೆ.  ಯಾವುದೇ ಹೂ ಬಿಡುವ ಮರಮಟ್ಟುಗಳಿಲ್ಲದಿದ್ದರೂ ಜೇನು ಉತ್ಪಾದನೆ ಆಗುತ್ತಿದೆ.
 • ಇದೆಲ್ಲಾ ನೋಡುವಾಗ ನಾವು ಜೇನು ಉತ್ಪಾದನೆ ವಿಚಾರದಲ್ಲಿ ಎಷ್ಟು ಮುಂದುವರಿದಿದ್ದೇವೆ ಎಂದು ನಮಗೇ ಅಚ್ಚರಿ ಆಗುತ್ತಿದೆ.!

ಜೇನು ಎಂದು ಪಂಚಾಮೃತಗಳಲ್ಲಿ ಒಂದು. ಇದು ನೈಸರ್ಗಿಕ ಮೂಲದ್ದೇ ಆಗಿರಬೇಕು. ಪರಿಶುದ್ಧವಾದ ಜೇನು ಸ್ವಲ್ಪ ಸೇವನೆ ಮಾಡಿದರೂ ಸಾಕು. ಗುರುತು ಪರಿಚಯ ಇಲ್ಲದವರಿಂದ, ಆನ್ ಲೈನ್ ಮಾರಾಟಗಾರರಿಂದ, ಆಕರ್ಷಕ ಪ್ಯಾಕೇಟ್ ಮಾಡಿ ಮಾರುವವರ ಜೇನು ಕೊಳ್ಳುವಾಗ ಜಾಗರೂಕರಾಗಿರಿ. ಜೇನು ಮಾರಾಟದಲ್ಲಿ ಹಣ ಸುಲಭವಾಗಿ ಆಗುತ್ತದೆ ಎಂದು ಭಾರೀ ಜನ ಈ ವ್ಯವಹಾರಕ್ಕೆ ಇಳಿದಿದ್ದಾರೆ.  
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!